
Ballari| ಜೈಲರ್ ಮೇಲೆ ಕೈದಿಗಳಿಂದ ಹಲ್ಲೆ; ಜೈಲುಗಳಲ್ಲಿ ನಿಲ್ಲದ ಪುಂಡಾಟ
ಜೈಲುಗಳಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದ ನಂತರ ರಾಜ್ಯ ಸರ್ಕಾರ ತೀವ್ರ ಟೀಕೆಗೆ ಗುರಿಯಾಗಿತ್ತು.
ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಪುಂಡಾಟ ಮಿತಿ ಮೀರಿದೆ. ಜೈಲಿನಲ್ಲಿ ಬೀಡಿ, ಸಿಗರೇಟ್ ನೀಡುವಂತೆ ಪಟ್ಟು ಹಿಡಿದ ಕೈದಿಗಳು, ಜೈಲರ್ ಅಶೋಕ ಹೊಸಮನಿ ಎಂಬುವರ ಮೇಲೆ ಹಲ್ಲೆ ನಡೆಸಿರುವ ಘಟನೆ ಬುಧವಾರ(ಏ.8) ನಡೆದಿದೆ.
ಕೈದಿಗಳಾದ ಅಲ್ತಾಫ್, ರಶೀದ್ ಸೇರಿ ಐವರು ಕೈದಿಗಳು ಜೈಲರ್ ಜೊತೆ ವಾಗ್ವಾದಕ್ಕಿಳಿದು, ಹಲ್ಲೆ ಮಾಡಿದ್ದಾರೆ. ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೈಲುಗಳಲ್ಲಿ ಹೆಚ್ಚಿದ ಪುಂಡಾಟ
ಜೈಲುಗಳಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದ ನಂತರ ರಾಜ್ಯ ಸರ್ಕಾರ ತೀವ್ರ ಟೀಕೆಗೆ ಗುರಿಯಾಗಿತ್ತು. ಬೆಂಗಳೂರಿನ ಪರಪ್ಪನ ಅಗ್ರಹಾರ, ಬೆಳಗಾವಿಯ ಹಿಂಡಲಗಾ ಜೈಲುಗಳಲ್ಲಿ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಈಗ ಬೀಡಿ, ಸಿಗರೇಟು ಬಳಕೆಗೆ ಅವಕಾಶ ನೀಡದ ಹಿನ್ನೆಲೆ ಕೈದಿಗಳೇ ಜೈಲರ್ ಮೇಲೆ ದಾಳಿ ನಡೆಸಿರುವುದು ಚರ್ಚೆಗೆ ಗ್ರಾಸವಾಗಿದೆ.
ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲೂ ಕೆಲ ದಿನಗಳ ಹಿಂದೆ ಇಂತಹದ್ದೇ ಘಟನೆ ನಡೆದಿತ್ತು. ವಿಚಾರಣಾಧೀನ ಕೈದಿ ಶಾಹೀದ್ ಖುರೇಶಿ ಎಂಬಾತ ಗಾಂಜಾ ನೀಡುವಂತೆ ಒತ್ತಾಯಿಸಿ ಸಹಾಯಕ ಜೈಲರ್ ಜಿ.ಆರ್. ಕಾಂಬಳೆ ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದ.
2025 ಡಿ.11ರಂದು ಘಟನೆ ನಡೆದಿದ್ದರೂ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದ ಕಾರಣ ವಿವಾದವಾಗುವ ಕಾರಣ ಉನ್ನತ ಅಧಿಕಾರಿಗಳು ಘಟನೆಯನ್ನು ಗೌಪ್ಯವಾಗಿಡಲು ಪ್ರಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಗಾಯಾಳು ಅಧಿಕಾರಿಗೆ ಚಿಕಿತ್ಸೆ ನೀಡಿದ ವೈದ್ಯರು ಮಾಹಿತಿ ಬಹಿರಂಗಪಡಿಸಿದ ನಂತರವಷ್ಟೇ ಪ್ರಕರಣ ಬೆಳಕಿಗೆ ಬಂದಿತ್ತು.
ಪರಪ್ಪನ ಅಗ್ರಹಾರದಲ್ಲೂ ರಾಜಾತಿಥ್ಯ
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಮೊಬೈಲ್ ತಪಾಸಣೆಗೆ ಹೋದ ಸಿಬ್ಬಂದಿಗೆ ಕೈದಿಗಳು ಬೆದರಿಕೆ ಹಾಕಿದ ಪ್ರಕರಣಗಳು ಮಾಸುವ ಮುನ್ನವೇ ಐಷಾರಾಮಿ ಜೀವನದ ವಿಡಿಯೊಗಳು ವೈರಲ್ ಆಗಿ ಸದ್ದು ಮಾಡಿದ್ದವು. ಹಣ ನೀಡಿದರೆ ಮೊಬೈಲ್, ಟಿವಿ ಸೇರಿದಂತೆ ಎಲ್ಲಾ ಸೌಲಭ್ಯಗಳು ಕೈದಿಗಳಿಗೆ ಸಿಗಲಿದೆ ಎಂದು ಸ್ವತಃ ಕೈದಿಗಳೇ ವಿಡಿಯೋದಲ್ಲಿ ಹೇಳಿಕೆ ನೀಡಿದ್ದರು.
ಕಾರವಾರದಲ್ಲೂ ಜೈಲು ಸಿಬ್ಬಂದಿಗೆ ಬೆದರಿಕೆ
ಕೆಲ ತಿಂಗಳ ಹಿಂದೆ ಕಾರವಾರ ಜೈಲಿನಲ್ಲೂ ತಂಬಾಕು ಮತ್ತು ಮಾದಕ ವಸ್ತುಗಳ ಬಳಕೆಗೆ ಅಡ್ಡಿಪಡಿಸಿದ ಕಾರಣಕ್ಕೆ ಜೈಲರ್ ಹಾಗೂ ಸಿಬ್ಬಂದಿ ಮೇಲೆ ಮಂಗಳೂರು ಮೂಲದ ಕೈದಿಗಳಾದ ಮೊಹಮ್ಮದ್ ಅಬ್ದುಲ್, ಫಯಾನ್ ಮತ್ತು ಕೌಶಿಕ್ ನಿಹಾಲ್ ಹಲ್ಲೆಗೆ ಮುಂದಾಗಿದ್ದರು. ಪೊಲೀಸರು ಸಕಾಲಕ್ಕೆ ಧಾವಿಸಿದ್ದರಿಂದ ಅನಾಹುತ ತಪ್ಪಿತ್ತು. ಇಷ್ಟೆಲ್ಲಾ ಘಟನೆಗಳು ನಡೆದರೂ ಸರ್ಕಾರ ಮತ್ತು ಕಾರಾಗೃಹ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿರುವ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

