
ಅಕ್ರಮ ಆಸ್ತಿ ಗಳಿಕೆ: ರಾಜ್ಯದ 4 ಜಿಲ್ಲೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.
ಬಿಡಿಎ ಅಧಿಕಾರಿ ದಾಲೇಶ್ ಎ.ಎಲ್. ಮೇಲೆ ಲೋಕಾಯುಕ್ತ ದಾಳಿ: 3.19 ಕೋಟಿ ರೂ. ಆಸ್ತಿ ಪತ್ತೆ
ಲೋಕಾಯುಕ್ತ ಪೊಲೀಸರ ದಾಳಿ ವೇಳೆ 3.19 ಕೋಟಿ ರೂ. ಮೌಲ್ಯದ ಆಸ್ತಿ ಇರುವುದು ಗೊತ್ತಾಗಿದೆ. 2.70 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ, 48.85 ಲಕ್ಷ ರೂ. ಮೌಲ್ಯದ ಚರಾಸ್ತಿ ಪತ್ತೆ ಹಚ್ಚಲಾಗಿದೆ.
ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿರುವ ಆರೋಪದ ಹಿನ್ನೆಲೆಯಲ್ಲಿ ಬಿಡಿಎ ವಲಯ ಅರಣ್ಯಾಧಿಕಾರಿ ದಾಲೇಶ್ ಎ.ಎಲ್. ಅವರಿಗೆ ಸೇರಿದ ನಿವಾಸ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
ಬೆಂಗಳೂರು ನಗರ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದಾಖಲಾದ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಈ ಕ್ರಮ ಕೈಗೊಳ್ಳಲಾಗಿದೆ. ಅಧಿಕಾರಿ ದಾಲೇಶ್ ಅವರಿಗೆ ಸಂಬಂಧಿಸಿದ ಒಟ್ಟು 4 ಸ್ಥಳಗಳಲ್ಲಿ ಏಕಕಾಲಕ್ಕೆ ಶೋಧ ಕಾರ್ಯ ನಡೆಸಲಾಗಿದ್ದು, ಈ ವೇಳೆ ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಲೋಕಾಯುಕ್ತ ಅಧಿಕಾರಿಗಳ ತನಿಖೆಯ ವೇಳೆ ಅಧಿಕಾರಿಯ ಬಳಿ ಒಟ್ಟು 3.19 ಕೋಟಿ ರೂ. ಮೌಲ್ಯದ ಆಸ್ತಿ ಇರುವುದು ಕಂಡುಬಂದಿದೆ. ಸುಮಾರು 2.70 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಪತ್ತೆಯಾಗಿದೆ. ಇದರಲ್ಲಿ 3 ನಿವೇಶನಗಳು, 2 ವಾಸದ ಮನೆಗಳು, 1 ವಾಣಿಜ್ಯ ಸಂಕೀರ್ಣ ಹಾಗೂ 17 ಎಕರೆ 20 ಗುಂಟೆ ಕೃಷಿ ಭೂಮಿ ಸೇರಿದೆ.
48.85 ಲಕ್ಷ ರೂ. ಮೌಲ್ಯದ ಚರಾಸ್ತಿ ಪತ್ತೆಯಾಗಿದ್ದು, ಇದರಲ್ಲಿ 1.35 ಲಕ್ಷ ರೂ. ನಗದು, 13 ಲಕ್ಷ ರೂ. ಬೆಲೆಬಾಳುವ ಚಿನ್ನಾಭರಣಗಳು ಹಾಗೂ 34.50 ಲಕ್ಷ ರೂ. ಮೌಲ್ಯದ ವಾಹನಗಳು ಸೇರಿವೆ. ಲೋಕಾಯುಕ್ತ ಪೊಲೀಸರ ಪ್ರಾಥಮಿಕ ಅಂದಾಜಿನ ಪ್ರಕಾರ, ಈ ಅಧಿಕಾರಿಯು ತನ್ನ ಆದಾಯದ ಮೂಲಗಳಿಗಿಂತ ಸುಮಾರು 3,08,99,856 ರೂ.ಗಳಷ್ಟು ಹೆಚ್ಚಿನ ಅಸಮತೋಲನ ಆಸ್ತಿಯನ್ನು ಹೊಂದಿದ್ದಾರೆ ಎನ್ನಲಾಗಿದೆ. ಸದ್ಯ ಲೋಕಾಯುಕ್ತ ಪೊಲೀಸರು ದಾಖಲೆಗಳ ಪರಿಶೀಲನೆ ಮುಂದುವರಿಸಿದ್ದು, ತನಿಖೆ ತೀವ್ರಗೊಂಡಿದೆ.

