
ಮೇಲ್ಸೇತುವೆಗಳಲ್ಲಿ ಬೈಕ್‌ಗಳಿಗೆ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಸವಾರರು ಲೇನ್ ಶಿಸ್ತು ಪಾಲಿಸುವಂತೆ ಹಾಗೂ ಅಪಾಯಕಾರಿ ಓವರ್‌ಟೇಕ್ ಮಾಡದಂತೆ ಪೊಲೀಸರು ಸೂಚಿಸಿದ್ದಾರೆ.
ಬೆಂಗಳೂರಿನ ಎರಡು ಫ್ಲೈಓವರ್‌ಗಳಲ್ಲಿ ಸಂಚಾರ ನಿಯಮ ಬದಲಾವಣೆ; ದ್ವಿಚಕ್ರ ವಾಹನಗಳಿಗೆ ಅವಕಾಶ
ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಮಾರ್ಗದಲ್ಲಿರುವ ಮೇಲ್ವೇತುವೆ ಹಾಗೂ ಎಲೆಕ್ಟ್ರಾನಿಕ್ ಸಿಟಿ ಮೇಲೇತುವೆಯಲ್ಲಿ ದ್ವಿಚಕ್ರ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿ, ಸಂಚಾರ ಪೊಲೀಸರು ಆದೇಶಿಸಿದ್ದಾರೆ.
ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ಪ್ರಮುಖ ಮೇಲ್ಸೇತುವೆಗಳಲ್ಲಿ(ಫ್ಲೈಓವರ್) ಜಾರಿಗೊಳಿಸಲಾಗಿದ್ದ ವಾಹನ ಸಂಚಾರ ನಿರ್ಬಂಧದಲ್ಲಿ ಸಂಚಾರ ಪೊಲೀಸರು ಕೆಲವು ಬದಲಾವಣೆಗಳನ್ನು ಮಾಡಿದ್ದಾರೆ. ನಿರ್ಬಂಧವನ್ನು ಎಲ್ಲೆಡೆ ಒಂದೇ ಬಾರಿಗೆ ಜಾರಿಗೊಳಿಸುವ ಬದಲು, ಪರಿಸ್ಥಿತಿಗೆ ಅನುಗುಣವಾಗಿ ಹಂತ ಹಂತವಾಗಿ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ.
ಈ ಪರಿಷ್ಕರಣೆಯಂತೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಯಲ್ಲಿರುವ ಮೇಲ್ಸೇತುವೆ ಹಾಗೂ ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆಯಲ್ಲಿ ದ್ವಿಚಕ್ರ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಇದರೊಂದಿಗೆ ಆಟೋಗಳಿಗೂ ಸಂಚಾರಕ್ಕೆ ಅನುಮತಿ ನೀಡಲಾಗಿದೆ.
ನಿರ್ಬಂಧದಿಂದ ಕೆಳರಸ್ತೆಗಳಲ್ಲಿ ಹೆಚ್ಚಿದ ಒತ್ತಡ
ನಗರದ ಐದು ಪ್ರಮುಖ ಮೇಲ್ಸೇತುವೆಗಳಲ್ಲಿ ಸಂಚಾರ ದಟ್ಟಣೆ ತಗ್ಗಿಸುವ ಸಲುವಾಗಿ ವಿವಿಧ ವರ್ಗದ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸುವ ಯೋಜನೆ ರೂಪಿಸಲಾಗಿತ್ತು. ಈ ಪೈಕಿ ನಾಲ್ಕು ಮಾರ್ಗಗಳಲ್ಲಿ ನಿಯಮಗಳನ್ನು ಈಗಾಗಲೇ ಜಾರಿಗೆ ತರಲಾಗಿತ್ತು. ಬಿಜಿಎಸ್ ಮೇಲ್ಸೇತುವೆ, ಪೀಣ್ಯ ಮೇಲ್ಸೇತುವೆ ಹಾಗೂ ಡಬಲ್ ಡೆಕ್ಕರ್ ಮೇಲ್ಸೇತುವೆಗಳಲ್ಲಿ ನಿರ್ಬಂಧ ಜಾರಿಯಾದ ಬಳಿಕ ವಾಹನ ಸಂಚಾರದಲ್ಲಿ ಹೆಚ್ಚಿನ ಸಮಸ್ಯೆ ಕಂಡುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ವಿಮಾನ ನಿಲ್ದಾಣದ ರಸ್ತೆಯಲ್ಲಿರುವ ಮೇಲ್ಸೇತುವೆಯಲ್ಲಿ ಪರಿಸ್ಥಿತಿ ಭಿನ್ನವಾಗಿದೆ. ಸಂಜೀವ್ ನಗರ ಕ್ರಾಸ್‌ನಿಂದ ವಿದ್ಯಾಶಿಲ್ಪ ಜಂಕ್ಷನ್‌ವರೆಗಿನ ಮೇಲ್ಸೇತುವೆಗೆ ಸರಕು ಸಾಗಣೆ ವಾಹನಗಳು, ಬೈಕ್‌ಗಳು ಮತ್ತು ಆಟೋಗಳನ್ನು ಪ್ರವೇಶದ ಹಂತದಲ್ಲೇ ಕೆಳಗಿನ ರಸ್ತೆಗೆ ತಿರುಗಿಸಲಾಗುತ್ತಿತ್ತು. ಇದರಿಂದ ಮೇಲ್ಸೇತುವೆಯ ಕೆಳಭಾಗದ ರಸ್ತೆಗಳಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿ ಮತ್ತಷ್ಟು ದಟ್ಟಣೆ ಉಂಟಾಗುತ್ತಿತ್ತು.
ಹಂತ ಹಂತವಾಗಿ ನಿಯಮ ಜಾರಿ
ಈ ಸಮಸ್ಯೆಯನ್ನು ಪರಿಗಣಿಸಿರುವ ಸಂಚಾರ ಪೊಲೀಸರು ವಿಮಾನ ನಿಲ್ದಾಣ ರಸ್ತೆಯ ಮೇಲ್ಸೇತುವೆಯಲ್ಲಿ ವಾಹನ ನಿರ್ಬಂಧವನ್ನು ಹಂತಹಂತವಾಗಿ ಜಾರಿಗೆ ತರಲು ಮುಂದಾಗಿದ್ದಾರೆ. ಸ್ಥಳೀಯ ಸಂಚಾರ ಪರಿಸ್ಥಿತಿಯನ್ನು ಗಮನಿಸಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ಬೈಕ್ ಮತ್ತು ಆಟೋಗಳ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು, ನಿಗದಿತ ಅವಧಿಯಲ್ಲಿ ಸರಕು ಸಾಗಣೆ ವಾಹನಗಳ ಮೇಲಿನ ನಿರ್ಬಂಧ ಮುಂದುವರಿಯಲಿದೆ.
ಬೈಕ್ ಸವಾರರಿಗೆ ಸಂಚಾರ ಪೊಲೀಸರ ಸೂಚನೆ
ಮೇಲ್ಸೇತುವೆಯಲ್ಲಿ ಬೈಕ್‌ಗಳಿಗೆ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಸವಾರರು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪೊಲೀಸರು ಸೂಚಿಸಿದ್ದಾರೆ. ಮುಖ್ಯವಾಗಿ ಎಡಭಾಗದ ಲೇನ್‌ನಲ್ಲಿ ಸಂಚರಿಸುವುದು, ಲೇನ್ ಶಿಸ್ತು ಕಾಪಾಡುವುದು ಹಾಗೂ ಅಪಾಯಕಾರಿ ರೀತಿಯಲ್ಲಿ ಓವರ್‌ಟೇಕ್ ಮಾಡದಂತೆ ಎಚ್ಚರಿಕೆ ನೀಡಲಾಗಿದೆ. ರಾಮೇಲ್ಸೇತುವೆಯಲ್ಲಿ ಗಂಟೆಗೆ 60 ಕಿಲೋಮೀಟರ್‌ಗಿಂತ ಹೆಚ್ಚಿನ ವೇಗದಲ್ಲಿ ಸಂಚರಿಸದೆ, ಸುರಕ್ಷಿತ ವೇಗವನ್ನು ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ.
ಸೆ.11ರಿಂದ ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆಯಲ್ಲೂ ಬದಲಾವಣೆ
ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆಯ ಸಂಚಾರ ನಿಯಮದಲ್ಲೂ ಬದಲಾವಣೆ ಮಾಡಲಾಗಿದೆ. ಸೆಪ್ಟೆಂಬರ್ 11ರಿಂದ ಈ ಮೇಲ್ಸೇತುವೆಯಲ್ಲಿ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ನಿರ್ಬಂಧ ಜಾರಿಯಾಗಲಿದೆ. ಆದರೆ ದ್ವಿಚಕ್ರ ವಾಹನಗಳ ಸಂಚಾರಕ್ಕೆ ಅವಕಾಶ ಮುಂದುವರಿಯಲಿದೆ. ಸಂಚಾರ ದಟ್ಟಣೆ ನಿಯಂತ್ರಿಸುವುದರ ಜೊತೆಗೆ ಮೇಲ್ಸೇತುವೆ ಹಾಗೂ ಅದರ ಸುತ್ತಮುತ್ತಲಿನ ರಸ್ತೆಗಳ ಮೇಲೆ ವಾಹನಗಳ ಒತ್ತಡವನ್ನು ಸಮತೋಲನಗೊಳಿಸುವುದು ಈ ಬದಲಾವಣೆಯ ಉದ್ದೇಶವಾಗಿದೆ.

