
ಹೆಣ್ಣು ಬೆಕ್ಕಿನ ಮಾಲೀಕನಿಂದ ಗಂಡು ಬೆಕ್ಕಿನ ಮಾಲೀಕನಿಗೆ ಧಮ್ಕಿ: ಠಾಣೆ ಮೆಟ್ಟಿಲೇರಿದ ಬೆಕ್ಕುಗಳ ಪ್ರೇಮ ಪ್ರಕರಣ!
ಒಂದು ಮನೆಯ ಹೆಣ್ಣು ಬೆಕ್ಕು ಹಾಗೂ ಪಕ್ಕದ ಮನೆಯ ಗಂಡು ಬೆಕ್ಕಿನ ನಡುವಿನ ಸಂಪರ್ಕದಿಂದಾಗಿ ಹೆಣ್ಣು ಬೆಕ್ಕು ಗರ್ಭಧರಿಸಿ ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಇದುವೇ ವಿವಾದಕ್ಕೆ ಕಾರಣವಾಗಿ ಎರಡೂ ಮನೆಯವರು ಪರಸ್ಪರ ಕಚ್ಚಾಡಿಕೊಂಡಿದ್ದರು.
ನಗರದ ಶೇಷಾದ್ರಿಪುರಂ ಠಾಣಾ ವ್ಯಾಪ್ತಿಯಲ್ಲಿ ಎರಡು ಕುಟುಂಬಗಳ ನಡುವೆ ಬೆಕ್ಕಿನ ಮರಿಗಳ ವಿಚಾರವಾಗಿ ನಡೆದ ವಿಲಕ್ಷಣ ಗಲಾಟೆಯೊಂದನ್ನು ಪೊಲೀಸರು ಯಶಸ್ವಿಯಾಗಿ ಬಗೆಹರಿಸಿದ್ದಾರೆ. ಮಾನವರ ನಡುವಿನ ದ್ವೇಷದ ಬದಲು ಸಾಕುಪ್ರಾಣಿಗಳ ಪ್ರೇಮ ಪ್ರಕರಣವೊಂದು ಅಕ್ಕಪಕ್ಕದ ಮನೆಯವರ ನಡುವಿನ ದೊಡ್ಡ ಮಟ್ಟದ ವಾಕ್ಸಮರಕ್ಕೆ ಕಾರಣವಾಗಿದ್ದು, ಕೊನೆಗೆ ಹೊಯ್ಸಳ ಗಸ್ತು ಪಡೆಯ ಪೊಲೀಸರು ಮಧ್ಯಪ್ರವೇಶಿಸಿ ಸಂಧಾನ ನಡೆಸುವ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.
ವಿವರಗಳ ಪ್ರಕಾರ, ಒಂದು ಮನೆಯ ಹೆಣ್ಣು ಬೆಕ್ಕು ಹಾಗೂ ಪಕ್ಕದ ಮನೆಯ ಗಂಡು ಬೆಕ್ಕಿನ ನಡುವಿನ ಸಂಪರ್ಕದಿಂದಾಗಿ ಹೆಣ್ಣು ಬೆಕ್ಕು ಗರ್ಭಧರಿಸಿ ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಮರಿಗಳು ಜನಿಸಿದ ಬಳಿಕ ಹೆಣ್ಣು ಬೆಕ್ಕಿನ ಮಾಲೀಕರು ಆ ನಾಲ್ಕೂ ಮರಿಗಳನ್ನು ತೆಗೆದುಕೊಂಡು ಹೋಗಿ ನೇರವಾಗಿ ಗಂಡು ಬೆಕ್ಕಿನ ಮಾಲೀಕರ ಮನೆಯ ಮುಂದೆ ಬಿಟ್ಟು ಜಗಳಕ್ಕೆ ಇಳಿದಿದ್ದಾರೆ. 'ನಿಮ್ಮ ಮನೆಯ ಗಂಡು ಬೆಕ್ಕಿನಿಂದಲೇ ಈ ಮರಿಗಳು ಹುಟ್ಟಿದ್ದು, ಹೀಗಾಗಿ ನೀವೇ ಈ ಮರಿಗಳ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡು ಸಾಕಿ' ಎಂದು ಅವರು ಪಟ್ಟುಹಿಡಿದಿದ್ದಾರೆ. ಈ ವಿಚಿತ್ರ ಬೇಡಿಕೆಯಿಂದ ಶುರುವಾದ ಮಾತುಕತೆ ತಾರಕಕ್ಕೇರಿ, ಎರಡು ಕುಟುಂಬಗಳ ನಡುವೆ ತೀವ್ರ ಸ್ವರೂಪದ ಗಲಾಟೆಗೆ ತಿರುಗಿದೆ. ಕೋಪದ ಭರದಲ್ಲಿ ಹೆಣ್ಣು ಬೆಕ್ಕಿನ ಮಾಲೀಕರು ಎದುರಾಳಿ ಕುಟುಂಬದವರ ಮೇಲೆ ಆಸಿಡ್ ದಾಳಿ ಮಾಡುವ ಬೆದರಿಕೆ ಹಾಕಿದ್ದಾರೆ ಎಂಬ ಗಂಭೀರ ಆರೋಪವೂ ಈ ವೇಳೆ ಕೇಳಿಬಂದಿದೆ.
ಹೊಯ್ಸಳ ಪೊಲೀಸರಿಂದ ಪರಿಹಾರ!
ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತ ಗಂಡು ಬೆಕ್ಕಿನ ಮಾಲೀಕರು ತಕ್ಷಣವೇ ಸ್ಥಳೀಯ ಶೇಷಾದ್ರಿಪುರಂ ಪೊಲೀಸರ ಸಹಾಯ ಕೋರಿದ್ದಾರೆ. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಹೊಯ್ಸಳ ಸಿಬ್ಬಂದಿ, ಎರಡು ಕುಟುಂಬಗಳ ನಡುವಿನ ಈ ವಿಲಕ್ಷಣ 'ಕ್ಯಾಟ್ ಫೈಟ್' ಹೊಡೆದಾಟದ ಹಂತಕ್ಕೆ ಹೋಗುವುದನ್ನು ತಪ್ಪಿಸಿದ್ದಾರೆ. ಇಬ್ಬರೂ ಮಾಲೀಕರನ್ನು ಕೂರಿಸಿಕೊಂಡು ಸಮಾಧಾನಪಡಿಸಿದ ಪೊಲೀಸರು, ನೆರೆಹೊರೆಯವರ ನಡುವೆ ಸಾಮರಸ್ಯ ಕಾಪಾಡುವ ದೃಷ್ಟಿಯಿಂದ ಒಂದು ಸೃಜನಾತ್ಮಕ ಪರಿಹಾರವನ್ನು ಕಂಡುಕೊಂಡಿದ್ದಾರೆ. ಅದರಂತೆ, ಜಗಳಕ್ಕೆ ಕಾರಣವಾಗಿದ್ದ ಆ ನಾಲ್ಕು ಬೆಕ್ಕಿನ ಮರಿಗಳನ್ನು ಇಬ್ಬರೂ ಮಾಲೀಕರು ಸಾಕುವ ಬದಲು, ಅವುಗಳನ್ನು ತಟಸ್ಥವಾದ ಮೂರನೇ ವ್ಯಕ್ತಿಗೆ ಹಸ್ತಾಂತರಿಸುವ ವ್ಯವಸ್ಥೆ ಮಾಡುವ ಮೂಲಕ ವಿವಾದಕ್ಕೆ ಸುಖಾಂತ್ಯ ಹಾಡಿದ್ದಾರೆ.

