x

ಬೆಂಗಳೂರು ಸಿಟಿಗೆ ನುಗ್ಗಿದ ಒಂಟಿ ಸಲಗ : ಆನೆ ದಾಳಿಗೆ ವ್ಯಕ್ತಿ ಸಾವು

ಬೆಂಗಳೂರಿನ ಅಂಚೆಪಾಳ್ಯದಲ್ಲಿ ಬೆಳ್ಳಂಬೆಳಗ್ಗೆ ವಾಕಿಂಗ್‌ಗೆ ತೆರಳಿದ್ದ 60 ವರ್ಷದ ನಾಗರಾಜ್ ಮೇಲೆ ಒಂಟಿ ಸಲಗ ದಾಳಿ ನಡೆಸಿದ್ದು, ಮೃತಪಟ್ಟಿದ್ದಾರೆ. ನಗರಕ್ಕೆ ಆನೆ ಪ್ರವೇಶಿಸಿರುವುದು ಆತಂಕಕ್ಕೆ ಕಾರಣವಾಗಿದೆ.


Click the Play button to hear this message in audio format

ಮುಂಜಾನೆ 5 ಗಂಟೆ, ಪ್ರಕೃತಿ ಶಾಂತವಾಗಿದ್ದ ಹೊತ್ತು... ಸೂರ್ಯೋದಯದ ಸಮಯ... ಮಂಜು ಕವಿದ ಬೆಳಗು, ಜನಸಂಚಾರ ಆರಂಭವಾಗುವ ವೇಳೆ ಪಶ್ಚಿಮ ದಿಕ್ಕಿಗೆ ಬೆಂಗಳೂರು ಪ್ರವೇಶಿಸುವ ಕೆಂಗೇರಿ ಬಳಿಯ ರಾಜರಾಜೇಶ್ವರಿ ನಗರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಹಿಂಭಾಗ ದುರಂತಕ್ಕೆ ಸಾಕ್ಷಿಯಾಗಿದೆ. ವನ್ಯಜೀವಿ ಮತ್ತು ಮಾನವ ಸಂಘರ್ಷದ ಭೀಕರ ಮುಖ ಅನಾವರಣಗೊಂಡಿದೆ. ಅರಣ್ಯಪ್ರದೇಶಕ್ಕೆ ಹೊಂದಿಕೊಂಡ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವ ವ್ಯನ್ಯಜೀವಿಗಳು ಇದೀಗ ಬೆಂಗಳೂರಿನೊಳಗೆ ನುಗ್ಗಿದ್ದು, ಅಕರಶಃ ನಗರದ ಜನತೆಯನ್ನು ದಿಗ್ಬ್ರಮೆಗೊಳಾಗುವಂತೆ ಮಾಡಿದೆ. ಒಂಟಿ ಸಲಗ ಆನೆವೊಂದು ಮುಂಜಾನೆ ವಾಂಕಿಂಗ್‌ನಲ್ಲಿದ್ದ ವ್ಯಕ್ತಿಯೊಬ್ಬರನ್ನು ಸೊಂಡಲಿನಿಂದ ಎತ್ತಿ ಬಿಸಾಕಿದ ಪರಿಣಾಮ ಸಾವನ್ನಪ್ಪಿದ್ದಾರೆ. ರಾಜರಾಜೇಶ್ವರಿ ನಗರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಹಿಂಭಾಗದಲ್ಲಿರುವ ಅಂಚೆಪಾಳ್ಯದಲ್ಲಿ ಈ ಘಟನೆ ನಡೆದಿದೆ.

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿ ನಿವೃತ್ತಿ ಜೀವನ ನಡೆಸುತ್ತಿದ್ದ 60 ವರ್ಷದ ನಾಗರಾಜ್‌ ಅವರು ತಮ್ಮ ಎಂದಿನ ದಿನಚರಿಯಂತೆ ವಾಕಿಂಗ್‌ಗೆಂದು ಮನೆಯಿಂದ ಹೊರಟಿದ್ದರು. ಆದರೆ, ಅದೇ ಹಾದಿಯಲ್ಲಿ ಸಾವಿನ ದೂತನಂತೆ ಒಂಟಿ ಸಲಗ ಹೊಂಚು ಹಾಕುತ್ತಿತ್ತು ಎಂಬುದು ಅವರಿಗೆ ಕನಸಿನಲ್ಲೂ ತಿಳಿದಿರಲಿಲ್ಲ. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಗಳು ಎಂಥವರನ್ನೂ ತಲ್ಲಣಗೊಳಿಸುತ್ತವೆ. 5 ಗಂಟೆ 11 ನಿಮಿಷಕ್ಕೆ ದೈತ್ಯ ಆನೆಯೊಂದು ರಸ್ತೆಯಲ್ಲಿ ಅಟ್ಟಹಾಸ ಮೆರೆಯುತ್ತಾ ಬಂದು, ತನ್ನ ದಾರಿಗೆ ಅಡ್ಡಿಯಾಗಿದ್ದ ಬೃಹತ್‌ ಕಾಂಪೌಂಡ್‌ ಧ್ವಂಸಗೊಳಿಸಿದೆ. ಆಕ್ರೋಶದ ಭರದಲ್ಲಿದ್ದ ಆನೆ ನಾಗರಾಜ್ ಅವರನ್ನು ಸೊಂಡಲಿನಿಂದ ಎತ್ತಿ ಎಸೆದ ಪರಿಣಾಮ, ಅವರು ತೀವ್ರವಾಗಿ ಗಾಯಗೊಂಡರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರು.

ಘಟನೆ ತಿಳಿದ ತಕ್ಷಣವೇ ನೆರವಿಗೆ ಧಾವಿಸಿದ ಸ್ಥಳೀಯ ನಿವಾಸಿ ಸಂದೀಪ್ ನಾಣು, ಮೃತ ನಾಗರಾಜ್ ಅವರನ್ನು ಆಸ್ಪತ್ರೆಗೆ ಸೇರಿಸುವ ಕಾರ್ಯ ಕೈಗೊಂಡರು. ಈ ಬಗ್ಗೆ ಮಾತನಾಡಿದ ಅವರು, "ಬೆಳಿಗ್ಗೆ 5.20ಕ್ಕೆ ಫ್ರೆಂಡ್ ಫೋನ್ ಮಾಡಿ ಯಾರೋ ಗಾಯಗೊಂಡು ಬಿದ್ದಿದ್ದಾರೆ ಅಂದರು. 5.25ಕ್ಕೆ ನಾನು ಸ್ಥಳಕ್ಕೆ ಬಂದಾಗ ನಾಗರಾಜ್ ತಲೆಯಿಂದ ರಕ್ತ ಸುರಿಯುತ್ತಿತ್ತು. ತಕ್ಷಣ ಆಂಬುಲೆನ್ಸ್ ಕರೆಸಿ ಆರ್.ಆರ್. ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ತೀವ್ರ ರಕ್ತಸ್ರಾವ, ಪೆಕ್ಕೆಲುಬು ಮುರಿದು ಶ್ವಾಸಕೋಶ ಶಕ್ತಿಗುಂದಿದ್ದರಿಂದ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟರು. ಘಟನೆ ನಡೆದಾಗ ಸ್ಥಳದಲ್ಲಿ ಮೂರ್ನಾಲ್ಕು ಜನ ಸೆಕ್ಯೂರಿಟಿ ಗಾರ್ಡ್ ಬಿಟ್ಟರೆ ಬೇರೆ ಯಾರೂ ಇರಲಿಲ್ಲ" ಎಂದು ವಿವರಿಸಿದರು.

ನಾಗರಾಜ್ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಅಂಚೆಪಾಳ್ಯದಲ್ಲಿ ಶೋಕದ ಮಡುವು ಆವರಿಸಿತು. ನಾಗರಾಜ್ ಅವರ ಪತ್ನಿ ಮತ್ತು ನಾಲ್ವರು ಹೆಣ್ಣುಮಕ್ಕಳ ರೋಧನ ಮುಗಿಲು ಮುಟ್ಟಿತ್ತು. ಆಸ್ಪತ್ರೆಯಲ್ಲಿ ಕುಟುಂಬಸ್ಥರ ಅಳಲು ಹೇಳತೀರದಾಗಿತ್ತು. ಘಟನೆಯನ್ನು ಖಂಡಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು. ವ್ಯವಸ್ಥೆಯ ನಿರ್ಲಕ್ಷ್ಯದ ವಿರುದ್ಧದ ಆಕ್ರೋಶ ವ್ಯಕ್ತಪಡಿಸಿದರು. ಮೃತ ನಾಗರಾಜ್‌ ಅವರ ಪುತ್ರಿಯು ಸಹ ವಾಂಕಿಂಗ್‌ನಲ್ಲಿ ಇದ್ದರು. ಆದರೆ, ತಂದೆ ಮುಂದೆ ಸಾಗಿದರೆ, ಮಗಳು ಹಿಂದೆ ಇದ್ದರು. ಹೀಗಾಗಿ ತಂದೆಯ ಮೇಲೆ ಆನೆ ದಾಳಿ ನಡೆದಿರುವ ಮಾಹಿತಿ ಲಭ್ಯವಾಗಿಲ್ಲ.

ತಮ್ಮ ಕಣ್ಣೆದುರೇ ನಡೆದ ಘಟನೆಯನ್ನು ನೆನೆದು ಮೃತ ನಾಗರಾಜ್‌ ಪುತ್ರಿ ಶೋಭಾ ಶೋಭಾ ಕಣ್ಣೀರಿಡುತ್ತಾ, "ನಾವು ಪ್ರತಿದಿನ ಇದೇ ರಸ್ತೆಯಲ್ಲಿ ವಾಕಿಂಗ್ ಹೋಗುತ್ತಾ ಇದೀವಿ. ಅಪ್ಪ ಮುಂದೆ ಹೋಗ್ತಾ ಇದ್ರು, ನಾನು ಹಿಂದೆ ಬರ್ತಿದ್ದೆ. ಎದುರಿನಿಂದ ಬಂದ ಕೆಲವರು 'ಆನೆ ಆನೆ' ಎಂದು ಕಿರುಚಿಕೊಂಡಾಗ ಗಾಬರಿಯಾಗಿ ನಾನು ಹಿಂದೆ ಓಡಿಬಂದೆ. ಅಪ್ಪ ವಾಪಸ್ ಬರಲಿಲ್ಲ, 'ಅಣ್ಣಾ ಅಣ್ಣಾ' ಅಂತ ಕೂಗಿದರೂ ಅವರಿಂದ ಯಾವುದೇ ಶಬ್ದ ಬರಲಿಲ್ಲ. ಆ ಹೊತ್ತಿಗಾಗಲೇ ಆನೆ ಅವರನ್ನು ಎತ್ತಿ ಬಿಸಾಕಿತ್ತು. ಆಮೇಲೆ ಸೆಕ್ಯೂರಿಟಿ ಗಾರ್ಡ್ ಬಂದು ಅಪ್ಪನ ಕಾಲಿಗೆ ಪೆಟ್ಟಾಗಿದೆ ಅಂತ ಹೇಳಿದರು. ಮನೆಗೆ ಓಡಿಬಂದು ಮತ್ತೆ ಬೈಕ್‌ನಲ್ಲಿ ಹೋಗುವಷ್ಟರಲ್ಲಿ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು" ಎಂದು ಗಂಟಲು ಬಿಗಿಹಿಡಿದು ಹೇಳಿದರು.

ಅಂಚೆಪಾಳ್ಯದ ಈ ಭಾಗ ಕಾಂಕ್ರೀಟ್ ಕಾಡಾಗಿ ಬದಲಾಗುತ್ತಿದ್ದರೂ, ಪ್ರಕೃತಿಯ ಒಡಲಿನಲ್ಲಿ ಬದುಕುವ ಪ್ರಾಣಿಗಳು ತಮ್ಮ ಮೂಲ ಹಾದಿಯನ್ನು ಮರೆತಿಲ್ಲ. ಕಾಂಪೌಂಡ್‌ನ ಒಡೆದು ಮುಂದೆ ಸಾಗಿ, ನಾಗರಾಜ್‌ ಮೇಲೆ ದಾಳಿ ನಡೆಸಿದೆ. ನಂತರ ಒಂಟಿ ಸಲಗ ಮುಂದೆ ಟೆಂಪೋವೊಂದಕ್ಕೆ ಗುದ್ದಿ ನಂತರ ಗದ್ದೆಗಳ ಪ್ರದೇಶದಲ್ಲಿ ಕಣ್ಮರೆಯಾಗಿದೆ. ಸ್ಥಳೀಯ ನಿವಾಸಿ ಮನೋಜ್‌ ಮಾತನಾಡಿ, "ಇಲ್ಲಿಂದ ತುರಹಳ್ಳಿ ಅರಣ್ಯ ಸುಮಾರು 5 ಕಿ.ಮೀ ದೂರದಲ್ಲಿದೆ. ಬಿ.ಎಂ.ಕಾವಲ್‌ ಪ್ರದೇಶದಿಂದ ರಾಮನಗರ ಕಡೆಗೆ ಆನೆಗಳ ಓಡಾಟ ಸಹಜವಾಗಿದೆ. ಆದರೆ, ಇಂತಹ ದುರಂತ ನಡೆದಿರಲಿಲ್ಲ. ಆಶೀರ್ವಾದಂ ಸಂಸ್ಥೆಯ ಕಾಂಪೌಂಡ್ ಒಡೆದು ಆನೆ ಹೊರಬರುವುದು ಮತ್ತು ನಾಗರಾಜ್ ಅವರು ವಾಕಿಂಗ್ ಬರುವುದು ಒಂದೇ ಕ್ಷಣದಲ್ಲಿ ನಡೆದಿದೆ. ಮುಖಾಮುಖಿಯಾದ ತಕ್ಷಣ ಆನೆ ಸೊಂಡಿಲಿನಿಂದ ಹೊಡೆದು ಎತ್ತಿ ಎಸೆದಿದೆ" ಎಂದು ಘಟನೆಯ ಭೀಕರತೆಯನ್ನು ಬಿಚ್ಚಿಟ್ಟರು.

ಘಟನೆಯ ಗಂಭೀರತೆಯನ್ನು ಅರಿತ ಅರಣ್ಯ ಸಚಿವ ರಾಮಲಿಂಗ ರೆಡ್ಡಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಆನೆ ದಾಳಿಗೆ ವಿಷಾದ ವ್ಯಕ್ತಪಡಿಸಿದ ಅರಣ್ಯ ಸಚಿವ ರಾಮಲಿಂಗಾರೆಡ್ಡಿ, ಮೃತರ ಕುಟುಂಬಕ್ಕೆ 20 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ಅರಣ್ಯ ಇಲಾಖೆ ಅಧಿಕಾರಿಗಳು ಬಿ.ಎಂ.ಕಾವಲ್‌ ಪ್ರದೇಶದಲ್ಲಿ ಎಚ್ಚರಿಕೆ ವಹಿಸಿದ್ದರು. ಆದರೂ ಆನೆ ಬಂದಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಇನ್ನು, ಅರಣ್ಯ ಅಧಿಕಾರಿ ಚಕ್ರಪಾಣಿ.ವೈ., ಮಾತನಾಡಿ, ಆನೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆಯ ವಿಶೇಷ ತಂಡ ಕಾರ್ಯಾಚರಣೆ ನಡೆಸುತ್ತಿದೆ. ಮೂರು ತಂಡಗಳನ್ನು ರಚನೆ ಮಾಡಲಾಗಿದೆ. ದುಬಾರೆಯಿಂದ ಆನೆಯನ್ನು ಕರೆತಂದು ಅರಣ್ಯ ಪ್ರದೇಶಕ್ಕೆ ಕೊಂಡೊಯ್ಯುವ ಕೆಲಸ ಮಾಡಲಾಗುವುದು ಎಂದು ಹೇಳಿದರು.

ಇದು ಕೇವಲ ಒಂದು ಅಪಘಾತವಲ್ಲ, ಇದು ಮನುಷ್ಯನ ಅತಿಕ್ರಮಣ ಮತ್ತು ಅರಣ್ಯದ ಅಸಹಾಯಕತೆ ನಡುವಿನ ಹೋರಾಟ. ನಾಗರಾಜ್ ಅವರ ಸಾವು ಒಂದು ಎಚ್ಚರಿಕೆಯ ಗಂಟೆ. ಅಭಿವೃದ್ಧಿಯ ಹೆಸರಿನಲ್ಲಿ ನಾವು ಕಾಡುಗಳ ಅಂಚನ್ನು ದಾಟಿದ್ದೇವೆ. ಕಾಡಿನ ಅಂಚಿನಲ್ಲೇ ಕಾಂಪೌಂಡ್ ಕಟ್ಟಿ, ಪ್ರಾಣಿಗಳ ಸಂಚಾರ ಮಾರ್ಗಗಳನ್ನು ಅತಿಕ್ರಮಿಸಿದ್ದೇವೆ. ಈ ಬಗ್ಗೆ ವ್ಯನ್ಯಜೀವಿ ತಜ್ಞರು ಬೇಸರ ವ್ಯಕ್ತಪಡಿಸಿದ್ದಾರೆ. ವ್ಯನ್ಯಜೀವಿ ತಜ್ಞ ಜೋಸೆಫ್‌ ಹೂವರ್‌ ಮಾತನಾಡಿ, ಇಂತಹ ಘಟನೆಗಳು ನಡೆಯಲು ಕಾರಿಡಾರ್‌ಗಳನ್ನು ಹಾಳು ಮಾಡಿರುವುದೇ ಕಾರಣವಾಗಿದೆ. ನೈಸ್‌ ರಸ್ತೆ, ಬೆಂಗಳೂರು-ಮೈಸೂರು ರಸ್ತೆ ಕಾರಿಡಾರ್‌ ಮಾಡಿದ್ದಾರೆ. ಇದು ವ್ಯನ್ಯಜೀವಿಗಳ ಹಾದಿಯಾಗಿದೆ. ಅದರ ದಾರಿಯನ್ನು ಒತ್ತುವರಿ ಮಾಡಿಕೊಂಡಿರುವುದರಿಂದ ಇಂತಹ ಘಟನೆಗಳು ನಡೆಯುತ್ತಿವೆ. ಹೀಗಾಗಿ ಅರಣ್ಯ ಇಲಾಖೆ ವ್ಯನ್ಯಜೀವಿಗಳ ಕಾರಿಡಾರ್‌ನಲ್ಲಿ ಯಾವುದೇ ಒತ್ತುವರಿ ಕಾರ್ಯ ಕೈಗೊಳ್ಳಬಾರದು ಎಂದು ಆಗ್ರಹಿಸಿದರು.

ಕುಂಬಳಗೋಡು ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಳ್ಳಲಾಗಿದೆ. ಆನೆ ಸೆರೆಗೆ ಕಾರ್ಯಾಚರಣೆ ನಡೆಯುತ್ತಿದೆ. ಇದು ಮನುಷ್ಯನ ಅತಿಕ್ರಮಣ ಮತ್ತು ಅರಣ್ಯದ ಅಸಹಾಯಕತೆ ನಡುವಿನ ಹೋರಾಟ. ಇಂತಹ ಅನಾಹುತಗಳು ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕಾದ ಅಗತ್ಯ ಇದೆ.

Read More
Next Story