
ನಟ ಗಿಲ್ಲಿ ಅವರ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ ಬಿಗ್ ಬಾಸ್ ನಂತರ 1 ಲಕ್ಷದಿಂದ 20 ಲಕ್ಷಕ್ಕೆ ಏರಿಕೆಯಾಗಿದೆ.
ವಿಧಾನಸಭೆಯಲ್ಲೂ ʼಗಿಲ್ಲಿʼ! ಬಿಗ್ ಬಾಸ್ ವಿನ್ನರ್ ನಿರ್ಮಲಾ ಸೀತಾರಾಮನ್ ಎಂದ ಪ್ರದೀಪ್ ಈಶ್ವರ್!
ಬಿಗ್ ಬಾಸ್ ಮುಗಿದು ಎರಡು ವಾರಗಳಾದರೂ ಗಿಲ್ಲಿ ಅವರ ಜನಪ್ರಿಯತೆ ಕುಗ್ಗಿಲ್ಲ. ಇತ್ತೀಚೆಗೆ ನಡೆದ ರಾಜ್ಯದ ವಿಶೇಷ ಅಧಿವೇಶನದಲ್ಲಿ ಶಾಸಕ ಪ್ರದೀಪ್ ಈಶ್ವರ್ ಅವರು ಕೇಂದ್ರ ಸರ್ಕಾರದ ತೆರಿಗೆ ನೀತಿಗಳನ್ನು ಟೀಕಿಸಲು ಗಿಲ್ಲಿ ಅವರ ಉದಾಹರಣೆಯನ್ನು ಬಳಸಿಕೊಂಡಿದ್ದು ಎಲ್ಲರ ಗಮನ ಸೆಳೆದಿದೆ.
ಬಿಗ್ ಬಾಸ್ ಕನ್ನಡ ಸೀಸನ್ 12ರ ಕಿರೀಟ ಮುಡಿಗೇರಿಸಿಕೊಂಡ 'ಗಿಲ್ಲಿ' ನಟನ ಖ್ಯಾತಿ ಕೇವಲ ಕಿರುತೆರೆಗೆ ಸೀಮಿತವಾಗಿಲ್ಲ, ಅದು ಈಗ ರಾಜ್ಯ ರಾಜಕಾರಣದ ಸೌಧದವರೆಗೂ ಪ್ರತಿಧ್ವನಿಸಿದೆ. ಶೋ ಮುಗಿದು ವಾರಗಳೇ ಕಳೆದಿದ್ದರೂ ಗಿಲ್ಲಿ ಅವರ ಜನಪ್ರಿಯತೆ ಇನ್ನು ಕುಂದಿಲ್ಲ. ಸಾರ್ವಜನಿಕ ಸಮಾರಂಭಗಳಲ್ಲಿ ಅವರು ಅಲೆ ಎಬ್ಬಿಸುತ್ತಿದ್ದಾರೆ.
ಅಚ್ಚರಿಯೆಂದರೆ, ಇತ್ತೀಚೆಗೆ ನಡೆದ ವಿಧಾನಸಭೆಅಧಿವೇಶನದಲ್ಲಿ ಶಾಸಕ ಪ್ರದೀಪ್ ಈಶ್ವರ್ ಅವರು ಗಿಲ್ಲಿ ಹೆಸರನ್ನು ಪ್ರಸ್ತಾಪಿಸುವ ಮೂಲಕ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ.
ಅಧಿವೇಶನದಲ್ಲಿ ಕೇವಲ ಸಿನಿಮಾ ಅಥವಾ ಮನರಂಜನೆಯ ಉದ್ದೇಶಕ್ಕೆ ಗಿಲ್ಲಿ ಹೆಸರು ಬರಲಿಲ್ಲ. ಬದಲಿಗೆ, ಕೇಂದ್ರ ಸರ್ಕಾರದ ತೆರಿಗೆ ನೀತಿಗಳನ್ನು ವಿಮರ್ಶಿಸಲು ಶಾಸಕರು ಗಿಲ್ಲಿ ಅವರ ಬಹುಮಾನದ ಮೊತ್ತವನ್ನು ಒಂದು ಅಸ್ತ್ರವನ್ನಾಗಿ ಬಳಸಿಕೊಂಡಿದ್ದಾರೆ. "ಬಿಗ್ ಬಾಸ್ ವಿನ್ನರ್ ನಿಜವಾಗಿಯೂ ಗಿಲ್ಲಿ ಅಲ್ಲ, ಬದಲಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು" ಎಂದು ವ್ಯಂಗ್ಯವಾಡುವ ಮೂಲಕ ಪ್ರದೀಪ್ ಈಶ್ವರ್ ಸದನದಲ್ಲಿ ಎಲ್ಲರ ಗಮನ ಸೆಳೆದರು.
ಗಿಲ್ಲಿ ಅವರಿಗೆ ದೊರೆತ 50 ಲಕ್ಷ ರೂಪಾಯಿ ಬಹುಮಾನದ ಮೇಲೆ ಹೇರಲಾಗುವ ತೆರಿಗೆಯ ಪ್ರಮಾಣದ ಬಗ್ಗೆ ಸದನದಲ್ಲಿ ಗಂಭೀರ ಚರ್ಚೆ ನಡೆಯಿತು. ಶಾಸಕರ ಪ್ರಕಾರ, ಜಿಎಸ್‌ಟಿ, ಆದಾಯ ತೆರಿಗೆ ಮತ್ತು ಸೆಸ್ ಸೇರಿ ಸುಮಾರು 52% ರಷ್ಟು ಹಣ ಸರ್ಕಾರಕ್ಕೆ ಸೇರುತ್ತದೆ.
ಬಿಗ್ ಬಾಸ್ ವಿನ್ನರ್ ಗಿಲ್ಲಿಗೆ ಟ್ಯಾಕ್ಸ್ ಹೊಡೆತ
ಬಿಗ್ ಬಾಸ್ ಇತಿಹಾಸದಲ್ಲಿ ಅತ್ಯಂತ ಪ್ರಭಾವಿ ಸ್ಪರ್ಧಿಯಾಗಿ ಗುರುತಿಸಿಕೊಂಡ ಗಿಲ್ಲಿಗೆ ಕಪ್ ಜೊತೆಗೆ ಭರ್ಜರಿ ಬಹುಮಾನಗಳೂ ಲಭಿಸಿವೆ. ಆದರೆ ಗೆಲುವಿನ ಈ ಸಂಭ್ರಮದ ನಡುವೆಯೇ ಆದಾಯ ತೆರಿಗೆಯ ಕಟ್ಟುನಿಟ್ಟಾದ ನಿಯಮಗಳು ವಿನ್ನರ್ ಮತ್ತು ರನ್ನರ್ ಅಪ್ ಇಬ್ಬರಿಗೂ ಬಿಸಿ ಮುಟ್ಟಿಸಿವೆ.
ಗಿಲ್ಲಿ ಈ ಬಾರಿ ಬಿಗ್ ಬಾಸ್ ವಿಜೇತರಾಗಿ 50 ಲಕ್ಷ ರೂಪಾಯಿ ನಗದು ಬಹುಮಾನ ಪಡೆದಿದ್ದಾರೆ. ಆದರೆ ಭಾರತೀಯ ಆದಾಯ ತೆರಿಗೆ ಕಾಯ್ದೆಯ ಪ್ರಕಾರ, ಯಾವುದೇ ರಿಯಾಲಿಟಿ ಶೋ ಅಥವಾ ಲಾಟರಿ ಮೂಲಕ ಗೆಲ್ಲುವ ಹಣಕ್ಕೆ ಶೇಕಡಾ 30ರಷ್ಟು ತೆರಿಗೆ ಅನ್ವಯವಾಗುತ್ತದೆ. ಇದರ ಪರಿಣಾಮವಾಗಿ ಗಿಲ್ಲಿಗೆ ಘೋಷಣೆಯಾದ 50 ಲಕ್ಷ ರೂಪಾಯಿಯಲ್ಲಿ ಬರೋಬ್ಬರಿ 15 ಲಕ್ಷ ರೂಪಾಯಿ ತೆರಿಗೆ ರೂಪದಲ್ಲಿ ಕಡಿತಗೊಳ್ಳಲಿದೆ. ಅಂತಿಮವಾಗಿ ಗಿಲ್ಲಿ ಅವರ ಕೈ ಸೇರುವುದು ಕೇವಲ 35 ಲಕ್ಷ ರೂಪಾಯಿ ಮಾತ್ರ. ಇದರ ಜೊತೆಗೆ ಮಾರುತಿ ಸುಜುಕಿ ವಿಕ್ಟೋರಿಸ್ ಕಾರಿನ ಮೌಲ್ಯಕ್ಕೂ ತೆರಿಗೆ ಪಾವತಿಸಬೇಕಾದ ಅನಿವಾರ್ಯತೆ ಇರಲಿದೆ ಎನ್ನಲಾಗಿದೆ.
ರನ್ನರ್ ಅಪ್ ರಕ್ಷಿತಾ ಶೆಟ್ಟಿಗೂ ತಟ್ಟಿದ ತೆರಿಗೆ ಬಿಸಿ
ಕೇವಲ ವಿನ್ನರ್ ಗಿಲ್ಲಿ ಮಾತ್ರವಲ್ಲದೆ, ರನ್ನರ್ ಅಪ್ ಸ್ಥಾನ ಪಡೆದ ಕರಾವಳಿ ಬೆಡಗಿ ರಕ್ಷಿತಾ ಶೆಟ್ಟಿ ಅವರಿಗೂ ಈ ಆರ್ಥಿಕ ಹೊಡೆತ ತಪ್ಪಿಲ್ಲ. ರಕ್ಷಿತಾ ಅವರಿಗೆ ಒಟ್ಟು 25 ಲಕ್ಷ ರೂಪಾಯಿ ಬಹುಮಾನ ನೀಡಲಾಗಿದ್ದು, ನಿಯಮದಂತೆ ಇದರಲ್ಲಿ ಶೇಕಡಾ 30ರಷ್ಟು ಹಣ ತೆರಿಗೆಗಾಗಿ ಕಡಿತವಾಗಲಿದೆ. ಅಂದರೆ 25 ಲಕ್ಷ ರೂಪಾಯಿಯಲ್ಲಿ ಸರಿಸುಮಾರು 7.5 ಲಕ್ಷ ರೂಪಾಯಿ ಕಡಿತಗೊಂಡು, ಅಂತಿಮವಾಗಿ ರಕ್ಷಿತಾ ಅವರ ಕೈಗೆ 17 ಲಕ್ಷದ 50 ಸಾವಿರ ರೂಪಾಯಿ ಮಾತ್ರ ಸಿಗಲಿದೆ.
ಜನಪ್ರಿಯತೆಯ ಶಿಖರದಲ್ಲಿ ಗಿಲ್ಲಿ
ಸದನದ ಹೊರಗೆ ಗಿಲ್ಲಿ ಅವರ ಹವಾ ಜೋರಾಗಿಯೇ ಇದೆ. ಬಿಗ್ ಬಾಸ್ ಮನೆಗೆ ಹೋಗುವ ಮೊದಲು ಕೇವಲ ಒಂದು ಲಕ್ಷದಷ್ಟಿದ್ದ ಅವರ ಇನ್‌ಸ್ಟಾಗ್ರಾಮ್ ಫಾಲೋವರ್‌ಗಳ ಸಂಖ್ಯೆ ಈಗ 20 ಲಕ್ಷದ ಗಡಿ ದಾಟಿದೆ. 50 ಲಕ್ಷ ನಗದು ಮಾತ್ರವಲ್ಲದೆ, ಕಿಚ್ಚ ಸುದೀಪ್ ಅವರಿಂದ 10 ಲಕ್ಷ ರೂಪಾಯಿ ವೈಯಕ್ತಿಕ ಬಹುಮಾನ ಹಾಗೂ ಮಾರುತಿ ಸುಜುಕಿ ಕಂಪನಿಯಿಂದ ಹೊಸ ಕಾರನ್ನು ಕೂಡ ಅವರು ಪಡೆದಿದ್ದಾರೆ.

