
By Election 2026: 71 ನಾಮಪತ್ರಗಳ ಪೈಕಿ 50 ಅಭ್ಯರ್ಥಿಗಳ ಅರ್ಜಿ ಕ್ರಮಬದ್ಧ
ಎರಡು ಕ್ಷೇತ್ರಗಳಿಂದ ಒಟ್ಟು 71 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಈ ಪೈಕಿ ಬಾಗಲಕೋಟೆ ಕ್ಷೇತ್ರದಲ್ಲಿ 26 ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ 45 ನಾಮಪತ್ರಗಳು ಸಲ್ಲಿಕೆಯಾಗಿವೆ.
ತೀವ್ರ ಕುತೂಹಲ ಕೆರಳಿಸಿರುವ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಪ್ರಕ್ರಿಯೆಗಳು ಅಂತಿಮ ಹಂತಕ್ಕೆ ತಲುಪಿವೆ. ನಾಮಪತ್ರಗಳ ಪರಿಶೀಲನೆ ಕಾರ್ಯ ಮುಗಿದಿದ್ದು, ಸಲ್ಲಿಕೆಯಾಗಿದ್ದ 71 ನಾಮಪತ್ರಗಳ ಪೈಕಿ 50 ಅಭ್ಯರ್ಥಿಗಳ ಉಮೇದುವಾರಿಕೆ ಊರ್ಜಿತಗೊಂಡಿವೆ. ಇನ್ನುಳಿದ ನಾಮಪತ್ರಗಳು ತಿರಸ್ಕೃತಗೊಂಡಿವೆ.
ಎರಡು ಕ್ಷೇತ್ರಗಳಿಂದ ಒಟ್ಟು 71 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಈ ಪೈಕಿ ಬಾಗಲಕೋಟೆ ಕ್ಷೇತ್ರದಲ್ಲಿ 26 ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ 45 ನಾಮಪತ್ರಗಳು ಸಲ್ಲಿಕೆಯಾಗಿವೆ. ಒಟ್ಟು 71 ನಾಮಪತ್ರಗಳ ಪೈಕಿ 70 ಪುರುಷ ಅಭ್ಯರ್ಥಿಗಳಿಂದ ಸಲ್ಲಿಕೆಯಾಗಿದ್ದರೆ, ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಕೇವಲ ಒಬ್ಬ ಮಹಿಳೆ ಮಾತ್ರ ನಾಮಪತ್ರ ಸಲ್ಲಿಸಿದ್ದಾರೆ. ಬಾಗಲಕೋಟೆಯಲ್ಲಿ ಮಹಿಳಾ ಅಭ್ಯರ್ಥಿಗಳೇ ಇಲ್ಲದಿರುವುದು ಗಮನಾರ್ಹ. ನಾಮಪತ್ರಗಳ ಕೂಲಂಕಷ ಪರಿಶೀಲನೆಯ ನಂತರ, ಚುನಾವಣಾ ಆಯೋಗವು 50 ಅಭ್ಯರ್ಥಿಗಳ ನಾಮಪತ್ರಗಳನ್ನು ಕ್ರಮಬದ್ಧವೆಂದು ಘೋಷಿಸಿದೆ.
ಬಾಗಲಕೋಟೆಯಲ್ಲಿ 26 ನಾಮಪತ್ರಗಳ ಪೈಕಿ ಕೇವಲ 14 ಅಭ್ಯರ್ಥಿಗಳು ಮಾತ್ರ ಕಣದಲ್ಲಿ ಉಳಿದಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ 45 ನಾಮಪತ್ರಗಳ ಪೈಕಿ 36 ಅಭ್ಯರ್ಥಿಗಳ ಅರ್ಜಿ ಕ್ರಮಬದ್ಧವಾಗಿದೆ. ಒಟ್ಟಾರೆ ಕಣದಲ್ಲಿರುವ 50 ಅಭ್ಯರ್ಥಿಗಳಲ್ಲಿ 49 ಪುರುಷರು ಹಾಗೂ ಕೇವಲ ಒಬ್ಬರು ಮಹಿಳಾ ಅಭ್ಯರ್ಥಿ ಇದ್ದಾರೆ ಎಂದು ಚುನಾವಣಾ ಆಯೋಗ ಹೇಳಿದೆ. ಬಿಜೆಪಿಯಿಂದ 8, ಕಾಂಗ್ರೆಸ್‌ನಿಂದ 11, ಎಎಪಿಯಿಂದ 1, ನೋಂದಾಯಿತ ಮಾನ್ಯತೆ ಪಡೆಯದ ಪಕ್ಷಗಳಿಂದ 18 ಹಾಗೂ 33 ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಚುನಾವಣಾ ವೆಚ್ಚದ ಮೇಲೆ ಹದ್ದಿನ ಕಣ್ಣು
ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಅಭ್ಯರ್ಥಿಗಳ ವೆಚ್ಚದ ಮೇಲೆ ನಿಗಾ ಇಡುವುದು ಅತ್ಯಗತ್ಯ. ಇದಕ್ಕಾಗಿ ಚುನಾವಣಾ ಆಯೋಗವು ಬೃಹತ್ ಆಡಳಿತಾತ್ಮಕ ಪಡೆಯನ್ನೇ ನಿಯೋಜಿಸಿದೆ. ಬಾಗಲಕೋಟೆಯಲ್ಲಿ 60 ಮತ್ತು ದಾವಣಗೆರೆಯಲ್ಲಿ 24 ಸೇರಿದಂತೆ ಒಟ್ಟು 84 ಫ್ಲೈಯಿಂಗ್ ಸ್ಕ್ವಾಡ್‌ಗಳು ದಿನದ 24 ಗಂಟೆಯೂ ಕಾರ್ಯಾಚರಣೆ ನಡೆಸುತ್ತಿವೆ. ಎರಡೂ ಕ್ಷೇತ್ರಗಳಲ್ಲಿ ಒಟ್ಟು 105 ತಂಡಗಳು ವಾಹನ ತಪಾಸಣೆ ಮತ್ತು ಹಣದ ಹರಿವಿನ ಮೇಲೆ ನಿಗಾ ಇಟ್ಟಿವೆ. ಗಡಿ ಭಾಗಗಳಲ್ಲಿ ಒಟ್ಟು 35 ಚೆಕ್ ಪೋಸ್ಟ್‌ಗಳನ್ನು ನಿರ್ಮಿಸಲಾಗಿದೆ.
62 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ವಶ
ಚುನಾವಣಾ ನೀತಿ ಸಂಹಿತೆ ಜಾರಿಯಾದ ದಿನದಿಂದ ಇದುವರೆಗೆ ಒಟ್ಟು 60.15 ಲಕ್ಷ ರೂ. ನಗದನ್ನು ಅಕ್ರಮವಾಗಿ ಸಾಗಿಸುವಾಗ ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ಇಲಾಖೆ ಮತ್ತು ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಬರೋಬ್ಬರಿ 214.06 ಲಕ್ಷ ಲೀಟರ್ ಮದ್ಯವನ್ನು ಜಪ್ತಿ ಮಾಡಲಾಗಿದೆ. ಇದರ ಅಂದಾಜು ಮೌಲ್ಯ ಲಕ್ಷಾಂತರ ರೂಪಾಯಿಗಳಾಗಿವೆ. ಚುನಾವಣೆಯ ಮೇಲೆ ಪ್ರಭಾವ ಬೀರಬಲ್ಲ ಸುಮಾರು 1.20 ಲಕ್ಷ ರೂ. ಮೌಲ್ಯದ ಇತರ ಉಡುಗೊರೆಗಳನ್ನು ಜಪ್ತಿ ಮಾಡಲಾಗಿದೆ. ಒಟ್ಟಾರೆ ಈವರೆಗೆ 62.27 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 29 ಎಫ್‌ಐಆರ್ ದಾಖಲಿಸಲಾಗಿದೆ. ಅಬಕಾರಿ ಇಲಾಖೆಯು 12 ಗಂಭೀರ ಪ್ರಕರಣಗಳು ಮತ್ತು ಪರವಾನಗಿ ನಿಯಮ ಉಲ್ಲಂಘಿಸಿದ 3 ಪ್ರಕರಣಗಳನ್ನು ದಾಖಲಿಸಿದೆ. ಅಬಕಾರಿ ಕಾಯ್ದೆಯಡಿ ಒಟ್ಟು 27 ಪ್ರಕರಣಗಳು ದಾಖಲಾಗಿದ್ದು, ಅಕ್ರಮ ಸಾಗಾಟಕ್ಕೆ ಬಳಸುತ್ತಿದ್ದ 6 ದ್ವಿಚಕ್ರ ವಾಹನ ಹಾಗೂ 2 ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.
ಇವಿಎಂ , ವಿವಿಪ್ಯಾಟ್ ಸಿದ್ಧತೆ
ಬಾಗಲಕೋಟೆ ಕ್ಷೇತ್ರದಲ್ಲಿ 322 ಮತಗಟ್ಟೆಗಳಿದ್ದು, 382 ಬ್ಯಾಲೆಟ್ ಯೂನಿಟ್, 382 ಕಂಟ್ರೋಲ್ ಯೂನಿಟ್ ಮತ್ತು 414 ವಿವಿಪ್ಯಾಟ್ ಯಂತ್ರಗಳನ್ನು ಸಿದ್ಧಪಡಿಸಲಾಗಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ 284 ಮತಗಟ್ಟೆಗಳಿದ್ದು, 355 ಬ್ಯಾಲೆಟ್ ಯೂನಿಟ್, 355 ಕಂಟ್ರೋಲ್ ಯೂನಿಟ್ ಮತ್ತು 397 ವಿವಿಪ್ಯಾಟ್ ಯಂತ್ರಗಳನ್ನು ಮೀಸಲಿಡಲಾಗಿದೆ.

