ಆರು ತಿಂಗಳಿಂದ ಕರ್ತವ್ಯಕ್ಕೆ ಗೈರಾದರೂ ವೈದ್ಯೆಗೆ 75 ಸಾವಿರ ವೇತನ; ಕಾಂಗ್ರೆಸ್‌ ಶಾಸಕನ ಸೋದರ ಸೊಸೆಯ ಕಳ್ಳಾಟ ಬಟಾಬಯಲು
x

ಆರು ತಿಂಗಳಿಂದ ಕರ್ತವ್ಯಕ್ಕೆ ಗೈರಾದರೂ ವೈದ್ಯೆಗೆ 75 ಸಾವಿರ ವೇತನ; ಕಾಂಗ್ರೆಸ್‌ ಶಾಸಕನ ಸೋದರ ಸೊಸೆಯ ಕಳ್ಳಾಟ ಬಟಾಬಯಲು

ಬಾಗಲಕೋಟೆ ನಮ್ಮ ಕ್ಲಿನಿಕ್‌ನಲ್ಲಿ ವೈದ್ಯಾಧಿಕಾರಿಯಾಗಿದ್ದ ಡಾ. ಅಂಕಿತಾ ಯಾರಗಲ್ ಅವರು ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಪಿಜಿ ವ್ಯಾಸಂಗ ಮಾಡುತ್ತಲೇ 75 ಸಾವಿರಕ್ಕೂ ಅಧಿಕ ವೇತನ ಪಡೆದ ಆರೋಪದ ಹಿನ್ನೆಲೆಯಲ್ಲಿ ಕರ್ತವ್ಯದಿಂದ ತೆಗೆದುಹಾಕಲಾಗಿದೆ.


Click the Play button to hear this message in audio format

ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ಕೋರ್ಸ್‌ ವ್ಯಾಸಂಗ ಮಾಡುತ್ತಲೇ ರಾಜ್ಯ ಸರ್ಕಾರದ ನಮ್ಮ ಕ್ಲಿನಿಕ್‌ನಲ್ಲಿ ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸಿ ತಿಂಗಳಿಗೆ 75 ಸಾವಿರ ರೂ.ಗಳಿಗೂ ಅಧಿಕ ವೇತನ ಪಡೆದ ಆರೋಪದ ಮೇಲೆ ಬಾಗಲಕೋಟೆಯ ವೈದ್ಯೆಯೊಬ್ಬರ ವಿರುದ್ಧ ವಿಚಾರಣೆ ಆರಂಭವಾಗಿದೆ. ಆರೋಪ ಎದುರಿಸುತ್ತಿರುವ ವೈದ್ಯೆ ಡಾ. ಅಂಕಿತಾ ಅವರು ಬಾಗಲಕೋಟೆ ಶಾಸಕ ಉಮೇಶ್ ಮೇಟಿಯವರ ಸೋದರ ಸೊಸೆ ಎಂದು ತಿಳಿದುಬಂದಿದೆ.

ಬಾಗಲಕೋಟೆಯ ವಾಂಬೆ ಕಾಲೋನಿಯ ನಮ್ಮ ಕ್ಲಿನಿಕ್‌ನಲ್ಲಿ ವೈದ್ಯಾಧಿಕಾರಿಯಾಗಿದ್ದ ಡಾ. ಅಂಕಿತಾ ಯಾರಗಲ್ ವಿರುದ್ಧ ಕರ್ತವ್ಯ ಲೋಪ ಹಾಗೂ ಅನುಮತಿಯಿಲ್ಲದೆ ಏಕಕಾಲದಲ್ಲಿ ಎರಡು ಕಡೆ ಕಾರ್ಯನಿರ್ವಹಿಸಿದ ಆರೋಪ ಕೇಳಿಬಂದಿದೆ. ಈ ಪ್ರಕರಣದ ಕುರಿತು ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಜಾನನ ಬಾಳೆ ಅವರು ವಿಚಾರಣೆ ನಡೆಸುತ್ತಿದ್ದು, ವಿಚಾರಣೆಗೆ ಡಾ. ಅಂಕಿತಾ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 18ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಪಂಚಾಯಿತಿ ಕಚೇರಿಯ ಕೊಠಡಿ ಸಂಖ್ಯೆ 11ರಲ್ಲಿ ನಡೆಯುವ ಮುಂದಿನ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ.

ಕರ್ತವ್ಯಕ್ಕೆ ಹಾಜರಾಗದಿದ್ದರೂ 75ಸಾವಿರ ರೂ. ವೇತನ

ಅಧಿಕಾರಿಗಳು ನೀಡಿರುವ ನೋಟಿಸ್ ಪ್ರಕಾರ, ಡಾ. ಅಂಕಿತಾ ಅವರು ಮಾರ್ಚ್ 3ರಿಂದ ಸೆಪ್ಟೆಂಬರ್‌ವರೆಗೆ ವಾಂಬೆ ಕಾಲನಿಯ ನಮ್ಮ ಕ್ಲಿನಿಕ್‌ಗೆ ಕರ್ತವ್ಯಕ್ಕೆ ಹಾಜರಾಗಿಲ್ಲ ಎನ್ನಲಾಗಿದೆ. ಇದರಿಂದ ಕ್ಲಿನಿಕ್‌ನಲ್ಲಿ ವೈದ್ಯಾಧಿಕಾರಿ ಇಲ್ಲದೆ ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದು ಆರೋಪಿಸಲಾಗಿದೆ.

ಇದೇ ವೇಳೆ, ಅವರು ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದರು. ಮತ್ತೊಂದೆಡೆ, ನಮ್ಮ ಕ್ಲಿನಿಕ್‌ನ ವೈದ್ಯಾಧಿಕಾರಿಯಾಗಿ ಸರ್ಕಾರದಿಂದ ವೇತನ ಪಡೆಯುತ್ತಿದ್ದರು ಎನ್ನಲಾಗಿದೆ. ಹೀಗಾಗಿ ಅನುಮತಿಯಿಲ್ಲದೆ ಏಕಕಾಲದಲ್ಲಿ ಎರಡು ಜವಾಬ್ದಾರಿಗಳನ್ನು ನಿರ್ವಹಿಸಿರುವ ಆರೋಪದ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ನೋಂದಾಯಿತ ವೈದ್ಯರಿಗೆ ಅನ್ವಯಿಸುವ ನಿಯಮಗಳನ್ನು ಉಲ್ಲಂಘಿಸಿರುವ ಸಾಧ್ಯತೆಯನ್ನೂ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ರಾಷ್ಟ್ರೀಯ ವೈದ್ಯಕೀಯ ಆಯೋಗದ ವೃತ್ತಿಪರ ನೈತಿಕ ಸಂಹಿತೆ ಉಲ್ಲಂಘನೆಯಾಗಿದೆಯೇ ಎಂಬ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ.

ಆರೋಪ ಸಾಬೀತಾದರೆ ಏನಾಗಲಿದೆ?

ಆರೋಪಗಳು ಸಾಬೀತಾದರೆ ವೃತ್ತಿಪರ ಅಕ್ರಮದ ಆಧಾರದ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಪ್ರಕರಣವನ್ನು ಕರ್ನಾಟಕ ವೈದ್ಯಕೀಯ ಮಂಡಳಿ ಹಾಗೂ ರಾಷ್ಟ್ರೀಯ ವೈದ್ಯಕೀಯ ಆಯೋಗದ ಗಮನಕ್ಕೂ ತರಬಹುದು ಎಂದು ತಿಳಿಸಿದ್ದಾರೆ. ಅನುಮತಿಯಿಲ್ಲದೆ ಎರಡು ಕಡೆ ಕಾರ್ಯನಿರ್ವಹಿಸಿದ ಅವಧಿಯಲ್ಲಿ ಡಾ. ಅಂಕಿತಾ ಅವರಿಗೆ ಪಾವತಿಸಿರುವ ಸಂಪೂರ್ಣ ವೇತನ ಅಥವಾ ಗೌರವಧನವನ್ನು ನಿಯಮಾನುಸಾರ ವಾಪಸ್ ಪಡೆಯುವ ಸಾಧ್ಯತೆಯನ್ನೂ ಅಧಿಕಾರಿಗಳು ತಿಳಿಸಿದ್ದಾರೆ.

ವಿಚಾರಣೆಗೆ ಬುಲಾವ್‌

ಇನ್ನು ಎಸ್‌ಎನ್‌ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರು ಡಾ. ಅಂಕಿತಾ ಅವರಿಗೆ ವ್ಯಾಸಂಗಕ್ಕೆ ಅನುಮತಿ ನೀಡಿದ್ದರೂ, ಅವರು ನಮ್ಮ ಕ್ಲಿನಿಕ್‌ನ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ಸೆಪ್ಟೆಂಬರ್ 18ರಂದು ನಡೆಯುವ ವಿಚಾರಣೆಗೆ ಹಾಜರಾಗದಿದ್ದರೆ, ಅವರ ಗೈರುಹಾಜರಿಯಲ್ಲೇ ಏಕಪಕ್ಷೀಯವಾಗಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್ಚರಿಸಿದ್ದಾರೆ.

ಈ ನಡುವೆ, ಜಿಲ್ಲಾ ಆರೋಗ್ಯಾಧಿಕಾರಿ ರಾಜಕುಮಾರ್ ಯಾರಗಲ್ ಅವರು ಡಾ. ಅಂಕಿತಾ ಯಾರಗಲ್ ಅವರನ್ನು ಕರ್ತವ್ಯದಿಂದ ತೆಗೆದುಹಾಕಿದ್ದಾರೆ ಎಂದು ವರದಿಯಾಗಿದೆ. ಸದ್ಯ ಪ್ರಕರಣದ ಕುರಿತು ವಿಚಾರಣೆ ಮುಂದುವರಿದಿದ್ದು, ವೈದ್ಯೆಯ ವಿರುದ್ಧ ಮಾಡಲಾಗಿರುವ ಆರೋಪಗಳ ಸತ್ಯಾಸತ್ಯತೆ ವಿಚಾರಣೆಯ ಬಳಿಕ ಸ್ಪಷ್ಟವಾಗಬೇಕಿದೆ.

Read More
Next Story