ಶೀಘ್ರವೇ ಕರಾವಳಿಗೆ ವಂದೇ ಭಾರತ್ ರೈಲು: ಅಶ್ವಿನಿ ವೈಷ್ಣವ್
x

ಶೀಘ್ರವೇ ಕರಾವಳಿಗೆ ವಂದೇ ಭಾರತ್ ರೈಲು: ಅಶ್ವಿನಿ ವೈಷ್ಣವ್

ಹಾಸನ-ಮಂಗಳೂರು ಮಾರ್ಗದ ವಿದ್ಯುತ್ ಚಾಲಿತ ರೈಲು ಮಾರ್ಗ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದ್ದು, ಪ್ರಮಾಣಪತ್ರ ದೊರೆತ ತಕ್ಷಣ ರೈಲು ಸಂಚಾರ ಕಾರ್ಯಾರಂಭ ಮಾಡಲಿದ ಎಂದು ಸಚಿವರು ಹೇಳಿದರು.


Click the Play button to hear this message in audio format

ದೇಶವನ್ನು 2047ರ ವೇಳೆಗೆ 'ವಿಕಸಿತ್ ಭಾರತ'ವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಒಂದು ಸ್ಪಷ್ಟವಾದ ಮಾರ್ಗಸೂಚಿ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಬಣ್ಣಿಸಿದ್ದಾರೆ. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಸಿಕ್ಕಿರುವ ಅಭೂತಪೂರ್ವ ಕೊಡುಗೆಗಳು ಮತ್ತು ರಾಜ್ಯದ ರೈಲ್ವೆ ಅಭಿವೃದ್ಧಿಯ ಚಿತ್ರಣವನ್ನು ಬಿಚ್ಚಿಟ್ಟರು.

ಕರ್ನಾಟಕದ ರೈಲ್ವೆ ಅಭಿವೃದ್ಧಿಗೆ ಈ ವರ್ಷ ಹಿಂದೆಂದೂ ಕಾಣದ ರೀತಿಯಲ್ಲಿ ಬರೋಬ್ಬರಿ 7,748 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಕರ್ನಾಟಕಕ್ಕೆ ವಾರ್ಷಿಕವಾಗಿ ಕೇವಲ 800 ಕೋಟಿ ರೂಪಾಯಿ ಸಿಗುತ್ತಿತ್ತು. ಆದರೆ, ನರೇಂದ್ರ ಮೋದಿ ನೇತೃತ್ವದ ಸರ್ಕಾರ ಈ ಬಾರಿ ಅದರ 9 ಪಟ್ಟು ಹೆಚ್ಚು ಹಣವನ್ನು ರಾಜ್ಯಕ್ಕೆ ನೀಡುವ ಮೂಲಕ ರಾಜ್ಯದ ಅಭಿವೃದ್ಧಿಗೆ ಬದ್ಧತೆ ತೋರಿದೆ ಎಂದು ಅಶ್ವಿನಿ ವೈಷ್ಣವ್ ಅಂಕಿಅಂಶಗಳ ಸಮೇತ ವಿವರಿಸಿದರು. ಸದ್ಯ ರಾಜ್ಯದಲ್ಲಿ ರೈಲ್ವೆ ವಲಯದಲ್ಲಿ ಒಟ್ಟಾರೆಯಾಗಿ 52,950 ಕೋಟಿ ರೂಪಾಯಿಗಳ ಬೃಹತ್ ಬಂಡವಾಳ ಹೂಡಿಕೆಯಾಗುತ್ತಿದ್ದು, ಟ್ರ್ಯಾಕ್ ನವೀಕರಣ, ಸುರಕ್ಷತಾ ಕ್ರಮಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ 2,100 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ ಎಂದರು.

ಬೆಂಗಳೂರು-ಮಂಗಳೂರು ವಂದೇ ಭಾರತ್ ಕನಸು ನನಸು

ರಾಜ್ಯದ ಜನತೆಯ ಬಹುದಿನಗಳ ಬೇಡಿಕೆಯಾಗಿದ್ದ ಬೆಂಗಳೂರು ಮತ್ತು ಮಂಗಳೂರು ನಡುವಿನ 'ವಂದೇ ಭಾರತ್' ರೈಲು ಸಂಚಾರ ಶೀಘ್ರದಲ್ಲೇ ಆರಂಭವಾಗಲಿದೆ ಎಂಬ ಸಿಹಿ ಸುದ್ದಿಯನ್ನು ಸಚಿವರು ಇದೇ ವೇಳೆ ನೀಡಿದರು. ಹಾಸನ-ಮಂಗಳೂರು ಮಾರ್ಗದ ವಿದ್ಯುತ್ ಚಾಲಿತ ರೈಲು ಮಾರ್ಗ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದ್ದು, ವಿದ್ಯುದ್ದೀಕರಣದ ಪ್ರಮಾಣಪತ್ರ ದೊರೆತ ತಕ್ಷಣ ಈ ಮಾರ್ಗ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಲಿದೆ. ಈ ಮಾರ್ಗದಲ್ಲಿ ಎರಡು ರೈಲುಗಳನ್ನು ಓಡಿಸಲು ನಿರ್ಧರಿಸಲಾಗಿದ್ದು, ಒಂದು ರೈಲು ಕರಾವಳಿಯಿಂದ ಬೆಂಗಳೂರಿಗೆ ಬಂದರೆ, ಮತ್ತೊಂದು ಬೆಂಗಳೂರಿನಿಂದ ಕರಾವಳಿಗೆ ಸಂಚರಿಸಲಿದೆ. ಇದರೊಂದಿಗೆ ಸಿಂಗಲ್ ರೇಕ್ ರೈಲು ಕೂಡ ಸೇವೆಯಲ್ಲಿ ಇರಲಿದೆ ಎಂದು ಮಾಹಿತಿ ನೀಡಿದರು.

ಬೆಂಗಳೂರಿನಿಂದ ಪುಣೆ, ಹೈದರಾಬಾದ್, ಚೆನ್ನೈಗೆ ಹೈಸ್ಪೀಡ್ ರೈಲು

ಭವಿಷ್ಯದ ಸಾರಿಗೆ ವ್ಯವಸ್ಥೆಯ ಕುರಿತು ಮಹತ್ವದ ಮಾಹಿತಿ ಹಂಚಿಕೊಂಡ ಸಚಿವರು, ಗಂಟೆಗೆ 300 ಕಿ.ಮೀ ವೇಗದಲ್ಲಿ ಚಲಿಸುವ ಹೈಸ್ಪೀಡ್ ರೈಲು ಯೋಜನೆಗೆ ನೀಲನಕ್ಷೆ ತಯಾರಾಗುತ್ತಿದೆ ಎಂದರು. ಬೆಂಗಳೂರಿನಿಂದ ಪುಣೆ ಮತ್ತು ಮುಂಬೈ ನಡುವೆ ಈ ಹೈಸ್ಪೀಡ್ ರೈಲು ಯೋಜನೆ ಅನುಷ್ಠಾನಗೊಳ್ಳಲಿದ್ದು, ಇದು ವಾಣಿಜ್ಯ ನಗರಿಗಳ ನಡುವಿನ ಸಂಪರ್ಕಕ್ಕೆ ಹೊಸ ವೇಗ ನೀಡಲಿದೆ. ಇದಲ್ಲದೆ, ಬೆಂಗಳೂರಿನಿಂದ ಹೈದರಾಬಾದ್ ಮತ್ತು ಚೆನ್ನೈ ನಗರಗಳಿಗೆ ತಲಾ ಎರಡು ವೇಗದ ರೈಲುಗಳು ಸಂಚರಿಸಲಿವೆ. ವಂದೇ ಭಾರತ್ ರೈಲುಗಳ 4ನೇ ಬ್ಯಾಚ್ ತಯಾರಿಕೆ ಭರದಿಂದ ಸಾಗುತ್ತಿದ್ದು, ಅದು ಪೂರ್ಣಗೊಂಡ ನಂತರ ದಕ್ಷಿಣ ಕರ್ನಾಟಕ ಭಾಗಕ್ಕೆ ಇನ್ನಷ್ಟು ಹೆಚ್ಚಿನ ರೈಲು ಸೇವೆಗಳು ಲಭ್ಯವಾಗಲಿವೆ ಎಂದು ಭರವಸೆ ನೀಡಿದರು. 'ಅಮೃತ್ ಭಾರತ್' ಯೋಜನೆಯಡಿ ರಾಜ್ಯದ 19 ರೈಲು ನಿಲ್ದಾಣಗಳನ್ನು ವಿಶ್ವದರ್ಜೆಗೆ ಏರಿಸಲಾಗುತ್ತಿದೆ ಎಂದರು.

ಉತ್ಪಾದನಾ ವಲಯಕ್ಕೆ ಬಲ ಮತ್ತು ಉದ್ಯೋಗ ಸೃಷ್ಟಿ

ಈ ಬಾರಿಯ ಕೇಂದ್ರ ಬಜೆಟ್ ಕೇವಲ ರೈಲ್ವೆಗಷ್ಟೇ ಸೀಮಿತವಾಗಿಲ್ಲ ಎಂದು ಹೇಳಿದ ಅಶ್ವಿನಿ ವೈಷ್ಣವ್, ದೇಶದ ಆರ್ಥಿಕತೆಯನ್ನು ಬಲಪಡಿಸುವ ದೂರದೃಷ್ಟಿಯನ್ನು ಬಜೆಟ್ ಹೊಂದಿದೆ ಎಂದರು. 'ಮೇಕಿನ್ ಇಂಡಿಯಾ' ಮೂಲಕ ಉತ್ಪಾದನಾ ವಲಯಕ್ಕೆ ಬಲ ತುಂಬಲು ಸರ್ಕಾರ ಮುಂದಾಗಿದ್ದು, ಎಲೆಕ್ಟ್ರಾನಿಕ್ ಸೇರಿದಂತೆ ಇತರೆ ಉತ್ಪಾದನಾ ವಲಯಗಳ ನಿರ್ಮಾಣ ಮತ್ತು ಉಪಕರಣಗಳ ತಯಾರಿಕೆಗೆ ವಿಫುಲ ಅವಕಾಶ ಕಲ್ಪಿಸಲಾಗಿದೆ. ಜವಳಿ ಉದ್ಯಮಕ್ಕೆ ಉತ್ತೇಜನ ನೀಡಲು ಮೆಗಾ ಟೆಕ್ಸ್‌ಟೈಲ್ ಪಾರ್ಕ್ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದೆ. ಹಾಗೆಯೇ, ಮಿಲಿಟರಿ ಉಪಕರಣಗಳ ಜೊತೆಗೆ ಕ್ರೀಡಾ ಪರಿಕರಗಳ ಉತ್ಪಾದನೆಗೂ ಬಜೆಟ್‌ನಲ್ಲಿ ಪ್ರೋತ್ಸಾಹ ನೀಡಲಾಗಿದ್ದು, ಆ ಮೂಲಕ ಹೆಚ್ಚಿನ ಉದ್ಯೋಗ ಸೃಷ್ಟಿಯತ್ತ ಗಮನ ಹರಿಸಲಾಗಿದೆ ಎಂದು ವಿವರಿಸಿದರು.

ತಂತ್ರಜ್ಞಾನ ಮತ್ತು ಯುವ ಪೀಳಿಗೆಗೆ ಆದ್ಯತೆ

ಕೃತಕ ಬುದ್ಧಿಮತ್ತೆ (AI) ಯುಗದಲ್ಲಿ ತಂತ್ರಜ್ಞಾನದ ಬದಲಾವಣೆಗೆ ಒಗ್ಗಿಕೊಳ್ಳುವ ನಿಟ್ಟಿನಲ್ಲಿ ಡೇಟಾ ಸೆಂಟರ್‌ಗಳ ಸ್ಥಾಪನೆಗೆ ಬಜೆಟ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದು ಸಾಫ್ಟ್‌ವೇರ್ ಮತ್ತು ಐಟಿ ಇಂಡಸ್ಟ್ರಿಗಳ ಬೆಳವಣಿಗೆಗೆ ಸಹಕಾರಿಯಾಗಲಿದೆ. ಐಟಿ ವಲಯದ ತೆರಿಗೆ ಸರಳೀಕರಣಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಇದರಿಂದಾಗಿ ವಿಶ್ವದ ಇತರೆಡೆಗಳಿಂದ ಐಟಿ ಉದ್ಯಮಗಳು ಭಾರತಕ್ಕೆ ಹರಿದು ಬರಲು ದಾರಿ ಮಾಡಿಕೊಟ್ಟಂತಾಗಿದೆ. ಬಯೋ ಫಾರ್ಮಾ ವಲಯದ ಮೂಲಕ ಯುವ ಪೀಳಿಗೆಗೆ ಹೊಸ ಅವಕಾಶಗಳನ್ನು ತೆರೆದಿಡಲಾಗಿದೆ ಎಂದು ಅಶ್ವಿನಿ ವೈಷ್ಣವ್ ತಿಳಿಸಿದರು. ಕರ್ನಾಟಕದ ಸಂಸದರು ಇಟ್ಟಿರುವ ಹಲವು ಬೇಡಿಕೆಗಳನ್ನು ಪರಿಶೀಲಿಸಲಾಗಿದ್ದು, ರಾಜ್ಯದ ಸಮಗ್ರ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಸದಾ ಸಿದ್ಧವಿದೆ ಎಂದು ಪುನರುಚ್ಚರಿಸಿದರು.

ಈ ಪತ್ರಿಕಾಗೋಷ್ಠಿಯಲ್ಲಿ ಪ್ರತಿಪಕ್ಷ ನಾಯಕ ಆರ್. ಅಶೋಕ್, ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮೇಲ್ಮನೆ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದರಾದ ಪಿಸಿ ಮೋಹನ್, ಡಾ. ಮಂಜುನಾಥ್ ಮತ್ತು ಮಾಜಿ ಸಂಸದ ಮುನಿಸ್ವಾಮಿ ಉಪಸ್ಥಿತರಿದ್ದರು.

Read More
Next Story