
ನಕಲಿ ಔಷಧಿಗಳ ಜಾಲದ ವ್ಯಾಪ್ತಿ ಹಾಗೂ ಈ ಔಷಧಿಗಳನ್ನು ಪಡೆದಿರಬಹುದಾದ ಆಸ್ಪತ್ರೆಗಳು ಮತ್ತು ಇತರ ವೈದ್ಯಕೀಯ ಸಂಸ್ಥೆಗಳ ಬಗ್ಗೆಯೂ ತನಿಖೆ ಮುಂದುವರಿದಿದೆ.
ನಕಲಿ ಔಷಧಿ ಖರೀದಿಸಿದ್ದ ಫಾರ್ಮಾಗಳ ಮೇಲೆ SIT ದಾಳಿ; ನಕಲಿ ಮಾತ್ರೆಗಳು ಸೀಜ್
ರಾಜರಾಜೇಶ್ವರಿ ನಗರದ ಆರ್‌ಆರ್ ಫಾರ್ಮಾ, ಚಾಮರಾಜಪೇಟೆಯ ಮೆಡಿ365 ಎಲ್‌ಎಲ್‌ಪಿ ಫಾರ್ಮಾ ಹಾಗೂ ತಲಘಟ್ಟಪುರದ ಪಾಟೇಲ್ ಫಾರ್ಮಾ ಮೇಲೆ ಎಸ್‌ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು ನಗರದಲ್ಲಿ ಪತ್ತೆಯಾಗಿರುವ ನಕಲಿ ಔಷಧಿ ಜಾಲದ ತನಿಖೆಯನ್ನು ಚುರುಕುಗೊಳಿಸಿರುವ ವಿಶೇಷ ತನಿಖಾ ತಂಡ (SIT), ಆರೋಪಿಗಳಿಂದ ಔಷಧಿಗಳನ್ನು ಖರೀದಿಸಿ ಮಾರಾಟ ಮಾಡಿರುವ ಶಂಕೆಯಿರುವ ಮೂರು ಫಾರ್ಮಾಗಳ ಮೇಲೆ ದಾಳಿ ನಡೆಸಿದೆ. ದಾಳಿ ವೇಳೆ ಕೆಲವು ನಕಲಿ ಔಷಧಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ನಕಲಿ ಔಷಧಿ ಪ್ರಕರಣದಲ್ಲಿ ಬಂಧಿತರಾಗಿರುವ ಹಾಗೂ ತನಿಖೆ ಎದುರಿಸುತ್ತಿರುವ ಆರೋಪಿಗಳ ವಿಚಾರಣೆ ವೇಳೆ ಹಲವು ಮಾಹಿತಿಗಳು ಲಭ್ಯವಾಗಿವೆ ಎಂದು ತಿಳಿದುಬಂದಿದೆ. ಪ್ರಮುಖ ಆರೋಪಿಗಳೆಂದು ಗುರುತಿಸಲಾಗಿರುವ ಪ್ರಶಾಂತ್ ಹಾಗೂ ಡಿಸ್ಟ್ರಿಬ್ಯೂಟರ್ ವಿರೇಶ್ ಅವರಿಂದ ದೊಡ್ಡ ಪ್ರಮಾಣದಲ್ಲಿ ಔಷಧಿಗಳನ್ನು ಪಡೆದು ಮಾರಾಟ ಮಾಡಲಾಗಿದೆ ಎಂಬ ಅನುಮಾನದ ಆಧಾರದ ಮೇಲೆ ಎಸ್‌ಐಟಿ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ.
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಆರ್‌ಆರ್ ಫಾರ್ಮಾ, ಚಾಮರಾಜಪೇಟೆಯ ಮೆಡಿ365 ಎಲ್‌ಎಲ್‌ಪಿ ಫಾರ್ಮಾ ಹಾಗೂ ತಲಘಟ್ಟಪುರದ ಪಾಟೇಲ್ ಫಾರ್ಮಾ ಮೇಲೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಕಳೆದ ವರ್ಷದ ಏಪ್ರಿಲ್‌ನಿಂದ ಆರೋಪಿಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಔಷಧಿಗಳನ್ನು ಖರೀದಿಸಿ ಮಾರಾಟ ಮಾಡಿರುವ ಸಾಧ್ಯತೆಯನ್ನು ತನಿಖಾ ತಂಡ ಪರಿಶೀಲಿಸುತ್ತಿದೆ. ಈ ಹಿನ್ನೆಲೆಯಲ್ಲಿ ಫಾರ್ಮಾಗಳ ದಾಖಲೆಗಳು ಹಾಗೂ ಔಷಧಿ ದಾಸ್ತಾನುಗಳನ್ನು ಪರಿಶೀಲಿಸಲಾಗಿದೆ.
ಫಾರ್ಮಾ ಮಾಲೀಕರಿಗೆ ನೋಟಿಸ್
ದಾಳಿ ಬಳಿಕ ಸಂಬಂಧಿಸಿದ ಫಾರ್ಮಾಗಳ ಮಾಲೀಕರಿಗೆ ಎಸ್‌ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ನಕಲಿ ಔಷಧಿಗಳನ್ನು ಯಾವ ಅವಧಿಯಿಂದ ಖರೀದಿಸಲಾಗುತ್ತಿತ್ತು, ಅವುಗಳನ್ನು ಯಾರಿಗೆ ಮಾರಾಟ ಮಾಡಲಾಗಿದೆ ಮತ್ತು ಯಾವ ಆಸ್ಪತ್ರೆಗಳಿಗೆ ಸರಬರಾಜು ಮಾಡಲಾಗಿದೆ ಎಂಬ ಮಾಹಿತಿಯನ್ನು ಅಧಿಕಾರಿಗಳು ಸಂಗ್ರಹಿಸುತ್ತಿದ್ದಾರೆ.
ಆಸ್ಪತ್ರೆಗಳಿಗೆ ಸರಬರಾಜಾಗಿತ್ತೇ?
ನಕಲಿ ಔಷಧಿಗಳ ಜಾಲದ ವ್ಯಾಪ್ತಿ ಹಾಗೂ ಅದರ ಮೂಲಕ ಔಷಧಿಗಳನ್ನು ಪಡೆದ ಆಸ್ಪತ್ರೆಗಳು ಮತ್ತು ಇತರ ವೈದ್ಯಕೀಯ ಸಂಸ್ಥೆಗಳ ಕುರಿತು ತನಿಖೆ ಮುಂದುವರಿದಿದೆ. ಫಾರ್ಮಾಗಳ ಖರೀದಿ ಮತ್ತು ಮಾರಾಟದ ದಾಖಲೆಗಳನ್ನು ಪರಿಶೀಲಿಸುವ ಮೂಲಕ ಔಷಧಿಗಳ ನಿಜವಾದ ಸರಬರಾಜು ಜಾಲವನ್ನು ಪತ್ತೆಹಚ್ಚಲು ಎಸ್‌ಐಟಿ ಮುಂದಾಗಿದೆ. ಬೆಂಗಳೂರು ನಕಲಿ ಔಷಧಿ ಪ್ರಕರಣದಲ್ಲಿ ಈಗಾಗಲೇ ಹಲವು ಸ್ಥಳಗಳಲ್ಲಿ ದಾಳಿ ನಡೆದಿದ್ದು, ತನಿಖೆ ಮುಂದುವರಿದಂತೆ ಜಾಲಕ್ಕೆ ಸಂಬಂಧಿಸಿದ ಮತ್ತಷ್ಟು ಮಾಹಿತಿ ಹೊರಬರುವ ಸಾಧ್ಯತೆಯಿದೆ.
