
ಬೆಂಗಳೂರು ಟರ್ಫ್ ಕ್ಲಬ್‌ಗೆ ಗುಡ್ ಬೈ: ಕುಣಿಗಲ್‌ಗೆ ರೇಸ್‌ಕೋರ್ಸ್ ಶಿಫ್ಟ್
ಕುಣಿಗಲ್ ಸ್ಟಡ್ ಫಾರಂನಲ್ಲಿರುವ ಸುಮಾರು 110 ಎಕರೆ ಜಮೀನನ್ನು ಬೆಂಗಳೂರು ಟರ್ಫ್ ಕ್ಲಬ್‌ಗೆ ಮುಂದಿನ 29 ವರ್ಷಗಳ ಅವಧಿಗೆ ಗುತ್ತಿಗೆ (Lease) ನೀಡಲು ಒಪ್ಪಿಗೆ ನೀಡಲಾಗಿದೆ.
ದಶಕಗಳ ಚರ್ಚೆ, ಕಾನೂನು ಹೋರಾಟ ಮತ್ತು ವಿವಾದಗಳಿಗೆ ತೆರೆ ಬಿದ್ದಿದೆ. ಬೆಂಗಳೂರಿನ ಹೃದಯ ಭಾಗದಲ್ಲಿದ್ದ ಪ್ರತಿಷ್ಠಿತ 'ಬೆಂಗಳೂರು ಟರ್ಫ್ ಕ್ಲಬ್' (BTC) ಜಾಗವನ್ನು ತೆರವುಗೊಳಿಸಿ, ನಗರಕ್ಕೆ ಅತ್ಯಗತ್ಯವಾಗಿರುವ 'ಉಸಿರಾಟದ ತಾಣ' (Lung Space) ನಿರ್ಮಿಸಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.
ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಐತಿಹಾಸಿಕ ತೀರ್ಮಾನ ಕೈಗೊಳ್ಳಲಾಗಿದ್ದು, ಟರ್ಫ್ ಕ್ಲಬ್ ಅನ್ನು ತುಮಕೂರು ಜಿಲ್ಲೆಯ ಕುಣಿಗಲ್ ಸ್ಟಡ್ ಫಾರಂಗೆ ಸ್ಥಳಾಂತರಿಸಲು ಅಧಿಕೃತ ಮುದ್ರೆ ಒತ್ತಲಾಗಿದೆ.
ಕುಣಿಗಲ್‌ಗೆ ರೇಸ್‌ಕೋರ್ಸ್ ಎಂಟ್ರಿ
ಸಂಪುಟದ ನಿರ್ಧಾರದಂತೆ, ಕುಣಿಗಲ್ ಸ್ಟಡ್ ಫಾರಂನಲ್ಲಿರುವ ಸುಮಾರು 110 ಎಕರೆ ಜಮೀನನ್ನು ಬೆಂಗಳೂರು ಟರ್ಫ್ ಕ್ಲಬ್‌ಗೆ ಮುಂದಿನ 29 ವರ್ಷಗಳ ಅವಧಿಗೆ ಗುತ್ತಿಗೆ (Lease) ನೀಡಲು ಒಪ್ಪಿಗೆ ನೀಡಲಾಗಿದೆ. ಕುದುರೆ ರೇಸಿಂಗ್‌ಗೆ ಹೆಸರಾಗಿದ್ದ ಈ ಐತಿಹಾಸಿಕ ತಾಣದಲ್ಲಿ ಇನ್ಮುಂದೆ ಪೂರ್ಣ ಪ್ರಮಾಣದ ರೇಸ್‌ಕೋರ್ಸ್ ತಲೆ ಎತ್ತಲಿದೆ.
ರೇಸ್‌ಕೋರ್ಸ್ ರಸ್ತೆಯಲ್ಲಿರುವ ಹಾಲಿ ಟರ್ಫ್ ಕ್ಲಬ್ ಜಾಗ ಸುಮಾರು 80 ಎಕರೆಗೂ ಹೆಚ್ಚಿದೆ. ನಗರದ ವಾಹನ ದಟ್ಟಣೆ ಮತ್ತು ಮಾಲಿನ್ಯದ ನಡುವೆ ಇರುವ ಈ ಅಮೂಲ್ಯ ಜಾಗವನ್ನು ಕಾಂಕ್ರೀಟ್ ಕಾಡಾಗಲು ಬಿಡದೆ, ಸಾರ್ವಜನಿಕರಿಗೆ ಮುಕ್ತವಾದ ಹಸಿರು ತಾಣವನ್ನಾಗಿ ಅಭಿವೃದ್ಧಿಪಡಿಸಲು ಸರ್ಕಾರ ನಿರ್ಧರಿಸಿದೆ. ಇದು ಬೆಂಗಳೂರಿನ ಪರಿಸರಕ್ಕೆ ಹೊಸ ಚೈತನ್ಯ ನೀಡಲಿದೆ.
ಟರ್ಫ್ ಕ್ಲಬ್‌ನ ಲೀಸ್ ಅವಧಿ ಈಗಾಗಲೇ ಮುಗಿದಿದ್ದು, ಸರ್ಕಾರಕ್ಕೆ ಬರಬೇಕಾದ ಬಾಕಿ ಹಣವನ್ನೂ ಬಿಡುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಕ್ಲಬ್‌ನ ವಾರ್ಷಿಕ ವಹಿವಾಟಿನ ಶೇ. 2 ರಷ್ಟು ಹಣವನ್ನು ಬಾಕಿ (ಸುಸ್ತಿದಾರರ ಹಣ) ರೂಪದಲ್ಲಿ ಕಡ್ಡಾಯವಾಗಿ ವಸೂಲಿ ಮಾಡಲು ಸಂಪುಟ ನಿರ್ಧರಿಸಿದೆ.
ದಶಕಗಳ 'ಸ್ಥಳಾಂತರ'ದ ಕಥೆ
ಟರ್ಫ್ ಕ್ಲಬ್ ಸ್ಥಳಾಂತರದ ಪ್ರಸ್ತಾಪ ಇವತ್ತಿನದಲ್ಲ. 1968ರಲ್ಲೇ ಈ ಬಗ್ಗೆ ಮೊದಲ ಬಾರಿ ಧ್ವನಿ ಎತ್ತಲಾಗಿತ್ತು. 2010ರಲ್ಲಿ ಹೈಕೋರ್ಟ್ ಆದೇಶ ನೀಡಿದಾಗ ಚಿಕ್ಕಜಾಲಕ್ಕೆ ಸ್ಥಳಾಂತರಿಸುವ ಮಾತು ಕೇಳಿಬಂದಿತ್ತು. ನಂತರ ದೊಡ್ಡಜಾಲದ ಹೆಸರೂ ಪ್ರಸ್ತಾಪವಾಯಿತು. ಸದನ ಸಮಿತಿ ಕೂಡ ನಗರದ ಮಧ್ಯದಲ್ಲಿ ಜೂಜಾಟದ ಕೇಂದ್ರದ ಬದಲು ಉದ್ಯಾನವನ ಇರಲಿ ಎಂದು ಶಿಫಾರಸು ಮಾಡಿತ್ತು. ಆದರೆ, ಪ್ರತಿ ಬಾರಿಯೂ ಒಂದಲ್ಲಾ ಒಂದು ಕಾರಣಕ್ಕೆ ಸ್ಥಳಾಂತರ ನೆನೆಗುದಿಗೆ ಬಿದ್ದಿತ್ತು. ಈಗ ಸರ್ಕಾರದ ದಿಟ್ಟ ನಿರ್ಧಾರದಿಂದ ಬೆಂಗಳೂರಿನ ನಕ್ಷೆಯಲ್ಲಿ ದೊಡ್ಡ ಬದಲಾವಣೆಯಾಗುವುದು ಖಚಿತವಾಗಿದೆ.

