CEIR Portal| ಕಳುವಾಗಿದ್ದ 28 ಲಕ್ಷ ರೂ. ಮೌಲ್ಯದ ಮೊಬೈಲ್, ಲ್ಯಾಪ್‌ಟಾಪ್ ಪತ್ತೆ! ಏನಿದು CEIR ಪೋರ್ಟಲ್?
x
ಸಿಇಐಆರ್‌ ಪೋರ್ಟಲ್‌(ಸಂಗ್ರಹ ಚಿತ್ರ)

CEIR Portal| ಕಳುವಾಗಿದ್ದ 28 ಲಕ್ಷ ರೂ. ಮೌಲ್ಯದ ಮೊಬೈಲ್, ಲ್ಯಾಪ್‌ಟಾಪ್ ಪತ್ತೆ! ಏನಿದು CEIR ಪೋರ್ಟಲ್?

ಬೆಂಗಳೂರಿನಲ್ಲಿ 28.09 ಲಕ್ಷ ರೂ. ಮೌಲ್ಯದ 133 ಮೊಬೈಲ್ ಹಾಗೂ ಲ್ಯಾಪ್‌ಟಾಪ್‌ಗಳನ್ನು CEIR ಪೋರ್ಟಲ್ ಸಹಾಯದಿಂದ ವಶಪಡಿಸಿಕೊಳ್ಳಲಾಗಿದೆ. ಏನಿದು CEIR?


Click the Play button to hear this message in audio format

ಬೆಂಗಳೂರಿನಂತಹ ಬ್ಯುಸಿ ನಗರಗಳಲ್ಲಿ ಅಥವಾ ಪ್ರಯಾಣದ ಸಮಯದಲ್ಲಿ ನಮ್ಮ ಬೆಲೆಬಾಳುವ ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಅಥವಾ ಪ್ರಮುಖ ದಾಖಲೆಗಳು ಕೈತಪ್ಪಿ ಕಳೆದುಹೋಗುವುದು ಸಾಮಾನ್ಯ. ಇಂತಹ ಸಂದರ್ಭದಲ್ಲಿ ದೂರು ದಾಖಲಿಸಲು ಪೊಲೀಸ್ ಠಾಣೆಗೆ ಹೋಗಿ ಗಂಟೆಗಟ್ಟಲೆ ಕಾಯುವುದು ಜನರಿಗೆ ದೊಡ್ಡ ತಲೆನೋವಾಗಿತ್ತು. ಸಾರ್ವಜನಿಕರ ಈ ಸಮಸ್ಯೆಗೆ ಪರಿಹಾರವಾಗಿ ಕರ್ನಾಟಕ ಪೊಲೀಸ್ ಇಲಾಖೆಯು CEIR ಎಂಬ ಅತ್ಯಾಧುನಿಕ ಡಿಜಿಟಲ್ ವೇದಿಕೆಯನ್ನು 2022ರಲ್ಲೇ ಪರಿಚಯಿಸಿತ್ತು. ಇದು ಮನೆಯಲ್ಲೇ ಕುಳಿತು ಆನ್‌ಲೈನ್ ಮೂಲಕವೇ ದೂರು ದಾಖಲಿಸಲು ಮತ್ತು ಕಳೆದುಹೋದ ವಸ್ತುಗಳನ್ನು ತ್ವರಿತವಾಗಿ ಪತ್ತೆಹಚ್ಚಲು ನೆರವಾಗುವ ಕ್ರಾಂತಿಕಾರಿ ತಂತ್ರಾಂಶವಾಗಿದೆ.

ಕಳೆದುಹೋದ ಮೊಬೈಲ್‌ಗಳನ್ನು ಪತ್ತೆಹಚ್ಚಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ CEIR ಪೋರ್ಟಲ್ ಅನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಂಡಿರುವ ಕರ್ನಾಟಕ, ಕೇವಲ ಎರಡೇ ವರ್ಷಗಳಲ್ಲಿ ಅತಿ ಹೆಚ್ಚು ಫೋನ್‌ಗಳನ್ನು ವಶಪಡಿಸಿಕೊಂಡು ದೇಶದ ಇತರ ರಾಜ್ಯಗಳಿಗೆ ಮಾದರಿಯಾಗಿತ್ತು. ಇದೀಗ ಮತ್ತೆ ಇದೇ ಹಾದಿಯಲ್ಲಿದೆ ನಮ್ಮ ಕರುನಾಡು. ಕಳೆದುಹೋದ ಹಾಗೂ ಕಳವು ಮಾಡಲಾಗಿದ್ದ ಬೆಲೆಬಾಳುವ ಮೊಬೈಲ್ ಫೋನ್‌ಗಳು ಮತ್ತು ಎಲೆಕ್ಟ್ರಾನಿಕ್ ಉಪಕರಣಗಳನ್ನು ಪತ್ತೆಹಚ್ಚುವಲ್ಲಿ ಬೆಂಗಳೂರು ನಗರ ಪೊಲೀಸರು ದೊಡ್ಡ ಯಶಸ್ಸು ಕಂಡಿದ್ದಾರೆ. ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಪೊಲೀಸರು ಒಟ್ಟು 28.09 ಲಕ್ಷ ರೂ. ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಏನಿದು CEIR?

ಸಿಇಐಆರ್ (Central Equipment Identity Register) ಎಂಬುದು ಎಲ್ಲಾ ಮೊಬೈಲ್ ನೆಟ್‌ವರ್ಕ್ ಆಪರೇಟರ್‌ಗಳ ಐಎಂಇಐ ಸಂಖ್ಯೆಗಳನ್ನು ಒಳಗೊಂಡಿರುವ ಒಂದು ಕೇಂದ್ರೀಯ ಡೇಟಾಬೇಸ್ ಆಗಿದೆ. ಸಾಮಾನ್ಯವಾಗಿ ಪ್ರತಿ ಮೊಬೈಲ್ ಆಪರೇಟರ್ ತನ್ನದೇ ಆದ 'ಎಕ್ವಿಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್' ಹೊಂದಿರುತ್ತಾನೆ. ಸಿಇಐಆರ್ ಈ ಎಲ್ಲಾ ಸ್ಥಳೀಯ ಡೇಟಾಬೇಸ್‌ಗಳನ್ನು ಒಂದೆಡೆ ಸೇರಿಸಿ, ಕೇಂದ್ರ ಮಟ್ಟದಲ್ಲಿ ನಿರ್ವಹಿಸುತ್ತದೆ.

ಇದು ದೇಶಾದ್ಯಂತ ಇರುವ ಎಲ್ಲಾ ಸಾಮಾನ್ಯ ನಾಗರಿಕರ ಬಳಕೆಗಾಗಿ ಮುಕ್ತವಾಗಿದೆ. ನಿಮ್ಮ ಮೊಬೈಲ್ ಫೋನ್ ಕಳೆದುಹೋದಾಗ ಅಥವಾ ಕಳ್ಳತನವಾದಾಗ, ಅದನ್ನು ಪತ್ತೆಹಚ್ಚಲು ಮತ್ತು ಅದರ ದುರ್ಬಳಕೆಯನ್ನು ತಡೆಯಲು ಈ ವೇದಿಕೆಯನ್ನು ಬಳಸಬಹುದು.

CEIR ಹೇಗೆ ಸಹಾಯ ಮಾಡುತ್ತದೆ?

• ಬ್ಲಾಕಿಂಗ್ ಸೌಲಭ್ಯ: ನಿಮ್ಮ ಫೋನ್ ಕಳೆದುಹೋದ ತಕ್ಷಣ ಈ ಪೋರ್ಟಲ್ ಮೂಲಕ ಅದನ್ನು ಬ್ಲಾಕ್ ಮಾಡಬಹುದು. ಒಮ್ಮೆ ಬ್ಲಾಕ್ ಮಾಡಿದರೆ, ಆ ಫೋನ್ ಅನ್ನು ಭಾರತದ ಯಾವುದೇ ಟೆಲಿಕಾಂ ನೆಟ್‌ವರ್ಕ್‌ನಲ್ಲಿ ಬಳಸಲು ಸಾಧ್ಯವಿಲ್ಲ.

• IMEI ಟ್ರ್ಯಾಕಿಂಗ್: ಪ್ರತಿ ಮೊಬೈಲ್‌ಗೆ ಇರುವ ವಿಶಿಷ್ಟ 15 ಅಂಕಿಯ IMEI (International Mobile Equipment Identity) ಸಂಖ್ಯೆಯ ಆಧಾರದ ಮೇಲೆ ಪೊಲೀಸರು ಈ ಫೋನ್ ಅನ್ನು ಟ್ರ್ಯಾಕ್ ಮಾಡುತ್ತಾರೆ.

• ಪತ್ತೆ ಹಚ್ಚುವಿಕೆ: ಬ್ಲಾಕ್ ಮಾಡಲಾದ ಫೋನ್‌ನಲ್ಲಿ ಯಾರಾದರೂ ಹೊಸ ಸಿಮ್ ಕಾರ್ಡ್ ಹಾಕಿ ಬಳಸಲು ಪ್ರಯತ್ನಿಸಿದರೆ, ತಕ್ಷಣವೇ ಅದರ ಮಾಹಿತಿ ಪೊಲೀಸರಿಗೆ ತಲುಪುತ್ತದೆ. ಇದರಿಂದ ಫೋನ್ ಎಲ್ಲಿದೆ ಎಂಬುದು ಪತ್ತೆಯಾಗುತ್ತದೆ.

• ಅನ್‌ಬ್ಲಾಕಿಂಗ್: ನಿಮ್ಮ ಫೋನ್ ನಿಮಗೆ ಮರಳಿ ಸಿಕ್ಕಿದ ನಂತರ, ಅದೇ ಪೋರ್ಟಲ್ ಮೂಲಕ ಅದನ್ನು ಮತ್ತೆ ಅನ್‌ಬ್ಲಾಕ್ ಮಾಡಿ ಮೊದಲಿನಂತೆ ಬಳಸಬಹುದು.

ದೂರು ದಾಖಲಿಸುವುದು ಹೇಗೆ?

ನಿಮ್ಮ ಮೊಬೈಲ್ ಕಳೆದುಹೋದರೆ ಈ ಕೆಳಗಿನ ಕ್ರಮಗಳನ್ನು ಅನುಸರಿಸಿ:

1. ವೆಬ್‌ಸೈಟ್‌ಗೆ ಭೇಟಿ ನೀಡಿ: ಮೊದಲು ಅಧಿಕೃತ CEIR ಪೋರ್ಟಲ್‌ಗೆ ಲಾಗಿನ್ ಆಗಿ.

2. ದೂರು ನಮೂನೆ ಭರ್ತಿ ಮಾಡಿ: ಅಲ್ಲಿರುವ 'Complaint Registration Form' ಅನ್ನು ಭರ್ತಿ ಮಾಡಿ. ನಿಮ್ಮ ಮೊಬೈಲ್‌ನ IMEI ಸಂಖ್ಯೆ ಮತ್ತು ಇತರ ವಿವರಗಳನ್ನು ನೀಡಿ.

3. ದೂರು ಐಡಿ (Complaint ID): ಫಾರ್ಮ್ ಸಲ್ಲಿಸಿದ ನಂತರ ನಿಮಗೆ ಒಂದು ವಿಶಿಷ್ಟವಾದ 'ದೂರು ಐಡಿ' ದೊರೆಯುತ್ತದೆ. ಇದು ನಿಮ್ಮ ಇಮೇಲ್ ಐಡಿಗೂ ತಲುಪುತ್ತದೆ.

4. ದಾಖಲೆ ಉಳಿಸಿಕೊಳ್ಳಿ: ಈ ದೂರು ಐಡಿ ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಸೇವ್‌ ಮಾಡಿಟ್ಟುಕೊಳ್ಳಿ.

ಈ ವರ್ಷ ಪೋರ್ಟಲ್‌ ಮೂಲಕ 133 ಮೊಬೈಲ್ ಪತ್ತೆ

ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಅವರು ಮಾಹಿತಿ ನೀಡಿರುವಂತೆ, ಬೆಂಗಳೂರು ಉತ್ತರ ವಿಭಾಗದ ಪೊಲೀಸರು ಸಾರ್ವಜನಿಕರು ಕಳೆದುಕೊಂಡಿದ್ದ ವಿವಿಧ ಕಂಪನಿಗಳ 110 ಯಶಸ್ವಿಯಾಗಿ ಪತ್ತೆಹಚ್ಚಿದ್ದಾರೆ. ಇವುಗಳ ಒಟ್ಟು ಮೌಲ್ಯ ಅಂದಾಜು ವಿಶೇಷವೆಂದರೆ CEIR ತಂತ್ರಾಂಶದ ಸಹಾಯದಿಂದ ಈ ಮೊಬೈಲ್‌ಗಳನ್ನು ಪತ್ತೆಹಚ್ಚಲಾಗಿದೆ. ಇನ್ನು ಆರ್.ಟಿ.ನಗರ (12), ಮಹಾಲಕ್ಷ್ಮೀ ಲೇಔಟ್ (12), ನಂದಿನಿ ಲೇಔಟ್ (12), ಸುಬ್ರಹ್ಮಣ್ಯನಗರ (11), ಯಶವಂತಪುರ (10) ಸೇರಿದಂತೆ 13 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಈ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನು ಈ ಬಗ್ಗೆ ಡಿಸಿಪಿ ಬಿ.ಎಸ್. ಪ್ರತಿಕ್ರಿಯಿಸಿದ್ದು, “ಸಾರ್ವಜನಿಕರು ಮೊಬೈಲ್ ಕಳೆದುಕೊಂಡಾಗ ತಕ್ಷಣ CEIR ಪೋರ್ಟಲ್‌ನಲ್ಲಿ ದೂರು ದಾಖಲಿಸಿ” ಎಂದು ಡಿಸಿಪಿ ಮನವಿ ಮಾಡಿದ್ದಾರೆ.

ಮೈಕೋ ಲೇಔಟ್: ಅಂತರರಾಜ್ಯ ಕಳ್ಳರ ಬಂಧನ

ಮತ್ತೊಂದು ಪ್ರಕರಣದಲ್ಲಿ, ಮೈಕೋ ಲೇಔಟ್ ಪೊಲೀಸರು ಅಂತರರಾಜ್ಯ ಕಳ್ಳರ ಗ್ಯಾಂಗ್ ಅನ್ನು ಮಟ್ಟಹಾಕಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಸಿಲ್ಕ್ ಬೋರ್ಡ್ ಬಳಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ಒಟ್ಟು 5.79 ಲಕ್ಷ ರೂ. ಮೌಲ್ಯದ 23 ಮೊಬೈಲ್ ಫೋನ್‌ಗಳು, 3 ಲ್ಯಾಪ್‌ಟಾಪ್‌ಗಳು ಮತ್ತು 1 ಟ್ಯಾಬ್ ವಶಕ್ಕೆ ಪಡೆಯಲಾಗಿದೆ.

ಮಾರ್ಚ್ 28 ರಂದು ನಡೆದ ಕಳ್ಳತನ ಪ್ರಕರಣವನ್ನು ಬೆನ್ಹತ್ತಿದ ಪೊಲೀಸರು, ಆನೇಕಲ್ ತಾಲೂಕಿನ ಬಳಗೂರು ಗ್ರಾಮದಲ್ಲಿರುವ ಆರೋಪಿಗಳ ಮನೆಯಿಂದ ಈ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಇದರಿಂದ ಮೈಕೋ ಲೇಔಟ್ ಮತ್ತು ಮಾರತ್ತಹಳ್ಳಿ ಪೊಲೀಸ್ ಠಾಣೆಯ ಕಳ್ಳತನ ಪ್ರಕರಣಗಳು ಪತ್ತೆಯಾದಂತಾಗಿವೆ.


Read More
Next Story