
ಸಾಂದರ್ಭಿಕ ಚಿತ್ರ
ಪ್ರವಾಸೋದ್ಯಮಕ್ಕೆ ಚೈತನ್ಯ| ಬಂಡೀಪುರ, ನಾಗರಹೊಳೆ ಸಫಾರಿ ಪುನಾರಂಭ
ಬಂಡೀಪುರದಲ್ಲಿನ ಸಫಾರಿಯನ್ನು 5 ಗಂಟೆಗೆ ತಗ್ಗಿಸಲಾಗಿದೆ. ಸುಂಕದಕಟ್ಟೆಯಲ್ಲಿ 6 ಗಂಟೆ ಹಾಗೂ ನಾಗರಹೊಳೆಯಲ್ಲಿ 4 ಗಂಟೆ ಕಾಲ ಮಾತ್ರ ಸಫಾರಿಗೆ ಪ್ರಥಮ ಹಂತದಲ್ಲಿ ಅನುಮತಿಸಲಾಗಿದೆ ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಮಾನವ-ವನ್ಯಜೀವಿ ಸಂಘರ್ಷದ ವೇಳೆ ಹುಲಿ ದಾಳಿಯಿಂದ ಸರಣಿ ಸಾವು ಸಂಭವಿಸಿದ ಹಿನ್ನೆಲೆಯಲ್ಲಿ ಕಳೆದ ನಾಲ್ಕು ತಿಂಗಳಿಂದ (ನ. 7) ಸ್ಥಗಿತಗೊಳಿಸಲಾಗಿದ್ದ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಸಫಾರಿಯನ್ನು ಪುನಾರಂಭಿಸಲು ಸರ್ಕಾರ ನಿರ್ಧರಿಸಿದ್ದು, ಪ್ರಾಣಿ ಪ್ರಿಯರಲ್ಲಿ ಸಂತಸ ಹೆಚ್ಚಿಸಿದೆ.
ಬುಧವಾರ (ಫೆ.18) ವಿಕಾಸಸೌಧದಲ್ಲಿ ನಡೆದ ಹಿರಿಯ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಮಾತನಾಡಿದ ಸಚಿವ ಈಶ್ವರ್ ಖಂಡ್ರೆ, ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಪರಿಸರ ಪ್ರವಾಸೋದ್ಯಮದ ಸಾಮರ್ಥ್ಯವನ್ನು ವೈಜ್ಞಾನಿಕವಾಗಿ ನಿಗದಿಪಡಿಸಲು ರಚಿಸಲಾಗಿರುವ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದ ತಾಂತ್ರಿಕ ಸಮಿತಿ ನೀಡಿರುವ ಪ್ರಾಥಮಿಕ ವರದಿಯ ಪರಾಮರ್ಶೆ ನಡೆಸಿ ಈ ನಿರ್ಧಾರ ಮಾಡಲಾಗಿದೆ ಎಂದರು.
ಹೆಗ್ಗಡ ದೇವನಕೋಟೆಯಲ್ಲಿ ರೈತರೂ ಸೇರಿದಂತೆ ಸಾವಿರಾರು ಸ್ಥಳೀಯರು, ರೆಸಾರ್ಟ್ ಸಿಬ್ಬಂದಿ ಪ್ರತಿಭಟನೆ ನಡೆಸಿ ಸಫಾರಿ ನಿಲ್ಲಿಸಿರುವುದರಿಂದ ತಮ್ಮ ಜೀವನೋಪಾಯಕ್ಕೆ ಅಡ್ಡಿಯಾಗಿದ್ದು, ಸಫಾರಿ ಪುನಾರಂಭಿಸಬೇಕು ಎಂಬ ಮನವಿ ಹಿನ್ನೆಲೆ ಜೀವವೂ ಉಳಿಯಬೇಕು, ಜೀವನೋಪಾಯವೂ ಇರಬೇಕು ಎಂಬ ಕಾರಣಕ್ಕಾಗಿ ಸಫಾರಿಯನ್ನು ನಿಯಂತ್ರಿತವಾಗಿ ಮತ್ತು ಹಂತ ಹಂತವಾಗಿ ಪುನಾರಂಭ ಮಾಡಲಾಗುವುದು.
ಈ ಹಿಂದೆ ಬಂಡೀಪುರದಲ್ಲಿ 8 ಗಂಟೆಗಳ ಕಾಲ ಸಫಾರಿ ನಡೆಯುತ್ತಿತ್ತು. ಈಗ ಅದನ್ನು 5 ಗಂಟೆಗೆ ತಗ್ಗಿಸಲಾಗಿದೆ. ಅದೇ ರೀತಿ ಸುಂಕದಕಟ್ಟೆಯಲ್ಲಿ 6 ಗಂಟೆ ಹಾಗೂ ನಾಗರಹೊಳೆಯಲ್ಲಿ 4 ಗಂಟೆ ಕಾಲ ಮಾತ್ರ ಸಫಾರಿಗೆ ಪ್ರಥಮ ಹಂತದಲ್ಲಿ ಅನುಮತಿಸಲಾಗಿದೆ ಎಂದು ವಿವರಿಸಿದರು.
ಸಿಎಂ ನೇತೃತ್ವದ ಸಭೆಯಲ್ಲಿ ನಿರ್ಧಾರ
ಕಳೆದ ಜ. 2ರಂದು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ವನ್ಯಜೀವಿ ಮಂಡಳಿಯ 20ನೇ ಸಭೆಯಲ್ಲಿ ತಾಂತ್ರಿಕ ಸಮಿತಿ ರಚಿಸಿ, ಅಧ್ಯಯನ ವರದಿಯ ಆಧಾರದಲ್ಲಿ ಹಂತ ಹಂತವಾಗಿ ಸಫಾರಿ ಆರಂಭಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಅದರಂತೆ ಅಪರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಇತರೆ ಅಧಿಕಾರಿಗಳು, ಭಾರತೀಯ ವನ್ಯಜೀವಿ ಸಂಸ್ಥೆ, ಡೆಹ್ರಾಡೂನ್ (WII) ವಿಜ್ಞಾನಿ, ಭಾರತೀಯ ಅರಣ್ಯ ನಿರ್ವಹಣಾ ಸಂಸ್ಥೆ, ಭೋಪಾಲ್ (IIFM) ರ ಪ್ರಾಧ್ಯಾಪಕರನ್ನು ಒಳಗೊಂಡ ತಾಂತ್ರಿಕ ಸಮಿತಿ ರಚಿಸಲಾಗಿತ್ತು.
ಈ ಸಮಿತಿ ನೀಡಿದ ಮಧ್ಯಂತರ ವರದಿಯ ಬಗ್ಗೆ ಕೂಲಂಕಷವಾಗಿ ಚರ್ಚಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಸಫಾರಿ ಆದಾಯದಲ್ಲಿ ಸ್ಥಳೀಯ ಅಭಿವೃದ್ಧಿಗೆ ಒತ್ತು
ಪ್ರಸ್ತುತ ಪರಿಸರ ಪ್ರವಾಸೋದ್ಯಮವಾದ ಸಫಾರಿಯಿಂದ ಬರುವ ಒಟ್ಟು ಆದಾಯದ ಮೂರನೇ ಒಂದು ಭಾಗದಷ್ಟು ಹಣವನ್ನು ಅರಣ್ಯದಂಚಿನ ಗ್ರಾಮಗಳ ಸ್ಥಳೀಯ ಸಮುದಾಯದವರಿಗೆ ಕೌಶಲ್ಯ ಅಭಿವೃದ್ಧಿಗಾಗಿ, ಜಾನುವಾರುಗಳಿಗೆ ಮೇವು ಬೆಳೆಸಲು ಮತ್ತು ಪರಿಸರ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸುವ ಷರತ್ತಿನೊಂದಿಗೆ ಆರಂಭಿಸಲು ಮತ್ತು ವನ್ಯಜೀವಿ ಮಾನವ ಸಂಘರ್ಷ ತಡೆಯಲು ಸೂಕ್ತ ಸಿಬ್ಬಂದಿಯನ್ನು ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜಿಸುವ ಷರತ್ತಿನೊಂದಿಗೆ ಆರಂಭಿಸಲು ಸಮ್ಮತಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜಿಪಿಎಸ್ ಕಡ್ಡಾಯ
ಸಫಾರಿ ವಾಹನಗಳನ್ನು ಕತ್ತಲಾದ ಬಳಿಕ, ಹೆಚ್ಚುವರಿ ಅವಧಿಗೆ ಓಡಿಸುವುದು ಸೇರಿದಂತೆ ದುರ್ಬಳಕೆ ತಡೆಗಟ್ಟಲು ಕಡ್ಡಾಯವಾಗಿ ಮುಂದಿನ 2 ತಿಂಗಳೊಳಗಾಗಿ ಎಲ್ಲ ಸಫಾರಿ ವಾಹನಗಳಿಗೆ ಎಂಜಿನ್ ಸಂಪರ್ಕಿತ ಜಿಪಿಎಸ್ ಮತ್ತು ಡ್ಯಾಷ್ ಕ್ಯಾಮ್ ಅಳವಡಿಸಬೇಕು ಎಂದು ಸೂಚಿಸಲಾಗಿದೆ.
ಕಳೆದ ಡಿ. 28ರಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ, ಸರಗೂರು ಗಡಿ ಪ್ರದೇಶಗಳಲ್ಲಿ ಸ್ಥಾಪಿಸಿರುವ ಮಾನವ-ವನ್ಯಜೀವಿ ನಿರ್ವಹಣಾ ಶಿಬಿರಗಳಿಗೂ ಭೇಟಿ ನೀಡಿ ಅಧಿಕಾರಿಗಳು ಪರಿಶೀಲಿಸಿದ್ದು, ಸಫಾರಿ ಸ್ಥಗಿತಗೊಳಿಸಿದ ಬಳಿಕ ಹೆಚ್ಚುವರಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಕಳೆದ 2 ತಿಂಗಳಲ್ಲಿ ಯಾವುದೇ ಪ್ರಮುಖ ಅಹಿತಕರ ಘಟನೆಗಳು ನಡೆಯದಿರುವ ಹಿನ್ನೆಲೆಯಲ್ಲಿ ಹಂತ ಹಂತವಾಗಿ ಸಫಾರಿ ಪುನಾರಂಭಿಸಬಹುದು ಎಂದು ಸಮಿತಿ ಶಿಫಾರಸು ಮಾಡಿತ್ತು ಎಂದರು.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಒಟ್ಟು ವಿಸ್ತೀರ್ಣ 1,036 ಚದರ ಕಿ. ಮೀಟರ್ ಆಗಿದ್ದು, ಇದರಲ್ಲಿ ಪ್ರವಾಸೋದ್ಯಮ ವಲಯ ಕೇವಲ 80 ಚದರ ಕಿ.ಮೀ ಆಗಿದೆ. ನಾಗರಹೊಳೆಯ ಒಟ್ಟು ವಿಸ್ತೀರ್ಣ 844 ಚದರ ಕಿಲೋ ಮೀಟರ್ ಆಗಿದ್ದು, ಪರಿಸರ ಪ್ರವಾಸೋದ್ಯಮ ವಲಯ ಕೇವಲ 63 ಚದರ ಕಿ. ಮೀಟರ್ ಅಂದರೆ ಶೇ.7.5 ಮಾತ್ರ. ಹೀಗಾಗಿ ಹುಲಿಗಳು ಕಾಡಿನಿಂದ ನಾಡಿಗೆ ಬರುತ್ತಿರುವುದಕ್ಕೆ ಸಫಾರಿಯೇ ಕಾರಣ ಎಂದು ಹೇಳಲು ಯಾವುದೇ ವೈಜ್ಞಾನಿಕ ಆಧಾರ ಇಲ್ಲ ಎಂದು ಹಿರಿಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ ಎಂದು ವಿವರಿಸಿದರು.
ಶೇ.50ರಷ್ಟು ಸಫಾರಿ ವಾಹನ ಬಳಕೆ
ಬಂಡೀಪುರ, ಬಿಆರ್‌ಟಿ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ಮತ್ತು ಮಲೆ ಮಹದೇಶ್ವರ ವನ್ಯಜೀವಿ ಧಾಮದಲ್ಲಿ ಮುಂಚೂಣಿ ಸಿಬ್ಬಂದಿ ಕೊರತೆ ಮತ್ತು ವಾಹನಗಳ ಅಗತ್ಯದ ಬಗ್ಗೆ ಚರ್ಚಿಸಲಾಗಿದ್ದು, ನ. 7ಕ್ಕೆ ಮುನ್ನ ಸಫಾರಿಯಲ್ಲಿ ಬಳಕೆಯಾಗುತ್ತಿದ್ದ ವಾಹನಗಳ ಪೈಕಿ ಪ್ರಥಮ ಹಂತದಲ್ಲಿ ಶೇ.50ರಷ್ಟು ವಾಹನಗಳನ್ನು ಮಾತ್ರವೇ ಬಳಕೆ ಮಾಡಲು ನಿರ್ಧರಿಸಲಾಗಿದ್ದು, ಉಳಿದ ಶೇ. 50ರಷ್ಟು ವಾಹನ ಮತ್ತು ಸಿಬ್ಬಂದಿಯನ್ನು ಅರಣ್ಯದಂಚಿನ ಗ್ರಾಮಗಳ ಬಳಿ ಗಸ್ತು ಹೆಚ್ಚಿಸಲು ಬಳಸುವ ಮೂಲಕ ವನ್ಯ ಮೃಗಗಳು ನಾಡಿಗೆ ಬಾರದಂತೆ ತಡೆಯಲು ಸೂಚಿಸಲಾಗಿದೆ. ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕೇವಲ ಶೇ.50ರಷ್ಟು ವಾಹನ ಬಳಕೆ ಮಾಡಲಾಗುವುದು ಎಂದು ತಿಳಿಸಿದರು.
ಎನ್‌ಟಿಸಿಎಗೆ ತಿಳಿಸಿಯೇ ಹುಲಿ ಸೆರೆ
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ರಾಜ್ಯದಲ್ಲಿ ಹುಲಿಗಳನ್ನು ಹಿಡಿಯುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಇಲಾಖೆ ಪ್ರತಿಯೊಂದು ಹುಲಿಯನ್ನು ಸೆರೆ ಹಿಡಿಯುವಾಗಲೂ ಎನ್‌ಟಿಸಿಎ ಪ್ರಮಾಣಿತ ಮಾನದಂಡ ಅನುಸರಿಸಿ, ಸಮಿತಿ ರಚಿಸಿ ಅದರ ಶಿಫಾರಸಿನಂತೆ ಕಾರ್ಯಾಚರಣೆ ನಡೆಸಲಾಗಿದೆ. ಈ ಸಮಿತಿಯಲ್ಲಿ ಎನ್‌ಟಿಸಿಎ ಪ್ರತಿನಿಧಿ ಸಹ ಇರುತ್ತಾರೆ ಎಂದು ಸ್ಪಷ್ಟಪಡಿಸಿದರು.

