ರೈತರ ಹೊಟ್ಟೆಗೆ ತಣ್ಣೀರ ಬಟ್ಟೆ ಊರ ಮುಂದೆ ಡೇಟಾ ಭೂತ
x

ಸಾಂದರ್ಭಿಕ ಚಿತ್ರ

ರೈತರ ಹೊಟ್ಟೆಗೆ ತಣ್ಣೀರ ಬಟ್ಟೆ ಊರ ಮುಂದೆ 'ಡೇಟಾ' ಭೂತ

ಒಂದು ಕಾಲದಲ್ಲಿ ತನ್ನ ಹಸಿರು ತೋಟಗಳು, ಕೃಷಿ ಚಟುವಟಿಕೆಗಳು ಮತ್ತು ಹೈನುಗಾರಿಕೆಗೆ ಹೆಸರುವಾಸಿಯಾಗಿದ್ದ ಈ ಪ್ರದೇಶ, ಈಗ ರಾಜ್ಯದ ಮುಂದಿನ ಕೈಗಾರಿಕಾ ಕೇಂದ್ರವಾಗಿ ರೂಪುಗೊಳ್ಳೋ ಹಾದಿಯಲ್ಲಿದೆ.


Click the Play button to hear this message in audio format

ಸಿಲಿಕಾನ್ ಸಿಟಿ ಬೆಂಗಳೂರು ಲಕ್ಷಾಂತರ ಜನರ ಕನಸುಗಳಿಗೆ ರೆಕ್ಕೆ ನೀಡಿದ ನಗರ. ಆದರೆ ಇದೇ ಬೆಂಗಳೂರು ಈಗ ತನ್ನ ಮಿತಿಗಳನ್ನು ಮೀರಿ ಬೆಳೀತಿದೆ. ಜನಸಂಖ್ಯೆ ಹೆಚ್ಚಾಗುತ್ತಿದೆ. ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ನಗರದ ಮೇಲಿನ ಒತ್ತಡ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಸರ್ಕಾರ ಬೆಂಗಳೂರಿನ ಹೊರವಲಯಗಳಲ್ಲಿ ಹೊಸ ಅಭಿವೃದ್ಧಿಯ ಅಧ್ಯಾಯ ಬರಿಯೋಕೆ ಮುಂದಾಗಿದೆ.

ಹೊಸ ಕೈಗಾರಿಕೆಗಳು, ಹೂಡಿಕೆಗಳು, ನಗರಗಳು ಈ ಅಭಿವೃದ್ಧಿಯ ಕನಸು ಈಗ ಬೆಂಗಳೂರು ನಗರದಿಂದ ಸುಮಾರು 67 ಕಿಲೋಮೀಟರ್ ದೂರದಲ್ಲಿರುವ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯತ್ತ ಮುಖ ಮಾಡಿದೆ!

ಒಂದು ಕಾಲದಲ್ಲಿ ತನ್ನ ಹಸಿರು ತೋಟಗಳು, ಕೃಷಿ ಚಟುವಟಿಕೆಗಳು ಮತ್ತು ಹೈನುಗಾರಿಕೆಗೆ ಹೆಸರುವಾಸಿಯಾಗಿದ್ದ ಈ ಪ್ರದೇಶ, ಈಗ ರಾಜ್ಯದ ಮುಂದಿನ ಕೈಗಾರಿಕಾ ಕೇಂದ್ರವಾಗಿ ರೂಪುಗೊಳ್ಳೋ ಹಾದಿಯಲ್ಲಿದೆ. ಒಂದು ಕಡೆ ಕ್ವಿನ್ ಸಿಟಿ , ಡೇಟಾ ಸೆಂಟರ್ ಮತ್ತು ಲಾಜಿಸ್ಟಿಕ್ ಪಾರ್ಕ್‌ಗಳಂತಹ ಬೃಹತ್ ಯೋಜನೆಗಳು. ಮತ್ತೊಂದು ಕಡೆ ತಲೆತಲಾಂತರಗಳಿಂದ ಕೃಷಿ ಮಾಡಿಕೊಂಡು ಬದುಕುತ್ತಿರುವ ರೈತರ ಹೋರಾಟ. 2,100 ಎಕರೆ ಫಲವತ್ತಾದ ಭೂಮಿಗಾಗಿ ನಡಿತಿರೋ ಈ ಸಂಘರ್ಷ ಈಗ ಇಡೀ ರಾಜ್ಯದ ಗಮನ ಸೆಳೆದಿದೆ. ಆದರೆ ಈ ಅಭಿವೃದ್ಧಿಯ ಹೆಸರಿನಲ್ಲಿ ರೈತರ ಫಲವತ್ತಾದ ಭೂಮಿ ಬಲಿಯಾಗುತ್ತಿದೆಯೇ ?

ಈ ಪ್ರಶ್ನೆಗೆ ಉತ್ತರ ಹುಡುಕುವ ಸಲುವಾಗಿ 'ದಿ ಫೆಡರಲ್ ಕರ್ನಾಟಕ' ತಂಡ ಉದ್ದೇಶಿತ ಭೂಸ್ವಾಧೀನ ಪ್ರದೇಶಗಳಿಗೆ ಭೇಟಿ ನೀಡಿತು. ಅಲ್ಲಿ ಕಂಡ ದೃಶ್ಯಗಳು, ಕೇಳಿದ ನೋವುಗಳು, ರೈತರ ಅಳಲು, ಈ ಅಭಿವೃದ್ಧಿಯ ಕಥೆಯ ಮತ್ತೊಂದು ಮುಖವನ್ನು ಬಿಚ್ಚಿಡುತ್ತೆ!

ಹಸಿರು ಕ್ರಾಂತಿಯ ನೆಲದಲ್ಲಿ ಭೂಸ್ವಾಧೀನದ ಗುಮ್ಮ!

ದೊಡ್ಡಬೆಳವಂಗಲ ಸೇರಿ ಐದು ಗ್ರಾಮಗಳಲ್ಲಿ ಕೈಗಾರಿಕಾ ಅಭಿವೃದ್ಧಿಗಾಗಿ 2,100 ಎಕರೆ ಫಲವತ್ತಾದ ಭೂಮಿ ಸ್ವಾಧೀನಕ್ಕೆ ಪ್ರಕ್ರಿಯೆ ಆರಂಭಿಸಿರುವ ಹಿನ್ನೆಲೆಯಲ್ಲಿ, ಅನ್ನದಾತರು ಇದೀಗ ಸರ್ಕಾರದ ವಿರುದ್ಧ ರೊಚ್ಚಿಗೆದ್ದಿದ್ದಾರೆ. 60ಕ್ಕೂ ಹೆಚ್ಚು ದಿನಗಳಿಂದ ಅನಿರ್ದಿಷ್ಟಾವಧಿ ಹೋರಾಟ ನಡೆಸಲಾಗ್ತಿದೆ. ಅಭಿವೃದ್ಧಿಯ ಹೆಸರಲ್ಲಿ ತಲೆ ತಲಾಂತರದಿಂದ ಕೃಷಿ ಮಾಡಿಕೊಂಡು ಬಂದಿರುವ ರೈತರ ಫಲವತ್ತಾದ ಭೂಮಿಯನ್ನು ಕಿತ್ತುಕೊಳ್ಳಲು ಸರ್ಕಾರ ಹುನ್ನಾರ ನಡೆಸುತ್ತಿದೆ ಎಂಬುದು ರೈತರ ನೇರ ಆರೋಪ.

ಹೋಬಳಿ ಕೇಂದ್ರದಲ್ಲಿ ಉಪನಗರ ಹೊರವರ್ತುಲ ರಸ್ತೆ (STRR) ಹಾದು ಹೋದ ಬಳಿಕ ಇಡೀ ಪ್ರದೇಶದ ಚಿತ್ರಣವೇ ಬದಲಾಗಿದೆ. ಪ್ರಸ್ತುತ, 80 ಕಿ.ಮೀ. ಉದ್ದದ 6 ಪಥಗಳ ನಿಯಂತ್ರಿತ ಹೆದ್ದಾರಿಯು ಬೆಂಗಳೂರು ಪ್ರವೇಶಿಸದೇ ಸರಕು ಸಾಗಣೆಗೆ ಅನುವು ಮಾಡಿಕೊಟ್ಟಿದೆ. ವಿಮಾನ ನಿಲ್ದಾಣಕ್ಕೂ ಸುಲಭವಾಗಿ ಸಂಪರ್ಕ ಕಲ್ಪಿಸಲಿದೆ. ಅಲ್ಲದೇ ತುಮಕೂರು ಮೂಲಕ ಹಾದು ಹೋಗುವ NH-48, ಹೊಸೂರು ರಸ್ತೆ, ವಿಮಾನ ನಿಲ್ದಾಣ ರಸ್ತೆಗೆ ಸಂಪರ್ಕ ಕಲ್ಪಿಸುವ NH-44 ಮತ್ತು ಬೆಂಗಳೂರು-ಕೋಲಾರ ಸಂಪರ್ಕಿಸುವ NH-75ಗೆ ಈ STRR ಪ್ರಮುಖ ಕೊಂಡಿಯಾಗಿದೆ.

ಆದರೆ, ಇದೇ ಹೊರವರ್ತುಲ ಹೆದ್ದಾರಿಯು ಅರೆ ಮಲೆನಾಡಿನಂತಿರುವ ಪ್ರದೇಶವನ್ನು ಕೈಗಾರಿಕಾ ಹಬ್‌ ಆಗಿ ಪರಿವರ್ತಿಸಲು ನೆರವಾಗಿದೆ. ಉದ್ದೇಶಿತ ಭೂಸ್ವಾಧೀನ ಪ್ರದೇಶದಲ್ಲಿ ಕಣ್ಣು ಹಾಯಿಸಿದಷ್ಟು ಹಸಿರು ನಳನಳಿಸುತ್ತಿದೆ. ತೋಟಗಳಲ್ಲಿ ತರಕಾರಿ, ಹಣ್ಣುಗಳು ತುಂಬಿ ತೊನೆಯುತ್ತಿವೆ. ಕೃಷಿ ಹಾಗೂ ಹೈನುಗಾರಿಕೆಯನ್ನೇ ನಂಬಿ ಬದುಕು ಕಟ್ಟಿಕೊಂಡಿರುವ ರೈತರನ್ನು ಭೂಸ್ವಾಧೀನದ ಗುಮ್ಮ ಅಕ್ಷರಶಃ ಕಂಗಾಲು ಮಾಡಿಬಿಟ್ಟಿದೆ.

ಒಂದೇ ತಾಲೂಕಿನಲ್ಲಿ ಮುಗಿಲು ಮುಟ್ಟಿದ ಯೋಜನೆಗಳ ಆತಂಕ!

ದೊಡ್ಡಬೆಳವಂಗಲ, ನಾರನಹಳ್ಳಿ, ರಾಂಪುರ, ಸೊಣ್ಣೇನಹಳ್ಳಿ ಮತ್ತು ಚಿಕ್ಕಬೆಳವಂಗಲ ಗ್ರಾಮಗಳಲ್ಲಿ ಕೆಐಎಡಿಬಿ (KIADB) ಭೂಸ್ವಾಧೀನ ಪ್ರಕ್ರಿಯೆಗೆ ಸಿದ್ಧತೆ ನಡೆಸುತ್ತಿದೆ ಎನ್ನಲಾಗಿದೆ. ಅಧಿಕಾರಿ ಮೂಲಗಳ ಪ್ರಕಾರ, ಈ ಪ್ರದೇಶದಲ್ಲಿ ಬೃಹತ್ ಡೇಟಾ ಸೆಂಟರ್ ಮತ್ತು ಲಾಜಿಸ್ಟಿಕ್ ಪಾರ್ಕ್ ನಿರ್ಮಾಣ ಮಾಡುವ ಉದ್ದೇಶವಿದೆ. ಆದರೆ ರೈತರ ಆತಂಕ ಕೇವಲ ಈ ಯೋಜನೆಗೆ ಮಾತ್ರ ಸೀಮಿತವಾಗಿಲ್ಲ.

ಯಾಕೆಂದರೆ ದೊಡ್ಡಬೆಳವಂಗಲ ಹೋಬಳಿಯಲ್ಲಿ ಈಗಾಗಲೇ ಹಲವು ಬೃಹತ್ ಯೋಜನೆಗಳು ಸಾಲು ಸಾಲಾಗಿ ರೂಪುಗೊಳ್ಳುತ್ತಿವೆ. ಹುಲಿಕುಂಟೆ ಸಮೀಪ ಮಹತ್ವಾಕಾಂಕ್ಷೆಯ ಈ ಯೋಜನೆ ಈಗಾಗಲೇ ವೇಗ ಪಡೆದುಕೊಂಡಿದೆ. ಕ್ವಿನ್ ಸಿಟಿ ಪಕ್ಕದಲ್ಲೇ ಬೃಹತ್ ಲಾಜಿಸ್ಟಿಕ್ ಪಾರ್ಕ್ ನಿರ್ಮಾಣಕ್ಕೂ ಜಾಗ ಗುರುತಿಸಲಾಗಿದೆ. ಇದರ ಜೊತೆಗೆ ಕಸಬಾ ಹೋಬಳಿಯ ಗಾಳಿಪೂಜೆ ಮತ್ತು ನೇರಳಘಟ್ಟ ಗ್ರಾಮಗಳಲ್ಲಿ ಕರ್ನಾಟಕ ಗೃಹ ಮಂಡಳಿಯ ಯೋಜನೆಗಳಿಗಾಗಿ ನೂರಾರು ಎಕರೆ ಭೂಮಿ ಸ್ವಾಧೀನವಾಗಲಿದೆ ಎಂಬ ಮಾತುಗಳೂ ಹರಿದಾಡ್ತಿವೆ.

ಒಂದರ ಹಿಂದೆ ಒಂದರಂತೆ ಬರುತ್ತಿರುವ ಈ ಯೋಜನೆಗಳನ್ನು ನೋಡ್ತಿರೋ ರೈತರು, ತಮ್ಮ ಪ್ರದೇಶದ ಕೃಷಿ ಭೂಮಿ ಸಂಪೂರ್ಣವಾಗಿ ಕಾಂಕ್ರೀಟ್ ಕಾಡಾಗಿ ಪರಿವರ್ತನೆಯಾಗುವ ಭೀತಿಯಲ್ಲಿದ್ದಾರೆ. ಅದರಲ್ಲೂ ಡೇಟಾ ಸೆಂಟರ್ ನಿರ್ಮಾಣಕ್ಕಾಗಿ 2,100 ಎಕರೆ ಫಲವತ್ತಾದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯೇ ಈಗ ರೈತರ ಆಕ್ರೋಶಕ್ಕೆ ಪ್ರಮುಖ ಕಾರಣವಾಗಿದೆ. "ಅಭಿವೃದ್ಧಿ ಬೇಕು ಎಂಬುದನ್ನು ಯಾರೂ ವಿರೋಧಿಸುತ್ತಿಲ್ಲ. ಆದರೆ, ಅಭಿವೃದ್ಧಿಯ ಹೆಸರಿನಲ್ಲಿ ನಮ್ಮ ಹೊಟ್ಟೆಯ ಮೇಲೆ ಹೊಡೆದು, ಕೃಷಿ ಭೂಮಿಯನ್ನೇ ಬಲಿಕೊಡಬೇಕೇ?" - ಇದು ಸರ್ಕಾರದ ಮುಂದೆ ರೈತರು ಇಡುತ್ತಿರುವ ನೇರ ಪ್ರಶ್ನೆ!

ಹೋಬಳಿ ವ್ಯಾಪ್ತಿಯಲ್ಲಿ 5 ಪ್ರಮುಖ ಕೆರೆಗಳಿವೆ. ಇಂತಹ ಜೀವನಾಡಿ ಹಸಿರು ಭೂಮಿಯನ್ನು ಕಾಂಕ್ರೀಟ್ ಕಾಡು ಮಾಡಲು ಯಾವುದೇ ಕಾರಣಕ್ಕೂ ಬಿಡದಿರಲು ರೈತರು ಶಪಥ ಮಾಡಿದ್ದಾರೆ. ದೊಡ್ಡಬಳ್ಳಾಪುರ ತಾಲೂಕು ಒಂದರಲ್ಲೇ ಈಗಾಗಲೇ 10 ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶವನ್ನು ಕೈಗಾರಿಕಾ ಅಭಿವೃದ್ಧಿಗೆ ಸ್ವಾಧೀನಪಡಿಸಿಕೊಳ್ಳಲಾಗಿದೆ. ಸರ್ಕಾರಗಳು ರೈತರ ಫಲವತ್ತಾದ ಭೂಮಿಯನ್ನು ವಶಪಡಿಸಿಕೊಂಡು ಕೈಗಾರಿಕೆಗಳನ್ನು ಸ್ಥಾಪಿಸಿದರೆ ಇಡೀ ಕೃಷಿ ಕ್ಷೇತ್ರವೇ ನಾಶವಾಗಲಿದೆ ಎಂಬುದು ಭೂಸ್ವಾಧೀನ ವಿರೋಧಿ ಹೋರಾಟಗಾರರ ಕಳವಳವಾಗಿದೆ.

ದೊಡ್ಡಬೆಳವಂಗಲದ ಈ ಹೋರಾಟ ಈಗ ಕೇವಲ ಒಂದು ಹೋಬಳಿಗೆ ಸೀಮಿತವಾಗಿಲ್ಲ. ರಾಜ್ಯದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಭೂಸ್ವಾಧೀನ ವಿರೋಧಿ ಹೋರಾಟಗಳ ಜೊತೆ ಇದು ಕೈಜೋಡಿಸಿದೆ. ಇತ್ತೀಚೆಗೆ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣದಲ್ಲಿ ಸಾವಿರಕ್ಕೂ ಹೆಚ್ಚು ದಿನಗಳ ಕಾಲ ನಡೆದ ರೈತರ ಹೋರಾಟಕ್ಕೆ ಸರ್ಕಾರ ಮಣಿದು, ಭೂಸ್ವಾಧೀನ ಪ್ರಕ್ರಿಯೆಯಿಂದ ಹಿಂದೆ ಸರಿದಿತ್ತು. ಅದೇ ರೀತಿ ರಾಮನಗರದ ಬಿಡದಿ, ಶಿಡ್ಲಘಟ್ಟದ ಜಂಗಮಕೋಟೆ ಮತ್ತು ಹೊಸಕೋಟೆಯ ನಂದಗುಡಿಯಲ್ಲೂ ರೈತರು ಭೂಸ್ವಾಧೀನದ ವಿರುದ್ಧ ತೀವ್ರ ಹೋರಾಟ ನಡೆಸ್ತಿದ್ದಾರೆ.

ಈ ಎಲ್ಲ ಹೋರಾಟಗಳ ನಡುವೆ ರೈತರು ಪರಸ್ಪರ ಬೆಂಬಲ ಸೂಚಿಸುತ್ತಿದ್ದು, ಭೂಮಿ ಉಳಿವಿನ ಹೋರಾಟಕ್ಕೆ ಒಗ್ಗಟ್ಟಿನ ಶಕ್ತಿ ತುಂಬ್ತಿದ್ದಾರೆ. ಕೆಲ ವಾರಗಳ ಹಿಂದೆ ದೊಡ್ಡಬೆಳವಂಗಲ ರೈತರು ನೂರಾರು ಟ್ರ್ಯಾಕ್ಟರ್‌ಗಳೊಂದಿಗೆ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಿದ್ರು. ಈ ಹೋರಾಟಕ್ಕೆ ಚನ್ನರಾಯಪಟ್ಟಣ ಹಾಗೂ ಬಿಡದಿಯ ರೈತರೂ ಬೆಂಬಲ ಸೂಚಿಸಿದ್ರು. ಹೀಗಾಗಿ, ದೊಡ್ಡಬೆಳವಂಗಲದ ಹೋರಾಟ ಈಗ ಸ್ಥಳೀಯ ಸಮಸ್ಯೆಯಾಗಿ ಉಳಿದಿಲ್ಲ... ಇದು ರಾಜ್ಯದ ಕೃಷಿ ಭೂಮಿಗಳ ಭವಿಷ್ಯದ ಕುರಿತ ಮಹತ್ವದ ಚರ್ಚೆಯಾಗಿ ಬದಲಾಗಿದೆ!

Read More
Next Story