
ಬೆಂಗಳೂರಿನಲ್ಲಿ ದೀಪಾವಳಿ ಪಟಾಕಿ ಅವಘಡಕ್ಕೆ ಗರ್ಭಿಣಿ ಸೇರಿ ಆರು ಮಂದಿ ಗಾಯಗೊಂಡಿದ್ದಾರೆ.
ಬೆಂಗಳೂರು| ಪಟಾಕಿ ಸಿಡಿದು ಗರ್ಭಿಣಿ ಸೇರಿ 6 ಮಂದಿಗೆ ಗಾಯ; ಇಬ್ಬರ ಸ್ಥಿತಿ ಗಂಭೀರ
21 ವರ್ಷದ ಗರ್ಭಿಣಿ ತೊಡೆಯ ಮೇಲೆ ಪಟಾಕಿ ಬಾಕ್ಸ್ ಇಟ್ಟುಕೊಂಡಿದ್ದ ಸಂದರ್ಭದಲ್ಲಿ ಕಿಡಿ ತಗುಲಿದೆ. ಇದರಿಂದ ಬಾಕ್ಸ್‌ನಲ್ಲಿದ್ದ ಪಟಾಕಿಗಳು ಏಕಾಏಕಿ ಸಿಡಿದ ಪರಿಣಾಮ ಮಹಿಳೆಗೆ ಗಂಭೀರ ಗಾಯಗಳಾಗಿವೆ.
ಬೆಂಗಳೂರಿನಲ್ಲಿ ದೀಪಾವಳಿ ಸಂಭ್ರಮದ ನಡುವೆ ಪಟಾಕಿ ಅವಘಡಗಳು ಆತಂಕ ಮೂಡಿಸಿವೆ. ಪಟಾಕಿ ಸಿಡಿತದಿಂದ ಗರ್ಭಿಣಿ ಸೇರಿದಂತೆ ಆರು ಮಂದಿ ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳಿಗೆ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ತೀವ್ರ ನಿಗಾ ಘಟಕದಲ್ಲಿ (ICU) ಇರಿಸಲಾಗಿದೆ.
ಗಾಯಗೊಂಡವರಲ್ಲಿ 11, 14 ಮತ್ತು 9 ವರ್ಷದ ಮೂವರು ಬಾಲಕರು ಹಾಗೂ 9 ವರ್ಷದ ಬಾಲಕಿ ಸೇರಿದ್ದಾರೆ. ಇದರ ಜೊತೆಗೆ 21 ಮತ್ತು 27 ವರ್ಷದ ಇಬ್ಬರು ಮಹಿಳೆಯರೂ ಪಟಾಕಿ ಸಿಡಿತದಿಂದ ಗಾಯಗೊಂಡಿದ್ದಾರೆ. ಈ ಪೈಕಿ 21 ವರ್ಷದ ಗರ್ಭಿಣಿಯ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
21 ವರ್ಷದ ಗರ್ಭಿಣಿ ತೊಡೆಯ ಮೇಲೆ ಪಟಾಕಿ ಬಾಕ್ಸ್ ಇಟ್ಟುಕೊಂಡಿದ್ದ ಸಂದರ್ಭದಲ್ಲಿ ಕಿಡಿ ತಗುಲಿದೆ. ಇದರಿಂದ ಬಾಕ್ಸ್‌ನಲ್ಲಿದ್ದ ಪಟಾಕಿಗಳು ಏಕಾಏಕಿ ಸಿಡಿದ ಪರಿಣಾಮ ಮಹಿಳೆಗೆ ಗಂಭೀರ ಗಾಯಗಳಾಗಿವೆ. ಸದ್ಯ ಅವರನ್ನು ವಿಕ್ಟೋರಿಯಾ ಆಸ್ಪತ್ರೆಯ ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಪಟಾಕಿ ಸಿಡಿದು ಇಬ್ಬರು ಮಕ್ಕಳಿಗೆ ಗಾಯಗಳಾಗಿವೆ. ಮತ್ತೊಂದು ಘಟನೆಯಲ್ಲಿ ಮೂವರು ಮಕ್ಕಳ ಮುಖದ ಚರ್ಮ ಸುಟ್ಟಿದ್ದು, ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ಪಟಾಕಿ ಅವಘಡಗಳು ಹೆಚ್ಚಾಗುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ. ಪಟಾಕಿ ಸಿಡಿಸುವ ಸಂದರ್ಭದಲ್ಲಿ ಮಾತ್ರವಲ್ಲದೆ, ರಸ್ತೆಯಲ್ಲಿ ಸಂಚರಿಸುವವರಿಗೂ ಪಟಾಕಿ ಕಿಡಿ ತಗುಲಿ ಗಾಯಗಳಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.
ಬೆಂಗಳೂರು ಸೇರಿದಂತೆ ಕರ್ನಾಟಕದ ಕೆಲವೆಡೆ ದೀಪಾವಳಿ ಸಂದರ್ಭದಲ್ಲಿ 150ಕ್ಕೂ ಹೆಚ್ಚು ಪಟಾಕಿ ಅವಘಡ ಪ್ರಕರಣಗಳು ವರದಿಯಾಗಿವೆ. ವಿಶೇಷವೆಂದರೆ, ಪಟಾಕಿ ಹಚ್ಚಿದವರಿಗಿಂತ ಅವುಗಳನ್ನು ನೋಡುತ್ತಿದ್ದವರು, ರಸ್ತೆಗಳಲ್ಲಿ ಸಂಚರಿಸುತ್ತಿದ್ದವರು ಹಾಗೂ ಪುಟ್ಟ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಗಾಯಗೊಂಡಿದ್ದಾರೆ. ಮಕ್ಕಳ ಕಣ್ಣುಗಳಿಗೆ ಪಟಾಕಿ ಕಿಡಿ ತಗುಲಿ ಗಂಭೀರ ಹಾನಿಯಾಗಿರುವ ಪ್ರಕರಣಗಳೂ ಬೆಳಕಿಗೆ ಬಂದಿವೆ.
ಗಾಯಾಳುಗಳ ಆರೋಗ್ಯ ಸ್ಥಿತಿ ಮತ್ತು ಚಿಕಿತ್ಸೆಯ ಕುರಿತು ವಿಕ್ಟೋರಿಯಾ ಆಸ್ಪತ್ರೆಯ ಸುಟ್ಟ ಗಾಯಗಳ ವಿಭಾಗದ ಮುಖ್ಯಸ್ಥ ಡಾ. ಎನ್.ಎ. ಯೋಗೇಶ್ವರಪ್ಪ ಮಾಹಿತಿ ನೀಡಿದ್ದಾರೆ. ದೀಪಾವಳಿ ಸಂಭ್ರಮದ ನಡುವೆ ಪಟಾಕಿ ಸಿಡಿಸುವಾಗ ಸುರಕ್ಷತಾ ಕ್ರಮಗಳನ್ನು ಪಾಲಿಸುವುದು ಅತ್ಯಗತ್ಯವಾಗಿದೆ.
