
ಕಸದ ಟೆಂಡರ್ ವಿವಾದ: ಆತ್ಮಸಾಕ್ಷಿಗೆ ಅನುಗುಣವಾಗಿ ವರದಿ ನೀಡಿ- ಆರ್. ಅಶೋಕ್ ಮನವಿ
ಟೆಂಡರ್ ನಿರ್ಧಾರವು ಮುಂದಿನ ಮೂರು ದಶಕಗಳ ಕಾಲ ಬೆಂಗಳೂರಿನ ಸಾರ್ವಜನಿಕ ಸಂಪನ್ಮೂಲ, ನಗರದ ಆಡಳಿತ ಮತ್ತು ಜನರ ಹಣದ ಗತಿಯನ್ನು ನಿರ್ಧರಿಸಲಿದೆ ಎಂದು ಆರ್.ಅಶೋಕ್ ಹೇಳಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ವ್ಯಾಪ್ತಿಯಲ್ಲಿ ಸಮಗ್ರ ಘನತ್ಯಾಜ್ಯ ನಿರ್ವಹಣೆಗಾಗಿ ಕೈಗೊಳ್ಳಲು ಉದ್ದೇಶಿಸಿರುವ ಭಾರಿ ಮೊತ್ತದ 39,437 ಕೋಟಿ ರೂ.ಗಳ ಟೆಂಡರ್ ಪ್ರಕ್ರಿಯೆ ಈಗ ತೀವ್ರ ರಾಜಕೀಯ ಹಾಗೂ ಆಡಳಿತಾತ್ಮಕ ಸಂಘರ್ಷಕ್ಕೆ ಕಾರಣವಾಗಿದೆ. ಈ ಬೃಹತ್ ಯೋಜನೆ ಹಾಗೂ ಇದರಲ್ಲಿ ನಡೆದಿರುವ ಅಕ್ರಮಗಳ ಕುರಿತು ತನಿಖೆ ಮತ್ತು ಪರಿಶೀಲನೆ ನಡೆಸುತ್ತಿರುವ ಸರ್ಕಾರದ ಉನ್ನತ ಮಟ್ಟದ ಸಮಿತಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಭಾನುವಾರ ಭಾವನಾತ್ಮಕ ಪತ್ರ ಬರೆದಿದ್ದಾರೆ.
ಯಾವುದೇ ರೀತಿಯ ರಾಜಕೀಯ, ಆಡಳಿತಾತ್ಮಕ ಅಥವಾ ಬಾಹ್ಯ ಪ್ರಭಾವಗಳಿಗೆ ಒಳಗಾಗದೆ ಆತ್ಮಸಾಕ್ಷಿ ಮತ್ತು ಸಾರ್ವಜನಿಕ ಹಿತಾಸಕ್ತಿ ಪರಿಗಣಿಸಿ ನಿರ್ಭೀತವಾಗಿ ವರದಿ ನೀಡುವಂತೆ ಅವರು ಸಮಿತಿಯ ಸದಸ್ಯರಿಗೆ ಮನವಿ ಮಾಡಿದ್ದಾರೆ.
ʼಇದು ಕಡತವಲ್ಲ, ಬೆಂಗಳೂರಿನ ಭವಿಷ್ಯʼ
ತಮ್ಮ ಸುದೀರ್ಘ ಮನವಿಯಲ್ಲಿ ಸಮಿತಿಯ ಸದಸ್ಯರ ಜವಾಬ್ದಾರಿ ನೆನಪಿಸಿರುವ ಆರ್. ಅಶೋಕ್, "ನೀವು ಕೇವಲ ಈ ಸಮಿತಿಯ ಸದಸ್ಯರಲ್ಲ. ಅದಕ್ಕೂ ಮೊದಲು ಈ ನಗರದ ನಾಗರಿಕರು, ತೆರಿಗೆ ಪಾವತಿಸುವವರು ಹಾಗೂ ಬೆಂಗಳೂರಿನ ಪ್ರಗತಿಯ ಪಾಲುದಾರರು. ನಿಮ್ಮ ಕುಟುಂಬಗಳು ಮತ್ತು ಮಕ್ಕಳ ಭವಿಷ್ಯವೂ ಇದೇ ನಗರದ ಭವಿಷ್ಯದೊಂದಿಗೆ ಬೆಸೆದುಕೊಂಡಿದೆ" ಎಂದು ಹೇಳಿದ್ದಾರೆ.
ಟೆಂಡರ್ ನಿರ್ಧಾರವು ಮುಂದಿನ ಮೂರು ದಶಕಗಳ ಕಾಲ ಬೆಂಗಳೂರಿನ ಸಾರ್ವಜನಿಕ ಸಂಪನ್ಮೂಲ, ನಗರದ ಆಡಳಿತ ಮತ್ತು ಜನರ ಹಣದ ಗತಿಯನ್ನು ನಿರ್ಧರಿಸಲಿದೆ. ಆದ್ದರಿಂದ ಇದು ಕೇವಲ ಒಂದು ಸಾಮಾನ್ಯ ಟೆಂಡರ್ ಕಡತವಲ್ಲ, ಇಡೀ ನಗರದ ಭವಿಷ್ಯದ ಪ್ರಶ್ನೆಯಾಗಿದೆ ಎಂದು ಮಾರ್ಮಿಕವಾಗಿ ಉಲ್ಲೇಖಿಸಿದ್ದಾರೆ.
ಹಣಕಾಸು ಇಲಾಖೆಯ ಆಕ್ಷೇಪ ಉಲ್ಲೇಖ
ಯೋಜನೆ ಹಿಂದೆ ದೊಡ್ಡ ಮಟ್ಟದ ಆರ್ಥಿಕ ಹೊರೆ ಇರುವುದನ್ನು ಮನವರಿಕೆ ಮಾಡಿಕೊಟ್ಟಿರುವ ಅಶೋಕ್, ಸ್ವತಃ ರಾಜ್ಯ ಸರ್ಕಾರದ ಹಣಕಾಸು ಇಲಾಖೆಯೇ ಈ ಟೆಂಡರ್ ಕುರಿತು ಗಂಭೀರ ಆಕ್ಷೇಪಣೆಗಳನ್ನು ದಾಖಲಿಸಿರುವುದನ್ನು ನೆನಪಿಸಿದ್ದಾರೆ.
"ಬೆಂಗಳೂರು ನಗರದ ಜನರು ಈಗಾಗಲೇ ಆಸ್ತಿ ತೆರಿಗೆ, ವಿವಿಧ ಸೆಸ್‌ಗಳು, ಬಳಕೆದಾರರ ಶುಲ್ಕಗಳು ಹಾಗೂ ಇತರೆ ತೆರಿಗೆಗಳ ಭಾರ ಹೊರುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕ ಹಣದ ಸಾವಿರಾರು ಕೋಟಿ ರೂ. ಗಳ ಬಳಕೆಯ ಬಗ್ಗೆ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವೂ ಅತ್ಯಂತ ಜವಾಬ್ದಾರಿಯುತವಾಗಿರಬೇಕು." ಎಂದು ಅಶೋಕ್ ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಪ್ರತಿ ಟನ್ ಕಸ ವಿಲೇವಾರಿಗೆ ಟಿಪ್ಪಿಂಗ್ ಶುಲ್ಕವಾಗಿ ಸುಮಾರು 260 ರೂ. ನೀಡಲಾಗುತ್ತಿದೆ. ಆದರೆ ಹೊಸ ಟೆಂಡರ್ನಲ್ಲಿ ಇದನ್ನು 2,400 ರೂ.ಗೆ ಏರಿಸಲಾಗಿದ್ದು, ಇದು ಶೇ. 950 ರಷ್ಟು ಅಧಿಕವಾಗಿದೆ ಎಂದು ಅಶೋಕ್ ದೂರಿದ್ದಾರೆ.
ಹಳೇ ವೆಚ್ಚದ ಪ್ರಕಾರ 30 ವರ್ಷಕ್ಕೆ 6,117 ಕೋಟಿ ರೂ. ಆಗುವ ಜಾಗದಲ್ಲಿ ಹೊಸ ಒಪ್ಪಂದದ ಪ್ರಕಾರ ಖಜಾನೆಗೆ 33,320 ಕೋಟಿ ರೂ.ಗಳ ಹೆಚ್ಚುವರಿ ಹೊರೆ ಬೀಳಲಿದೆ ಎನ್ನಲಾಗಿದೆ. ಮೊದಲೆರಡು ಸುತ್ತಿನ ಬಿಡ್ಡಿಂಗ್‌ನಲ್ಲಿ ತಾಂತ್ರಿಕವಾಗಿ ಅನರ್ಹಗೊಂಡಿದ್ದ ಕಂಪನಿಗಳೇ ಮೂರನೇ ಸುತ್ತಿನಲ್ಲಿ ಯಾವುದೇ ನಿಯಮಗಳ ಬದಲಾವಣೆಗಳಿಲ್ಲದೆ ದಿಢೀರನೆ ಅರ್ಹತೆ ಪಡೆದುಕೊಂಡಿದ್ದು ಹೇಗೆ ಎಂಬ ಪ್ರಶ್ನೆ ಎದ್ದಿದೆ. ಟೆಂಡರ್ ಷರತ್ತು ಸಡಿಲಗೊಳಿಸುವ ಅಧಿಕಾರ ಹಣಕಾಸು ಇಲಾಖೆಗೆ ಇದ್ದರೂ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ ಸ್ವತಂತ್ರವಾಗಿ ತೀರ್ಮಾನ ಕೈಗೊಂಡಿದೆ ಎನ್ನುವುದು ಅಶೋಕ್ ಅವರ ತ್ತೊಂದು ಆರೋಪವಾಗಿದೆ. ಬೆಂಗಳೂರಿನ ಉತ್ತರ ಮತ್ತು ದಕ್ಷಿಣ ಎಂಬ ಎರಡೂ ಪ್ಯಾಕೇಜ್‌ಗಳನ್ನು ಒಂದೇ ಖಾಸಗಿ ಸಂಸ್ಥೆಗೆ ನಿಯಮಾವಳಿ ಮೀರಿ ವಹಿಸಲು ಸರ್ಕಾರ ಮುಂದಾಗಿದೆ. ಈ ಬಗ್ಗೆ ರಾಜ್ಯಪಾಲರು ಹಾಗೂ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ ಎಂದಿದ್ದಾರೆ.
ಡಿಕೆಶಿ ವರ್ಸಸ್ ಅಶೋಕ್
ಈ ನಡುವೆ, "ಅಶೋಕ್ ಅವರು ಬೆಂಗಳೂರಿನ ಕಸದ ಮಾಫಿಯಾದ ಏಜೆಂಟ್ ತರಹ ಮಾತನಾಡುತ್ತಿದ್ದಾರೆ" ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಅಶೋಕ್, "ಹೌದು, ನಾನು ಏಜೆಂಟನೇ. ಆದರೆ ಕಮಿಷನ್ ಮಾಫಿಯಾದ ಏಜೆಂಟ್ ಅಲ್ಲ, ಬೆಂಗಳೂರಿನ 1.5 ಕೋಟಿ ನಾಗರಿಕರ ಧ್ವನಿಯಾಗಿ ನಿಂತಿರುವ ಜನತಾ ಏಜೆಂಟ್. ತಾಕತ್ತಿದ್ದರೆ ಸರ್ಕಾರ ರಚಿಸಿರುವ ಉನ್ನತ ಮಟ್ಟದ ಸಮಿತಿಯ ವರದಿಯನ್ನು ಮುಚ್ಚಿಡದೆ ತಕ್ಷಣ ಬಹಿರಂಗಪಡಿಸಲಿ" ಎಂದು ಸವಾಲು ಹಾಕಿದ್ದಾರೆ.

