
ಬೆಂಗಳೂರಿನ ಯಶವಂತಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ಬಾಲ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ 19 ಮಕ್ಕಳು ಸೇರಿದಂತೆ 29 ಮಕ್ಕಳನ್ನು ರಕ್ಷಿಸಿದ್ದಾರೆ.
ಬೆಂಗಳೂರಲ್ಲಿ ಬಾಲ ಕಾರ್ಮಿಕರನ್ನು ಬಳಸುವ ವಿರುದ್ಧ ಕಾರ್ಯಾಚರಣೆ: 29 ಮಕ್ಕಳು ರಕ್ಷಣೆ
ಮಕ್ಕಳು ಎಷ್ಟು ದಿನಗಳಿಂದ ಅಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದರು, ಅವರು ಮಾರುಕಟ್ಟೆಗೆ ಹೇಗೆ ಬಂದರು ಹಾಗೂ ಅವರನ್ನು ಕೆಲಸಕ್ಕೆ ಕರೆತಂದವರು ಅಥವಾ ನೇಮಿಸಿಕೊಂಡವರು ಯಾರು ಎಂಬ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರಿನ ಯಶವಂತಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ಬಾಲ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ 19 ಮಕ್ಕಳು ಸೇರಿದಂತೆ ಒಟ್ಟು 29 ಮಕ್ಕಳನ್ನು ಕಾರ್ಯಾಚರಣೆ ನಡೆಸಿ ರಕ್ಷಿಸಲಾಗಿದೆ. ಮಕ್ಕಳನ್ನು ಕೆಲಸಕ್ಕೆ ಬಳಸಿಕೊಂಡ ಆರೋಪದಡಿ ಅಂಗಡಿ ಮಾಲೀಕರ ವಿರುದ್ಧ ಪೊಲೀಸರು ನಾಲ್ಕು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸೂಚನೆ ಮೇರೆಗೆ ಮಂಗಳವಾರ ಈ ಕಾರ್ಯಾಚರಣೆ ನಡೆಸಲಾಗಿದೆ. ಶಿವಕುಮಾರ್ ಅವರು ಮಂಗಳವಾರ ಎಪಿಎಂಸಿ ಮಾರುಕಟ್ಟೆಗೆ ಭೇಟಿ ನೀಡಿ ರೈತರು, ಕಾರ್ಮಿಕರು ಹಾಗೂ ವ್ಯಾಪಾರಿಗಳೊಂದಿಗೆ ಸಂವಾದ ನಡೆಸಿದ್ದರು. ಈ ವೇಳೆ ಕೆಲವು ಅಂಗಡಿಗಳಲ್ಲಿ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಸಾರ್ವಜನಿಕರು ಮಾಹಿತಿ ನೀಡಿದ್ದರು. ಬಳಿಕ ಅಧಿಕಾರಿಗಳಿಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.
ಬಿಹಾರದಿಂದ 13 ಮಕ್ಕಳು, ಪಶ್ಚಿಮ ಬಂಗಾಳ-ಉತ್ತರ ಪ್ರದೇಶದಿಂದ ತಲಾ ಇಬ್ಬರು
ಯಶವಂತಪುರ ಎಪಿಎಂಸಿ ಮಾರುಕಟ್ಟೆಯಿಂದ ರಕ್ಷಿಸಲಾದ 19 ಮಕ್ಕಳು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಇವರ ಪೈಕಿ 13 ಮಕ್ಕಳು ಬಿಹಾರ, ತಲಾ ಇಬ್ಬರು ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶ, ತಲಾ ಒಬ್ಬರು ರಾಜಸ್ಥಾನ ಹಾಗೂ ಕರ್ನಾಟಕದವರು. ಬಿಹಾರದಿಂದ ಬಂದ 13 ಮಕ್ಕಳಲ್ಲಿ 12 ಬಾಲಕರು ಹಾಗೂ ಒಬ್ಬ ಬಾಲಕಿ ಇದ್ದರು.
ಉತ್ತರ ವಿಭಾಗದ ಡಿಸಿಪಿ ಅವರ ಮೇಲ್ವಿಚಾರಣೆಯಲ್ಲಿ ಪೊಲೀಸ್ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಐದು ತಂಡಗಳನ್ನು ರಚಿಸಿ ಮಾರುಕಟ್ಟೆಯಲ್ಲಿ ಪರಿಶೀಲನೆ ನಡೆಸಲಾಯಿತು. ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆ ವ್ಯಾಪ್ತಿಯ ಅಂಗಡಿಗಳಲ್ಲಿ ತಪಾಸಣೆ ನಡೆಸಿ ಮಕ್ಕಳನ್ನು ರಕ್ಷಿಸಲಾಗಿದೆ.
ಅಂಗಡಿ ಮಾಲೀಕರ ವಿರುದ್ಧ ಪ್ರಕರಣ ದಾಖಲು
ಮಕ್ಕಳನ್ನು ಕೆಲಸಕ್ಕೆ ಬಳಸಿಕೊಂಡ ಆರೋಪದಡಿ ಅಂಗಡಿ ಮಾಲೀಕರ ವಿರುದ್ಧ ಬಾಲ ಕಾರ್ಮಿಕರ ನಿಷೇಧ ಮತ್ತು ನಿಯಂತ್ರಣ ಕಾಯ್ದೆ ಹಾಗೂ ಬಾಲ ನ್ಯಾಯ ಕಾಯ್ದೆಯಡಿ ನಾಲ್ಕು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಮುಖ್ಯವಾಗಿ ಸಣ್ಣ ತರಕಾರಿ, ಈರುಳ್ಳಿ ಅಂಗಡಿಗಳು ಸೇರಿದಂತೆ ಇತರೆ ಸಣ್ಣಪುಟ್ಟ ಅಂಗಡಿಗಳಲ್ಲಿ ಮಕ್ಕಳು ಕೆಲಸ ಮಾಡುತ್ತಿರುವುದು ಪತ್ತೆಯಾಗಿದೆ.
ಮಕ್ಕಳು ಎಷ್ಟು ದಿನಗಳಿಂದ ಅಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದರು, ಅವರು ಮಾರುಕಟ್ಟೆಗೆ ಹೇಗೆ ಬಂದರು ಹಾಗೂ ಅವರನ್ನು ಕೆಲಸಕ್ಕೆ ಕರೆತಂದವರು ಅಥವಾ ನೇಮಿಸಿಕೊಂಡವರು ಯಾರು ಎಂಬ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಮಿಕ ಇಲಾಖೆಯೂ ಬಾಲ ಮತ್ತು ಕಿಶೋರ ಕಾರ್ಮಿಕರ ನಿಷೇಧ ಹಾಗೂ ನಿಯಂತ್ರಣ ಕಾಯ್ದೆ, 1986ರ ಅಡಿಯಲ್ಲಿ ಅಂಗಡಿ ಮಾಲೀಕರ ವಿರುದ್ಧ ಐದು ಪ್ರಕರಣಗಳನ್ನು ದಾಖಲಿಸಿದೆ.
ರಸ್ತೆಯ ಬದಿಯಲ್ಲಿ ಕೆಲಸ ಮಾಡುತ್ತಿದ್ದ 10 ಮಕ್ಕಳು ರಕ್ಷಣೆ
ಇದೇ ವೇಳೆ, ರಸ್ತೆಯ ಬದಿಯಲ್ಲಿ ಕೆಲಸ ಮಾಡುತ್ತಿದ್ದ ಮತ್ತಷ್ಟು 10 ಮಕ್ಕಳನ್ನೂ ಅಧಿಕಾರಿಗಳು ರಕ್ಷಿಸಿದ್ದಾರೆ. ಅವರನ್ನು ಹೆಚ್ಚಿನ ಕ್ರಮಕ್ಕಾಗಿ ಬೆಂಗಳೂರು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಲಾಗಿದೆ. ಈ ಮಕ್ಕಳು ಹೇಗೆ ಕೆಲಸಕ್ಕೆ ಬಂದರು ಹಾಗೂ ಅವರನ್ನು ಯಾರು ಕೆಲಸಕ್ಕೆ ನೇಮಿಸಿಕೊಂಡಿದ್ದರು ಎಂಬುದರ ಕುರಿತು ತನಿಖೆ ನಡೆಯುತ್ತಿದೆ.

