ಕ್ಯಾಂಡಿ ಕ್ರಷ್‌ನಲ್ಲಿ 23,585 ಹಂತ ದಾಟಿ ವಿಶ್ವ ದಾಖಲೆ ಬರೆದ ಬೆಂಗಳೂರಿನ ಕನ್ನಡಿಗ
ಕ್ಯಾಂಡಿ ಕ್ರಷ್ ಆಟದಲ್ಲಿ 23,585 ಹಂತಗಳನ್ನು ದಾಟುವ ಮೂಲಕ ಬೆಂಗಳೂರಿನ ಸೂರ್ಯರಾಜ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. 12 ವರ್ಷಗಳ ಪರಿಶ್ರಮ, ತಾಳ್ಮೆ ಮತ್ತು ನಿರಂತರ ಪ್ರಯತ್ನದಿಂದ ಈ ಸಾಧನೆ ಮಾಡಿದ ಅವರ ಯಶೋಗಾಥೆ ಇಲ್ಲಿದೆ.
ಮೊಬೈಲ್‌ನಲ್ಲಿ ಆಟವಾಡುತ್ತಿದ್ದರೆ ಮನೆಯವರಿಂದ ಬೈಗುಳ ಕೇಳುವುದು ಸಾಮಾನ್ಯ. ಆದರೆ ಬೆಂಗಳೂರಿನ ಯುವಕನೊಬ್ಬ ಇದೇ ಮೊಬೈಲ್ ಆಟದ ಮೂಲಕ ವಿಶ್ವ ದಾಖಲೆಯ ಸಾಧನೆ ಮಾಡಿದ್ದಾರೆ. ಜನಪ್ರಿಯ ಕ್ಯಾಂಡಿ ಕ್ರಷ್ ಆಟದಲ್ಲಿ ಬರೋಬ್ಬರಿ 23,585 ಹಂತಗಳನ್ನು ದಾಟಿರುವ ಬೆಂಗಳೂರಿನ ಸೂರ್ಯರಾಜ್ ಇದೀಗ ಗಮನ ಸೆಳೆದಿದ್ದಾರೆ. ದ ಫಡರಲ್ ಕರ್ನಾಟಕಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಸೂರ್ಯರಾಜ್ ತಮ್ಮ ಸಾಧನೆ ಬಗ್ಗೆ ಮಾತನಾಡಿದ್ದಾರೆ.
ಸೂರ್ಯರಾಜ್ ಅವರ ಕ್ಯಾಂಡಿ ಕ್ರಷ್ ಪಯಣ ಆರಂಭವಾಗಿದ್ದು 2013-14ರಲ್ಲಿ. ಸ್ನಾತಕೋತ್ತರ ಪದವಿ ಓದುತ್ತಿದ್ದಾಗ ಸ್ನೇಹಿತರೊಬ್ಬರು ಪರಿಚಯಿಸಿದ ಈ ಆಟ ಕ್ರಮೇಣ ಅವರ ಹವ್ಯಾಸವಾಯಿತು. ಕಳೆದ 12 ವರ್ಷಗಳಿಂದ ನಿರಂತರವಾಗಿ ಆಟವಾಡುತ್ತಿರುವ ಅವರು, ವಾರಕ್ಕೊಮ್ಮೆ ಬಿಡುಗಡೆಯಾಗುವ ಹೊಸ ಹಂತಗಳನ್ನು ಪೂರ್ಣಗೊಳಿಸುತ್ತಿದ್ದರು. ಇದಕ್ಕಾಗಿ ದಿನಕ್ಕೆ ಸುಮಾರು ಒಂದರಿಂದ ಎರಡು ಗಂಟೆ ಸಮಯ ಮೀಸಲಿಡುತ್ತಿದ್ದರು.
ವಿಶೇಷವೆಂದರೆ ಸೂರ್ಯರಾಜ್ ಕೇವಲ ಆಟಗಾರರಲ್ಲ. ಅವರು ಬೆಂಗಳೂರಿನ ಆರ್‌ವಿಡಿ ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್ ಮತ್ತು ಇನ್‌ಫರ್ಮೇಷನ್ ಟೆಕ್ನಾಲಜಿಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ 15 ವರ್ಷಗಳ ಅನುಭವ ಹೊಂದಿರುವ ಅವರು, ವೃತ್ತಿಪರ ಸಮಾಲೋಚಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಉತ್ತರ ಭಾರತದ ಶುಭಂ ಎಂಬ ಯುವಕನ ಕ್ಯಾಂಡಿ ಕ್ರಷ್ ದಾಖಲೆಯ ಬಗ್ಗೆ ತಿಳಿದ ಬಳಿಕ ತಮ್ಮ ಸಾಧನೆಯನ್ನೂ ಗುರುತಿಸಬಹುದು ಎಂಬ ಆಲೋಚನೆ ಸೂರ್ಯರಾಜ್ ಅವರಿಗೆ ಬಂದಿತ್ತು. ಬಳಿಕ ತಮ್ಮ ಆಟದ ದಾಖಲೆಗಳನ್ನು 'ಬುಕ್ಸ್ ಆಫ್ ವರ್ಲ್ಡ್ ರೆಕಾರ್ಡ್ಸ್' ಸಂಸ್ಥೆಗೆ ಸಲ್ಲಿಸಿದ್ದರು. ಪರಿಶೀಲನೆಯ ನಂತರ ಅವರಿಗೆ ವಿಶ್ವ ದಾಖಲೆಯ ಮಾನ್ಯತೆ ದೊರೆತಿದೆ.
ತಮ್ಮ ಸಾಧನೆಯ ಹಿಂದೆ ತಾಯಿ ಮತ್ತು ಸಹೋದರರ ತ್ಯಾಗವಿದೆ ಎಂದು ಸೂರ್ಯರಾಜ್ ಭಾವುಕರಾಗಿದ್ದಾರೆ. ದಾಖಲೆ ದೊರೆತಾಗ ಪತ್ನಿಯೇ ತಮ್ಮಿಗಿಂತ ಹೆಚ್ಚು ಸಂಭ್ರಮಿಸಿದ್ದರು ಎಂದೂ ಹೇಳಿದ್ದಾರೆ.
ಕ್ಯಾಂಡಿ ಕ್ರಷ್‌ನಂತಹ ಆಟಗಳು ಒತ್ತಡ ಕಡಿಮೆ ಮಾಡಲು ನೆರವಾಗಬಹುದು. ಆದರೆ ಯಾವುದೇ ಆಟದ ಚಟ ಒಳ್ಳೆಯದಲ್ಲ. ಓದು, ಉದ್ಯೋಗ ಮತ್ತು ಕುಟುಂಬಕ್ಕೆ ಆದ್ಯತೆ ನೀಡಿ, ಬಿಡುವಿನ ವೇಳೆಯಲ್ಲಿ ಮಾತ್ರ ಆಟವಾಡಬೇಕು ಎಂಬುದು ಅವರ ಸಲಹೆ. ತಾಳ್ಮೆ, ಏಕಾಗ್ರತೆ ಮತ್ತು ಬದ್ಧತೆಯೇ ತಮ್ಮ ಸಾಧನೆಯ ಹಿಂದಿನ ಪಾಠಗಳು ಎಂದು ಸೂರ್ಯರಾಜ್ ಹೇಳಿದ್ದಾರೆ.
