ಕೆಪಿಎಸ್​​ಸಿಯಲ್ಲಿ ಕಾರ್ಯನಿರ್ವಹಿಸಿದ್ದ ಐಎಎಸ್ ಅಧಿಕಾರಿ ನಾಪತ್ತೆ
x

ನಗರದಲ್ಲಿ ಐಎಎಸ್ ಅಧಿಕಾರಿಯೊಬ್ಬರು ನಾಪತ್ತೆಯಾಗಿರುವ ಘಟನೆ ಕುತೂಹಲಕ್ಕೆ ಕಾರಣವಾಗಿದೆ.

ಕೆಪಿಎಸ್​​ಸಿಯಲ್ಲಿ ಕಾರ್ಯನಿರ್ವಹಿಸಿದ್ದ ಐಎಎಸ್ ಅಧಿಕಾರಿ ನಾಪತ್ತೆ

ನಾಪತ್ತೆಯಾಗಿರುವ ಅಧಿಕಾರಿಯ ಮೊಬೈಲ್ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಸಕ್ರಿಯವಾಗಿತ್ತು ಎನ್ನಲಾಗಿದ್ದು, ಬಳಿಕ ಸ್ವಿಚ್‌ಆಫ್ ಆಗಿದೆ.


Click the Play button to hear this message in audio format

ಬೆಂಗಳೂರಿನಲ್ಲಿ ಐಎಎಸ್ ಅಧಿಕಾರಿ ಜ್ಞಾನೇಶ್‌ ಕುಮಾರ್‌ ನಾಪತ್ತೆಯಾಗಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ. ಅಧಿಕಾರಿ ಪತ್ತೆಯಾಗದ ಹಿನ್ನೆಲೆಯಲ್ಲಿ ಪೊಲೀಸರು ಹುಡುಕಾಟ ಆರಂಭಿಸಿದ್ದು, ಅವರ ಚಲನವಲನ ಹಾಗೂ ನಾಪತ್ತೆಯಾಗಿರುವ ಕಾರಣದ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ.

ನಾಪತ್ತೆಯಾಗಿರುವ ಅಧಿಕಾರಿಯ ಮೊಬೈಲ್ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಸಕ್ರಿಯವಾಗಿತ್ತು ಎನ್ನಲಾಗಿದ್ದು, ಬಳಿಕ ಸ್ವಿಚ್‌ಆಫ್ ಆಗಿದೆ. ಹೀಗಾಗಿ ಅವರು ವಿಮಾನ ನಿಲ್ದಾಣದಿಂದ ದೆಹಲಿ ಕಡೆಗೆ ತೆರಳಿರುವ ಸಾಧ್ಯತೆ ಇದೆ ಎಂಬ ಶಂಕೆ ವ್ಯಕ್ತವಾಗಿದೆ.

ಹಿರಿಯ ಐಎಎಸ್ ಅಧಿಕಾರಿಯಿಂದ ಪೊಲೀಸರಿಗೆ ಮನವಿ

ಅಧಿಕಾರಿಯನ್ನು ಪತ್ತೆಹಚ್ಚುವಂತೆ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರಿಗೆ ಮನವಿ ಮಾಡಿದ್ದಾರೆ. ಮನವಿ ಆಧರಿಸಿ ಪೊಲೀಸರು ನಾಪತ್ತೆಯಾದ ಅಧಿಕಾರಿಯ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ. ಪೊಲೀಸರು ಅಧಿಕಾರಿಯ ಚಲನವಲನವನ್ನು ಏರ್‌ಪೋರ್ಟ್‌ವರೆಗೆ ಪರಿಶೀಲಿಸಿದ್ದು, ಅಲ್ಲಿಂದ ಅವರು ಎಲ್ಲಿಗೆ ತೆರಳಿದ್ದಾರೆ ಎಂಬುದರ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಕುಟುಂಬದವರ ಸಂಪರ್ಕಕ್ಕೂ ಸಿಗದ ಅಧಿಕಾರಿ

ನಾಪತ್ತೆಯಾದ ಅಧಿಕಾರಿಯ ಕುಟುಂಬದವರಿಗೂ ಅವರೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ. ಅಧಿಕಾರಿಯ ಮೊಬೈಲ್ ಸ್ವಿಚ್‌ಆಫ್ ಆಗಿರುವ ಹಿನ್ನೆಲೆಯಲ್ಲಿ ಪೊಲೀಸರು ವಿವಿಧ ಆಯಾಮಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.

ಈ ಹಿಂದೆ ಕೆಪಿಎಸ್‌ಸಿಯಲ್ಲಿ ಕಾರ್ಯನಿರ್ವಹಣೆ

ನಾಪತ್ತೆಯಾಗಿರುವ ಅಧಿಕಾರಿ ಈ ಹಿಂದೆ ಕರ್ನಾಟಕ ಲೋಕಸೇವಾ ಆಯೋಗದಲ್ಲಿ (KPSC) ಕೆಲಸ ಮಾಡಿದ್ದರು ಎಂದು ತಿಳಿದುಬಂದಿದೆ. ಇತ್ತೀಚೆಗೆ ನಡೆದ ಜಾರಿ ನಿರ್ದೇಶನಾಲಯದ (ED) ದಾಳಿಯ ಬಳಿಕ ಅವರು ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಆದರೆ ಅಧಿಕಾರಿ ನಾಪತ್ತೆಯಾಗಲು ನಿಖರ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಪೊಲೀಸರು ತನಿಖೆ ಮುಂದುವರಿಸಿದ್ದು, ಅಧಿಕಾರಿಯ ಪತ್ತೆಯಾದ ಬಳಿಕವೇ ಪ್ರಕರಣದ ಸಂಪೂರ್ಣ ಹಿನ್ನೆಲೆ ತಿಳಿದುಬರುವ ಸಾಧ್ಯತೆ ಇದೆ.

Read More
Next Story