x

ಬೆಂಗಳೂರು ಪೊಲೀಸ್ ವ್ಯವಸ್ಥೆಗೆ ಐದು ಕಮಿಷನರೇಟ್‌ಗಳಿಂದ ಆಡಳಿತ ಸುಧಾರಣೆಯೋ, ಹೊಸ ಅಧಿಕಾರ ಲಾಬಿಯೋ?

ಭಾರತದಲ್ಲಿ 1856ರಲ್ಲಿ ಮುಂಬೈ ಮತ್ತು ಕೋಲ್ಕತ್ತಾದಲ್ಲಿ ಆರಂಭವಾದ ಪೊಲೀಸ್ ಕಮಿಷನರೇಟ್ ವ್ಯವಸ್ಥೆ, ನಂತರ ಚೆನ್ನೈ, ಹೈದರಾಬಾದ್, ದೆಹಲಿ, ಅಹಮದಾಬಾದ್, ಪುಣೆ, ಲಖನೌ, ಜೈಪುರ, ಭುವನೇಶ್ವರ–ಕಟಕ್ ಸೇರಿದಂತೆ ಹಲವು ನಗರಗಳಿಗೆ ವಿಸ್ತರಣೆಯಾಗಿದೆ.


ಬೆಂಗಳೂರು ನಗರ ಪೊಲೀಸ್ ವ್ಯವಸ್ಥೆಯಲ್ಲಿ ರಾಜ್ಯ ಸರ್ಕಾರ ಮಹತ್ವದ ಆಡಳಿತಾತ್ಮಕ ಬದಲಾವಣೆ ತಂದಿದ್ದು, ದಶಕಗಳಿಂದ ಒಬ್ಬರೇ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವ್ಯವಸ್ಥೆಯನ್ನು ಐದು ಪ್ರತ್ಯೇಕ ಪ್ರಾದೇಶಿಕ ಆಯುಕ್ತರೇಟ್‌ಗಳಾಗಿ ವಿಭಜಿಸಿದೆ.

ಮಧ್ಯ, ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ ಬೆಂಗಳೂರು ಎಂದು ಐದು ವಿಭಾಗಗಳನ್ನು ರಚಿಸಲಾಗಿದ್ದು, ಇವುಗಳ ಸಮಗ್ರ ಮೇಲ್ವಿಚಾರಣೆಗೆ ಮುಖ್ಯ ಪೊಲೀಸ್ ಆಯುಕ್ತರ ಹುದ್ದೆಯನ್ನು ಸೃಷ್ಟಿಸಲಾಗಿದೆ. ಆರ್. ಹಿತೇಂದ್ರ ಅವರು ಬೆಂಗಳೂರಿನ ಮೊದಲ ಮುಖ್ಯ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

1963ರಲ್ಲಿ ಬೆಂಗಳೂರು ಪೊಲೀಸ್ ಕಮಿಷನರೇಟ್ ವ್ಯವಸ್ಥೆ ಆರಂಭವಾದಾಗ ಒಬ್ಬ ಆಯುಕ್ತರು, ಐದು ಡಿಸಿಪಿಗಳು ಮತ್ತು 37 ಪೊಲೀಸ್ ಠಾಣೆಗಳಿದ್ದವು. ಆದರೆ, 2025ರ ವರದಿಯ ಪ್ರಕಾರ ನಗರದಲ್ಲಿ 181 ಕಾನೂನು ಸುವ್ಯವಸ್ಥೆ ಪೊಲೀಸ್ ಠಾಣೆಗಳು ಹಾಗೂ 53 ಸಂಚಾರ ಪೊಲೀಸ್ ಠಾಣೆಗಳಿವೆ. ವೇಗವಾಗಿ ಬೆಳೆದಿರುವ ನಗರದ ಜನಸಂಖ್ಯೆ, ಭೌಗೋಳಿಕ ವ್ಯಾಪ್ತಿ ಮತ್ತು ಅಪರಾಧಗಳ ಸ್ವರೂಪಕ್ಕೆ ಅನುಗುಣವಾಗಿ ಪೊಲೀಸ್ ಆಡಳಿತವನ್ನು ವಿಕೇಂದ್ರೀಕರಿಸುವ ಅಗತ್ಯವನ್ನು ಮನಗಂಡು ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಹೊಸ ವ್ಯವಸ್ಥೆ ಮತ್ತು ಅಧಿಕಾರ ಹಂಚಿಕೆ

ಹೊಸ ರಚನೆಯಂತೆ ಐದು ಪ್ರಾದೇಶಿಕ ಆಯುಕ್ತರೇಟ್‌ಗಳಿಗೆ ಪ್ರತ್ಯೇಕ ಪೊಲೀಸ್ ಆಯುಕ್ತರನ್ನು ನೇಮಿಸಲಾಗಿದೆ. ಮಧ್ಯ ಬೆಂಗಳೂರಿಗೆ ಲಭು ರಾಮ್, ಪೂರ್ವ ಬೆಂಗಳೂರಿಗೆ ಡಾ. ಪಿ.ಎಸ್. ಹರ್ಷ, ಪಶ್ಚಿಮ ಬೆಂಗಳೂರಿಗೆ ವಿಕಾಶ್ ಕುಮಾರ್, ಉತ್ತರ ಬೆಂಗಳೂರಿಗೆ ಡಾ. ಎಂ.ಬಿ. ಬೋರಲಿಂಗಯ್ಯ ಹಾಗೂ ದಕ್ಷಿಣ ಬೆಂಗಳೂರಿಗೆ ಸಿ. ವಂಶಿಕೃಷ್ಣ ಅವರನ್ನು ಆಯುಕ್ತರನ್ನಾಗಿ ನಿಯೋಜಿಸಲಾಗಿದೆ. ನಗರವ್ಯಾಪಿ ಸಂಚಾರ ಯೋಜನೆ ಮತ್ತು ತರಬೇತಿ ವ್ಯವಸ್ಥೆಯ ಪ್ರತ್ಯೇಕ ಜವಾಬ್ದಾರಿಯನ್ನು ಹೆಮಂತ್ ಎಂ. ನಿಂಬಾಳ್ಕರ್ ಅವರಿಗೆ ವಹಿಸಲಾಗಿದೆ.

ಇದುವರೆಗೆ ಇಡೀ ನಗರದ ಕಾನೂನು ಸುವ್ಯವಸ್ಥೆ ಮತ್ತು ದೂರುಗಳನ್ನು ಒಬ್ಬರೇ ಆಯುಕ್ತರ ಕಚೇರಿಯಿಂದ ನಿರ್ವಹಿಸಬೇಕಿತ್ತು. ಇನ್ನು ಮುಂದೆ ಆಯಾ ವ್ಯಾಪ್ತಿಯಲ್ಲಿ ಅಪರಾಧ ಪ್ರಕರಣಗಳು ನಡೆದಾಗ ಅಥವಾ ಸಂಚಾರ ಸಮಸ್ಯೆ ತಲೆದೋರಿದಾಗ ಸಂಬಂಧಿಸಿದ ಪ್ರಾದೇಶಿಕ ಆಯುಕ್ತರೇ ನೇರ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಸ್ಥಳೀಯ ಠಾಣೆಗಳ ಮೇಲ್ವಿಚಾರಣೆ, ಸಿಬ್ಬಂದಿ ನಿಯೋಜನೆ ಮತ್ತು ತನಿಖೆಯ ವೇಗ ಹೆಚ್ಚಿಸಲು ಇದರಿಂದ ಅನುಕೂಲವಾಗಲಿದೆ. ಸರ್ಕಾರದ ಅಧಿಸೂಚನೆಯ ಪ್ರಕಾರ, ಐದು ಆಯುಕ್ತರು ಮುಖ್ಯ ಪೊಲೀಸ್ ಆಯುಕ್ತರ ಅಧೀನದಲ್ಲಿ ಕಾರ್ಯನಿರ್ವಹಿಸಲಿದ್ದು, ಇಡೀ ನಗರ ಪೊಲೀಸ್ ವ್ಯವಸ್ಥೆಯ ಅಂತಿಮ ನಿಯಂತ್ರಣ ಮುಖ್ಯ ಆಯುಕ್ತರ ಬಳಿಯೇ ಇರಲಿದೆ.

ಹೊರವಲಯಗಳ ಸೇರ್ಪಡೆ ಮತ್ತು ವ್ಯಾಪ್ತಿ ವಿಸ್ತರಣೆ

2026ರ ನವೆಂಬರ್ 18ರಂದು ಹೊರಡಿಸಲಾದ ಸರ್ಕಾರದ ಆದೇಶದ ಪ್ರಕಾರ, ಬೆಂಗಳೂರು ಪೊಲೀಸ್ ವ್ಯಾಪ್ತಿಯು ಸುಮಾರು 712 ಚದರ ಕಿಲೋಮೀಟರ್ ವಿಸ್ತೀರ್ಣ ಮತ್ತು ಅಂದಾಜು 1.56 ಕೋಟಿ ಜನಸಂಖ್ಯೆಯನ್ನು ಒಳಗೊಂಡಿದೆ. ಇಲಾಖೆಯ ಒಟ್ಟು ಮಂಜೂರಾದ ಬಲ 26,296 ಆಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ನಗರ ಪಾಲಿಕೆಗಳ ರಚನೆಗೆ ಪೂರಕವಾಗಿ ಈ ಪೊಲೀಸ್ ಮರುವಿಂಗಡಣೆ ನಡೆದಿದೆ.

ಹೊಸ ವ್ಯವಸ್ಥೆಯಲ್ಲಿ ವೈಟ್‌ಫೀಲ್ಡ್, ಪೀಣ್ಯ, ಕೆಂಗೇರಿ ಮತ್ತು ಎಲೆಕ್ಟ್ರಾನಿಕ್ ಸಿಟಿಯಂತಹ ಪ್ರಮುಖ ವಲಯಗಳೊಂದಿಗೆ ಕುಂಬಳಗೋಡು, ಹೆಬ್ಬಗೋಡಿ, ಅವಲಹಳ್ಳಿ, ಮಡನಾಯಕನಹಳ್ಳಿ, ರಾಜಾನುಕುಂಟೆ, ಬನ್ನೇರುಘಟ್ಟ, ಸೂರ್ಯ ಸಿಟಿ, ಜಿಗಣಿ, ಆನೇಕಲ್, ಅತ್ತಿಬೆಲೆ ಹಾಗೂ ಸರ್ಜಾಪುರದಂತಹ ಹೊರವಲಯದ ಪ್ರದೇಶಗಳನ್ನೂ ಸೇರ್ಪಡೆಗೊಳಿಸಲಾಗಿದೆ. ಇದರಿಂದ ವೇಗವಾಗಿ ಬೆಳೆಯುತ್ತಿರುವ ವಸತಿ, ಕೈಗಾರಿಕಾ ಮತ್ತು ಐಟಿ ವಲಯಗಳಿಗೆ ಪೊಲೀಸ್ ಸೇವೆ ಸುಧಾರಿಸುವ ನಿರೀಕ್ಷೆಯಿದೆ. ಆದರೆ, ಈ ಭಾಗದ ಠಾಣೆಗಳಿಗೆ ಅಗತ್ಯ ಸಿಬ್ಬಂದಿ, ವಾಹನ ಮತ್ತು ತಾಂತ್ರಿಕ ಮೂಲಸೌಕರ್ಯ ಒದಗಿಸದಿದ್ದರೆ ಕೇವಲ ಹುದ್ದೆಗಳ ಸೃಷ್ಟಿಯಿಂದ ನಿರೀಕ್ಷಿತ ಬದಲಾವಣೆ ಕಷ್ಟಸಾಧ್ಯ ಎಂಬ ಅಭಿಪ್ರಾಯವೂ ಇದೆ.

ದೇಶದ ಇತರ ಮಹಾನಗರಗಳ ಮಾದರಿ

ಭಾರತದಲ್ಲಿ 1856ರಲ್ಲಿ ಮುಂಬೈ ಮತ್ತು ಕೋಲ್ಕತ್ತಾದಲ್ಲಿ ಆರಂಭವಾದ ಪೊಲೀಸ್ ಕಮಿಷನರೇಟ್ ವ್ಯವಸ್ಥೆ, ನಂತರ ಚೆನ್ನೈ, ಹೈದರಾಬಾದ್, ದೆಹಲಿ, ಅಹಮದಾಬಾದ್, ಪುಣೆ, ಲಖನೌ, ಜೈಪುರ, ಭುವನೇಶ್ವರ–ಕಟಕ್ ಸೇರಿದಂತೆ ಹಲವು ನಗರಗಳಿಗೆ ವಿಸ್ತರಣೆಯಾಗಿದೆ. ಭಾರತದ ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ 2022ರ ಅಂಕಿಅಂಶಗಳ ಪ್ರಕಾರ ಕರ್ನಾಟಕದಲ್ಲಿಯೇ ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮತ್ತು ಕಲಬುರಗಿಯಲ್ಲಿ ಈ ವ್ಯವಸ್ಥೆಯಿದೆ.

ದೊಡ್ಡ ನಗರಗಳನ್ನು ಬಹು ಕಮಿಷನರೇಟ್‌ಗಳಾಗಿ ವಿಭಜಿಸಿರುವ ಉದಾಹರಣೆಗಳು ದೇಶದಲ್ಲಿವೆ. ಹೈದರಾಬಾದ್‌ನಲ್ಲಿ ಹೈದರಾಬಾದ್, ಸೈಬರಾಬಾದ್ ಮತ್ತು ರಾಚಕೊಂಡ ಎಂಬ ಮೂರು ಪ್ರತ್ಯೇಕ ಆಯುಕ್ತರೇಟ್‌ಗಳಿವೆ. ಚೆನ್ನೈನಲ್ಲಿ 2022ರಲ್ಲಿ ಗ್ರೇಟರ್ ಚೆನ್ನೈ ವ್ಯಾಪ್ತಿಯನ್ನು ವಿಭಜಿಸಿ ತಾಂಬರಂ ಮತ್ತು ಆವಡಿ ಆಯುಕ್ತರೇಟ್‌ಗಳನ್ನು ರಚಿಸಲಾಯಿತು. ಪುಣೆಯಲ್ಲಿ ಪುಣೆ ಮತ್ತು ಪಿಂಪ್ರಿ-ಚಿಂಚ್ವಾಡ್ ಪ್ರತ್ಯೇಕ ವ್ಯವಸ್ಥೆಗಳಿವೆ. ಆದರೆ, ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಹೈದರಾಬಾದ್, ಮುಂಬೈ ಮತ್ತು ಕೋಲ್ಕತ್ತಾದಂತಹ ನಗರಗಳಲ್ಲಿ ಬಹು ಆಯುಕ್ತರೇಟ್‌ಗಳಿದ್ದರೂ ಬೆಂಗಳೂರಿನಲ್ಲಿ ರೂಪಿಸಿರುವಂತೆ ಅವೆಲ್ಲವನ್ನೂ ಒಬ್ಬ ಮುಖ್ಯ ನಗರ ಪೊಲೀಸ್ ಆಯುಕ್ತರ ಅಧೀನದಲ್ಲಿ ಇರಿಸುವ ಮಾದರಿ ಅಲ್ಲಿ ಇರಲಿಲ್ಲ.

ವರ್ಗಾವಣೆ ಪೈಪೋಟಿ ಮತ್ತು ಜಾತಿ ಸಮೀಕರಣದ ಚರ್ಚೆ

ಪೊಲೀಸ್ ಆಡಳಿತದ ವಿಕೇಂದ್ರೀಕರಣದ ನಡುವೆಯೇ, ಈ ಐದು ಹೊಸ ಹುದ್ದೆಗಳು ಹಿರಿಯ ಐಪಿಎಸ್ ಅಧಿಕಾರಿಗಳ ನಡುವೆ ವರ್ಗಾವಣೆ ಲಾಬಿ, ರಾಜಕೀಯ ಪ್ರಭಾವ ಮತ್ತು ಜಾತಿ ಸಮೀಕರಣಗಳನ್ನು ಹೆಚ್ಚಿಸಬಹುದೇ ಎಂಬ ಚರ್ಚೆಯೂ ಮುನ್ನೆಲೆಗೆ ಬಂದಿದೆ. ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಜಾತಿ ಮತ್ತು ವರ್ಗಾವಣೆ ಲಾಬಿಯ ಆರೋಪಗಳು ಹೊಸದಲ್ಲ. 2011ರಲ್ಲಿ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ನಡೆದ 82 ಡಿವೈಎಸ್‌ಪಿಗಳ ವರ್ಗಾವಣೆಯಲ್ಲಿ ಸುಮಾರು ಶೇ.70ರಷ್ಟು ಅಧಿಕಾರಿಗಳು ಒಕ್ಕಲಿಗ ಸಮುದಾಯಕ್ಕೆ ಸೇರಿದವರು ಎಂದು ಬೆಂಗಳೂರು ಮಿರರ್ ವರದಿ ಮಾಡಿತ್ತು. 2015ರಲ್ಲಿ ಇಲಾಖೆಯೊಳಗಿನ ಒಕ್ಕಲಿಗ, ಲಿಂಗಾಯತ ಮತ್ತು ದಲಿತ ಸಮುದಾಯಗಳ ಪ್ರಭಾವಿ ಗುಂಪುಗಳ ಬಗ್ಗೆ ವರದಿಗಳು ಪ್ರಕಟವಾಗಿದ್ದವು. ಅದೇ ವರ್ಷ ಎನ್.ಎಸ್. ಮೇಘರಿಖ್ ಅವರನ್ನು ಬೆಂಗಳೂರು ಆಯುಕ್ತರನ್ನಾಗಿ ನೇಮಿಸಿದಾಗ ಸಿದ್ದರಾಮಯ್ಯ ಸರ್ಕಾರದ ಅಹಿಂದ ರಾಜಕೀಯದ ಆಯಾಮವೂ ಚರ್ಚೆಯಾಗಿತ್ತು; ಆದರೂ ಅವರ ಆಡಳಿತಾತ್ಮಕ ಅನುಭವವೂ ನೇಮಕಾತಿಗೆ ಕಾರಣವಾಗಿತ್ತು ಎಂದು ವರದಿಗಳು ದಾಖಲಿಸಿದ್ದವು. 2023ರಲ್ಲಿ ದಿ ನ್ಯೂಸ್ ಮಿನಿಟ್ ಪ್ರಕಟಿಸಿದ ತನಿಖಾ ವರದಿಯಲ್ಲಿ ಪೊಲೀಸ್ ವರ್ಗಾವಣೆಗಳಲ್ಲಿ ಹಣ, ಮಧ್ಯವರ್ತಿಗಳು, ರಾಜಕೀಯ ಶಿಫಾರಸು ಮತ್ತು ಜಾತಿ ಪ್ರಭಾವದ ಆರೋಪಗಳನ್ನು ವಿವರಿಸಲಾಗಿತ್ತು.

ಈಗ ಐದು ಪ್ರಾದೇಶಿಕ ಆಯುಕ್ತರ ಹುದ್ದೆಗಳು ಸೃಷ್ಟಿಯಾಗಿರುವುದರಿಂದ ಪ್ರಮುಖ ವಾಣಿಜ್ಯ, ಐಟಿ, ರಿಯಲ್ ಎಸ್ಟೇಟ್ ಮತ್ತು ಕೈಗಾರಿಕಾ ವಲಯಗಳ ಮೇಲ್ವಿಚಾರಣೆಗಾಗಿ ಹಿರಿಯ ಅಧಿಕಾರಿಗಳ ನಡುವೆ ಪೈಪೋಟಿ ವಿಸ್ತರಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಆದರೆ, ಪ್ರಸ್ತುತ ನಡೆದಿರುವ ಐದು ಆಯುಕ್ತರ ನೇಮಕಾತಿ ಜಾತಿ ಆಧಾರದಲ್ಲಿ ಆಗಿದೆ ಎಂಬುದಕ್ಕೆ ಯಾವುದೇ ಅಧಿಕೃತ ಪುರಾವೆಗಳಿಲ್ಲ.

ಮುಂದಿರುವ ಸವಾಲುಗಳು

ಹೊಸ ವ್ಯವಸ್ಥೆಯಿಂದ ಪೊಲೀಸ್ ಆಡಳಿತ ಜನರಿಗೆ ಹತ್ತಿರವಾಗುವುದು, ಅಪರಾಧ ತನಿಖೆ ಚುರುಕುಗೊಳ್ಳುವುದು, ಸಂಚಾರ ದಟ್ಟಣೆಗೆ ಪ್ರತ್ಯೇಕ ಗಮನ ಸಿಗುವುದು ಮತ್ತು ಹೊರವಲಯಗಳಿಗೆ ಉತ್ತಮ ಭದ್ರತೆ ದೊರೆಯುವ ನಿರೀಕ್ಷೆಯಿದೆ. ಅದೇ ಸಮಯದಲ್ಲಿ ಐದು ಆಯುಕ್ತರ ನಡುವಿನ ಸಮನ್ವಯ, ಅಧಿಕಾರ ಹಂಚಿಕೆಯಲ್ಲಿನ ಗೊಂದಲ ನಿವಾರಣೆ, ಸಿಬ್ಬಂದಿ ಹಾಗೂ ಸಂಪನ್ಮೂಲಗಳ ಸಮಾನ ಹಂಚಿಕೆ ಮತ್ತು ಹೆಚ್ಚಾಗಲಿರುವ ಆಡಳಿತ ವೆಚ್ಚವನ್ನು ನಿಭಾಯಿಸುವುದು ಇಲಾಖೆಯ ಮುಂದಿರುವ ಪ್ರಮುಖ ಸವಾಲುಗಳಾಗಿವೆ. 1963ರ ನಂತರದ ಈ ದೊಡ್ಡ ಬದಲಾವಣೆಯು ಕೇವಲ ಅಧಿಕಾರ ಕೇಂದ್ರಗಳ ವಿಸ್ತರಣೆಯಾಗದೆ, ಜನಸಾಮಾನ್ಯರಿಗೆ ಸುಲಭವಾಗಿ ನ್ಯಾಯ ಮತ್ತು ಸುರಕ್ಷತೆ ಒದಗಿಸುವ ವ್ಯವಸ್ಥೆಯಾಗಿ ರೂಪುಗೊಳ್ಳಬೇಕಿದೆ.

Read More
Next Story