ಬೆಳಗಾವಿಯಲ್ಲಿ ಐಟಿ ಹಬ್‌ ನಿರ್ಮಾಣ; ಪ್ರಿಯಾಂಕ್‌ ಖರ್ಗೆ
x

ಬೆಳಗಾವಿಯಲ್ಲಿ ಐಟಿ ಹಬ್‌ ನಿರ್ಮಾಣ; ಪ್ರಿಯಾಂಕ್‌ ಖರ್ಗೆ

ಬೆಳಗಾವಿಯನ್ನು ಕೇವಲ ಆಡಳಿತಾತ್ಮಕವಾಗಿ ಎರಡನೇ ರಾಜಧಾನಿಯನ್ನಾಗಿ ಮಾಡುವುದು ಮಾತ್ರವಲ್ಲದೆ, ತಾಂತ್ರಿಕವಾಗಿಯೂ ರಾಜ್ಯದ ಪ್ರಮುಖ ಕೇಂದ್ರವನ್ನಾಗಿ ರೂಪಿಸುವ ಉದ್ದೇಶ ಸರ್ಕಾರಕ್ಕಿದೆ.


Click the Play button to hear this message in audio format

ರಾಜ್ಯದ ಎರಡನೇ ರಾಜಧಾನಿ ಎಂದೇ ಕರೆಯಲ್ಪಡುವ ಬೆಳಗಾವಿಯನ್ನು ತಾಂತ್ರಿಕವಾಗಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರವು ಬೃಹತ್ ಯೋಜನೆಯನ್ನು ರೂಪಿಸಿದೆ. ಬೆಳಗಾವಿಯಲ್ಲಿ ಐಟಿ ಪಾರ್ಕ್ ಮತ್ತು ಸೆಮಿಕಂಡಕ್ಟರ್ ಪಾರ್ಕ್‌ಗಳನ್ನು ಸ್ಥಾಪಿಸುವ ಮೂಲಕ ಈ ಭಾಗದ ವಿದ್ಯಾವಂತ ನಿರುದ್ಯೋಗಿಗಳಿಗೆ ಸ್ಥಳೀಯವಾಗಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮತ್ತು ಪ್ರಾದೇಶಿಕ ಅಸಮಾನತೆಯನ್ನು ಹೋಗಲಾಡಿಸುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ. ಈ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ವಿಧಾನಸಭೆಯಲ್ಲಿ ವಿಸ್ತೃತವಾಗಿ ಮಾಹಿತಿ ನೀಡಿದರು.

ವಿಧಾನಸಭೆಯ ಪ್ರಶ್ನೋತ್ತರ ಕಲಾಪದ ವೇಳೆ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ್, ಬೆಳಗಾವಿಯ ಕೈಗಾರಿಕಾ ಮತ್ತು ತಾಂತ್ರಿಕ ಅಭಿವೃದ್ಧಿಯ ಕುರಿತು ಪ್ರಶ್ನೆಯನ್ನು ಪ್ರಸ್ತಾಪಿಸಿದರು. "ಬೆಳಗಾವಿಯು ಪುಣೆ ಮತ್ತು ಬೆಂಗಳೂರಿನಂತಹ ಬೃಹತ್ ನಗರಗಳ ನಡುವೆ ಇರುವುದರಿಂದ, ಇಲ್ಲಿ ಐಟಿ ಪಾರ್ಕ್ ಮತ್ತು ಸೆಮಿಕಂಡಕ್ಟರ್ ಪಾರ್ಕ್‌ಗಳನ್ನು ಸ್ಥಾಪಿಸಿದರೆ ಅದು ರಾಜ್ಯದ ಆರ್ಥಿಕತೆಗೆ ದೊಡ್ಡ ಕೊಡುಗೆ ನೀಡಲಿದೆ. ಅಲ್ಲದೆ, ಇಲ್ಲಿನ ಪ್ರತಿಭಾವಂತ ಯುವಕರು ಉದ್ಯೋಗಕ್ಕಾಗಿ ಹೊರರಾಜ್ಯಗಳಿಗೆ ವಲಸೆ ಹೋಗುವುದನ್ನು ತಡೆಯಬಹುದು" ಎಂದರು.

ಇದಕ್ಕೆ ಉತ್ತರಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಬೆಳಗಾವಿಯನ್ನು ಕೇವಲ ಆಡಳಿತಾತ್ಮಕವಾಗಿ ಎರಡನೇ ರಾಜಧಾನಿಯನ್ನಾಗಿ ಮಾಡುವುದು ಮಾತ್ರವಲ್ಲದೆ, ತಾಂತ್ರಿಕವಾಗಿಯೂ ರಾಜ್ಯದ ಪ್ರಮುಖ ಕೇಂದ್ರವನ್ನಾಗಿ ರೂಪಿಸುವ ಉದ್ದೇಶ ಸರ್ಕಾರಕ್ಕಿದೆ. ಬೆಳಗಾವಿಯಲ್ಲಿ ಐಟಿ ಪರಿಸರ ವ್ಯವಸ್ಥೆಯನ್ನು ಬೆಳೆಸಲು ಸರ್ಕಾರವು ಕೇವಲ ಕಟ್ಟಡಗಳನ್ನು ನಿರ್ಮಿಸುವುದಕ್ಕೆ ಸೀಮಿತವಾಗದೆ, ಸಮಗ್ರ ಅಭಿವೃದ್ಧಿಯ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು ಸ್ಪಷ್ಟಪಡಿಸಿದರು.

ಮೂಲಸೌಕರ್ಯಗಳಿಗೆ ಆದ್ಯತೆ

ಸ್ಟಾರ್ಟ್‌ಅಪ್‌ಗಳು ಮತ್ತು ಹೊಸ ಕಂಪನಿಗಳು ತಕ್ಷಣವೇ ತಮ್ಮ ಕಾರ್ಯವನ್ನು ಆರಂಭಿಸಲು ಅನುಕೂಲವಾಗುವಂತೆ ಸಿದ್ಧ ಮೂಲಸೌಕರ್ಯಗಳನ್ನು ಒದಗಿಸಲಾಗುವುದು. ಸ್ಥಳೀಯವಾಗಿ ಹೊಸ ಆಲೋಚನೆಗಳಿಗೆ ಚಾಲನೆ ನೀಡಲು ವೇಗವರ್ಧಕ ಜಾಲಗಳು ಮತ್ತು ಆರಂಭಿಕ ಹಂತದ ಬಂಡವಾಳಕ್ಕೆ 'ಸೀಡ್ ಫಂಡ್' ಬೆಂಬಲ ನೀಡಲಾಗುವುದು. ಯುವಜನರಿಗೆ ಭವಿಷ್ಯದ ತಂತ್ರಜ್ಞಾನಗಳಾದ ಎಐ, ಡೇಟಾ ಸೈನ್ಸ್ ಮತ್ತು ಸೆಮಿಕಂಡಕ್ಟರ್ ವಿನ್ಯಾಸದಲ್ಲಿ ತರಬೇತಿ ನೀಡಿ ಅವರನ್ನು ಜಾಗತಿಕ ಮಟ್ಟದ ಉದ್ಯೋಗಗಳಿಗೆ ಸಿದ್ಧಪಡಿಸಲು ಕ್ರಮ ಕೈಗೊಳ್ಳಲಾಗಿದೆ. ರಾಜೀವ್ ಗಾಂಧಿ ಉದ್ಯಮಶೀಲತೆ ಕಾರ್ಯಕ್ರಮ ಮತ್ತು 'ಎಲಿವೇಟ್' ಯೋಜನೆಯಡಿ ನವೋದ್ಯಮಗಳಿಗೆ ಧನಸಹಾಯ ನೀಡಲಾಗುತ್ತಿದೆ. ವಿಶೇಷವಾಗಿ ಮಹಿಳಾ ಉದ್ಯಮಶೀಲತೆಗೆ ಹೆಚ್ಚಿನ ಆದ್ಯತೆ ನೀಡಿ ಎಲಿವೇಟ್ ಮಹಿಳಾ ಉದ್ಯಮಶೀಲತೆ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.

ಗ್ರಾಮೀಣ ಮಟ್ಟದ ಹೊಸ ಆವಿಷ್ಕಾರಗಳನ್ನು ಗುರುತಿಸಿ ಅವುಗಳಿಗೆ ಮಾರುಕಟ್ಟೆ ಒದಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಐಟಿ ಮತ್ತು ಸೆಮಿಕಂಡಕ್ಟರ್ ಪಾರ್ಕ್ ಸ್ಥಾಪನೆಗೆ ಬೆಳಗಾವಿಯಲ್ಲಿ ಜಮೀನಿನ ಅವಶ್ಯಕತೆ ಇದೆ. ಆದರೆ, ಉದ್ದೇಶಿತ ಜಮೀನು ಪ್ರಸ್ತುತ ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆಯ ವಶದಲ್ಲಿದೆ. ಈ ಜಮೀನನ್ನು ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಯು ಕಳೆದ ಕೆಲವು ವರ್ಷಗಳಿಂದ ನಡೆಯುತ್ತಿದೆ. 2021ರ ಜ.8 ರಂದು ಜಮೀನನ್ನು ರಾಜ್ಯ ಸರ್ಕಾರಕ್ಕೆ ಮರಳಿಸುವಂತೆ ಕೋರಿ ಮೊದಲ ಬಾರಿಗೆ ಕೇಂದ್ರ ರಕ್ಷಣಾ ಸಚಿವರಿಗೆ ಪತ್ರ ಬರೆಯಲಾಯಿತು. 2021ರ ಸೆ. 9ರಂದು ರಕ್ಷಣಾ ಇಲಾಖೆಯಿಂದ ಯಾವುದೇ ಸಕಾರಾತ್ಮಕ ಸ್ಪಂದನೆ ದೊರೆಯದ ಕಾರಣ, ಐಟಿ-ಬಿಟಿ ಸಚಿವರು ಪುನಃ ಪತ್ರ ವ್ಯವಹಾರ ನಡೆಸಿದರು. 2021ರ ಸೆ.21ರಂದು ವಿಷಯದ ಗಂಭೀರತೆಯನ್ನು ಪರಿಗಣಿಸಿ, ಅಂದಿನ ಮುಖ್ಯಮಂತ್ರಿಗಳು ನೇರವಾಗಿ ರಕ್ಷಣಾ ಸಚಿವರಿಗೆ ಪತ್ರ ಬರೆದಿದ್ದರು. ಅದೇ ದಿನ ರಾಜ್ಯದ ಮುಖ್ಯ ಕಾರ್ಯದರ್ಶಿಯವರು ಕೇಂದ್ರ ರಕ್ಷಣಾ ಕಾರ್ಯದರ್ಶಿಯವರೊಂದಿಗೆ ಮಾತುಕತೆ ನಡೆಸಿ ಪತ್ರ ರವಾನಿಸಿದ್ದರು. ಪ್ರಸ್ತುತ, ಈ ಭೂಮಿಯನ್ನು ರಾಜ್ಯ ಸರ್ಕಾರಕ್ಕೆ ಪಡೆಯಲು ಕೇಂದ್ರ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಜಮೀನು ಲಭ್ಯವಾದ ತಕ್ಷಣ ಬೃಹತ್ ಮಟ್ಟದ ಐಟಿ ಪಾರ್ಕ್ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ಆಶ್ವಾಸನೆ ನೀಡಿದರು.

ಜಾಗತಿಕ ತಂತ್ರಜ್ಞಾನ ಕೇಂದ್ರ

ಬೃಹತ್ ಐಟಿ ಪಾರ್ಕ್ ನಿರ್ಮಾಣವಾಗುವವರೆಗೆ ಕಾಯದೆ, ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ತಕ್ಷಣದ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ಬೆಳಗಾವಿಯ ತಿಲಕವಾಡಿಯಲ್ಲಿರುವ ಕಲಾಮಂದಿರ ಕಟ್ಟಡವನ್ನು ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಸಹಯೋಗದೊಂದಿಗೆ ಜಾಗತಿಕ ತಂತ್ರಜ್ಞಾನ ಕೇಂದ್ರವನ್ನಾಗಿ ಪರಿವರ್ತಿಸಲು ಉದ್ದೇಶಿಸಲಾಗಿದೆ. ಈ ಕಟ್ಟಡವನ್ನು ಇಲಾಖೆಗೆ ಹಸ್ತಾಂತರಿಸುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಇದು ಬೆಳಗಾವಿಯ ಡಿಜಿಟಲ್ ಆರ್ಥಿಕತೆಗೆ ಹೊಸ ವೇಗ ನೀಡಲಿದೆ. ಈ ಯೋಜನೆಗಳು ಜಾರಿಗೆ ಬರುವುದರಿಂದ ಹಲವು ಅನುಕೂಲಗಳಾಗಲಿವೆ. ಉತ್ತರ ಕರ್ನಾಟಕದ ಸಾವಿರಾರು ಎಂಜಿನಿಯರಿಂಗ್ ಮತ್ತು ತಾಂತ್ರಿಕ ಪದವೀಧರರಿಗೆ ತಮ್ಮದೇ ಜಿಲ್ಲೆಯಲ್ಲಿ ಉದ್ಯೋಗ ಸಿಗಲಿದೆ. ಸೆಮಿಕಂಡಕ್ಟರ್ ಉದ್ಯಮವು ಅತ್ಯಂತ ಹೆಚ್ಚಿನ ಲಾಭ ತರುವ ಕ್ಷೇತ್ರವಾಗಿದ್ದು, ಬೆಳಗಾವಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಹಕಾರಿಯಾಗಲಿದೆ. ಬೆಂಗಳೂರಿನ ಮೇಲಿರುವ ಒತ್ತಡವನ್ನು ಕಡಿಮೆ ಮಾಡಲು ಮತ್ತು ರಾಜ್ಯದ ಇತರೆ ನಗರಗಳನ್ನು ಬೆಳೆಸಲು ಇದು ಮಾದರಿಯಾಗಲಿದೆ ಎಂದರು.

Read More
Next Story