
ರಾಜಕೀಯ ಸೇವಾ ಕ್ಷೇತ್ರ, ಅದಕ್ಕೆ ವಯಸ್ಸಿನ ಮಿತಿ ಇಲ್ಲ ಎಂದ ಬಸವರಾಜ ಬೊಮ್ಮಾಯಿ
ಮೀಸಲಾತಿ ಹೆಚ್ಚಳ ಸಮರ್ಥಿಸಿಕೊಂಡ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ
ಹಾವೇರಿಯಲ್ಲಿ ನಡೆದ ತಮ್ಮ 66ನೇ ಜನ್ಮದಿನದ ಸಮಾರಂಭದಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ದೇಶದಲ್ಲಿ ಸಂಪೂರ್ಣ ಸಾಮಾಜಿಕ ನ್ಯಾಯ ಜಾರಿಯಾಗಬೇಕಾದರೆ ಶೇ 50ರ ಮೀಸಲಾತಿ ಮಿತಿ ತೆಗೆದುಹಾಕಬೇಕು ಎಂದು ಪ್ರತಿಪಾದಿಸಿದರು.
ಪರಿಶಿಷ್ಟ ಜಾತಿ, ಪಂಗಡಗಳಿಗೆ ಮೀಸಲಾತಿ ಹೆಚ್ಚಿಸಿದ್ದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಇದೀಗ ಮೀಸಲಾತಿ ಹೆಚ್ಚಳವನ್ನು ಸಮರ್ಥಿಸಿಕೊಂಡಿದ್ದಾರೆ.
ಶೋಷಿತರಿಗೆ ಸಾಮಾಜಿಕ ನ್ಯಾಯ ಸಿಗಬೇಕಾದರೆ ಶೇ 50 ಮೀಸಲಾತಿ ಮಿತಿ ಹೋಗಬೇಕು. ಆ ಕಾರಣಕ್ಕಾಗಿಯೇ ಎಸ್ಸಿ ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿದ್ದೆ ಎಂದು ಹೇಳುವ ಮೂಲಕ ಮೀಸಲಾತಿ ಹೋರಾಟಕ್ಕೆ ದನಿಗೂಡಿಸಿದ್ದಾರೆ.
2022 ರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ ಪರಿಶಿಷ್ಟರ ಮೀಸಲಾತಿಯನ್ನು ಹೆಚ್ಚಳ ಮಾಡಿದ್ದರು. ಇದಕ್ಕಾಗಿ ಪ್ರತ್ಯೇಕ ಕಾಯ್ದೆ ಕೂಡ ಜಾರಿಗೆ ತಂದಿದ್ದರು. ಕಾಯ್ದೆಯನ್ನು ಸಂವಿಧಾನದ 9ನೇ ಅನುಸೂಚಿಗೆ ಸೇರಿಸಲು ಒತ್ತಡ ಹಾಕುವ ಮೊದಲೇ ಚುನಾವಣೆ ಘೋಷಣೆಯಾದ ಕಾರಣ ಒತ್ತಡ ಹಾಕಲು ಸಾಧ್ಯವಾಗಿರಲಿಲ್ಲ.
ಈಗ ಮೀಸಲಾತಿ ಹೆಚ್ಚಳವು ಹೈಕೋರ್ಟ್ ಅಂಗಳದಲ್ಲಿದ್ದು, ರಾಜಕೀಯ ಒತ್ತಡ ಹೆಚ್ಚುತ್ತಿದೆ. ಬುಧವಾರ ಹಾವೇರಿ ಜಿಲ್ಲೆಯ ಬಿಜೆಪಿ ವತಿಯಿಂದ ಪಕ್ಷದ ಕಚೇರಿಯಲ್ಲಿ ಏರ್ಪಡಿಸಿದ್ದ ತಮ್ಮ 66 ನೇ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಮೀಸಲಾತಿ ಹೆಚ್ಚಳದ ತಮ್ಮ ನಿಲುವು ಸಮರ್ಥಿಸಿಕೊಂಡರು.
"ನನ್ನ ರಾಜಕೀಯ ಪಯಣದಲ್ಲಿ ಹೊಸ ಆಯಾಮವನ್ನು ತಾವೆಲ್ಲರೂ ಸೇರಿ ಹುಟ್ಟು ಹಾಕಿ ಬೆಂಬಲವನ್ನು ಕೊಟ್ಟು ನನಗೆ ಅವಕಾಶ ಕೊಟ್ಟು ಹಾವೇರಿ ಜಿಲ್ಲೆಯ ಪ್ರತಿ ಗ್ರಾಮದಿಂದ ಹಿಡಿದು ಎಲ್ಲರೂ ನನಗೆ ಬೆಂಬಲಕೊಟ್ಟಿರುವುದಕ್ಕೆ ಧನ್ಯವಾದಗಳು. ನನಗೆ ಪ್ರೀತಿ, ವಿಶ್ವಾಸ ಕೊಟ್ಟಿರುವ ಹಾವೇರಿ ಜಿಲ್ಲೆಯ ಜನತೆಗೆ ಧನ್ಯವಾದಗಳು. ಯಾವುದೋ ಋಣಾನು ಬಂಧ ಈ ಬಾರಿ ಹಾವೇರಿ ಲೋಕಸಭೆ ಚುನಾವಣೆಯಲ್ಲಿ ಎಲ್ಲರೂ ಸೇರಿ ನನ್ನನ್ನು ಗೆಲಿಸಿದ್ದೀರಿ ಅತ್ಯಂತ ಕೃತಜ್ಞತೆಯಿಂದ ಸ್ಮರಿಸುತ್ತದೆ" ಎಂದು ಹೇಳಿದರು.
"ಶಿವರಾಜ್ ಸಜ್ಜನರ ಅವರರೊಂದಿಗೆ ಮೂವತ್ತು ವರ್ಷದಿಂದ ಸ್ನೇಹ ಸಂಬಂಧ ಇದೆ. ಅವರಿಗೆ ಹೆಚ್ಚು ಅವಕಾಶ ಸಿಗಲಿ, ರಾಜಕೀಯದಲ್ಲಿ. ಯಾವಾಗ ಅಲ್ಪ ವಿರಾಮ್ ಪೂರ್ಣ ವಿರಾಮ ಇರುತ್ತದೆ ನನಗೆ ಅರಿವಿದೆ, ಈಗ ಅಲ್ಪ ವಿರಾಮದಲ್ಲಿ ನಾವಿದ್ದೇವೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಾವೆಲ್ಲ ಕೆಲಸ ಮಾಡುತ್ತಿದ್ದೇವೆ ಎನ್ನುವುದೇ ನಮ್ಮ ಪುಣ್ಯ ಭಾಗ್ಯ. ನರೇಂದ್ರ ಮೋದಿಯವರ ದೂರ ದೃಷ್ಟಿ ಭಾರತ ಒಂದೇ ಅಲ್ಲ. ವಿಶ್ವದ ರಾಷ್ಟ್ರಗಳು ಭಾರತದೊಂದಿಗೆ ಬರುತ್ತಿವೆ. ನಿನ್ನೆ ಯುರೋಪಿಯನ್ ದೇಶಗಳು ಒಪ್ಪಂದ ಮಾಡಿಕೊಂಡಿವೆ. ಬಲಿಷ್ಟವಾಗಿರುವ ನಾಯಕತ್ವ ನೋಡಿ ಎಲ ದೇಶಗಳು ಭಾರತದ ಜೊತೆಗೆ ಬರುತ್ತಿವೆ, ಹಲವಾರು ಕಾರ್ಯಕ್ರಮಗಳನ್ನು ಮೋದಿಯವರು ಕೊಟ್ಟಿದ್ದಾರೆ. ಅದರ ಫಲಶೃತಿ ಸುಮಾರು 25 ಕೋಟಿ ಜನರು ಬಡತನ ರೇಖೆಗಿಂತ ಮೇಲೆತ್ತಿದ್ದಾರೆ. ಅಂತಹ ಆರ್ಥಿಕ ಶಕ್ತಿ ಕೊಟ್ಟ ನಾಯಕ ಪ್ರಧಾನಿ ಮೋದಿ" ಎಂದು ಹೇಳಿದರು.
ರಾಜಕೀಯ ಶಕ್ತಿ ಕೊಟ್ಟಿದ್ದು ಯಡಿಯೂರಪ್ಪ
"ನನಗೆ ರಾಜಕೀಯ ಶಕ್ತಿ ಕೊಟ್ಟಿದ್ದು ಬಿ.ಎಸ್ ಯಡಿಯೂರಪ್ಪ ಅವರನ್ನು ಮರೆಯಲು ಸಾಧ್ಯವಿಲ್ಲ. ನನ್ನ ಮೇಲೆ ವಿಶ್ವಾಸ ಇಟ್ಟು ನೀರಾವರಿ, ಕಾನೂನು, ಸಹಕಾರಿ, ಗ್ರಹ ಇಲಾಖೆಗಳಲ್ಲಿ ಕೆಲಸ ಮಾಡಲು ಅವಕಾಶ ಕೊಟ್ಟರು. ಹಲವಾರು ನೀತಿ ನಿಯಮ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಲು ಅವಕಾಶ ಕೊಟ್ಟರು. ಯಡಿಯೂರಪ್ಪ ಅವರನ್ನು ನಮ್ಮ ತಂದೆಯ ಸ್ಥಾನದಲ್ಲಿ ನೋಡುತ್ತೇನೆ" ಎಂದು ಹೇಳಿದರು.
ಸಮಾಜದಲ್ಲಿ ಯಾರು ವಂಚಿತರ ಪರವಾಗಿ ದನಿ ಎತ್ತುತ್ತಿಲ್ಲ. ನೊಂದವರ ಪರವಾಗಿ ಕೆಲಸ ಮಾಡಬೇಕು, ಅವರು ಮೇಲೆ ಬಂದಾಗ ದೇಶದ ಅಭಿವೃದ್ಧಿ ಆಗುತ್ತದೆ. ಇಲ್ಲದಿದ್ದರೆ ದೊಡ್ಡ ಸಮುದಾಯ ಬಿಟ್ಟು ಕೆಲಸ ಮಾಡಿದಂತಾಗುತ್ತದೆ ಎಂದರು.
ಮೀಸಲಾತಿ ಹೆಚ್ಚಳ ಮಾಡುವ ಸಂದರ್ಭ ಜೇನುಗೂಡಿಗೆ ಕೈ ಹಾಕಬೇಡಿ. ನಾನು ಬಡವರು ದಮನಿತರಿಗೆ ಅನುಕೂಲ ಕಲ್ಪಿಸಲು ಜೇನು ಗೂಡಿಗೆ ಕೈ ಹಾಕುತ್ತೇನೆ ಎಂದು ಎಸಿ/ಎಸ್ಸಿ ಮೀಸಲಾತಿ ಹೆಚ್ಚಳ ಮಾಡಿದೆ. ಕಾನೂನು ಪ್ರಕಾರ ಅದು ನಿಲ್ಲುತ್ತದೆ" ಎಂದರು.
ಫೆ.7 ಕ್ಕೆ ಸಮಾವೇಶ
ಗ್ರಾಮಗಳ ಅಭಿವೃದ್ಧಿ ಆಗಿದ್ದಾಗ ಮಾತ್ರ ದೇಶದ ಅಭಿವೃದ್ಧಿ ಆಗುತ್ತದೆ ಎಂದು ಗಾಂಧೀಜಿ ಹೇಳಿದ್ದು. ನಾನು ಸಿಎಂ ಆಗಿದ್ದಾಗ ಸಣ್ಣ ಗ್ರಾಮ ಪಂಚಾಯತಿಗೆ 30 ಲಕ್ಷ, ಮಧ್ಯಮ ಗ್ರಾಮ ಪಂಚಾಯತಿಗೆ 60 ಲಕ್ಷ ದೊಡ್ಡ ಪಂಚಾಯತಿಗಳಿಗೆ 1 ಕೋಟಿ ಕೋಟಿ ರೂ. ಅನುದಾನ ನೀಡಿದೆ. ಆರ್ಥಿಕ ವಿಕೇಂದ್ರಿಕರಣಕ್ಕೆ ಅವಕಾಶ ಕೊಡಲಾಗಿದೆ. ಸ್ಥಳೀಯ ಸಂಸ್ಥೆಗಳಿಗೆ ಸುಮಾರು 2 ಸಾವಿರ ಕೋಟಿ ರೂ. ಈ ಸರ್ಕಾರ ಕೊಟ್ಟಿಲ್ಲ ಆದ್ದರಿಂದ ಇವರಿಗೆ ಕೇಂದ್ರದ ವಿರುದ್ದ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಟೀಕಿಸಿದರು.
ಕಾಂಗ್ರೆಸ್‌ನವರು ಜಿ ರಾಮ್ ಜಿ ವಿರುದ್ಧ ಮಾತನಾಡುತ್ತಿದ್ದಾರೆ, ಅದರಲ್ಲಿ ಭ್ರಷ್ಟಾಚಾರ ನಿಲ್ಲಿಸಿ ಬಡವರಿಗೆ ನೇರವಾಗಿ ಹಣ ಹಾಕುವ ವ್ಯವಸ್ಥೆ ಆಗಿದೆ. ಗ್ರಾಮ ಪಂಚಾಯತಿಗೆ ಹೆಚ್ಚು ಅಧಿಕಾರ ಕೊಟ್ಟಿದೆ. ಕೇಂದ್ರ ಸರ್ಕಾರ ಆಡಳಿತಾತ್ಮಕವಾಗಿ ಹೆಚ್ಚು ಹಣ ನೀಡಿದ್ದಾರೆ. ಮೋದಿಯವರು 1.30 ಲಕ್ಷ ಕೋಟಿ ಹಣ ನೀಡಿದ್ದಾರೆ, ಇದು ಗ್ರಾಮೀಣ ಮಟ್ಡಕ್ಕೆ ಕೈ ತಲುಪಬೇಕು, ಫೆ. 7ಕ್ಕೆ ಜಿಲ್ಲೆಯ ಆರು ತಾಲೂಕುಗಳ ಗ್ರಾಮಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು ತಾಲೂಕು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರನ್ನು ಸೇರಿಸಿ ಬೃಹತ್ ಸಮಾವೇಶ ಮಾಡುತ್ತಿದ್ದೇವೆ. ಜಿ. ರಾಮ್ ಜಿ ವಿಚಾರದ ಬಗ್ಗೆ ಕಾಂಗ್ರೆಸ್ ಮಾಡುತ್ತಿರುವ ಈ ಪ್ರಚಾರದ ವಿರುದ್ದ ಸತ್ಯ ಬಹಿರಂಗಗೊಳಿಸುವ ಸಮಾವೇಶ ಮಾಡುತ್ತೇವೆ ಎಂದು ಹೇಳಿದರು.

