47 ವರ್ಷಗಳಲ್ಲೇ ಮೊದಲ ಬಾರಿಗೆ ಭಾರತದಲ್ಲಿ ಪ್ರತಿಷ್ಠಿತ ‘ಐಇಇಇ ರೇಡಾರ್ ಸಮ್ಮೇಳನ’
x

47 ವರ್ಷಗಳಲ್ಲೇ ಮೊದಲ ಬಾರಿಗೆ ಭಾರತದಲ್ಲಿ ಪ್ರತಿಷ್ಠಿತ ‘ಐಇಇಇ ರೇಡಾರ್ ಸಮ್ಮೇಳನ’

ವಿಶ್ವದ ಅತ್ಯಂತ ಪ್ರತಿಷ್ಠಿತ ಮತ್ತು ಪ್ರಮುಖ ರೇಡಾರ್ ತಂತ್ರಜ್ಞಾನ ವೇದಿಕೆಯಾದ ‘ಐಇಇಇ ರೇಡಾರ್ ಸಮ್ಮೇಳನ’ 2027ರ ಮೇ 1 ರಿಂದ 6 ರವರೆಗೆ ಬೆಂಗಳೂರಿನಲ್ಲಿ ಆಯೋಜನೆಗೊಳ್ಳಲಿದೆ.


Click the Play button to hear this message in audio format

ದೇಶದ ಸಿಲಿಕಾನ್ ಸಿಟಿ ಬೆಂಗಳೂರು ಮತ್ತೊಂದು ಜಾಗತಿಕ ಮೈಲಿಗಲ್ಲಿಗೆ ಸಾಕ್ಷಿಯಾಗಲು ಸಜ್ಜಾಗಿದೆ. ವಿಶ್ವದ ಅತ್ಯಂತ ಪ್ರತಿಷ್ಠಿತ ಮತ್ತು ಪ್ರಮುಖ ರೇಡಾರ್ ತಂತ್ರಜ್ಞಾನ ವೇದಿಕೆಯಾದ ‘ಐಇಇಇ ರೇಡಾರ್ ಸಮ್ಮೇಳನ’ 2027ರ ಮೇ 1 ರಿಂದ 6 ರವರೆಗೆ ಬೆಂಗಳೂರಿನಲ್ಲಿ ಆಯೋಜನೆಗೊಳ್ಳಲಿದೆ. ಕಳೆದ 47 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ಜಾಗತಿಕ ಸಮ್ಮೇಳನವು ಭಾರತ ಮಾತ್ರವಲ್ಲದೆ, ಇಡೀ ಏಷ್ಯಾ ಖಂಡದಲ್ಲೇ ಮೊದಲ ಬಾರಿಗೆ ಆಯೋಜಿಸಲ್ಪಡುತ್ತಿರುವುದು ರಕ್ಷಣಾ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಬೆಳೆಯುತ್ತಿರುವ ಜಾಗತಿಕ ಪ್ರಾಬಲ್ಯಕ್ಕೆ ಸಾಕ್ಷಿಯಾಗಿದೆ. ಬೆಂಗಳೂರಿನಲ್ಲಿ ಇತ್ತೀಚೆಗೆ ಏರೋಸ್ಪೇಸ್ ಆಂಡ್ ಎಲೆಕ್ಟ್ರಾನಿಕ್ ಸಿಸ್ಟಮ್ಸ್ ಸೊಸೈಟಿ ಬೆಂಗಳೂರು ಚಾಪ್ಟರ್ ವತಿಯಿಂದ ಆಯೋಜಿಸಲಾಗಿದ್ದ ‘ರೇಡಾರ್ ಇಂಡಸ್ಟ್ರಿ ಕಾನ್ಕ್ಲೇವ್’ ಕಾರ್ಯಕ್ರಮದಲ್ಲಿ ಈ ಐತಿಹಾಸಿಕ ಘೋಷಣೆ ಮಾಡಲಾಯಿತು.

ರೇಡಾರ್ ತಂತ್ರಜ್ಞಾನ, ಕಣ್ಗಾವಲು ವ್ಯವಸ್ಥೆಗಳು ಮತ್ತು ಆಧುನಿಕ ಯುದ್ಧೋಪಕರಣಗಳ ವಿನ್ಯಾಸದಲ್ಲಿ ವಿಶ್ವದ ಮುಂಚೂಣಿ ಸಂಶೋಧಕರು, ವಿಜ್ಞಾನಿಗಳು, ಕೈಗಾರಿಕಾ ಮುಖಂಡರು ಹಾಗೂ ನೀತಿ ನಿರೂಪಕರನ್ನು ಒಂದೇ ಸೂರಿನಡಿ ತರುವುದು ಈ ಆರು ದಿನಗಳ ಸಮಾವೇಶದ ಪ್ರಮುಖ ಉದ್ದೇಶವಾಗಿದೆ. ಮುಂದಿನ ಪೀಳಿಗೆಯ ರೇಡಾರ್ ತಂತ್ರಜ್ಞಾನ, ಬಾಹ್ಯಾಕಾಶ ಕಣ್ಗಾವಲು, ರಕ್ಷಣಾ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆ ಮತ್ತು ಜಾಗತಿಕ ಪೂರೈಕೆ ಸರಪಳಿಯಲ್ಲಿ ಭಾರತದ ಪಾತ್ರದ ಕುರಿತು ಸಮ್ಮೇಳನವು ಬೆಳಕು ಚೆಲ್ಲಲಿದೆ. ಅಮೆರಿಕ ಸಂಯುಕ್ತ ಸಂಸ್ಥಾನವೊಂದರಿಂದಲೇ ಸುಮಾರು 250ಕ್ಕೂ ಹೆಚ್ಚು ಉನ್ನತ ತಂತ್ರಜ್ಞರು ಮತ್ತು ವಿಜ್ಞಾನಿಗಳು ಭಾಗವಹಿಸುವ ನಿರೀಕ್ಷೆಯಿದ್ದು, ನೂರಾರು ಜಾಗತಿಕ ರಕ್ಷಣಾ ಸಂಸ್ಥೆಗಳು, ಭಾರತೀಯ ಸಾರ್ವಜನಿಕ ಮತ್ತು ಖಾಸಗಿ ವಲಯದ ಉದ್ಯಮಗಳು, ನವೋದ್ಯಮಗಳು ಹಾಗೂ ಶೈಕ್ಷಣಿಕ ವಲಯದ ಪ್ರತಿನಿಧಿಗಳು ಇದರಲ್ಲಿ ಮುಖಾಮುಖಿಯಾಗಲಿದ್ದಾರೆ.

ಆಧುನಿಕ ಯುದ್ಧತಂತ್ರದಲ್ಲಿ ಬದಲಾವಣೆ

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಡಿಆರ್‌ಡಿಒದ ಮಹಾನಿರ್ದೇಶಕ (ಇಸಿಎಸ್) ಡಾ. ಬಿ.ಕೆ. ದಾಸ್ ಅವರು, ಆಧುನಿಕ ಯುದ್ಧಭೂಮಿಯಲ್ಲಿ ರೇಡಾರ್ ತಂತ್ರಜ್ಞಾನವು ಎದುರಿಸುತ್ತಿರುವ ನೂತನ ಸವಾಲುಗಳನ್ನು ವಿವರಿಸಿದರು. ಹಿಂದಿನ ಯುದ್ಧಗಳು ಕೇವಲ ಯುದ್ಧ ಟ್ಯಾಂಕ್‌ಗಳು, ಯುದ್ಧ ವಿಮಾನಗಳು ಮತ್ತು ಕ್ಷಿಪಣಿಗಳಂತಹ ಬೃಹತ್ ಮತ್ತು ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳಿಗೆ ಸೀಮಿತವಾಗಿದ್ದವು. ಆದರೆ ಇಂದಿನ ಸಂಘರ್ಷಗಳು ಸ್ವಾಯತ್ತ ವ್ಯವಸ್ಥೆಗಳು, ಸಣ್ಣ ಗಾತ್ರದ ಮಾನವರಹಿತ ವೈಮಾನಿಕ ವಾಹನಗಳು ಮತ್ತು ಸಮೂಹ ಡ್ರೋನ್ ದಾಳಿಗಳತ್ತ ಮುಖಮಾಡಿವೆ. ಈ ಪುಟ್ಟ ಡ್ರೋನ್‌ಗಳು ಸಾಂಪ್ರದಾಯಿಕ ರೇಡಾರ್‌ಗಳ ಕಣ್ತಪ್ಪಿಸಿ ಕಡಿಮೆ ಎತ್ತರದಲ್ಲಿ ಹಾರಾಟ ನಡೆಸುವ ಸಾಮರ್ಥ್ಯ ಹೊಂದಿದ್ದು, ರಕ್ಷಣಾ ನೆಲೆಗಳಿಗೆ ಹೊಸ ಸವಾಲನ್ನು ಒಡ್ಡುತ್ತಿವೆ ಎಂದು ಹೇಳಿದರು.

ಯುದ್ಧದಲ್ಲಿ ಎದುರಾಗುತ್ತಿರುವ ಆರ್ಥಿಕ ವೈರುಧ್ಯದ ಬಗ್ಗೆ ಗಂಭೀರ ಎಚ್ಚರಿಕೆ ನೀಡಿದ ಡಾ. ದಾಸ್, "ಕೇವಲ 50,000 ರೂಪಾಯಿ ವೆಚ್ಚದ ಸಣ್ಣ ಡ್ರೋನ್ ಅನ್ನು ನಾಶಮಾಡಲು ಒಂದು ಕೋಟಿ ರೂಪಾಯಿ ಬೆಲೆಯ ಅತ್ಯಾಧುನಿಕ ಕ್ಷಿಪಣಿಯನ್ನು ಹಾರಿಸುವುದು ಯುದ್ಧದ ಅರ್ಥಶಾಸ್ತ್ರದ ದೃಷ್ಟಿಯಿಂದ ಸಮರ್ಥನೀಯವಲ್ಲ" ಎಂದು ಪ್ರತಿಪಾದಿಸಿದರು. ಶತ್ರುಗಳು ಅಗ್ಗದ ಸಾಧನಗಳಿಂದ ಗರಿಷ್ಠ ನಷ್ಟ ಉಂಟುಮಾಡಲು ಪ್ರಯತ್ನಿಸುತ್ತಿರುವಾಗ, ನಮ್ಮ ರೇಡಾರ್ ಮತ್ತು ಪ್ರತಿ-ಡ್ರೋನ್ ತಂತ್ರಜ್ಞಾನಗಳು ಅತ್ಯಂತ ನಿಖರ, ಕೈಗೆಟುಕುವ ವೆಚ್ಚದ ಮತ್ತು ತ್ವರಿತ ಪ್ರತಿಕ್ರಿಯೆ ನೀಡುವ ವ್ಯವಸ್ಥೆಗಳಾಗಿರಬೇಕು ಎಂದು ಕರೆ ನೀಡಿದರು.

ಸ್ಟೆಲ್ತ್ ವಿಮಾನಗಳ ಪತ್ತೆ ಮತ್ತು ಇಲೆಕ್ಟ್ರಾನಿಕ್ ಸಮರ

ಐದನೇ ಮತ್ತು ಆರನೇ ತಲೆಮಾರಿನ ರಹಸ್ಯ ಯುದ್ಧ ವಿಮಾನಗಳು ರೇಡಾರ್ ತರಂಗಗಳನ್ನು ಹೀರಿಕೊಳ್ಳುವ ಅಥವಾ ಚದುರಿಸುವ ಸಾಮರ್ಥ್ಯ ಹೊಂದಿರುತ್ತವೆ. ಇವುಗಳನ್ನು ಪತ್ತೆಹಚ್ಚುವುದು ಇಂದಿನ ಎಂಜಿನಿಯರ್‌ಗಳಿಗೆ ದೊಡ್ಡ ಸವಾಲು. ಅಲ್ಲದೆ, ರೇಡಾರ್ ಹೊರಸೂಸುವ ತರಂಗಗಳನ್ನು ಗುರುತಿಸಿ ರೇಡಾರ್ ವ್ಯವಸ್ಥೆಯನ್ನೇ ಧ್ವಂಸ ಮಾಡುವ ‘ವಿಕಿರಣ ವಿರೋಧಿ ಕ್ಷಿಪಣಿ’ಗಳನ್ನು ದಿಕ್ಕುತಪ್ಪಿಸಲು ರೇಡಾರ್‌ಗಳು ಬಹು-ಆವರ್ತನಗಳಲ್ಲಿ ಕಾರ್ಯನಿರ್ವಹಿಸಬೇಕು ಹಾಗೂ ವೇಗವಾಗಿ ಫ್ರೀಕ್ವೆನ್ಸಿ ಬದಲಾಯಿಸುವ ಚುರುಕುತನ ಹೊಂದಿರಬೇಕು ಎಂದು ಅವರು ಅಭಿಪ್ರಾಯಪಟ್ಟರು. ಇದಕ್ಕಾಗಿ ಡಿಕಾಯ್‌ಗಳು ಮತ್ತು ಪರಸ್ಪರ ಸಂಪರ್ಕಿತ ರೇಡಾರ್ ನೆಟ್‌ವರ್ಕ್‌ಗಳ ರಚನೆ ಅನಿವಾರ್ಯವಾಗಿದೆ.

ಭಾರತೀಯ ರೇಡಾರ್ ಪರಿಸರ ವ್ಯವಸ್ಥೆ

ಎಲೆಕ್ಟ್ರಾನಿಕ್ಸ್ ಮತ್ತು ರೇಡಾರ್ ಅಭಿವೃದ್ಧಿ ಸಂಸ್ಥೆಯ ನಿರ್ದೇಶಕ ಎಂ. ಶೇಖ್ ಅಲ್ತಾಫ್ ಅವರು ಭಾರತೀಯ ರೇಡಾರ್ ಉದ್ಯಮ ಬೆಳೆದುಬಂದ ಹಾದಿಯನ್ನು ಮೆಲುಕು ಹಾಕಿದರು. 1990ರ ದಶಕದಲ್ಲಿ ಭಾರತದಲ್ಲಿ ಸ್ವದೇಶಿ ರೇಡಾರ್ ಉದ್ಯಮ ಎನ್ನುವುದೇ ಇರಲಿಲ್ಲ. ರೇಡಾರ್‌ಗಳಿಗೆ ಅಗತ್ಯವಿರುವ ಬ್ಯಾಟರಿಗಳು, ಸಣ್ಣಪುಟ್ಟ ಇಲೆಕ್ಟ್ರಾನಿಕ್ ಘಟಕಗಳನ್ನು ಸಹ ವಿಜ್ಞಾನಿಗಳು ಪ್ರಯೋಗಾಲಯಗಳಲ್ಲಿಯೇ ಕುಳಿತು ಸ್ವತಃ ಸಿದ್ಧಪಡಿಸಬೇಕಾದ ಅಸಹಾಯಕ ಸ್ಥಿತಿ ಇತ್ತು. ಆದರೆ ಇಂದು ಚಿತ್ರಣ ಸಂಪೂರ್ಣ ಬದಲಾಗಿದೆ. ಭಾರತದಲ್ಲಿ ನೂರಾರು ಸಣ್ಣ, ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳು ಅತ್ಯಾಧುನಿಕ ರೇಡಾರ್ ವ್ಯವಸ್ಥೆಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿವೆ. ಶಾರ್ಟ್ ರೇಂಜ್‌ನಿಂದ ಹಿಡಿದು ದೂರಗಾಮಿ ರೇಡಾರ್‌ಗಳವರೆಗೂ ಎಲ್ಲವನ್ನೂ ಭಾರತೀಯ ಕಂಪನಿಗಳು ನಿರ್ಮಿಸುತ್ತಿವೆ. ಡಿಆರ್‌ಡಿಒ ಮತ್ತು ಎಲ್‌ಆರ್‌ಡಿಇ ಸಂಸ್ಥೆಗಳು ವಿನ್ಯಾಸಗೊಳಿಸಿದ ಅತ್ಯಾಧುನಿಕ ರಕ್ಷಣಾ ತಂತ್ರಜ್ಞಾನಗಳನ್ನು ದೇಶೀಯ ಕೈಗಾರಿಕೆಗಳು ಟರ್ನ್‌ಕೀ ಆಧಾರದ ಮೇಲೆ ಅಂದರೆ, ವಿನ್ಯಾಸದಿಂದ ಹಿಡಿದು ಅಂತಿಮ ಜೋಡಣೆಯವರೆಗೆ ಸಂಪೂರ್ಣವಾಗಿ ಪೂರೈಸುವ ಹಂತಕ್ಕೆ ತಲುಪಿವೆ. ಭಾರತದ ಈ ಪ್ರಬುದ್ಧ ಪರಿಸರ ವ್ಯವಸ್ಥೆಯನ್ನು ಜಾಗತಿಕ ಯೋಜನೆಗಳಲ್ಲಿ ಬಳಸಿಕೊಳ್ಳುವಂತೆ ಅವರು ಅಂತಾರಾಷ್ಟ್ರೀಯ ಕಂಪನಿಗಳಿಗೆ ಮುಕ್ತ ಆಹ್ವಾನ ನೀಡಿದರು.

ದೇಶದ ಸಾರ್ವಭೌಮತ್ವ ಮತ್ತು ರಕ್ಷಣಾ ಭದ್ರತೆಯ ಹಿತದೃಷ್ಟಿಯಿಂದ ಭಾರತವು ಇನ್ನು ಮುಂದೆ ವಿದೇಶಿ ತಂತ್ರಜ್ಞಾನಗಳ ಮೇಲೆ ಅವಲಂಬಿತವಾಗುವುದನ್ನು ನಿಲ್ಲಿಸಬೇಕಿದೆ ಎಂದು ತಜ್ಞರು ಪ್ರತಿಪಾದಿಸಿದರು. ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳು, ನೌಕಾಪಡೆಯ ಯುದ್ಧನೌಕೆಗಳು, ಜಲಾಂತರ್ಗಾಮಿಗಳು, ಭೂಸೇನೆಯ ಗಡಿ ಕಣ್ಗಾವಲು ವ್ಯವಸ್ಥೆಗಳು ಹಾಗೂ ಬಾಹ್ಯಾಕಾಶ ಕಕ್ಷೆಯಲ್ಲಿರುವ ಉಪಗ್ರಹಗಳಿಗೆ ಸಂಪೂರ್ಣ ಸ್ವದೇಶಿ ನಿರ್ಮಿತ ರೇಡಾರ್‌ಗಳನ್ನು ಅಳವಡಿಸುವುದೇ ನಮ್ಮ ಆದ್ಯತೆಯಾಗಬೇಕು. ಮುಂದಿನ 10 ವರ್ಷಗಳಲ್ಲಿ ಭಾರತೀಯ ಸಶಸ್ತ್ರ ಪಡೆಗಳಿಗೆ ಅಗತ್ಯವಿರುವ ರೇಡಾರ್‌ಗಳ ಸಂಖ್ಯೆ ಅಪಾರವಾಗಿದೆ. ಇಡೀ ಭಾರತೀಯ ರಕ್ಷಣಾ ಉದ್ಯಮವು ಹಗಲಿರುಳು ಒಟ್ಟಾಗಿ ಕೆಲಸ ಮಾಡಿದರೂ ಸಹ ಈ ಬೃಹತ್ ಬೇಡಿಕೆಯನ್ನು ಪೂರೈಸಲು ಸವಾಲಾಗಬಹುದು. ಅಷ್ಟು ದೊಡ್ಡ ಮಾರುಕಟ್ಟೆ ಮತ್ತು ಅಗತ್ಯತೆ ದೇಶದ ಮುಂದಿದೆ. ಈ ಸವಾಲನ್ನು ಎದುರಿಸಲು ಡಿಆರ್‌ಡಿಒ, ಎಲ್‌ಆರ್‌ಡಿಇ, ಖಾಸಗಿ ಉದ್ಯಮಗಳು, ಶೈಕ್ಷಣಿಕ ಸಂಶೋಧನಾ ಸಂಸ್ಥೆಗಳು ಮತ್ತು ತಂತ್ರಜ್ಞಾನ ನವೋದ್ಯಮಗಳ ನಡುವೆ ನಿಕಟ ಸಹಯೋಗ ಏರ್ಪಡಬೇಕು. ನವೋದ್ಯಮಗಳಿಗೆ ರೇಡಾರ್ ಬಿಡಿಭಾಗಗಳು ಮತ್ತು ಸಾಫ್ಟ್‌ವೇರ್ ಅಲ್ಗಾರಿದಮ್‌ಗಳನ್ನು ಅಭಿವೃದ್ಧಿಪಡಿಸಲು ಪ್ರತ್ಯೇಕ ವೇದಿಕೆ ಹಾಗೂ ನಿಧಿ ಒದಗಿಸಬೇಕಾಗಿದೆ.

ಭಾರತಕ್ಕೆ ಈ ಸಮ್ಮೇಳನ ಏಕೆ ಮಹತ್ವದ್ದು?

ಆತ್ಮನಿರ್ಭರ ಭಾರತಕ್ಕೆ ಜಾಗತಿಕ ಮನ್ನಣೆ: ರಕ್ಷಣಾ ಉಪಕರಣಗಳ ಆಮದುದಾರನಾಗಿದ್ದ ಭಾರತ, ಇಂದು ರಫ್ತುದಾರನಾಗುವತ್ತ ಹೆಜ್ಜೆ ಇಡುತ್ತಿದೆ. ಈ ಸಮ್ಮೇಳನವು ಭಾರತೀಯ ರಕ್ಷಣಾ ಉತ್ಪನ್ನಗಳನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಪ್ರದರ್ಶಿಸಲು ‘ಗ್ಲೋಬಲ್ ಶೋಕೇಸ್’ ಆಗಿ ಕಾರ್ಯನಿರ್ವಹಿಸಲಿದೆ. ಅಮೆರಿಕ, ಯುರೋಪ್ ಸೇರಿದಂತೆ ಪ್ರಮುಖ ದೇಶಗಳ ರಕ್ಷಣಾ ತಜ್ಞರೊಂದಿಗೆ ಜಂಟಿ ಸಂಶೋಧನೆ ಮತ್ತು ವ್ಯಾಪಾರ ಒಪ್ಪಂದಗಳಿಗೆ ಇದು ವೇದಿಕೆಯಾಗಲಿದೆ. ಬೆಂಗಳೂರು ಕೇವಲ ಸಾಫ್ಟ್‌ವೇರ್ ಹಬ್ ಮಾತ್ರವಲ್ಲ, ಜಾಗತಿಕ ಮಟ್ಟದ ಏರೋಸ್ಪೇಸ್ ಮತ್ತು ಡಿಫೆನ್ಸ್ ಎಲೆಕ್ಟ್ರಾನಿಕ್ಸ್ ರಾಜಧಾನಿ ಎಂಬುದನ್ನು ಈ ಸಮಾವೇಶ ಮತ್ತೊಮ್ಮೆ ದೃಢಪಡಿಸಲಿದೆ.

Read More
Next Story