ಪಿಒಪಿ ಗಣೇಶ ಮೂರ್ತಿ ಮಾರಾಟ ಮಾಡಿದ್ರೆ ಕ್ರಿಮಿನಲ್ ಕೇಸ್; ಜಿಬಿಎಯಿಂದ ಸುತ್ತೋಲೆ
x

ಸಾರ್ವಜನಿಕ ಗಣೇಶೋತ್ಸವಕ್ಕಾಗಿ ಪೆಂಡಾಲ್ ಅಳವಡಿಸುವುದು ಹಾಗೂ ಧ್ವನಿವರ್ಧಕ ಬಳಸುವುದಕ್ಕೆ ಸಂಬಂಧಿಸಿದ ಶುಲ್ಕವನ್ನು ಪಾವತಿಸುವುದು ಕಡ್ಡಾಯವಾಗಿದೆ.

ಪಿಒಪಿ ಗಣೇಶ ಮೂರ್ತಿ ಮಾರಾಟ ಮಾಡಿದ್ರೆ ಕ್ರಿಮಿನಲ್ ಕೇಸ್; ಜಿಬಿಎಯಿಂದ ಸುತ್ತೋಲೆ

ಸಾರ್ವಜನಿಕ ಗಣೇಶೋತ್ಸವಕ್ಕಾಗಿ ಪೆಂಡಾಲ್ ಅಳವಡಿಸುವುದು ಹಾಗೂ ಧ್ವನಿವರ್ಧಕ ಬಳಸುವುದಕ್ಕೆ ಸಂಬಂಧಿಸಿದ ಶುಲ್ಕವನ್ನು ಪಾವತಿಸುವುದು ಕಡ್ಡಾಯವಾಗಿದೆ.


Click the Play button to hear this message in audio format

ಗಣೇಶ ಚತುರ್ಥಿ ಆಚರಣೆಗೆ ಸಿದ್ಧತೆಗಳು ಆರಂಭವಾಗಿರುವ ಬೆನ್ನಲ್ಲೇ, ನಗರದ ಗಣೇಶೋತ್ಸವಗಳಿಗೆ ಸಂಬಂಧಿಸಿದಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಹಲವು ನಿಯಮಗಳನ್ನು ಜಾರಿಗೊಳಿಸಿದೆ. ಪರಿಸರ ಸಂರಕ್ಷಣೆಗೆ ಒತ್ತು ನೀಡಿರುವ ಪ್ರಾಧಿಕಾರ, ಪ್ಲಾಸ್ಟರ್ ಆಫ್ ಪ್ಯಾರಿಸ್‌ (POP) ಗಣೇಶ ಮೂರ್ತಿಗಳ ತಯಾರಿಕೆ ಹಾಗೂ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿದೆ.

ನಗರದಲ್ಲಿ ಪಿಒಪಿ ಗಣೇಶ ಮೂರ್ತಿಗಳನ್ನು ತಯಾರಿಸುವುದು ಅಥವಾ ಮಾರಾಟ ಮಾಡುವುದು ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಎಚ್ಚರಿಕೆ ನೀಡಿದೆ. ನಿಯಮ ಉಲ್ಲಂಘನೆಯ ಪ್ರಕರಣಗಳಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಗಣೇಶ ಕೂರಿಸಲು ಅನುಮತಿ ಪಡೆಯಲು ಸಿಂಗಲ್ ವಿಂಡೋ

ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಹಬ್ಬ ಆಚರಿಸಲು ಆಯೋಜಕರು ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಇದಕ್ಕಾಗಿ ವಾರ್ಡ್ ಮಟ್ಟದಲ್ಲಿ ನೋಡಲ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅರ್ಜಿಗಳನ್ನು ಸ್ವೀಕರಿಸಿದ ಬಳಿಕ ಒಂದು ದಿನದೊಳಗೆ ಪರಿಶೀಲನೆ ನಡೆಸಿ ಅನುಮತಿ ನೀಡುವ ವ್ಯವಸ್ಥೆ ಮಾಡಲಾಗಿದೆ. ವಿವಿಧ ಇಲಾಖೆಗಳ ಕಚೇರಿಗಳಿಗೆ ಅಲೆದಾಡುವ ಅಗತ್ಯವಿಲ್ಲದಂತೆ ಸಿಂಗಲ್ ವಿಂಡೋ ವ್ಯವಸ್ಥೆಯ ಮೂಲಕ ಅರ್ಜಿ ವಿಲೇವಾರಿ ಮಾಡಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕ್ರಮ ಕೈಗೊಂಡಿದೆ.

ಮನೆಯಲ್ಲೇ ವಿಸರ್ಜನೆ ಮಾಡಿದ ಮೂರ್ತಿಯ ಮಣ್ಣು ಮರುಬಳಕೆ

ಮನೆಯಲ್ಲೇ ಗಣೇಶ ಮೂರ್ತಿಯನ್ನು ವಿಸರ್ಜಿಸುವವರು ಉಳಿಯುವ ಮಣ್ಣನ್ನು ಸೂಕ್ತ ರೀತಿಯಲ್ಲಿ ಮನೆಯಲ್ಲೇ ವಿಲೇವಾರಿ ಮಾಡುವಂತೆ ಸೂಚಿಸಲಾಗಿದೆ. ಈ ಮಣ್ಣನ್ನು ಹೂಕುಂಡ, ಕೈತೋಟ ಸೇರಿದಂತೆ ಮನೆಯ ತೋಟಗಾರಿಕೆಗೆ ಮರುಬಳಕೆ ಮಾಡುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.

ನಿಗದಿತ ಸ್ಥಳದಲ್ಲೇ ಸಾರ್ವಜನಿಕ ಗಣೇಶ ಮೂರ್ತಿ ವಿಸರ್ಜನೆ

ಸಾರ್ವಜನಿಕ ಗಣೇಶೋತ್ಸವಗಳಲ್ಲಿ ಪ್ರತಿಷ್ಠಾಪಿಸುವ ಮೂರ್ತಿಗಳನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ ನಿಗದಿಪಡಿಸಿರುವ ಸ್ಥಳಗಳಲ್ಲಿಯೇ ವಿಸರ್ಜನೆ ಮಾಡಬೇಕು. ಅನುಮತಿ ಇಲ್ಲದ ಸ್ಥಳಗಳಲ್ಲಿ ವಿಸರ್ಜನೆ ನಡೆಸಿದರೆ ಅಂತಹವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಪ್ರಾಧಿಕಾರ ಎಚ್ಚರಿಸಿದೆ.

ಗಣೇಶೋತ್ಸವದಲ್ಲಿ ಪ್ಲಾಸ್ಟಿಕ್ ಬಳಕೆಗೆ ಸಂಪೂರ್ಣ ನಿಷೇಧ

ಈ ಬಾರಿ ಗಣೇಶೋತ್ಸವದ ಸಂದರ್ಭದಲ್ಲಿ ಪ್ಲಾಸ್ಟಿಕ್ ಬಳಕೆಯ ಮೇಲೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ ನಿರ್ಬಂಧ ವಿಧಿಸಿದೆ. ಹಬ್ಬದ ಆಚರಣೆಯ ವೇಳೆ ಪ್ಲಾಸ್ಟಿಕ್ ಬಳಕೆ ಕಂಡುಬಂದರೆ ಆಯೋಜಕರಿಗೆ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಲಾಗಿದೆ.ಪರಿಸರ ಸ್ನೇಹಿ ವಸ್ತುಗಳ ಬಳಕೆಗೆ ಆದ್ಯತೆ ನೀಡುವಂತೆ ಆಯೋಜಕರಿಗೆ ಸೂಚನೆ ನೀಡಲಾಗಿದೆ.

ಪೆಂಡಾಲ್, ಧ್ವನಿವರ್ಧಕಕ್ಕೂ ಶುಲ್ಕ ಕಡ್ಡಾಯ

ಸಾರ್ವಜನಿಕ ಗಣೇಶೋತ್ಸವಕ್ಕಾಗಿ ಪೆಂಡಾಲ್ ನಿರ್ಮಿಸುವುದು ಹಾಗೂ ಧ್ವನಿವರ್ಧಕ ಬಳಸುವುದಕ್ಕೂ ನಿಗದಿತ ಶುಲ್ಕ ಪಾವತಿಸಬೇಕು. ಈ ಶುಲ್ಕವನ್ನು ಸ್ಥಳೀಯ ಪೊಲೀಸ್ ಠಾಣೆ ಅಥವಾ ಬೆಂಗಳೂರು ಒನ್ ಕೇಂದ್ರಗಳ ಮೂಲಕ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.

ಶುಲ್ಕ ಪಾವತಿಸಿದ ರಸೀದಿಯನ್ನು ಗಣೇಶೋತ್ಸವದ ಅನುಮತಿಗಾಗಿ ಸಲ್ಲಿಸುವ ಅರ್ಜಿಯೊಂದಿಗೆ ಕಡ್ಡಾಯವಾಗಿ ಲಗತ್ತಿಸಬೇಕು. ರಸೀದಿ ಸಲ್ಲಿಸಿದ ಬಳಿಕವೇ ಸಾರ್ವಜನಿಕವಾಗಿ ಗಣೇಶೋತ್ಸವ ಆಚರಣೆಗೆ GBA ಅನುಮತಿ ನೀಡಲಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಗಣೇಶೋತ್ಸವದ ವೇಳೆ ಪರಿಸರ ನಿಯಮಗಳು, ವಿಸರ್ಜನೆ ವಿಧಾನ ಹಾಗೂ ಸಾರ್ವಜನಿಕ ಸ್ಥಳಗಳ ಬಳಕೆಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸೂಚಿಸಿದೆ.

Read More
Next Story