ಲಕ್ಷ್ಮೀಪೂಜೆ ಹೆಸರಲ್ಲಿ ಬಾಲಕಿಯರ ವೇಶ್ಯಾವಾಟಿಕೆ ಜಾಲ ಭೇದಿಸಿದ ಬಳ್ಳಾರಿ ಪೊಲೀಸರು
x

ಲಕ್ಷ್ಮೀಪೂಜೆ ಹೆಸರಲ್ಲಿ ಬಾಲಕಿಯರ ವೇಶ್ಯಾವಾಟಿಕೆ ಜಾಲ ಭೇದಿಸಿದ ಬಳ್ಳಾರಿ ಪೊಲೀಸರು

ಪೊಲೀಸರ ವಿಶೇಷ ತಂಡವಾದ ಅಕ್ಕ ಪಡೆ ಸುಮಾರು ಒಂದೂವರೆ ತಿಂಗಳ ಕಾಲ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಜಾಲದ ಕರಾಳತೆ ಬಯಲಾಗಿದ್ದು, ಪ್ರಕರಣ ಸಂಬಂಧ 11 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.


Click the Play button to hear this message in audio format

ಬಡ ಕುಟುಂಬದ ಅಪ್ರಾಪ್ತ ಬಾಲಕಿಯರು ಹಾಗೂ ಅವಿವಾಹಿತ ಯುವತಿಯರಿಗೆ ಹಣದ ಆಮಿಷವೊಡ್ಡಿ, ಲಕ್ಷ್ಮೀ ಪೂಜೆಯ ಹೆಸರಿನಲ್ಲಿ ವೇಶ್ಯಾವಾಟಿಕೆ ಮತ್ತು ಲೈಂಗಿಕ ದೌರ್ಜನ್ಯಕ್ಕೆ ತಳ್ಳುತ್ತಿದ್ದ ಬೃಹತ್ ಅಂತಾರಾಜ್ಯ ಜಾಲವೊಂದನ್ನು ಬಳ್ಳಾರಿ ಜಿಲ್ಲಾ ಪೊಲೀಸರು ಭೇದಿಸಿದ್ದಾರೆ. ಜಿಲ್ಲಾ ಪೊಲೀಸರ ವಿಶೇಷ ತಂಡವಾದ ಅಕ್ಕ ಪಡೆ ಸುಮಾರು ಒಂದೂವರೆ ತಿಂಗಳ ಕಾಲ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಈ ಜಾಲದ ಕರಾಳ ಮುಖ ಬಯಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 11 ಮಂದಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತಲೆಮರೆಸಿಕೊಂಡಿರುವ ಇನ್ನುಳಿದ ಐವರು ಆರೋಪಿಗಳ ಪತ್ತೆಗೆ ಪೊಲೀಸರು ತೀವ್ರ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಬಳ್ಳಾರಿ ನಗರದ ಮಿಲ್ಲರ್‌ಪೇಟೆ ಪ್ರದೇಶವನ್ನು ಕೇಂದ್ರವಾಗಿಸಿಕೊಂಡು ಕಳೆದ ಒಂದೂವರೆ ತಿಂಗಳಿನಿಂದ ಈ ಅಕ್ರಮ ದಂಧೆ ವ್ಯವಸ್ಥಿತವಾಗಿ ನಡೆಯುತ್ತಿತ್ತು. ಪ್ರಕರಣದ ಪ್ರಮುಖ ಆರೋಪಿ ಗೋವಿಂದಮ್ಮ ಎಂಬಾಕೆಯ ನೇತೃತ್ವದಲ್ಲಿ ಒಟ್ಟು 16 ಮಂದಿಯ ತಂಡವು ಸುಲಭವಾಗಿ ಹಣ ಸಂಪಾದಿಸುವ ದುರುದ್ದೇಶದಿಂದ ಬಡ ಹಾಗೂ ಅಮಾಯಕ ಹೆಣ್ಣುಮಕ್ಕಳನ್ನು ಗುರಿಯಾಗಿಸಿಕೊಂಡಿತ್ತು. ವಿಶೇಷವಾಗಿ ಅವಿವಾಹಿತ ಯುವತಿಯರು ಈ ಗ್ಯಾಂಗ್ ಟಾರ್ಗೆಟ್ ಮಾಡುತ್ತಿತ್ತು. ಮೊದಲಿಗೆ ಬಾಲಕಿಯರು ಮತ್ತು ಯುವತಿಯರಿಗೆ ಹಣದ ಆಸೆ ತೋರಿಸಿ, ವಿಶೇಷ ಲಕ್ಷ್ಮೀ ಪೂಜೆ ಮಾಡಿದರೆ ಮನೆಯಲ್ಲಿ ಹಣದ ಮಳೆ ಸುರಿಯುತ್ತದೆ, ಆರ್ಥಿಕ ಸಂಕಷ್ಟಗಳೆಲ್ಲಾ ದೂರವಾಗುತ್ತವೆ ಎಂದು ನಂಬಿಸಿ ಮನವೊಲಿಸುತ್ತಿದ್ದರು. ಬಳಿಕ ಪೂಜೆಯ ನೆಪದಲ್ಲಿ ಬಾಲಕಿಯರ ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿಕೊಳ್ಳುತ್ತಿದ್ದರು. ನಂತರ ಅದೇ ವಿಡಿಯೋಗಳನ್ನು ಮುಂದಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಾ, ಅವರನ್ನು ಬಲವಂತವಾಗಿ ವೇಶ್ಯಾವಾಟಿಕೆ ದಂಧೆಗೆ ದೂಡುತ್ತಿದ್ದರು. ಅಷ್ಟೇ ಅಲ್ಲದೆ, ಈ ಅಶ್ಲೀಲ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಗಿರಾಕಿಗಳನ್ನು ಆಕರ್ಷಿಸುತ್ತಿದ್ದರು ಎಂಬ ಆಘಾತಕಾರಿ ಅಂಶ ತನಿಖೆಯಿಂದ ಬೆಳಕಿಗೆ ಬಂದಿದೆ.

ಅಂತರಜಿಲ್ಲಾ ಹಾಗೂ ಅಂತಾರಾಜ್ಯ ವ್ಯಾಪ್ತಿ

ಈ ಜಾಲದ ಕಬಂಧಬಾಹುಗಳು ಕೇವಲ ಬಳ್ಳಾರಿಗೆ ಮಾತ್ರ ಸೀಮಿತವಾಗಿರಲಿಲ್ಲ. ಬಾಲಕಿಯರನ್ನು ವೇಶ್ಯಾವಾಟಿಕೆಗಾಗಿ ರಾಜ್ಯದ ಪ್ರಮುಖ ನಗರಗಳಾದ ಬೆಂಗಳೂರು, ವಿಜಯಪುರ ಸೇರಿದಂತೆ ನೆರೆಯ ಆಂಧ್ರಪ್ರದೇಶದ ಅನಂತಪುರ ಮತ್ತಿತರ ಪ್ರದೇಶಗಳಿಗೂ ಕಳುಹಿಸಲಾಗುತ್ತಿತ್ತು. ದಂಧೆಯಿಂದ ಸಂಗ್ರಹವಾಗುತ್ತಿದ್ದ ಹಣವನ್ನು ಆರೋಪಿಗಳು ಅತ್ಯಂತ ವ್ಯವಸ್ಥಿತವಾಗಿ ಮೂರು ಪಾಲುಗಳಾಗಿ ಹಂಚಿಕೊಳ್ಳುತ್ತಿದ್ದರು. ಒಂದು ಭಾಗವನ್ನು ಲಕ್ಷ್ಮೀ ಪೂಜೆಯ ಹೆಸರಿನಲ್ಲಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ನಕಲಿ ಸ್ವಾಮೀಜಿಗೆ, ಮತ್ತೊಂದು ಭಾಗವನ್ನು ಸಂತ್ರಸ್ತ ಬಾಲಕಿಗೆ ಹಾಗೂ ಮೂರನೇ ಭಾಗವನ್ನು ಯುವತಿಯರನ್ನು ಕರೆತರುತ್ತಿದ್ದ ಮಧ್ಯವರ್ತಿಗಳಿಗೆ ಹಂಚಿಕೆ ಮಾಡಲಾಗುತ್ತಿತ್ತು.

ಕೋಡ್‌ವರ್ಡ್‌ಗಳ ಬಳಕೆ ಮತ್ತು ಅಕ್ಕ ಪಡೆಯ ರಹಸ್ಯ ಕಾರ್ಯಾಚರಣೆ

ಪೊಲೀಸರ ಕಣ್ಣಿಗೆ ಮಣ್ಣೆರಚಲು ಆರೋಪಿಗಳು ಸಂಭಾಷಣೆಯಲ್ಲಿ ರಹಸ್ಯ ಕೋಡ್‌ವರ್ಡ್‌ಗಳನ್ನು ಬಳಸುತ್ತಿದ್ದರು. ಸಂತ್ರಸ್ತ ಬಾಲಕಿಯರನ್ನು ಪೇಪರ್ ಎಂದು ಹಾಗೂ ದೌರ್ಜನ್ಯ ಎಸಗುತ್ತಿದ್ದ ಸ್ವಾಮೀಜಿಯನ್ನು ಡಿಆರ್ ಎಂದು ಸಂಕೇತ ಭಾಷೆಯಲ್ಲಿ ಕರೆಯುತ್ತಿದ್ದರು. ಈ ಕುರಿತು ಮಾಹಿತಿ ನೀಡಿದ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೆನ್ನೇಕರ್ ಅವರು, "ಇದೊಂದು ಅತ್ಯಂತ ಗಂಭೀರ ಹಾಗೂ ಸೂಕ್ಷ್ಮ ಪ್ರಕರಣವಾಗಿದೆ. ಬಡ ಕುಟುಂಬದ ಹೆಣ್ಣುಮಕ್ಕಳನ್ನು ವಂಚಿಸಿ ಲೈಂಗಿಕ ಶೋಷಣೆಗೆ ಬಳಸಿಕೊಳ್ಳುತ್ತಿದ್ದ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಜಾಲವನ್ನು ಬೇರುಸಹಿತ ಕಿತ್ತುಹಾಕಲು ಬಳ್ಳಾರಿಯ ಅಕ್ಕ ಪಡೆಯ ಸಿಬ್ಬಂದಿ ಕಳೆದ ಒಂದೂವರೆ ತಿಂಗಳಿನಿಂದ ತಮ್ಮ ಗುರುತನ್ನು ಮರೆಮಾಚಿಕೊಂಡು, ಆರೋಪಿಗಳೊಂದಿಗೆ ಸಂಪರ್ಕ ಸಾಧಿಸಿ ಸಾಕ್ಷ್ಯಾಧಾರಗಳನ್ನು ಕಲೆಹಾಕಿದ್ದರು. ನಿಖರ ಮಾಹಿತಿಯ ಮೇರೆಗೆ ದಾಳಿ ನಡೆಸಿ ಜಾಲವನ್ನು ಭೇದಿಸಲಾಗಿದೆ" ಎಂದು ತಿಳಿಸಿದ್ದಾರೆ.

16 ಆರೋಪಿಗಳ ವಿರುದ್ಧ ಪೋಕ್ಸೋ ಸೇರಿ ವಿವಿಧ ಕಾಯ್ದೆಗಳಡಿ ಕೇಸ್

ಪ್ರಕರಣದಲ್ಲಿ ಗೋವಿಂದಮ್ಮ, ನಾಗರಾಜ್, ರಾಜು, ಎರ್ರಿಸ್ವಾಮಿ, ಈರಮ್ಮ, ಮಹಮ್ಮದ್, ವಿನೂತಬಾಯಿ, ರಾಬಿಯಾ, ಗೌಸಿಯಾ, ಗಂಗಾಧರ, ಅನ್ವರ್, ಉಸ್ಮಾನ್, ರಾಹುಲ್, ಅಲಿಬೈ, ಅಶ್ರಫ್ ಹಾಗೂ ಬಾಬುರಾವ್ ಸೇರಿದಂತೆ ಒಟ್ಟು 16 ಮಂದಿಯನ್ನು ಆರೋಪಿಗಳೆಂದು ಗುರುತಿಸಲಾಗಿದೆ. ಈ ಪೈಕಿ ಈಗಾಗಲೇ 11 ಮಂದಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದ್ದು, ತಲೆಮರೆಸಿಕೊಂಡಿರುವ ಉಳಿದ ಐವರು ಆರೋಪಿಗಳ ಬಂಧನಕ್ಕೆ ವಿಶೇಷ ತಂಡಗಳನ್ನು ರಚಿಸಲಾಗಿದೆ. ಸಂತ್ರಸ್ತ ಬಾಲಕಿಯರ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಯಾರಿಗೆಲ್ಲಾ ಕಳುಹಿಸಲಾಗಿದೆ ಮತ್ತು ಅವುಗಳನ್ನು ಯಾವ ರೀತಿ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಆಯಾಮದಲ್ಲೂ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

Read More
Next Story