
ಬೆಂಗಳೂರಿನ ಪಂಚತಾರಾ ಹೋಟೆಲ್ ಈಜುಕೊಳದಲ್ಲಿ ವಿದ್ಯುತ್ ಅವಘಡ: ಜರ್ಮನಿ, ಸ್ಲೋವಾಕಿಯಾ ಪ್ರಜೆಗಳ ದುರ್ಮರಣ
ದುರಂತಕ್ಕೆ ನಿಖರ ಕಾರಣ ಇನ್ನೂ ದೃಢಪಟ್ಟಿಲ್ಲ. ಆದರೆ, ಈಜುಕೊಳದ ನೀರಿನೊಳಗಿನ ದೀಪಗಳನ್ನು ಆನ್ ಮಾಡಿದಾಗ ವಿದ್ಯುತ್ ಪ್ರವಹಿಸಿರಬಹುದು ಎಂದು ಶಂಕಿಸಲಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನ ಪಂಚತಾರಾ ಹೋಟೆಲ್‌ನ ಈಜುಕೊಳದಲ್ಲಿ ಸಂಭವಿಸಿದ ಭೀಕರ ವಿದ್ಯುತ್ ಅವಘಡದಲ್ಲಿ ಇಬ್ಬರು ವಿದೇಶಿ ಪ್ರಜೆಗಳು ಮೃತಪಟ್ಟಿದ್ದಾರೆ. ನಗರದ ಹಲಸೂರು ಪ್ರದೇಶದಲ್ಲಿರುವ ಕಾನ್ರಾಡ್ ಹೋಟೆಲ್‌ನಲ್ಲಿ ಶುಕ್ರವಾರ (ಅಕ್ಟೋಬರ್ 30) ಸಂಜೆ ಈ ದುರ್ಘಟನೆ ನಡೆದಿದೆ. ಈಜುಕೊಳದ ನೀರಿನಲ್ಲಿ ವಿದ್ಯುತ್ ಪ್ರವಹಿಸಿದ ಪರಿಣಾಮ ಜರ್ಮನಿ ಮತ್ತು ಸ್ಲೋವಾಕಿಯಾ ಮೂಲದ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.
ಈಜುಕೊಳದಲ್ಲಿ ವಿದ್ಯುತ್ ಆಘಾತಕ್ಕೊಳಗಾದವರನ್ನು ರಕ್ಷಿಸಲು ಮುಂದಾದ ಅಮೆರಿಕದ ಪ್ರಜೆ ಹಾಗೂ ಹೋಟೆಲ್‌ನ ಭಾರತೀಯ ಸಿಬ್ಬಂದಿಗೂ ಗಾಯಗಳಾಗಿವೆ. ಇಬ್ಬರನ್ನೂ ತಕ್ಷಣ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ತಿಳಿಸಿದ್ದಾರೆ. ಈ ಘಟನೆಯ ಬಗ್ಗೆ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೋಟೆಲ್‌ನ ಸುರಕ್ಷತಾ ವ್ಯವಸ್ಥೆ ಹಾಗೂ ನಿರ್ವಹಣೆಯ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಮೃತರ ಗುರುತು ಪತ್ತೆ
ಮೃತಪಟ್ಟವರನ್ನು ಜರ್ಮನಿ ಮೂಲದ ಅಲೆಕ್ಸಾಂಡರ್ ಮ್ಯಾಕ್ಸಿಮಿಲಿಯನ್ ಥೈಸ್ (57) ಮತ್ತು ಸ್ಲೋವಾಕಿಯಾ ಮೂಲದ ಜುರಾಜ್ ಹೋರ್ವಾಟ್ (45) ಎಂದು ಗುರುತಿಸಲಾಗಿದೆ. ಅಲೆಕ್ಸಾಂಡರ್ ಅವರು ಜರ್ಮನಿಯ ಲುಫ್ತಾನ್ಸಾ ವಿಮಾನಯಾನ ಸಂಸ್ಥೆಯ ಸಿಬ್ಬಂದಿಯಾಗಿದ್ದು, ಬೆಂಗಳೂರಿನಲ್ಲಿ ವಿಮಾನಯಾನದ ನಡುವಿನ ಬಿಡುವಿನಲ್ಲಿ ಹೋಟೆಲ್‌ನಲ್ಲಿ ತಂಗಿದ್ದರು. ಮತ್ತೊಬ್ಬ ಮೃತ ಜುರಾಜ್ ಹೋರ್ವಾಟ್ ಅವರು ಐಬಿಎಂ ಸಂಸ್ಥೆಯಲ್ಲಿ ಯೋಜನಾ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ರಕ್ಷಣೆಗೆ ಧಾವಿಸಿದವರಿಗೂ ವಿದ್ಯುತ್ ಆಘಾತ
ಸಂಕಷ್ಟದಲ್ಲಿದ್ದವರನ್ನು ರಕ್ಷಿಸಲು ಯತ್ನಿಸಿದ 41 ವರ್ಷದ ಅಮೆರಿಕನ್ ಪ್ರಜೆ ಮ್ಯಾಥ್ಯೂ ಡಿಸಾಂಟಿಸ್ ಹಾಗೂ 28 ವರ್ಷದ ಹೋಟೆಲ್ ಸಿಬ್ಬಂದಿ ರಾಹುಲ್ ತಿವಾರಿ ಅವರಿಗೂ ವಿದ್ಯುತ್ ತಗುಲಿದೆ. ಮ್ಯಾಥ್ಯೂ ಅವರು ಅದೇ ಹೋಟೆಲ್‌ನಲ್ಲಿ ಅತಿಥಿಯಾಗಿದ್ದರೆ, ರಾಹುಲ್ ಈಜುಕೊಳದ ನಿರ್ವಹಣೆ ಹಾಗೂ ಜೀವರಕ್ಷಕ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಸದ್ಯ ಇಬ್ಬರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.
ನೀರಿನೊಳಗಿನ ದೀಪಗಳಿಂದ ವಿದ್ಯುತ್ ಪ್ರವಹಿಸಿತೇ?
ದುರಂತಕ್ಕೆ ನಿಖರ ಕಾರಣ ಇನ್ನೂ ದೃಢಪಟ್ಟಿಲ್ಲ. ಆದರೆ, ಈಜುಕೊಳದ ನೀರಿನೊಳಗಿನ ದೀಪಗಳನ್ನು ಆನ್ ಮಾಡಿದಾಗ ವಿದ್ಯುತ್ ಪ್ರವಹಿಸಿರಬಹುದು ಎಂದು ಶಂಕಿಸಲಾಗಿದೆ. ಘಟನೆ ನಡೆದಾಗ ಲುಫ್ತಾನ್ಸಾ ವಿಮಾನಯಾನ ಸಂಸ್ಥೆಯ ಹಲವು ಸಿಬ್ಬಂದಿ ಈಜುಕೊಳದಲ್ಲಿದ್ದರು ಎನ್ನಲಾಗಿದೆ. ತಾಂತ್ರಿಕ ದೋಷ ಅಥವಾ ನಿರ್ವಹಣಾ ಲೋಪವೇ ಇದಕ್ಕೆ ಕಾರಣವಾಗಿರಬಹುದೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಸಿಬ್ಬಂದಿ ಸಾವನ್ನು ಖಚಿತಪಡಿಸಿದ ಲುಫ್ತಾನ್ಸಾ
ತಮ್ಮ ಸಿಬ್ಬಂದಿಯೊಬ್ಬರು ಮೃತಪಟ್ಟಿರುವುದನ್ನು ಲುಫ್ತಾನ್ಸಾ ವಿಮಾನಯಾನ ಸಂಸ್ಥೆ ಖಚಿತಪಡಿಸಿದ್ದು, ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದೆ. ಆಘಾತಕ್ಕೊಳಗಾಗಿರುವ ಇತರ ಸಿಬ್ಬಂದಿಗೆ ಮಾನಸಿಕ ಬೆಂಬಲ ಒದಗಿಸುವ ವ್ಯವಸ್ಥೆಯನ್ನೂ ಸಂಸ್ಥೆ ಮಾಡಿದೆ.
