ಹೆಸರಘಟ್ಟದಲ್ಲಿ ಹಕ್ಕಿಜ್ವರ ನಿಯಂತ್ರಣ: 10 ದಿನಗಳ ಕಾರ್ಯಾಚರಣೆ ಯಶಸ್ವಿ, ಜನ ನಿರಾಳ
x

ಹೆಸರಘಟ್ಟದಲ್ಲಿ ಹಕ್ಕಿಜ್ವರ ನಿಯಂತ್ರಣ: 10 ದಿನಗಳ ಕಾರ್ಯಾಚರಣೆ ಯಶಸ್ವಿ, ಜನ ನಿರಾಳ

H5N1 ಹಕ್ಕಿ ಜ್ವರ ವರದಿ ಬಂದ ಕೂಡಲೇ ಸರ್ಕಾರವು ತುರ್ತು ಸಭೆ ನಡೆಸಿ ಕಾರ್ಯಾಚರಣೆ ಕೈಗೊಂಡಿತು. ಸೋಂಕು ಪತ್ತೆಯಾದ ಕೇಂದ್ರದ ಸುತ್ತಲಿನ 0-3 ಕಿ.ಮೀ ವ್ಯಾಪ್ತಿಯನ್ನು ಸೋಂಕಿತ ವಲಯ ಎಂದು ಘೋಷಿಸಲಾಯಿತು.


Click the Play button to hear this message in audio format

ಬೆಂಗಳೂರು ಹೊರವಲಯದ ಹೆಸರಘಟ್ಟದಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ್ದ H5N1 ಹಕ್ಕಿ ಜ್ವರ ಈಗ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ. ಹಕ್ಕಿ ಜ್ವರ ಕೇವಲ ಪಕ್ಷಿಗಳಿಗೆ ಸೀಮಿತವಾಗದೆ, ಮಾನವರಿಗೂ ಹರಡುವ ಅಪಾಯವಿರುವುದರಿಂದ ಸರ್ಕಾರವು ಗಂಭೀರವಾಗಿ ಪರಿಗಣಿಸಿತ್ತು. ಆರೋಗ್ಯ ಇಲಾಖೆ ಮತ್ತು ಪಶುಪಾಲನಾ ಇಲಾಖೆ ಸಮನ್ವಯದೊಂದಿಗೆ ನಡೆಸಿದ 10 ದಿನಗಳ ತೀವ್ರ ಕಾರ್ಯಾಚರಣೆ ಇದೀಗ ಯಶಸ್ವಿಯಾಗಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.

ಏ.14ರಂದು ಹೆಸರಘಟ್ಟದ ಮತ್ಕೂರು ಗ್ರಾಮದಲ್ಲಿರುವ ರಾಜ್ಯ ಕೋಳಿ ಸಾಕಾಣಿಕೆ ತರಬೇತಿ ಕೇಂದ್ರದಲ್ಲಿ ಅಸಹಜವಾಗಿ ಪಕ್ಷಿಗಳು ಸಾವನ್ನಪ್ಪುತ್ತಿರುವುದು ಗಮನಕ್ಕೆ ಬಂದಿತು. ತಕ್ಷಣ ಎಚ್ಚೆತ್ತ ಅಧಿಕಾರಿಗಳು ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದರು.

ಮಧ್ಯಪ್ರದೇಶದ ಭೋಪಾಲ್‌ನಲ್ಲಿರುವ ರಾಷ್ಟ್ರೀಯ ಉನ್ನತ ಭದ್ರತಾ ಪಶು ರೋಗಗಳ ಸಂಸ್ಥೆ ಈ ಮಾದರಿಗಳನ್ನು ಪರೀಕ್ಷಿಸಿ, ಇದು ಮಾರಣಾಂತಿಕ H5N1 ಹಕ್ಕಿ ಜ್ವರ ಎಂದು ದೃಢಪಡಿಸಿತು. ವರದಿ ಬಂದ ಕೂಡಲೇ ರಾಜ್ಯ ಸರ್ಕಾರವು ತುರ್ತು ಸಭೆ ನಡೆಸಿ ಕಾರ್ಯಾಚರಣೆ ಕೈಗೊಂಡಿತು. ಸೋಂಕು ಪತ್ತೆಯಾದ ಕೇಂದ್ರದ ಸುತ್ತಲಿನ 0-3 ಕಿ.ಮೀ ವ್ಯಾಪ್ತಿಯನ್ನು ಸೋಂಕಿತ ವಲಯ ಎಂದು ಮತ್ತು 3-10 ಕಿ.ಮೀ ವ್ಯಾಪ್ತಿಯನ್ನು ನಿಗಾವಹಿಕೆ ವಲಯ ಎಂದು ಘೋಷಿಸಲಾಯಿತು.

ಅಂತಾರಾಷ್ಟ್ರೀಯ ಜೈವಿಕ ಭದ್ರತಾ ನಿಯಮಗಳ ಅನ್ವಯ, ಸೋಂಕಿತ ವಲಯದಲ್ಲಿದ್ದ ಎಲ್ಲಾ ಪಕ್ಷಿಗಳನ್ನು ವೈಜ್ಞಾನಿಕವಾಗಿ ನಾಶಪಡಿಸಲಾಯಿತು. ಹಕ್ಕಿಗಳ ಮೊಟ್ಟೆಗಳು ಮತ್ತು ಸಂಗ್ರಹಿಸಿಟ್ಟಿದ್ದ ಪಕ್ಷಿ ಆಹಾರವನ್ನು ಸಹ ಸುರಕ್ಷಿತವಾಗಿ ವಿಲೇವಾರಿ ಮಾಡಲಾಯಿತು. ಈ ಪ್ರಕ್ರಿಯೆಯಲ್ಲಿ ಸಣ್ಣ ತಪ್ಪು ನಡೆದರೂ ವೈರಸ್ ಪರಿಸರಕ್ಕೆ ಹರಡುವ ಭೀತಿ ಇರುವುದರಿಂದ ಅತ್ಯಂತ ಎಚ್ಚರಿಕೆ ವಹಿಸಲಾಗಿತ್ತು.

ಕ್ರಿಮಿನಾಶಕ್ಕೆ ರಾಸಾಯನಿಕ ಸಿಂಪಡಣೆ

ಸೋಂಕು ಹರಡುವುದನ್ನು ತಡೆಯಲು 10 ಕಿ.ಮೀ ವ್ಯಾಪ್ತಿಯಲ್ಲಿ ಬರುವ 22 ಗ್ರಾಮಗಳನ್ನು ಸಂಪೂರ್ಣವಾಗಿ ಸ್ಕ್ಯಾನ್ ಮಾಡಲಾಯಿತು. ಸುಮಾರು 28,172 ಜನರ ಆರೋಗ್ಯದ ಮೇಲೆ ನಿರಂತರ ನಿಗಾ ಇಡಲಾಗಿತ್ತು. ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಜನರಲ್ಲಿ ಜ್ವರ ಅಥವಾ ಉಸಿರಾಟದ ತೊಂದರೆಯ ಲಕ್ಷಣಗಳಿವೆಯೇ ಎಂದು ಪರೀಕ್ಷಿಸಿದರು. ನಿಯಮಾನುಸಾರ ಈ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯಗಳನ್ನು ಪೂರ್ಣಗೊಳಿಸಿ, ಸೋಂಕುಕಾರಕ ಕ್ರಿಮಿಗಳನ್ನು ನಾಶಪಡಿಸಲು ರಾಸಾಯನಿಕ ಸಿಂಪಡಣೆ ಮಾಡಲಾಯಿತು ಎಂದು ಆರೋಗ್ಯ ಇಲಾಖೆ ಹೇಳಿದೆ.

ಮಾನವ ಆರೋಗ್ಯದ ಬಗ್ಗೆ ಆತಂಕ ಅನಗತ್ಯ

ಹಕ್ಕಿ ಜ್ವರದ ವಿಷಯದಲ್ಲಿ ಅತ್ಯಂತ ದೊಡ್ಡ ಭೀತಿ ಎಂದರೆ ಅದು ಮನುಷ್ಯರಿಗೆ ಹರಡುವುದಾಗಿದೆ. ಹೆಸರಘಟ್ಟದ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ 10 ಸಿಬ್ಬಂದಿ ನೇರವಾಗಿ ಪಕ್ಷಿಗಳ ಸಂಪರ್ಕದಲ್ಲಿದ್ದ ಕಾರಣ ಅವರನ್ನು ತಕ್ಷಣವೇ ಕ್ವಾರಂಟೈನ್ ಮಾಡಲಾಗಿತ್ತು. ಅವರ ಮೂಗು ಮತ್ತು ಗಂಟಲಿನ ದ್ರವದ ಮಾದರಿಗಳನ್ನು ಬೆಂಗಳೂರಿನ ಎನ್.ಐ.ವಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅದೃಷ್ಟವಶಾತ್, ಯಾವುದೇ ಮಾನವನಲ್ಲಿ H5N1 ಸೋಂಕು ಪತ್ತೆಯಾಗಿಲ್ಲ. ಬೆಂಗಳೂರಿನಾದ್ಯಂತ ಇರುವ ಆರೋಗ್ಯ ಕೇಂದ್ರಗಳಿಗೆ ಐಎಲ್‌ಐ (ಇನ್ಫ್ಲುಯೆಂಜಾ-ಲೈಕ್ ಇಲ್ನೆಸ್‌) ಮತ್ತು ಸಾರಿ ಪ್ರಕರಣಗಳ ಮೇಲೆ ತೀವ್ರ ನಿಗಾ ಇಡಲು ಸೂಚಿಸಲಾಗಿದೆ. ಅಗತ್ಯವಾದ ಪಿಪಿಇ ಕಿಟ್‌ಗಳು, ಮಾಸ್ಕ್ ಮತ್ತು ವೈರಲ್ ನಿರೋಧಕ ಔಷಧಗಳಾದ ಒಸೆಲ್ಟಾಮಿವಿರ್ ಅನ್ನು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಮಾಡಿಕೊಳ್ಳಲಾಗಿದೆ ಎಂದು ಇಲಾಖೆಯು ತಿಳಿಸಿದೆ.

ಮುಂದಿನ 90 ದಿನಗಳ ಕಠಿಣ ನಿಯಮಗಳು

ಪಶುಪಾಲನಾ ಇಲಾಖೆಯು ಏ.21 ರಂದು ನೈರ್ಮಲೀಕರಣ ಪ್ರಮಾಣಪತ್ರವನ್ನು ನೀಡಿದೆ. ಆದರೂ, ವೈರಸ್ ಮತ್ತೆ ಕಾಣಿಸಿಕೊಳ್ಳದಂತೆ ತಡೆಯಲು ಕೆಲವು ಕಠಿಣ ನಿರ್ಬಂಧಗಳನ್ನು ವಿಧಿಸಲಾಗಿದೆ. ಮುಂದಿನ 90 ದಿನಗಳವರೆಗೆ ಈ ಭಾಗದಲ್ಲಿ ಯಾವುದೇ ಹೊಸ ಕೋಳಿ ಸಾಕಾಣಿಕೆ ಚಟುವಟಿಕೆಗಳನ್ನು ನಡೆಸುವಂತಿಲ್ಲ. ಪ್ರತಿ 15 ದಿನಕ್ಕೊಮ್ಮೆ ಫಾರ್ಮ್ ಪ್ರದೇಶಗಳನ್ನು ಧೂಮೀಕರಣ ಅಥವಾ ಕೆಮಿಕಲ್ ಸಿಂಪಡಣೆಯ ಮೂಲಕ ಶುದ್ಧೀಕರಿಸಲಾಗುತ್ತದೆ. ಈ ಅವಧಿಯು ಮುಗಿದ ನಂತರವೇ ಮತ್ತೆ ಕೋಳಿ ಸಾಕಾಣಿಕೆಗೆ ಅನುಮತಿ ನೀಡಲಾಗುತ್ತದೆ ಎಂದಿದೆ.

ಸಾರ್ವಜನಿಕರ ಸುರಕ್ಷತೆಗಾಗಿ ಸಲಹೆಗಳು

ಅನಾರೋಗ್ಯದಿಂದಿರುವ ಅಥವಾ ಮೃತ ಕೋಳಿಗಳನ್ನು ಯಾವುದೇ ಕಾರಣಕ್ಕೂ ಮುಟ್ಟಬಾರದು. ಅವುಗಳ ಮಾಂಸ ಅಥವಾ ಮೊಟ್ಟೆ ಸೇವನೆಯಿಂದ ದೂರವಿರುವುದು ಉತ್ತಮ. ನಿಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಸಹಜವಾಗಿ ಪಕ್ಷಿಗಳು ಸಾವನ್ನಪ್ಪುತ್ತಿದ್ದರೆ ತಕ್ಷಣವೇ ಸ್ಥಳೀಯ ಪಶುವೈದ್ಯರಿಗೆ ಅಥವಾ ಆರೋಗ್ಯ ಅಧಿಕಾರಿಗಳಿಗೆ ತಿಳಿಸಬೇಕು. ಕೋಳಿ ಮಾಂಸ ಮತ್ತು ಮೊಟ್ಟೆಯನ್ನು ಸೇವಿಸುವವರು ಅವುಗಳನ್ನು ಚೆನ್ನಾಗಿ ಬೇಯಿಸಿ ಸೇವಿಸಬೇಕು. ಸರಿಯಾಗಿ ಬೇಯಿಸುವುದರಿಂದ ವೈರಸ್ ನಾಶವಾಗುತ್ತದೆ. ಅಧಿಕೃತ ಆರೋಗ್ಯ ಇಲಾಖೆಯ ಮಾಹಿತಿಯನ್ನು ಮಾತ್ರ ನಂಬಿ. ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ದೃಢಪಡಿಸದ ಮಾಹಿತಿಯಿಂದ ಅನಗತ್ಯ ಆತಂಕಕ್ಕೆ ಒಳಗಾಗಬಾರದು ಎಂದು ಸಲಹೆ ನೀಡಿದೆ.

Read More
Next Story