ಬೈಕ್ ಟ್ಯಾಕ್ಸಿಗೆ ಸುಪ್ರೀಂ ಕೋರ್ಟ್ ಸಮ್ಮತಿ: ಆಟೋ ಚಾಲಕರ ತೀವ್ರ ಅಸಮಾಧಾನ, ಸಮಾನ ನಿಯಮ ಜಾರಿಗೆ ಆಗ್ರಹ
ಬೈಕ್ ಟ್ಯಾಕ್ಸಿಗಳ ಸಂಖ್ಯೆ ಹೆಚ್ಚಾದ ಬಳಿಕ ನಗರದ ಪ್ರಮುಖ ವಾಣಿಜ್ಯ ಪ್ರದೇಶಗಳಾದ ರಿಚ್ಮಂಡ್ ಟೌನ್, ರಿಚ್ಮಂಡ್ ಸರ್ಕಲ್, ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣ ಹಾಗೂ ಕಬ್ಬನ್ ಪಾರ್ಕ್ ಸುತ್ತಮುತ್ತ ಆಟೋ ಚಾಲಕರು ಗ್ರಾಹಕರಿಗಾಗಿ ಗಂಟೆಗಟ್ಟಲೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ.
ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳನ್ನು ಮುಂದುವರಿಸಲು ಸುಪ್ರೀಂ ಕೋರ್ಟ್ ಹಸಿರು ನಿಶಾನೆ ತೋರಿರುವ ಬೆನ್ನಲ್ಲೇ ರಾಜಧಾನಿ ಬೆಂಗಳೂರಿನ ಆಟೋ ಚಾಲಕರ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಓಲಾ, ಊಬರ್ ಮತ್ತು ರಾಪಿಡೋದಂತಹ ಅಗ್ರಿಗೇಟರ್ ಸಂಸ್ಥೆಗಳಿಗೆ ಬೈಕ್ ಟ್ಯಾಕ್ಸಿ ಸೇವೆ ಒದಗಿಸಲು ಅವಕಾಶ ದೊರೆತಿರುವುದು ತಮ್ಮ ದೈನಂದಿನ ಆದಾಯ ಹಾಗೂ ಜೀವನೋಪಾಯಕ್ಕೆ ನೇರ ಪೆಟ್ಟು ನೀಡಲಿದೆ ಎಂದು ಚಾಲಕರು ಆತಂಕ ಹೊರಹಾಕಿದ್ದಾರೆ. ಸಾಲ ಮಾಡಿ ಆಟೋ ಖರೀದಿಸಿ ಪರ್ಮಿಟ್, ವಿಮೆ, ತೆರಿಗೆ ಹಾಗೂ ಫಿಟ್ನೆಸ್ ಶುಲ್ಕಗಳನ್ನು ಪಾವತಿಸುತ್ತಿರುವ ತಮಗೆ, ಖಾಸಗಿ ಬಳಕೆಯ ವೈಟ್ ಬೋರ್ಡ್ ದ್ವಿಚಕ್ರ ವಾಹನಗಳ ವಾಣಿಜ್ಯ ಬಳಕೆಯಿಂದ ತೀವ್ರ ಅನ್ಯಾಯವಾಗುತ್ತಿದೆ ಎಂಬುದು ಚಾಲಕರ ಪ್ರಮುಖ ಆರೋಪವಾಗಿದೆ.
ವೈಟ್ ಬೋರ್ಡ್ ಬೈಕ್ಗಳ ವಾಣಿಜ್ಯ ಬಳಕೆಗೆ ವಿರೋಧ:
ಬೈಕ್ಗಳನ್ನು ವೈಯಕ್ತಿಕ ಪ್ರಯಾಣಕ್ಕೆ ಬಳಸುವುದಕ್ಕೂ, ವಾಣಿಜ್ಯ ಉದ್ದೇಶದ ಟ್ಯಾಕ್ಸಿಯಾಗಿ ಓಡಿಸುವುದಕ್ಕೂ ಸ್ಪಷ್ಟ ವ್ಯತ್ಯಾಸವಿದೆ ಎಂದು ಆಟೋ ಚಾಲಕರು ಪ್ರತಿಪಾದಿಸಿದ್ದಾರೆ. ಕಂಪನಿಗಳಲ್ಲಿ ಕೆಲಸ ಮಾಡುವವರು ತಮ್ಮ ಓಡಾಟಕ್ಕೆ ಬೈಕ್ ಬಳಸುವುದು ಸಹಜ, ಆದರೆ ಬೈಕ್ ಟ್ಯಾಕ್ಸಿಗೆ ಅವಕಾಶ ನೀಡಿರುವುದು ಸರಿಯಲ್ಲ ಎಂದು ಆಟೋ ಚಾಲಕ ಚಂದ್ರ ನಾಯಕ್ ಕೆ. ಅಭಿಪ್ರಾಯಪಟ್ಟಿದ್ದಾರೆ. ಸಾಲ ಮಾಡಿ ಆಟೋ ಮತ್ತು ಟ್ಯಾಕ್ಸಿ ಓಡಿಸುತ್ತಾ ಬದುಕು ಕಟ್ಟಿಕೊಳ್ಳುತ್ತಿರುವವರ ಜೀವನದ ಬಗ್ಗೆಯೂ ಸರ್ಕಾರ ಮತ್ತು ನ್ಯಾಯಾಲಯಗಳು ಗಂಭೀರವಾಗಿ ಯೋಚಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಮತ್ತೋರ್ವ ಚಾಲಕ ಕೆ.ಎಸ್. ರೇವಣ್ಣ ಮಾತನಾಡಿ, ಬೈಕ್ ಟ್ಯಾಕ್ಸಿ ಸೇವೆಗೆ ತಮ್ಮ ವಿರೋಧವಿಲ್ಲ, ಆದರೆ ಆಟೋ ಚಾಲಕರಿಗೆ ಅನ್ವಯವಾಗುವಂತೆ ತೆರಿಗೆ, ವಿಮೆ ಮತ್ತು ಪರ್ಮಿಟ್ ಪಡೆದು ಯೆಲ್ಲೋ ಬೋರ್ಡ್ನಲ್ಲಿ ವಾಹನ ಚಲಾಯಿಸಲಿ. ವೈಟ್ ಬೋರ್ಡ್ನಲ್ಲಿ ಟ್ಯಾಕ್ಸಿ ಓಡಿಸುವುದು ಕಾನೂನುಬಾಹಿರ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಗ್ರಾಹಕರಿಲ್ಲದೆ ಕಾಯುವ ಪರಿಸ್ಥಿತಿ:
ಬೈಕ್ ಟ್ಯಾಕ್ಸಿಗಳ ಸಂಖ್ಯೆ ಹೆಚ್ಚಾದ ಬಳಿಕ ನಗರದ ಪ್ರಮುಖ ವಾಣಿಜ್ಯ ಪ್ರದೇಶಗಳಾದ ರಿಚ್ಮಂಡ್ ಟೌನ್, ರಿಚ್ಮಂಡ್ ಸರ್ಕಲ್, ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣ ಹಾಗೂ ಕಬ್ಬನ್ ಪಾರ್ಕ್ ಸುತ್ತಮುತ್ತ ಆಟೋ ಚಾಲಕರು ಗ್ರಾಹಕರಿಗಾಗಿ ಗಂಟೆಗಟ್ಟಲೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಮೂಲತಃ ಮಂಡ್ಯದವರಾಗಿ ಮಲ್ಲೇಶ್ವರದಲ್ಲಿ ನೆಲೆಸಿರುವ ಆಟೋ ಚಾಲಕ ಸಿ.ಎಸ್. ಗಂಗಾಧರಗೌಡ ತಮ್ಮ ಸಂಕಷ್ಟ ತೋಡಿಕೊಂಡಿದ್ದು, ಬಂಡವಾಳ ಹೂಡಿ ಆಟೋ ಖರೀದಿಸಿ ಎಲ್ಲಾ ಸರ್ಕಾರಿ ಶುಲ್ಕಗಳನ್ನು ಕಟ್ಟುತ್ತಿದ್ದೇವೆ. ಆದರೆ ಕೆಲವರು ಕಚೇರಿಗೆ ಹೋಗುವಾಗ ರಾಪಿಡೋ ಆ್ಯಪ್ ಆನ್ ಮಾಡಿಕೊಂಡು ಗ್ರಾಹಕರನ್ನು ಕರೆದೊಯ್ಯುತ್ತಿರುವುದರಿಂದ ಪೂರ್ಣಾವಧಿ ಆಟೋ ಚಾಲಕರಿಗೆ ಬಾಡಿಗೆ ಸಿಗದಂತಾಗಿದೆ ಎಂದು ತಿಳಿಸಿದ್ದಾರೆ.
ಸಮಾನ ಕಾನೂನು ಮತ್ತು ಮೀಟರ್ ದರದ ಚರ್ಚೆ:
ವಾಣಿಜ್ಯ ಉದ್ದೇಶಕ್ಕೆ ಬಳಸುವ ಪ್ರತಿಯೊಂದು ವಾಹನಕ್ಕೂ ಪರ್ಮಿಟ್, ಆರ್ಸಿ ಬುಕ್, ವಿಮೆ, ಸಮವಸ್ತ್ರ ಮತ್ತು ಮೀಟರ್ ವ್ಯವಸ್ಥೆ ಕಡ್ಡಾಯವಾಗಿರಬೇಕು ಎಂದು ಆಟೋ ಚಾಲಕ ಎಸ್. ನಾಗರಾಜ್ ಆಗ್ರಹಿಸಿದ್ದಾರೆ. ಕಾನೂನಿನ ಚೌಕಟ್ಟಿನಲ್ಲಿ ಯೆಲ್ಲೋ ಬೋರ್ಡ್ ಅಳವಡಿಸಿಕೊಂಡು ಎಲ್ಲಾ ದಾಖಲೆಗಳೊಂದಿಗೆ ಬೈಕ್ ಟ್ಯಾಕ್ಸಿ ಓಡಿಸಿದರೆ ತಮ್ಮ ಅಭ್ಯಂತರವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ, ಆಟೋ ಚಾಲಕರು ಮೀಟರ್ಗಿಂತ ಹೆಚ್ಚು ಬಾಡಿಗೆ ವಸೂಲಿ ಮಾಡುತ್ತಾರೆ ಎಂಬ ಆರೋಪಕ್ಕೆ ಚಾಲಕ ಶಂಕರ್ ಜಿ. ತಿರುಗೇಟು ನೀಡಿದ್ದಾರೆ. ಎಲೆಕ್ಟ್ರಾನಿಕ್ ಸಿಟಿಯಿಂದ ಯುಬಿ ಸಿಟಿಗೆ ಕೆಲಸಕ್ಕೆ ಹೋಗುವವರು ಬರುವಾಗ ಪಾರ್ಟ್ಟೈಮ್ ರೀತಿಯಲ್ಲಿ ಬೈಕ್ ಟ್ಯಾಕ್ಸಿ ಓಡಿಸುತ್ತಿದ್ದಾರೆ. ಒಂದು ಕಿಲೋಮೀಟರ್ ದೂರದ ಪಿಕ್ಅಪ್ಗೆ ಹೋದರೂ ಕೊನೆಯ ಕ್ಷಣದಲ್ಲಿ ಗ್ರಾಹಕರು ರೈಡ್ ರದ್ದುಗೊಳಿಸುವುದರಿಂದ ಆಟೋ ಚಾಲಕರ ಸಮಯ ಮತ್ತು ಇಂಧನ ವ್ಯರ್ಥವಾಗುತ್ತಿದೆ. ಆಟೋ ಚಾಲಕರೇ ದುಪ್ಪಟ್ಟು ದರ ಪಡೆಯುತ್ತಾರೆ ಎಂದು ಬಿಂಬಿಸುವುದು ಸರಿಯಲ್ಲ, ಬೈಕ್ ಟ್ಯಾಕ್ಸಿ ಆ್ಯಪ್ಗಳ ದರಗಳನ್ನೂ ಪರಿಶೀಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಸರ್ಕಾರದ ಮುಂದಿರುವ ಸವಾಲು:
ಸುಪ್ರೀಂ ಕೋರ್ಟ್ ತೀರ್ಪಿನಿಂದ ಪ್ರಯಾಣಿಕರಿಗೆ ಕಡಿಮೆ ದರದಲ್ಲಿ ವೇಗದ ಸಾರಿಗೆ ಸೌಲಭ್ಯ ದೊರೆಯುವ ನಿರೀಕ್ಷೆಯಿದ್ದರೂ, ಲಕ್ಷಾಂತರ ಆಟೋ ಚಾಲಕರ ಉದ್ಯೋಗ ಭದ್ರತೆ ಮತ್ತು ಹೂಡಿಕೆಗೆ ಧಕ್ಕೆಯಾಗುವ ಆತಂಕ ಎದುರಾಗಿದೆ. ಸಾರ್ವಜನಿಕರಿಗೆ ಕೈಗೆಟುಕುವ ಸಾರಿಗೆ ವ್ಯವಸ್ಥೆ ಕಲ್ಪಿಸುವುದರ ಜೊತೆಗೆ, ಸಾರಿಗೆ ನಿಯಮಗಳಲ್ಲಿ ಸಮಾನತೆ ತಂದು ಆಟೋ ಚಾಲಕರ ಹಿತಾಸಕ್ತಿ ಕಾಪಾಡುವ ಮಹತ್ವದ ಜವಾಬ್ದಾರಿ ಇದೀಗ ರಾಜ್ಯ ಸರ್ಕಾರದ ಮೇಲಿದೆ.
