
Israel-Iran War Impact| ಅಲ್ಲಿ ಯುದ್ಧ, ಇಲ್ಲಿ ಲೂಟಿ..! ಬೆಂಗಳೂರಿನಲ್ಲಿ ಗ್ಯಾಸ್ ಮಾಫಿಯಾ ಅಟ್ಟಹಾಸ?
ಮದ್ಯಪ್ರಾಚ್ಯದಲ್ಲಿ ಯುದ್ಧದ ಪರಿಸ್ಥಿತಿಯಿಂದಾಗಿ ನಗರದಲ್ಲಿ ಕೃತಕ ಅಭಾವ ಸೃಷ್ಟಿಸಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಯುದ್ಧ ನಡೆಯುತ್ತಿರುವುದು ಸಾವಿರಾರು ಮೈಲಿ ದೂರದಲ್ಲಿ, ಆದರೆ ಅದರ ಬಿಸಿ ತಟ್ಟುತ್ತಿರುವುದು ಬೆಂಗಳೂರಿನ ಸಾಮಾನ್ಯ ಮನುಷ್ಯನಿಗೆ. ಎಲ್‌ಪಿಜಿ ಪೂರೈಕೆಯ ಕೊರತೆಯ ನೆಪದಲ್ಲಿ ನಗರದಲ್ಲಿ ಕಾಳಸಂತೆ ಮಾರುಕಟ್ಟೆ ಎದ್ದುನಿಲ್ಲುತ್ತಿದೆ.
ಸಿಲಿಂಡರ್ ಪಡೆಯಲು ನಾಗರಿಕರು ಪರದಾಡುತ್ತಿದ್ದರೆ, ಮಧ್ಯವರ್ತಿಗಳು ಲೂಟಿಗಿಳಿದಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಮದ್ಯಪ್ರಾಚ್ಯದಲ್ಲಿ ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಪರಿಸ್ಥಿತಿಯಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಮತ್ತು ಅನಿಲದ ಪೂರೈಕೆ ವ್ಯತ್ಯಯವಾಗಬಹುದು ಎಂಬ ಭೀತಿಯಿಂದಾಗಿ, ನಗರದಲ್ಲಿ ಕೃತಕ ಅಭಾವ ಸೃಷ್ಟಿಸಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಭಾರತವು ಎಲ್‌ಪಿಜಿಯನ್ನು ಶೇ. 60ಕ್ಕಿಂತ ಹೆಚ್ಚು ಭಾಗವನ್ನು ಆಮದು ಮಾಡಿಕೊಳ್ಳುತ್ತದೆ. ಇದರಲ್ಲಿ ಸೌದಿ ಅರೇಬಿಯಾ, ಖತಾರ್ ಮತ್ತು ಯುನೈಟೆಡ್ ಅರಬ್‌ನಂತಹ ಮದ್ಯಪ್ರಾಚ್ಯ ರಾಷ್ಟ್ರಗಳ ಪಾಲು ದೊಡ್ಡದಿದೆ. ಆದರೆ, ಇರಾಕ್-ಇರಾನ್ ಯುದ್ಧದ ಪರಿಣಾಮ ಸರಕು ಸಾಗಣೆ ವೆಚ್ಚ ಗಗನಕ್ಕೇರಿದೆ. ಪೂರೈಕೆ ಸರಪಳಿಯಲ್ಲಿನ ಈ ವ್ಯತ್ಯಯವು ಭಾರತದ ಬಂದರುಗಳಿಗೆ ತಲುಪುವ ಎಲ್‌ಪಿಜಿ ಪ್ರಮಾಣದಲ್ಲಿ ಇಳಿಕೆ ಉಂಟುಮಾಡಿದೆ ಎಂದು ಹೇಳಲಾಗಿದೆ.
ಬೆಂಗಳೂರು ಸುಮಾರು 1.3 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಮಹಾನಗರವಾಗಿದ್ದು, ಇಲ್ಲಿನ ಐಟಿ ಉದ್ಯೋಗಿಗಳು, ವಲಸೆ ಕಾರ್ಮಿಕರು ಮತ್ತು ಸಹಸ್ರಾರು ಹೋಟೆಲ್ ಉದ್ಯಮಗಳು ಎಲ್‌ಪಿಜಿಯನ್ನೇ ಅವಲಂಬಿಸಿವೆ. ಪೂರೈಕೆಯಲ್ಲಿ ಅಲ್ಪ ವ್ಯತ್ಯಯವಾದರೂ ನಗರದಲ್ಲಿ ಹಾಹಾಕಾರ ಸೃಷ್ಟಿಯಾಗುತ್ತದೆ. ಪ್ರಸ್ತುತ, ಸಿಲಿಂಡರ್ ಬುಕಿಂಗ್ ಮಾಡಿದ ನಂತರ ವಿತರಣೆಯಾಗಲು 7 ರಿಂದ 10 ದಿನಗಳ ವಿಳಂಬವಾಗುತ್ತಿದೆ. ಈ ವಿಳಂಬವನ್ನೇ ಬಂಡವಾಳ ಮಾಡಿಕೊಂಡಿರುವ ಮಧ್ಯವರ್ತಿಗಳು ಕಪ್ಪು ಮಾರುಕಟ್ಟೆಯನ್ನು ಸೃಷ್ಟಿಸಿದ್ದಾರೆ.
ಬೆಂಗಳೂರಿನಲ್ಲಿ ಎಲ್‌ಪಿಜಿ ಕಪ್ಪು ಮಾರುಕಟ್ಟೆಯು ಒಂದು ವ್ಯವಸ್ಥಿತ ಜಾಲದಂತೆ ಕಾರ್ಯನಿರ್ವಹಿಸುತ್ತಿದೆ. ಅಧಿಕೃತ ವಿತರಕರ ಬಳಿ ಬರುವ ಸಿಲಿಂಡರ್‌ಗಳನ್ನು ಸಾಮಾನ್ಯ ಗ್ರಾಹಕರಿಗೆ ನೀಡುವ ಬದಲಾಗಿ, ಹೆಚ್ಚಿನ ಲಾಭಕ್ಕಾಗಿ ಅಕ್ರಮವಾಗಿ ದಾಸ್ತಾನು ಮಾಡಲಾಗುತ್ತಿದೆ. ಮನೆಗಳಿಗೆ ನೀಡುವ ಸಬ್ಸಿಡಿ ಸಹಿತ ಸಿಲಿಂಡರ್‌ಗಳನ್ನು ಅಕ್ರಮವಾಗಿ ಹೋಟೆಲ್‌ಗಳು, ಕ್ಯಾಂಟೀನ್‌ಗಳು ಮತ್ತು ಸಣ್ಣ ಕೈಗಾರಿಕೆಗಳಿಗೆ ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಅಲ್ಲದೇ, ವಾಣಿಜ್ಯಕ್ಕಾಗಿ ಬಳಕೆ ಮಾಡುವ ಸಿಲಿಂಡರ್‌ಗಳ ದರಗಳನ್ನು ಸಹ ಏರಿಕೆ ಮಾಡಲಾಗಿದೆ. ಗ್ಯಾಸ್ ಏಜೆನ್ಸಿಗಳ ಮೂಲಗಳ ಪ್ರಕಾರ, 14 ಕೆಜಿ ಸಿಲಿಂಡರ್‌ಗಳ ದರವು 900 ರೂ. ಇದ್ದರೆ ಕಾಳಸಂತೆಯಲ್ಲಿ 1,800 ರೂ.ನಿಂದ 2 ಸಾವಿರ ರೂ.ವರೆಗೆ ಮಾರಾಟ ಮಾಡಲಾಗುತ್ತಿದೆ. 19 ಕೆಜಿ ಸಿಲಿಂಡರ್‌ಗಳ ದರವು 1,800 - 2 ಸಾವಿರ ರೂ.ವರೆಗೆ ಇದ್ದರೆ 3 ರಿಂದ 4 ಸಾವಿರ ರೂ.ವರೆಗೆ ಕಾಳಸಂತೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ.
ಹೋಟೆಲ್ ಉದ್ಯಮದ ಮೇಲೆ ಪರಿಣಾಮ
ಬೆಂಗಳೂರಿನ ಹೋಟೆಲ್ ಉದ್ಯಮವು ನಗರದ ಆರ್ಥಿಕತೆಯ ಬೆನ್ನೆಲುಬು. ವಾಣಿಜ್ಯ ಸಿಲಿಂಡರ್‌ಗಳ ಬೆಲೆ ಏರಿಕೆ ಮತ್ತು ಕೊರತೆಯಿಂದಾಗಿ ಸಣ್ಣ ಹೋಟೆಲ್‌ಗಳು ಕಪ್ಪು ಮಾರುಕಟ್ಟೆಯ ಮೊರೆ ಹೋಗುತ್ತಿವೆ. ಇದು ಅಂತಿಮವಾಗಿ ಆಹಾರ ಪದಾರ್ಥಗಳ ಬೆಲೆ ಏರಿಕೆಗೆ ಕಾರಣವಾಗುತ್ತಿದ್ದು, ಸಾಮಾನ್ಯ ಜನರಿಗೆ ಹೋಟೆಲ್ ಊಟವೂ ದುಬಾರಿಯಾಗುತ್ತಿದೆ. ಬಲ್ಲಮೂಲಗಳು ಹೇಳುವಂತೆ ಗ್ಯಾಸ್ ಏಜೆನ್ಸಿಗಳ ವಿತರಣಾ ಹುಡುಗರು ಈ ಜಾಲದಲ್ಲಿ ಭಾಗಿಯಾಗಿದ್ದಾರೆ. ಸಿಲಿಂಡರ್ ತಲುಪಿಸಲು ಹೋದಾಗ ಸ್ಟಾಕ್ ಇಲ್ಲ ಎಂದು ಹೇಳಿ, ನಂತರ ಹಣದ ಆಸೆ ತೋರಿಸುವ ಗ್ರಾಹಕರಿಗೆ ಹೆಚ್ಚಿನ ಬೆಲೆಗೆ ಸಿಲಿಂಡರ್ ಒದಗಿಸುವ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಈ ಅಕ್ರಮಗಳ ಮೇಲೆ ನಿಗಾ ಇಡುವಲ್ಲಿ ವಿಫಲವಾಗಿದೆ. ತೈಲ ಕಂಪನಿಗಳು ತಮ್ಮ ವಿತರಕರ ಮೇಲೆ ಬಿಗಿಯಾದ ನಿಯಂತ್ರಣ ಹೊಂದಿಲ್ಲದಿರುವುದು ಪರಿಸ್ಥಿತಿಯನ್ನು ಬಿಗಡಾಯಿಸಿದೆ.
ಈ ಕುರಿತು ದ ಫೆಡರಲ್ ಕರ್ನಾಟಕ ಜತೆ ಮಾತನಾಡಿದ ಗ್ಯಾಸ್ ಏಜೆನ್ಸಿಯೊಂದರ ಸಿಬ್ಬಂದಿ ಎಸ್.ಸುಬ್ರಹ್ಮಣ್ಯ, ಅನಿಲ ಸಿಲಿಂಡರ್‌ಗಳ ಕೊರತೆ ಸದ್ಯಕ್ಕೆ ಇಲ್ಲ. ಆದರೆ, ಕೃತಕ ಅಭಾವವನ್ನು ಸೃಷ್ಟಿಸುವ ಕಾರ್ಯ ನಡೆಯುತ್ತಿವೆ. ಯುದ್ಧದ ನೆಪದಲ್ಲಿ ಸಿಲಿಂಡರ್‌ಗಳು ಲಭ್ಯವಾಗುತ್ತಿಲ್ಲ ಎಂಬ ಸುದ್ದಿ ಹರಡಿಸಲಾಗುತ್ತಿದೆ. ಯುದ್ಧದ ಪರಿಸ್ಥಿತಿ ಹೀಗೆಯೇ ಮುಂದುವರಿದರೆ ನಿಜವಾಗಲು ಸಿಲಿಂಡರ್ ಅಭಾವ ಸೃಷ್ಟಿಯಾಗುವ ಸಾಧ್ಯತೆ ಇದೆ. ಸರ್ಕಾರಗಳು ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಗೃಹ ಬಳಕೆಯ ಸಿಲಿಂಡರ್‌ಗಳ ಮೇಲೆ ಪರಿಣಾಮ ಬೀರುತ್ತಿಲ್ಲ. ಆದರೆ, ಮನೆಗಳಿಗೆ ನೀಡುವ ಬದಲು ಹೊಟೇಲ್‌ಗಳಿಗೆ ನೀಡುವ ಕೆಲಸವಂತೂ ನಡೆಯುತ್ತಿದೆ. ಅಲ್ಲದೇ, ವಾಣಿಜ್ಯ ಬಳಕೆಯ ಸಿಲಿಂಡರ್‌ಗಳನ್ನು ಕಾಳಸಂತೆಯಲ್ಲಿ 2 ರಿಂದ 4 ಪಟ್ಟು ಹೆಚ್ಚಳ ಮಾಡಿ ಮಾರಾಟ ಮಾಡಲಾಗುತ್ತಿದೆ ಎಂದು ಹೇಳಿದರು.
ಖಾಸಗಿ ಏಜೆನ್ಸಿಗಳ ವಿರುದ್ಧ ಆರೋಪ
ಖಾಸಗಿ ಏಜೆನ್ಸಿಗಳ ಕಂಪನಿಗಳಿಗೆ ಸರ್ಕಾರಿ ಸಬ್ಸಿಡಿ ಇರುವುದಿಲ್ಲ. ಇದರಿಂದಾಗಿ ಸರ್ಕಾರಿ ಗ್ಯಾಸ್‌ಗಿಂತ ಇವುಗಳ ಬೆಲೆ ಹೆಚ್ಚಾಗಿರುತ್ತದೆ. ಮಧ್ಯಪ್ರಾಚ್ಯದಲ್ಲಿ ಯುದ್ಧ ನಡೆಯುತ್ತಿರುವ ಕಾರಣ ಸರ್ಕಾರವು ಹೆಚ್ಚಾಗಿ ಖಾಸಗಿ ಏಜೆನ್ಸಿಗಳಿಗೆ ಪೂರೈಕೆ ಮಾಡುವುದಿಲ್ಲ. ಇದರಿಂದ ಖಾಸಗಿ ಏಜೆನ್ಸಿಗಳು ಹೆಚ್ಚಿನ ದರದಲ್ಲಿ ಮಾರಾಟ ಮಾಡುವ ಪ್ರಯತ್ನ ಮಾಡುತ್ತವೆ. ಗ್ಯಾಸ್ ಏಜೆನ್ಸಿಗಳು ಗ್ರಾಹಕರಿಗೆ ನೀಡುವುದಕ್ಕಿಂತ ಹೆಚ್ಚಾಗಿ ವಾಣಿಜ್ಯ ಬಳಕೆಗೆ ನೀಡುತ್ತವೆ. ಹಣ ಗಳಿಕೆಗೆ ಕೃತಕ ಅಭಾವ ಸೃಷ್ಟಿಯು ಹೆಚ್ಚಿನ ಅವಕಾಶ ನೀಡುವುದರಿಂದ ಗೃಹಬಳಕೆಗೆ ಮೀಸಲಾದ ಸಿಲಿಂಡರ್‌ಗಳನ್ನು ಏಜೆನ್ಸಿ ಮಾಲೀಕರು ಅಥವಾ ಸಿಬ್ಬಂದಿ ಅಧಿಕೃತ ಗ್ರಾಹಕರಿಗೆ ನೀಡುವ ಬದಲು, ಹೋಟೆಲ್‌ಗಳು ಮತ್ತು ವಾಣಿಜ್ಯ ಘಟಕಗಳಿಗೆ ಹೆಚ್ಚಿನ ಲಾಭಕ್ಕೆ ಮಾರಾಟ ಮಾಡುತ್ತಾರೆ. ಕೆಲವು ಏಜೆನ್ಸಿಗಳು ಸಕ್ರಿಯವಾಗಿಲ್ಲದ ಅಥವಾ ಗ್ಯಾಸ್ ಬಳಸದ ಗ್ರಾಹಕರ ಹೆಸರಿನಲ್ಲಿ ತಾವೇ ಬುಕಿಂಗ್ ಮಾಡಿ, ಆ ಸಿಲಿಂಡರ್‌ಗಳನ್ನು ಕಾಳಸಂತೆಗೆ ಬಿಡುತ್ತವೆ ಎಂಬ ಆರೋಪಗಳು ಸಹ ಕೇಳಿಬಂದಿವೆ.
ಸಂಸ್ಥೆಗಳು ನೇರವಾಗಿ ಭಾಗಿಯಾಗಿರುವುದಿಲ್ಲ
ಹೆಚ್ಚಿನ ಸಂದರ್ಭಗಳಲ್ಲಿ ಕಂಪನಿಗಳು ನೇರವಾಗಿ ಕಾಳಸಂತೆಯಲ್ಲಿ ಭಾಗಿಯಾಗಿರುವುದಿಲ್ಲ. ಬದಲಾಗಿ, ಸ್ಥಳೀಯ ಮಟ್ಟದ ಫ್ರಾಂಚೈಸಿಗಳು ಅಥವಾ ವಿತರಕರು ಹೆಚ್ಚಿನ ಲಾಭದ ಆಸೆಗೆ ಇಂತಹ ಕೃತ್ಯಗಳಲ್ಲಿ ತೊಡಗುತ್ತಾರೆ. ಕಂಪನಿಗಳು ಕಟ್ಟುನಿಟ್ಟಿನ ನಿಯಮಗಳನ್ನು ಹೇರಿದ್ದರೂ, ತಳಮಟ್ಟದ ನಿಗಾ ವ್ಯವಸ್ಥೆ ದುರ್ಬಲವಾಗಿರುವುದರಿಂದ ವಿತರಕರು ಇದರ ಲಾಭ ಪಡೆಯುತ್ತಾರೆ. ಖಾಸಗಿ ಸಂಸ್ಥೆಗಳು ಮಾರುಕಟ್ಟೆಯಲ್ಲಿ ಪೈಪೋಟಿ ನೀಡಲು ವಿತರಕರ ಮೇಲೆ ಅವಲಂಬಿತವಾಗಿರುತ್ತವೆ. ಇದು ಕೆಲವೊಮ್ಮೆ ವಿತರಕರ ತಪ್ಪುಗಳನ್ನು ನಿರ್ಲಕ್ಷಿಸುವಂತೆ ಮಾಡುತ್ತದೆ ಎನ್ನಲಾಗಿದೆ.
ಸಂಗ್ರಹ ಮಾಡುವಂತಿಲ್ಲ: ಸರ್ಕಾರದಿಂದ ಸ್ಪಷ್ಟ ಎಚ್ಚರಿಕೆ
ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಮನೆ ಬಳಕೆ ಸಿಲಿಂಡರ್‌ಗೆ ಯಾವುದೇ ಸಮಸ್ಯೆ ಇಲ್ಲ. ವಾಣಿಜ್ಯ ಬಳಕೆಯ ಸಿಲಿಂಡರ್‌ಗಳಿಗೆ ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ. ಯುದ್ಧದ ಪರಿಸ್ಥಿತಿ ಮುಂದುವರಿದರೆ ಸಮಸ್ಯೆ ಎದುರಾಗಬಹುದು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ. ಸಿಲಿಂಡರ್ ಸಂಗ್ರಹ ಮಾಡುವುದಕ್ಕೆ ಅವಕಾಶ ಇಲ್ಲ. ಅಂತಹ ಯಾವುದೇ ಮಾಹಿತಿ ಬಂದರೆ ತಕ್ಷಣ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಲಿದ್ದಾರೆ ಎಂದು ಹೇಳಿದರು. ಸಿಲಿಂಡರ್ ಪೂರೈಕೆ ವಿಚಾರದಲ್ಲಿ ಜನರು ಯಾವುದೇ ಆತಂಕ ಪಡುವ ಅಗತ್ಯ ಇಲ್ಲ. ಒಂದು ತಿಂಗಳಿಗೆ ಒಂದು ಸಿಲಿಂಡರ್ ಕೊಡುವ ನಿರ್ಧಾರವಾಗಿದೆ. ವಾಣಿಜ್ಯ ಸಿಲಿಂಡರ್‌ಗಳನ್ನು ಪಾರದರ್ಶಕವಾಗಿ ಪೂರೈಕೆ ಮಾಡಲು ಸೂಚನೆ ನೀಡಲಾಗಿದೆ. ಈ ಬಗ್ಗೆ ಪ್ರತಿವಾರ ಮುಖ್ಯಕಾರ್ಯದರ್ಶಿ ಸಭೆ ನಡೆಸಿ ಪರಿಸ್ಥಿತಿಯ ಬಗ್ಗೆ ನಿಗಾವಹಿಸಲಿದ್ದಾರೆ ಎಂದರು.

