
ಬಿಡಿಎ ಮನೆಗಳ ಸಕ್ರಮ ಶುಲ್ಕ ಶೇ.50 ಕಡಿತ, ಶುದ್ಧ ಕ್ರಯಪತ್ರ ಮೇಳ - ಸಿಎಂ
ಬಿಡಿಎ ಆಸ್ತಿ ಹೊಂದಿರುವವರಿಗೆ ಸರ್ಕಾರ ದೀಪಾವಳಿ ಕೊಡುಗೆ ನೀಡಿದ್ದು, 20ಸಾವಿರಕ್ಕೂ ಅಧಿಕ ಜನರಿಗೆ ಶುದ್ಧ ಕ್ರಯಪತ್ರ ವಿತರಣಾ ಮೇಳ, ರೈತರಿಗೆ ಪ್ರೋತ್ಸಾಹದಾಯಕ ನಿವೇಶನ ತೀರ್ಮಾನ ಪ್ರಕಟಿಸಲಾಗಿದೆ.
ರಾಜಧಾನಿ ಬೆಂಗಳೂರಿನ ನಾಗರಿಕರಿಗೆ, ಅದರಲ್ಲೂ ಪ್ರಮುಖವಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ವ್ಯಾಪ್ತಿಯಲ್ಲಿ ಆಸ್ತಿ, ನಿವೇಶನ ಹೊಂದಿರುವ ಲಕ್ಷಾಂತರ ಕುಟುಂಬಗಳಿಗೆ ರಾಜ್ಯ ಸರ್ಕಾರ ದೀಪಾವಳಿ ಉಡುಗೊರೆಯಾಗಿ ಸಿಹಿ ಸುದ್ದಿ ನೀಡಿದೆ. ಬಿಡಿಎ ಬಡಾವಣೆಗಳಲ್ಲಿ ನಿರ್ಮಿಸಲಾಗಿರುವ ಮನೆಗಳ ಸಕ್ರಮಗೊಳಿಸುವಿಕೆಯ ದಂಡ ಶುಲ್ಕದಲ್ಲಿ ಬರೋಬ್ಬರಿ ಶೇ. 50ರಷ್ಟು ಭಾರಿ ರಿಯಾಯಿತಿ, 20 ಸಾವಿರಕ್ಕೂ ಅಧಿಕ ಜನರಿಗೆ ಶುದ್ಧ ಕ್ರಯಪತ್ರ ವಿತರಣಾ ಮೇಳ, ರೈತರಿಗೆ ಪ್ರೋತ್ಸಾಹದಾಯಕ ನಿವೇಶನ ಹಾಗೂ ಅಂಚಿನ ಜಾಗಗಳ ಹಂಚಿಕೆ ಸಂಬಂಧ ತೀರ್ಮಾನಗಳನ್ನು ಪ್ರಕಟಿಸಲಾಗಿದೆ.
ಸೋಮವಾರ ಬಿಡಿಎ ಕೇಂದ್ರ ಕಚೇರಿಯಲ್ಲಿ ಪ್ರಾಧಿಕಾರದ ವಿವಿಧ ಮಹತ್ವಾಕಾಂಕ್ಷಿ ಯೋಜನೆಗಳ ಸಮಗ್ರ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ನಂತರ ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್ ಅವರ ಉಪಸ್ಥಿತಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಬಿಡಿಎ ಭೂಸ್ವಾಧೀನಕ್ಕೊಳಪಟ್ಟ ಜಾಗಗಳಲ್ಲಿ ದಶಕಗಳ ಹಿಂದೆ ಮನೆ ನಿರ್ಮಿಸಿಕೊಂಡು, ನಿವೇಶನದ ಖಾತೆ ಹಾಗೂ ಹಕ್ಕುಪತ್ರವಿಲ್ಲದೆ ಆತಂಕದಲ್ಲಿದ್ದ ಬಡ ಮತ್ತು ಮಧ್ಯಮ ವರ್ಗದ ನಾಗರಿಕರಿಗೆ ಸರ್ಕಾರ ಭರ್ಜರಿ ನೆಮ್ಮದಿ ನೀಡಿದೆ. ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ನಿಯಮ 38 ಹಾಗೂ 38(ಡಿ) ಅನ್ವಯ 2008ರ ಜುಲೈ 10ಕ್ಕಿಂತ ಮುಂಚಿತವಾಗಿ (12 ವರ್ಷಗಳ ಹಿಂದೆ) ನಿರ್ಮಿಸಲಾದ ಮನೆಗಳನ್ನು ಸಕ್ರಮಗೊಳಿಸಲು ಸರ್ಕಾರ ಈಗಾಗಲೇ ಅಧಿಸೂಚನೆ ಹೊರಡಿಸಿತ್ತು. ಆದರೆ, ಈ ಹಿಂದೆ ವಿಧಿಸಲಾಗಿದ್ದ ದಂಡದ ಮೊತ್ತ ಅತ್ಯಂತ ದುಬಾರಿಯಾಗಿದ್ದರಿಂದ ಜನಸಾಮಾನ್ಯರಿಗೆ ಹೊರೆಯಾಗಿತ್ತು. ಇದೀಗ ನಾಗರಿಕರ ಹಿತದೃಷ್ಟಿಯಿಂದ ಮಾರ್ಗಸೂಚಿ ದರದ ಮೇಲಿನ ಶುಲ್ಕವನ್ನು ಅರ್ಧಕ್ಕರ್ಧ (ಶೇ. 50) ಇಳಿಕೆ ಮಾಡಲಾಗಿದೆ.
ಪರಿಷ್ಕೃತ ಶುಲ್ಕದ ವಿವರ
20x30 ಅಡಿ ವರೆಗಿನ ಮನೆಗಳಿಗೆ - ಈ ಹಿಂದೆ ಮಾರ್ಗಸೂಚಿ ಮೌಲ್ಯದ ಶೇ. 10ರಷ್ಟು ದಂಡವಿತ್ತು, ಈಗ ಅದನ್ನು ಕೇವಲ ಶೇ. 5ಕ್ಕೆ ಇಳಿಸಲಾಗಿದೆ. 20x30 ರಿಂದ 30x40 ಅಡಿ ಮನೆಗಳಿಗೆ - ಈ ಹಿಂದೆ ಇದ್ದ ಶೇ. 25ರ ಬದಲಾಗಿ ಕೇವಲ ಶೇ. 12.5ರಷ್ಟು ದಂಡ. 30x40 ರಿಂದ 40x60 ಅಡಿ ಮನೆಗಳಿಗೆ - ಈ ಹಿಂದೆ ಇದ್ದ ಶೇ. 40ರ ಬದಲಾಗಿ ಕೇವಲ ಶೇ. 20ರಷ್ಟು ದಂಡ. 40x60 ರಿಂದ 50x80 ಅಡಿ ಮನೆಗಳಿಗೆ- ಈ ಹಿಂದೆ ಇದ್ದ ಶೇ. 50ರ ಬದಲಾಗಿ ಕೇವಲ ಶೇ. 25ರಷ್ಟು ದಂಡ ನಿಗದಿಪಡಿಸಲಾಗಿದೆ. ಮೂಲೆ ನಿವೇಶನಗಳಲ್ಲಿ ಮನೆ ನಿರ್ಮಿಸಿದ್ದರೆ, ಮೇಲ್ಕಂಡ ಪರಿಷ್ಕೃತ ಮಾರ್ಗಸೂಚಿ ದರದ ಎರಡರಷ್ಟು ಮೌಲ್ಯವನ್ನು ಪಾವತಿಸಬೇಕಾಗುತ್ತದೆ.
ಮಧ್ಯವರ್ತಿಗಳ ಹಾವಳಿ ತಡೆಯಲು ಈ ಸಕ್ರಮ ಯೋಜನೆಯನ್ನು ಸಂಪೂರ್ಣ ಗಣಕೀಕೃತಗೊಳಿಸಲಾಗಿದ್ದು, ಸಾರ್ವಜನಿಕರು ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕಿದೆ. ಅರ್ಜಿ ಸಲ್ಲಿಸಲು ಡಿಸೆಂಬರ್ 15ರವರೆಗೆ ಕಾಲಾವಕಾಶ ನೀಡಲಾಗಿದೆ. ಅರ್ಜಿ ಸಲ್ಲಿಸಿದ ಎರಡು ತಿಂಗಳೊಳಗೆ ಪರಿಶೀಲಿಸಿ, ನಾಗರಿಕರಿಗೆ ಶಾಶ್ವತ ಆಸ್ತಿ ಹಕ್ಕು ಗ್ಯಾರಂಟಿ ನೀಡಲಾಗುವುದು ಎಂದು ತಿಳಿಸಿದರು.
ನಾಡಪ್ರಭು ಕೆಂಪೇಗೌಡ ಬಡಾವಣೆ
ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕಾಗಿ ತಮ್ಮ ಫಲವತ್ತಾದ ಭೂಮಿಯನ್ನು ಬಿಟ್ಟುಕೊಟ್ಟು, ನಗದು ಪರಿಹಾರ ಪಡೆದುಕೊಂಡಿದ್ದ ರೈತರಿಗೆ ಹಾಗೂ ಭೂಮಾಲೀಕರಿಗೆ ಸರ್ಕಾರ ನ್ಯಾಯ ಒದಗಿಸಲು ಮುಂದಾಗಿದೆ. ಸ್ವಇಚ್ಛೆಯಿಂದ ಭೂಸ್ವಾಧೀನ ಪ್ರಕ್ರಿಯೆಗೆ ಒಪ್ಪಿಗೆ ನೀಡಿ ನಗದು ಪರಿಹಾರ ಪಡೆದಿದ್ದ ಭೂಮಾಲೀಕರಿಗೆ ವಿಶೇಷ ಪ್ರೋತ್ಸಾಹದಾಯಕ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು. ಜಮೀನು ಕಳೆದುಕೊಂಡ ಅನ್ನದಾತರಿಗೆ ಸೂಕ್ತ ನ್ಯಾಯ ಕಲ್ಪಿಸುವುದು ನಮ್ಮ ಸರ್ಕಾರದ ಕರ್ತವ್ಯ. ಈ ನಿಟ್ಟಿನಲ್ಲಿ ಅರ್ಹ ರೈತರು ಅರ್ಜಿ ಸಲ್ಲಿಸಿ ನಿವೇಶನಗಳನ್ನು ಪಡೆದುಕೊಳ್ಳಬಹುದು. ಬಿಡಿಎ ಬಡಾವಣೆಗಳಲ್ಲಿ ಈಗಾಗಲೇ ನಿವೇಶನ ಪಡೆದಿರುವ ಮಾಲೀಕರ ಸೈಟ್ಗಳ ಹಿಂಬದಿಯಲ್ಲಿ ಅಥವಾ ಅಕ್ಕಪಕ್ಕದಲ್ಲಿ ಪ್ರಾಧಿಕಾರಕ್ಕೆ ಸೇರಿದ ಸಣ್ಣಪುಟ್ಟ ಹೆಚ್ಚುವರಿ ಅಂಚಿನ ಜಾಗಗಳು ಖಾಲಿ ಉಳಿದುಕೊಂಡಿದ್ದರೆ, ಅದನ್ನು ಮೂಲ ನಿವೇಶನದಾರರಿಗೆ ನಿಯಮಾನುಸಾರ ಹಂಚಿಕೆ ಮಾಡಲು ಮಹತ್ವದ ಮಾರ್ಗಸೂಚಿ ಹೊರಡಿಸಲಾಗಿದೆ.
ಅಗತ್ಯ ದಾಖಲೆಗಳೊಂದಿಗೆ ಡಿ.17ರೊಳಗೆ ಅರ್ಜಿ ಸಲ್ಲಿಸಬೇಕು
ಅರ್ಜಿ ಸಲ್ಲಿಕೆಯಾದ 60 ದಿನಗಳ ಒಳಗಾಗಿ ಕಂದಾಯ ಪರಿಶೀಲನೆ ನಡೆಸಿ ಅಂಚಿನ ಜಾಗ ಹಂಚಿಕೆಗೆ ಕ್ರಮ ಕೈಗೊಳ್ಳಲಾಗುವುದು. ಹಳೆಯ ಎಲ್ಲಾ ಬಡಾವಣೆಗಳ ಸಾಮಾನ್ಯ ಹಂಚಿಕೆ, ರೆವಿನ್ಯೂ ಬದಲಿ ನಿವೇಶನ ಹಾಗೂ ಪ್ರೋತ್ಸಾಹದಾಯಕ ಯೋಜನೆಯಡಿ ಹಂಚಿಕೆಯಾಗುವ ಅಂಚಿನ ಜಾಗಗಳಿಗೆ ಸಕ್ಷಮ ಪ್ರಾಧಿಕಾರ ಅನುಮೋದನೆ ನೀಡುವ ದಿನಾಂಕದ ಚಾಲ್ತಿ ಮಾರ್ಗಸೂಚಿ ದರ ವಿಧಿಸಲಾಗುತ್ತದೆ. ಭೂಮಿ ಕಳೆದುಕೊಂಡು 60:40 ಅನುಪಾತದಲ್ಲಿ ಸೈಟ್ ಪಡೆದವರಿಗೆ ಗರಿಷ್ಠ 600 ಚದರ ಅಡಿ ವರೆಗಿನ ಅಂಚಿನ ಜಾಗಕ್ಕೆ ಚಾಲ್ತಿ ಮಾರ್ಗಸೂಚಿ ದರ ಅನ್ವಯವಾಗಲಿದೆ. ಒಂದು ವೇಳೆ ಹಂಚಿಕೆಯಾದ ನಿವೇಶನ ಅರ್ಹತೆಗಿಂತ ಕಡಿಮೆಯಿದ್ದರೆ ಅಂತಹ ವ್ಯತ್ಯಾಸದ ವಿಸ್ತೀರ್ಣಕ್ಕೆ ಸರ್ಕಾರದಿಂದಲೇ ಮಾರ್ಗಸೂಚಿ ದರದ ಸಮಾನ ನಗದು ಪರಿಹಾರ ನೀಡಲಾಗುತ್ತದೆ.
20 ಸಾವಿರ ಜನರಿಗೆ ಶುದ್ಧ ಕ್ರಯಪತ್ರ ಮೇಳ
ಬಿಡಿಎ ನಿವೇಶನ ಹಂಚಿಕೆಯಾದ ನಂತರ ಸಾಮಾನ್ಯವಾಗಿ 10 ವರ್ಷಗಳ ಕಾಲ ಗುತ್ತಿಗೆ ಅವಧಿ ಇರುತ್ತದೆ. ಈ ಅವಧಿ ಮುಗಿದ ತಕ್ಷಣ ಮಾಲೀಕರು ಶುದ್ಧ ಕ್ರಯಪತ್ರ ನೋಂದಣಿ ಮಾಡಿಸಿಕೊಳ್ಳಬೇಕು. ಆದರೆ, ಬಿಡಿಎ ಕಚೇರಿಯ ಅಲೆದಾಟ, ಅಧಿಕಾರಿಗಳ ವಿಳಂಬ ಹಾಗೂ ನಾನಾ ತಾಂತ್ರಿಕ ಕಾರಣಗಳಿಂದ ನಗರದಲ್ಲಿ ಬರೋಬ್ಬರಿ 20,000ಕ್ಕೂ ಅಧಿಕ ಹಂಚಿಕೆದಾರರು ದಶಕಗಳು ಕಳೆದರೂ ಶುದ್ಧ ಕ್ರಯಪತ್ರ ಪಡೆಯದೆ ಪರದಾಡುತ್ತಿದ್ದಾರೆ. ಇದಕ್ಕೆ ಏಕಗವಾಕ್ಷಿ ಪರಿಹಾರ ನೀಡಲು ಬಿಡಿಎ ವತಿಯಿಂದ ಬೃಹತ್ ಶುದ್ಧ ಕ್ರಯಪತ್ರ ಮೇಳ ಆಯೋಜಿಸಲು ನಿರ್ಧರಿಸಲಾಗಿದೆ. ಹಂಚಿಕೆದಾರರು ತಮ್ಮ ದಾಖಲಾತಿಗಳೊಂದಿಗೆ ಡಿಸೆಂಬರ್ 17ರೊಳಗೆ ಅರ್ಜಿ ಸಲ್ಲಿಸಿದರೆ, ಕೇವಲ 60 ದಿನಗಳ ಗಡುವಿನಲ್ಲಿ ಯಾವುದೇ ಅಡೆತಡೆಗಳಿಲ್ಲದೆ ಶುದ್ಧ ಕ್ರಯಪತ್ರವನ್ನು ನೋಂದಾಯಿಸಿಕೊಡಲಾಗುವುದು ಎಂದು ಸರ್ಕಾರ ಘೋಷಿಸಿದೆ.
ಬಿಡಿಎ ಹೊಸ ಆಲೋಚನೆ, ಹೊಸ ಕಾಯಕಲ್ಪ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಯಾಗಿ 50 ವರ್ಷಗಳನ್ನು ಪೂರೈಸುತ್ತಿರುವ (ಸುವರ್ಣ ಮಹೋತ್ಸವ) ಸಂದರ್ಭದಲ್ಲಿ ಬಿಡಿಎಯನ್ನು ಸಂಪೂರ್ಣವಾಗಿ ಭ್ರಷ್ಟಾಚಾರ ಮುಕ್ತ ಹಾಗೂ ಜನಸ್ನೇಹಿ ಸಂಸ್ಥೆಯನ್ನಾಗಿ ಪರಿವರ್ತಿಸಲು ಬದ್ಧರಾಗಿದ್ದೇವೆ ಎಂದು ಸಿಎಂ ಹೇಳಿದರು. ಎನ್.ಎ. ಹ್ಯಾರಿಸ್ ಅವರು ಬಿಡಿಎ ಅಧ್ಯಕ್ಷರಾದ ಮೇಲೆ ಪ್ರತಿ ವಾರ ವಲಯವಾರು 'ಓಪನ್ ಹೌಸ್' ಜನಸ್ಪಂದನ ಸಭೆಗಳನ್ನು ನಡೆಸಿ, ನಾಗರಿಕರ ಸಾವಿರಾರು ಕಡತಗಳನ್ನು ಸ್ಥಳದಲ್ಲೇ ವಿಲೇವಾರಿ ಮಾಡುತ್ತಿದ್ದಾರೆ. ಡಾ. ಶಿವರಾಮ ಕಾರಂತ ಬಡಾವಣೆಯಲ್ಲಿ ಸೈಟ್ ಹಂಚಿಕೆ ಪ್ರಕ್ರಿಯೆಯನ್ನು ಸಂಪೂರ್ಣ ಪಾರದರ್ಶಕವಾಗಿ, ಲಾಟರಿ ಮತ್ತು ಡಿಜಿಟಲ್ ತಂತ್ರಜ್ಞಾನದ ಮೂಲಕ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
