
FIR against Home Minister| ಕಬಡ್ಡಿ ಪಂದ್ಯ ಬೆಟ್ಟಿಂಗ್: ಡಾ. ಪರಮೇಶ್ವರ್, ತುಮಕೂರು ಡಿಸಿ ವಿರುದ್ಧ ಎಫ್‌ಐಆರ್; ಕೋರ್ಟ್ ಆದೇಶ
ಗೃಹ ಸಚಿವ ಜಿ. ಪರಮೇಶ್ವರ್ ಅವರು, ಪಕ್ಕದಲ್ಲೇ ಇದ್ದ ತುಮಕೂರು ಜಿಲ್ಲಾಧಿಕಾರಿ (DC) ಶುಭ ಕಲ್ಯಾಣ್ ಅವರ ಬಳಿ "ವಿಜಯಪುರ ತಂಡ ಗೆಲ್ಲುತ್ತದೆ" ಎಂದು 500 ರೂಪಾಯಿ ಬೆಟ್ಟಿಂಗ್ (ಬಾಜಿ) ಕಟ್ಟಿದ್ದರು.
ಬೆಟ್ಟಿಂಗ್, ಜೂಜಾಟ ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಾದ ರಾಜ್ಯದ ಗೃಹ ಸಚಿವರೇ 'ಬೆಟ್ಟಿಂಗ್' (Betting) ಕಟ್ಟಿ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಬಡ್ಡಿ ಪಂದ್ಯಾವಳಿಯೊಂದರಲ್ಲಿ ಬೆಟ್ಟಿಂಗ್ ಕಟ್ಟಿದ್ದಾಗಿ ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹಾಗೂ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ವಿರುದ್ಧ ಇದೀಗ ಎಫ್‌ಐಆರ್ (FIR) ದಾಖಲಿಸಿ ತನಿಖೆ ನಡೆಸುವಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.
2025ರ ಅಕ್ಟೋಬರ್‌ನಲ್ಲಿ ತುಮಕೂರಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಈ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ದಕ್ಷಿಣ ಕನ್ನಡ ಮತ್ತು ವಿಜಯಪುರ ತಂಡಗಳು ಮುಖಾಮುಖಿಯಾಗಿದ್ದವು.
ಈ ವೇಳೆ ಪಂದ್ಯ ವೀಕ್ಷಿಸಲು ಆಗಮಿಸಿದ್ದ ಗೃಹ ಸಚಿವ ಜಿ. ಪರಮೇಶ್ವರ್ ಅವರು, ಪಕ್ಕದಲ್ಲೇ ಇದ್ದ ತುಮಕೂರು ಜಿಲ್ಲಾಧಿಕಾರಿ (DC) ಶುಭ ಕಲ್ಯಾಣ್ ಅವರ ಬಳಿ "ವಿಜಯಪುರ ತಂಡ ಗೆಲ್ಲುತ್ತದೆ" ಎಂದು 500 ರೂಪಾಯಿ ಬೆಟ್ಟಿಂಗ್ (ಬಾಜಿ) ಕಟ್ಟಿದ್ದರು. ಆದರೆ, ಅಂತಿಮವಾಗಿ ದಕ್ಷಿಣ ಕನ್ನಡ ತಂಡವು 36-26 ಅಂಕಗಳ ಅಂತರದಿಂದ ವಿಜಯಪುರ ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದರಿಂದ ಸಚಿವರು ತಮ್ಮ ಬಾಜಿ ಹಣವನ್ನು ಕಳೆದುಕೊಂಡಿದ್ದರು.
ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದ ಸಚಿವರು!
ಪಂದ್ಯ ಮುಗಿದ ಬಳಿಕ ವಿಜೇತ ತಂಡಕ್ಕೆ ಬಹುಮಾನ ವಿತರಿಸಿ ಭಾಷಣ ಮಾಡಿದ್ದ ಸಚಿವ ಪರಮೇಶ್ವರ್, "ನಾನು 500 ರೂಪಾಯಿ ಕಳೆದುಕೊಂಡು ಬಿಟ್ಟೆ. ವಿಜಯಪುರ ತಂಡ ಗೆಲ್ಲುತ್ತದೆ ಎಂದು ಜಿಲ್ಲಾಧಿಕಾರಿಗಳ ಜೊತೆ ಬೆಟ್ಟಿಂಗ್ ಮಾಡಿಕೊಂಡಿದ್ದೆ. ಆದರೆ ಸೋತೆ" ಎಂದು ವೇದಿಕೆ ಮೇಲೆಯೇ ನಗುನಗುತ್ತಾ ಹೇಳಿಕೊಂಡಿದ್ದರು.
ಗೃಹ ಸಚಿವರ ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. "ಸಾಮಾನ್ಯ ಜನರು ಬೆಟ್ಟಿಂಗ್ ಆಡಿದರೆ ಅಪರಾಧ, ಆದರೆ ಗೃಹ ಸಚಿವರು ಮತ್ತು ಜಿಲ್ಲಾಧಿಕಾರಿಗಳು ಬೆಟ್ಟಿಂಗ್ ಆಡಿದರೆ ಅದು ಕಾನೂನು ಸಮ್ಮತವೇ?" ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಕೋರ್ಟ್ ಮೆಟ್ಟಿಲೇರಿದ್ದ ಪ್ರಕರಣ:
ಸಚಿವರು ಕೇವಲ ತಮಾಷೆಗಾಗಿ ಈ ರೀತಿ ಹೇಳಿದ್ದರೂ, ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಯೇ ಸಾರ್ವಜನಿಕವಾಗಿ ಬೆಟ್ಟಿಂಗ್ ಅನ್ನು ಪ್ರೋತ್ಸಾಹಿಸುವುದು ಅಥವಾ ಅದರಲ್ಲಿ ಭಾಗಿಯಾಗುವುದು ಅಪರಾಧ ಎಂದು ಆಕ್ಷೇಪಿಸಿ, ಎಚ್.ಆರ್. ನಾಗಭೂಷಣ್ ಎಂಬುವರು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.
ಈ ದೂರನ್ನು ವಿಚಾರಣೆ ನಡೆಸಿದ ಬೆಂಗಳೂರಿನ 42ನೇ ಎಸಿಜೆಎಂ (ACJM) ನ್ಯಾಯಾಲಯದ ನ್ಯಾಯಮೂರ್ತಿ ಕೆ.ಎನ್. ಶಿವಕುಮಾರ್ ಅವರು, ಗೃಹ ಸಚಿವರ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ. ಈ ಕುರಿತು ಸೂಕ್ತ ತನಿಖೆ ನಡೆಸಿ ಶೀಘ್ರವೇ ವರದಿ ಸಲ್ಲಿಸುವಂತೆ ತುಮಕೂರಿನ ಕ್ಯಾತ್ಸಂದ್ರ (ಕೂಡಿಗೇಹಳ್ಳಿ) ಪೊಲೀಸ್ ಠಾಣೆಗೆ ನ್ಯಾಯಾಲಯ ಕಟ್ಟುನಿಟ್ಟಿನ ಸೂಚನೆ ನೀಡಿದೆ.

