ಕಬ್ಬಿಗೆ 5,500 ರೂ. ಬೆಂಬಲ ಬೆಲೆಗೆ ಆಗ್ರಹ: ಜೈಲ್ ಭರೋ ಚಳವಳಿಗೆ ಮುಂದಾದ ರೈತರು
x

ಕಬ್ಬಿಗೆ 5,500 ರೂ. ಬೆಂಬಲ ಬೆಲೆಗೆ ಆಗ್ರಹ: ಜೈಲ್ ಭರೋ ಚಳವಳಿಗೆ ಮುಂದಾದ ರೈತರು

ಹಲವು ಹಳ್ಳಿಗಳ ರೈತರು ತಮ್ಮ ಹೊಲ-ಗದ್ದೆಗಳನ್ನು ಬಿಟ್ಟು, ಸುಡುಬಿಸಿಲು ಮತ್ತು ರಾತ್ರಿಯ ಚಳಿಯನ್ನು ಲೆಕ್ಕಿಸದೆ ಗುರ್ಲಾಪುರದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ.


Click the Play button to hear this message in audio format

ರಾಜ್ಯದ ಪ್ರಮುಖ ಸಕ್ಕರೆ ಉತ್ಪಾದನಾ ಜಿಲ್ಲೆಯಾದ ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಆಕ್ರೋಶ ಕಟ್ಟೆಯೊಡೆದಿದೆ. ಪ್ರತಿ ಟನ್ ಕಬ್ಬಿಗೆ ವೈಜ್ಞಾನಿಕವಾಗಿ ಕನಿಷ್ಠ 5,500 ರೂಪಾಯಿ ನಿಗದಿಪಡಿಸಬೇಕೆಂದು ಆಗ್ರಹಿಸಿ ಅನ್ನದಾತರು ನಡೆಸುತ್ತಿರುವ ಹೋರಾಟವೀಗ ಅಂತಿಮ ಘಟ್ಟಕ್ಕೆ ತಲುಪಿದೆ. ಕಳೆದ ಒಂಬತ್ತು ದಿನಗಳಿಂದ ಸತತವಾಗಿ ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತದಿಂದ ಯಾವುದೇ ಸಕಾರಾತ್ಮಕ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ, ರೈತ ಸಮುದಾಯವು ನೇರವಾಗಿ ಸರ್ಕಾರದ ವಿರುದ್ಧ ಸಮರ ಸಾರಿದ್ದು, ಬೃಹತ್ ಜೈಲ್ ಭರೋ ಚಳವಳಿಗೆ ಸಜ್ಜಾಗಿದೆ. ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸುತ್ತಿರುವ ರೈತರು ಹಿಂಡಲಗಾ ಕೇಂದ್ರ ಕಾರಾಗೃಹದತ್ತ ಹೆಜ್ಜೆ ಹಾಕುತ್ತಿರುವುದು ಇಡೀ ಜಿಲ್ಲೆಯಲ್ಲಿ ತೀವ್ರ ಬಿಗುವಿನ ವಾತಾವರಣವನ್ನು ಸೃಷ್ಟಿಸಿದೆ.

ಮೂಡಲಗಿ ತಾಲೂಕಿನ ಗುರ್ಲಾಪುರ ಗ್ರಾಮವು ಪ್ರಸ್ತುತ ಕಬ್ಬು ಬೆಳೆಗಾರರ ಹೋರಾಟದ ಪ್ರಮುಖ ನೆಲೆಯಾಗಿ ಮಾರ್ಪಟ್ಟಿದೆ. ಕಳೆದ 9 ದಿನಗಳಿಂದ ಹಲವು ಹಳ್ಳಿಗಳ ರೈತರು ತಮ್ಮ ಹೊಲ-ಗದ್ದೆಗಳನ್ನು ಬಿಟ್ಟು, ಸುಡುಬಿಸಿಲು ಮತ್ತು ರಾತ್ರಿಯ ಚಳಿಯನ್ನು ಲೆಕ್ಕಿಸದೆ ಗುರ್ಲಾಪುರದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ.

ಕಬ್ಬು ಕಟಾವು ಹಂಗಾಮು ಆರಂಭವಾಗಿದ್ದರೂ, ಬೆಲೆ ನಿಗದಿಯಾಗದೆ ಕಾರ್ಖಾನೆಗಳಿಗೆ ಕಬ್ಬು ಕಳುಹಿಸುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ. ಪ್ರತಿಭಟನಾ ಸ್ಥಳದಲ್ಲಿ ರೈತರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿ "ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆಗಳ ಮಾಲೀಕರು ಶಾಮೀಲಾಗಿ ರೈತರ ರಕ್ತ ಹೀರುತ್ತಿದ್ದಾರೆ. ಬೆಲೆ ನಿಗದಿಯಾಗುವವರೆಗೂ ಒಂದೇ ಒಂದು ಕಬ್ಬಿನ ಜಲ್ಲೆಯನ್ನು ಕಾರ್ಖಾನೆ ಪ್ರವೇಶಿಸಲು ಬಿಡುವುದಿಲ್ಲ" ಎಂದು ಕಟುವಾಗಿ ಎಚ್ಚರಿಸಿದ್ದಾರೆ.

ಗುರ್ಲಾಪುರದಿಂದ ಹಿಂಡಲಗಾ ಜೈಲಿನವರೆಗೆ ಬೃಹತ್ ರ‍್ಯಾಲಿ

ಸರ್ಕಾರದ ಮೊಂಡುತನ ಹಾಗೂ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ, ಪ್ರತಿಭಟನೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ರೈತ ಸಂಘಟನೆಗಳು ತೀರ್ಮಾನಿಸಿವೆ. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ ಮತ್ತು ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ಅವರ ನೇತೃತ್ವದಲ್ಲಿ ಗುರ್ಲಾಪುರದ ಪ್ರತಿಭಟನಾ ಸ್ಥಳದಿಂದ ಐತಿಹಾಸಿಕ ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗೃಹದವರೆಗೆ ಬೃಹತ್ ರ‍್ಯಾಲಿಯನ್ನು ಆಯೋಜಿಸಲಾಗಿದೆ. ಸಾವಿರಾರು ಟ್ರ್ಯಾಕ್ಟರ್‌ಗಳು, ಲಾರಿಗಳು, ಎತ್ತಿನ ಬಂಡಿಗಳು ಮತ್ತು ಬೈಕ್‌ಗಳ ಮೂಲಕ ರೈತರು ಬೆಳಗಾವಿ ನಗರವನ್ನು ಪ್ರವೇಶಿಸಲು ಸಿದ್ಧತೆ ನಡೆಸಿದ್ದಾರೆ. ಕಾರವಾರ, ಧಾರವಾಡ, ಬಾಗಲಕೋಟೆ, ವಿಜಯಪುರ, ಗದಗ ಸೇರಿದಂತೆ ಇತರೆ ಜಿಲ್ಲೆಗಳಿಂದ ರೈತರು ಬೆಳಗಾವಿಯತ್ತ ಧಾವಿಸುತ್ತಿದ್ದಾರೆ. ಕಾರವಾರ ಮತ್ತು ಧಾರವಾಡ ಭಾಗದಿಂದ ನೂರಾರು ವಾಹನಗಳಲ್ಲಿ ಆಗಮಿಸಿರುವ ರೈತರು ಬೆಳಗಾವಿ ಗಡಿಯಲ್ಲಿ ಮೊಕ್ಕಾಂ ಹೂಡಿದ್ದಾರೆ.

ರೈತ ಮುಖಂಡ ಚೂನಪ್ಪ ಪೂಜೇರಿ ಅವರ ಕಟು ಎಚ್ಚರಿಕೆ

ಹೋರಾಟದ ನೇತೃತ್ವ ವಹಿಸಿರುವ ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ, ಸರ್ಕಾರ ಮತ್ತು ಆಡಳಿತ ಯಂತ್ರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಶಾಂತಿಯುತವಾಗಿ ಜೈಲ್ ಭರೋ ಚಳವಳಿ ಘೋಷಿಸಿದ್ದೇವೆ. ಜೈಲಿಗೆ ಹೋಗಲು ರಾಜ್ಯದ ಲಕ್ಷಾಂತರ ರೈತರು ಸಿದ್ಧರಾಗಿದ್ದಾರೆ. ನಮ್ಮ ಹೋರಾಟವನ್ನು ಹತ್ತಿಕ್ಕಲು ಪೊಲೀಸರು ಯಾವುದೇ ಸುಳ್ಳು ಮೊಕದ್ದಮೆಗಳನ್ನು ದಾಖಲಿಸಿದರೂ ನಾವು ಜಗ್ಗುವುದಿಲ್ಲ, ಬಗ್ಗುವುದಿಲ್ಲ. ಎಲ್ಲರೂ ಜೈಲು ತುಂಬಲು ಸಿದ್ಧರಾಗಿಯೇ ಬಂದಿದ್ದೇವೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಕಳೆದ ಒಂಬತ್ತು ದಿನಗಳಿಂದ ಅನ್ನದಾತರು ರಸ್ತೆಯಲ್ಲಿ ಕುಳಿತು ಕಣ್ಣೀರು ಹಾಕುತ್ತಿದ್ದರೂ, ಈವರೆಗೂ ಜಿಲ್ಲಾಧಿಕಾರಿಯಾಗಲಿ ಅಥವಾ ಸರ್ಕಾರದ ಯಾವುದೇ ಸಚಿವರಾಗಲಿ ಸ್ಥಳಕ್ಕೆ ಬಂದು ನಮ್ಮ ಅಹವಾಲು ಕೇಳಿಲ್ಲ. ಈ ಸರ್ಕಾರ ಸಂಪೂರ್ಣ ಕಿವುಡಾಗಿದೆ. ಮುಖ್ಯಮಂತ್ರಿಗಳು ತಕ್ಷಣವೇ ಮಧ್ಯಪ್ರವೇಶಿಸಿ ಕಬ್ಬಿನ ನ್ಯಾಯಯುತ ಬೆಲೆ ಘೋಷಣೆ ಮಾಡಬೇಕು. ರೈತರ ಸಂಕಷ್ಟಕ್ಕೆ ಸ್ಪಂದಿಸಲು ಸಾಧ್ಯವಾಗದಿದ್ದರೆ ಮುಖ್ಯಮಂತ್ರಿಗಳು ತಮ್ಮ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಲಿ" ಎಂದು ಕಿಡಿಕಾರಿದ್ದಾರೆ.

"ಈ ವರ್ಷ ಮಳೆಯ ಕೊರತೆಯಿಂದಾಗಿ ರಾಜ್ಯದಲ್ಲಿ ಸಕ್ಕರೆ ಉತ್ಪಾದನೆ ಅರ್ಧಕ್ಕರ್ಧ ಕುಸಿದಿದೆ. ಬೇಡಿಕೆ ಹೆಚ್ಚಿರುವುದರಿಂದ ಮಾರುಕಟ್ಟೆಯಲ್ಲಿ ಸಕ್ಕರೆ ದರ ಪ್ರತಿ ಕೆ.ಜಿಗೆ 54 ರೂಪಾಯಿಗೆ ಏರಿಕೆಯಾಗಿದೆ. ಮಾರುಕಟ್ಟೆಯ ಈ ಸ್ಥಿತಿಗತಿಯ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರಿಗೂ ಹಾಗೂ ಕೇಂದ್ರ ಸರ್ಕಾರಕ್ಕೂ ಸಂಪೂರ್ಣ ಅರಿವಿದೆ. ಸಕ್ಕರೆಗೆ ಇಷ್ಟೊಂದು ಉತ್ತಮ ಬೆಲೆ ಸಿಗುತ್ತಿರುವಾಗ, ಕಾರ್ಖಾನೆ ಮಾಲೀಕರು ರೈತರಿಗೆ ಪ್ರತಿ ಟನ್‌ಗೆ ಕನಿಷ್ಠ 4,500 ರಿಂದ 5,500 ರೂಪಾಯಿ ನೀಡಲು ಮೀನಮೇಷ ಎಣಿಸುತ್ತಿರುವುದು ಏಕೆ? ಬೆಳಗಾವಿ ಜಿಲ್ಲಾಧಿಕಾರಿಗಳು ತಕ್ಷಣವೇ ಮಧ್ಯಪ್ರವೇಶಿಸಿ, ರೈತರಿಗೆ ಅನ್ಯಾಯವಾಗದಂತೆ ಈ ಸಮಸ್ಯೆಯ ಹೊಣೆ ಹೊರಬೇಕು" ಎಂದು ಕಿಡಿಕಾರಿದ್ದಾರೆ.

ಹೊಲದಲ್ಲೇ ಒಣಗುತ್ತಿರುವ ಕಬ್ಬು

ಈ ಬಾರಿಯ ತೀವ್ರ ಬರಗಾಲ ಮತ್ತು ಅಂತರ್ಜಲ ಕುಸಿತದಿಂದಾಗಿ ಉತ್ತರ ಕರ್ನಾಟಕದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಲುವೆಗಳಲ್ಲಿ ನೀರಿಲ್ಲದೆ, ಕೊಳವೆಬಾವಿಗಳು ಬತ್ತಿಹೋಗಿ ಹೊಲಗಳಲ್ಲಿ ನಿಂತಿರುವ ಕಬ್ಬು ಕಣ್ಣೆದುರೇ ಒಣಗಿ ಕಡ್ಡಿಯಾಗುತ್ತಿದೆ. ಒಂದು ವೇಳೆ ಕಾರ್ಖಾನೆಗಳು ತಕ್ಷಣವೇ ಕಬ್ಬು ನುರಿಸುವ ಕಾಯಕ ಆರಂಭಿಸದಿದ್ದರೆ ಮತ್ತು ಕಟಾವು ವಿಳಂಬವಾದರೆ, ಕಬ್ಬಿನಲ್ಲಿನ ತೂಕ ಹಾಗೂ ಸಕ್ಕರೆ ಇಳುವರಿ ಗಣನೀಯವಾಗಿ ಕುಸಿಯಲಿದೆ. ಇದು ರೈತನನ್ನು ಮತ್ತಷ್ಟು ಸಾಲದ ಕೂಪಕ್ಕೆ ತಳ್ಳಲಿದೆ. ಇಂತಹ ಬಿಕ್ಕಟ್ಟಿನ ಸನ್ನಿವೇಶದಲ್ಲೂ ಬೆಲೆ ನಿಗದಿಯಾಗದಿರುವುದು ರೈತರ ಆಕ್ರೋಶಕ್ಕೆ ತುಪ್ಪ ಸುರಿದಿದೆ.

ಸರ್ಕಾರದ ನಡೆ: ಸಚಿವ ಲಕ್ಷ್ಮಣ್ ಸವದಿ ಸಭೆ

ಬೆಳಗಾವಿಯಲ್ಲಿ ರೈತರ ಹೋರಾಟ ಉಗ್ರ ಸ್ವರೂಪ ಪಡೆಯುತ್ತಿದ್ದಂತೆಯೇ ಎಚ್ಚೆತ್ತ ರಾಜ್ಯ ಸರ್ಕಾರ ಸಂಧಾನದ ಹಾದಿ ಹಿಡಿದಿದೆ. ಸಚಿವ ಲಕ್ಷ್ಮಣ್ ಸವದಿ ಅವರು ಮುಖ್ಯಮಂತ್ರಿಗಳೊಂದಿಗೆ ಮಹತ್ವದ ಸಮಾಲೋಚನೆ ನಡೆಸಿದರು. ಬಳಿಕ ಅವರು, "ರಾಜ್ಯದಲ್ಲಿ ಕಬ್ಬು ಬೆಳೆಗಾರರ ಬಿಕ್ಕಟ್ಟನ್ನು ಶಾಂತಿಯುತವಾಗಿ ಬಗೆಹರಿಸಲು ಈಗಾಗಲೇ ಸಕ್ಕರೆ ಕಾರ್ಖಾನೆಗಳ ಮಾಲೀಕರ ಜೊತೆ ಸುದೀರ್ಘ ಸಭೆ ನಡೆಸಿದ್ದೇನೆ. ನೀರಿಲ್ಲದೆ ಹೊಲಗಳಲ್ಲಿ ಬೆಳೆ ಒಣಗುತ್ತಿರುವುದು ಸರ್ಕಾರದ ಗಮನಕ್ಕೂ ಬಂದಿದೆ. ಆದ್ದರಿಂದ ಸಂಜೆಯೊಳಗೆ ಕಾರ್ಖಾನೆಗಳ ಮಾಲೀಕರು ಎಂಎಸ್‌ಪಿ ಆಧಾರಿತ ಸೂಕ್ತ ದರವನ್ನು ಪ್ರಕಟಿಸಿ, ಕಬ್ಬು ನುರಿಸುವ ಪ್ರಕ್ರಿಯೆಯನ್ನು ತಕ್ಷಣವೇ ಆರಂಭಿಸಬೇಕು" ಎಂದು ಸಚಿವರು ಸೂಚನೆ ನೀಡಿದರು.

"ಕೇಂದ್ರ ಸರ್ಕಾರವು ಎಫ್‌ಆರ್‌ಪಿ ನಿಗದಿಪಡಿಸುವ ವಿಚಾರದಲ್ಲಿ ತನ್ನ ಹೊಣೆಗಾರಿಕೆಯಿಂದ ಸಂಪೂರ್ಣವಾಗಿ ನುಣುಚಿಕೊಳ್ಳುತ್ತಿದೆ. ಕಬ್ಬು ಬೆಳೆಗಾರರ ಹಿತರಕ್ಷಣೆ ಮಾಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದ್ದು, ರಾಜ್ಯ ಸರ್ಕಾರಗಳ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದೆ" ಎಂದು ಆರೋಪಿಸಿದರು.

ರೈತರು ಬೆಳಗಾವಿ ನಗರದತ್ತ ಮುನ್ನುಗ್ಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ತೀವ್ರ ಕಟ್ಟೆಚ್ಚರ ವಹಿಸಿದೆ. ಹಿಂಡಲಗಾ ಜೈಲಿನ ಸುತ್ತಮುತ್ತ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದ್ದು, ಹೆಚ್ಚುವರಿ ಕೆಎಸ್‌ಆರ್‌ಪಿ ಹಾಗೂ ಡಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದೆ. ಯಾವುದೇ ಕ್ಷಣದಲ್ಲಾದರೂ ರೈತರನ್ನು ಪೊಲೀಸರು ಮಾರ್ಗಮಧ್ಯದಲ್ಲೇ ವಶಕ್ಕೆ ಪಡೆಯುವ ಸಾಧ್ಯತೆಯಿದ್ದು, ಇದು ಪೊಲೀಸರು ಮತ್ತು ರೈತರ ನಡುವೆ ನೇರ ಸಂಘರ್ಷಕ್ಕೆ ಕಾರಣವಾಗುವ ಆತಂಕ ಮೂಡಿಸಿದೆ.

Read More
Next Story