x

ಗಾಂಧೀಜಿ ನೆನಪಿನ ಬದನವಾಳಿನಲ್ಲಿ ಕಾಂಕ್ರೀಟ್ ಸ್ಮಾರಕ!: ಪಾರಂಪರಿಕ ತಾಣ ಧ್ವಂಸಕ್ಕೆ ಗಾಂಧಿವಾದಿಗಳ ಆಕ್ರೋಶ

1934ರಲ್ಲಿ ಗಾಂಧೀಜಿ ಬದನವಾಳುಗೆ ಭೇಟಿ ನೀಡಿದಾಗ ನೂರಾರು ಮಂದಿ ಚರಕದ ಮೂಲಕ ಗೌರವಯುತ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದನ್ನು ಕಂಡು ಹೆಮ್ಮೆಪಟ್ಟಿದ್ದರು.


Click the Play button to hear this message in audio format

ಅಕ್ಟೋಬರ್ ಎರಡು ಬಂದಾಗಲೆಲ್ಲ ಗಾಂಧಿ, ಚರಕ, ಖಾದಿ ಮತ್ತು ಗ್ರಾಮ ಸ್ವರಾಜ್ಯದ ಬಗ್ಗೆ ಭಾಷಣ ಬಿಗಿಯುವ ರಾಜಕಾರಣಿಗಳಿಗೆ ಮಹಾತ್ಮಾ ಗಾಂಧಿ ಕೇವಲ ಮತಬ್ಯಾಂಕ್ ಆಗಿ ಉಳಿದಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಮೈಸೂರು ಜಿಲ್ಲೆಯ ಬದನವಾಳು. ಮಹಾತ್ಮಾ ಗಾಂಧೀಜಿಯವರೇ ಖುದ್ದು ಭೇಟಿ ನೀಡಿ ನೂಲುವ ಕಾಯಕ ಆರಂಭಿಸಿ, ಸ್ವಾತಂತ್ರ್ಯ ಚಳುವಳಿಯ ಸ್ವಾವಲಂಬನೆಯ ದೀಪ ಬೆಳಗಿಸಿದ ಈ ಐತಿಹಾಸಿಕ ತಾಣದಲ್ಲಿ ಇದೀಗ ಪ್ರವಾಸೋದ್ಯಮದ ಹೆಸರಿನಲ್ಲಿ ಶತಮಾನದ ಪಾರಂಪರಿಕ ಕಟ್ಟಡಗಳನ್ನು ಜೆಸಿಬಿ ಯಂತ್ರಗಳಿಂದ ನೆಲಸಮ ಮಾಡಲಾಗುತ್ತಿದೆ. ಜಗತ್ತಿನಲ್ಲೇ ಅತಿ ದೊಡ್ಡ ಸಿಮೆಂಟ್ ಚರಕ ನಿರ್ಮಿಸುವ ಸರ್ಕಾರದ ಈ ಯೋಜನೆಗೆ ಇದೀಗ ರಾಜ್ಯದ ಗಾಂಧಿವಾದಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಮಹಾತ್ಮನ ಹೆಜ್ಜೆಗುರುತಿನ ಐತಿಹಾಸಿಕ ತಾಣ

ಬದನವಾಳು ಕೇವಲ ಒಂದು ಸಾಮಾನ್ಯ ಹಳ್ಳಿಯಲ್ಲ, ಅದು ಭಾರತದ ಸ್ವಾತಂತ್ರ್ಯ ಚಳುವಳಿ ಹಾಗೂ ಸ್ವದೇಶಿ ಆಂದೋಲನದ ಜೀವಂತ ಪ್ರತೀಕ. 1927ರಲ್ಲಿ ಸೈಮನ್ ಕಮಿಷನ್ ವಿರುದ್ಧದ ಹೋರಾಟದ ವೇಳೆ ಮಹಾತ್ಮಾ ಗಾಂಧೀಜಿ ಮೈಸೂರು ಸಂಸ್ಥಾನಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರ ತಗಡೂರು ರಾಮಚಂದ್ರ ರಾಯರನ್ನು ಭೇಟಿಯಾದ ಗಾಂಧೀಜಿ, ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರೋತ್ಸಾಹದೊಂದಿಗೆ ಬದನವಾಳಿನಲ್ಲಿ ನಡೆಯುತ್ತಿದ್ದ ಖಾದಿ ಗ್ರಾಮೋದ್ಯೋಗ ಚಟುವಟಿಕೆಗಳನ್ನು ಕಂಡು ರೋಮಾಂಚನಗೊಂಡಿದ್ದರು. ಅಲ್ಲಿಯೇ ಶಿಲಾನ್ಯಾಸ ನೆರವೇರಿಸಿ ಬದನವಾಳನ್ನು ನೂಲುವ ಪ್ರಾಂತ್ಯ ಎಂದು ಕರೆದರು. ಆ ಮೂಲಕ ಉದಯವಾದ ಬದನವಾಳು ಖಾದಿ ಗ್ರಾಮೋದ್ಯೋಗ ಸಹಕಾರ ಸಂಘವು ಕೇವಲ ಬಟ್ಟೆ ಕೇಂದ್ರವಾಗಿ ಉಳಿಯದೆ, ಕೈಕಾಗದ, ಬೆಂಕಿಪೊಟ್ಟಣ, ಗಾಣದ ಎಣ್ಣೆ ಸೇರಿದಂತೆ 14ಕ್ಕೂ ಹೆಚ್ಚು ಗ್ರಾಮೀಣ ಗುಡಿ ಕೈಗಾರಿಕೆಗಳ ತಾಣವಾಗಿ ಬೆಳೆಯಿತು. 1934ರಲ್ಲಿ ಗಾಂಧೀಜಿ ಮತ್ತೊಮ್ಮೆ ಇಲ್ಲಿಗೆ ಭೇಟಿ ನೀಡಿದಾಗ ನೂರಾರು ಮಂದಿ ಚರಕದ ಮೂಲಕ ಗೌರವಯುತ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದನ್ನು ಕಂಡು ಹೆಮ್ಮೆಪಟ್ಟಿದ್ದರು.

ಅಭಿವೃದ್ಧಿ ಹೆಸರಿನಲ್ಲಿ ಪಾರಂಪರಿಕ ಕಟ್ಟಡಗಳ ಧ್ವಂಸ

ಜಾಗತೀಕರಣದ ಹೊಡೆತಕ್ಕೆ ಸಿಲುಕಿ ನಶಿಸುತ್ತಿದ್ದ ಈ ಕೇಂದ್ರವನ್ನು 1986ರ ಹೊತ್ತಿಗೆ ಹೊಳೆನರಸೀಪುರ ಖಾದಿ ಗ್ರಾಮೋದ್ಯೋಗ ಸಂಘದ ಸುಪರ್ದಿಗೆ ವಹಿಸಿ ಉಳಿಸಿಕೊಳ್ಳಲಾಯಿತು. ಇಂದಿಗೂ ಇಲ್ಲಿನ ನೂರಾರು ಗ್ರಾಮೀಣ ಮಹಿಳೆಯರು ಚರಕ ಮತ್ತು ಮಗ್ಗದ ಮೂಲಕ ದಿನಕ್ಕೆ 150 ರಿಂದ 200 ರೂಪಾಯಿ ಕೂಲಿ ಪಡೆಯುತ್ತಿದ್ದಾರೆ. 2022ರ ಅಕ್ಟೋಬರ್ 2ರಂದು ಭಾರತ್ ಜೋಡೋ ಯಾತ್ರೆಯ ವೇಳೆ ರಾಹುಲ್ ಗಾಂಧಿ ಕೂಡ ಇಲ್ಲಿಗೆ ಭೇಟಿ ನೀಡಿ ಚರಕದಲ್ಲಿ ಬಟ್ಟೆ ತಯಾರಿಸಿದ್ದರು.

ಆದರೆ, ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ತಾಣವನ್ನು ರಾಷ್ಟ್ರೀಯ ಸ್ಮಾರಕ ಮಾದರಿಯಲ್ಲಿ ಅಭಿವೃದ್ಧಿಪಡಿಸಲು 40 ಕೋಟಿ ರೂಪಾಯಿ ಮೀಸಲಿಟ್ಟರು. ಸ್ಥಳೀಯ ಶಾಸಕ ದರ್ಶನ್ ಧ್ರುವನಾರಾಯಣ ಅವರು ಸಾಬರಮತಿ ಮಾದರಿಯ ಮ್ಯೂಸಿಯಂ ಹಾಗೂ ವಿಶ್ವದಲ್ಲೇ ಅತಿ ದೊಡ್ಡ ಸಿಮೆಂಟ್ ಚರಕ ನಿರ್ಮಿಸುವ ಯೋಜನೆ ರೂಪಿಸಿದ್ದಾರೆ. ಪರಿಣಾಮವಾಗಿ, ಗಾಂಧೀಜಿ ಹೆಜ್ಜೆ ಇಟ್ಟಿದ್ದ ಪಾರಂಪರಿಕ ಮಣ್ಣಿನ ಕಟ್ಟಡಗಳನ್ನು ಜೆಸಿಬಿ ತಂದು ಧ್ವಂಸ ಮಾಡಲಾಗಿದ್ದು, ನೆರಳು ನೀಡುತ್ತಿದ್ದ ಮರಗಳನ್ನು ಕಡಿಯಲಾಗಿದೆ. ಸರಳ ಬದುಕನ್ನು ಬೋಧಿಸಿದ ಗಾಂಧಿ ಹೆಸರಿನಲ್ಲಿ ಕಾಂಕ್ರೀಟ್ ಕಾಡು ನಿರ್ಮಿಸಲು ಹೊರಟಿರುವುದು ಗಾಂಧಿ ತತ್ವಕ್ಕೆ ವಿರುದ್ಧವಾದ ನಡೆಯಾಗಿದೆ.

ನೇಕಾರರಿಗೆ ಕೆಲಸ ಬೇಕು

ಸರ್ಕಾರದ ಈ ಕಾಂಕ್ರೀಟ್ ಸ್ಮಾರಕದ ಹುಚ್ಚುತನದ ವಿರುದ್ಧ ಸಾಗರದ ಹೆಗ್ಗೋಡಿನಲ್ಲಿ ಚರಕ ಸಂಸ್ಥೆಯ ಮೂಲಕ ಗ್ರಾಮೀಣ ಮಹಿಳೆಯರಿಗೆ ಆಸರೆಯಾಗಿರುವ ಹಿರಿಯ ರಂಗಕರ್ಮಿ ಹಾಗೂ ಗಾಂಧಿವಾದಿ ಪ್ರಸನ್ನ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಾಂಧೀಜಿ ಸದಾ ಮಣ್ಣಿನ ಮನೆಗಳಲ್ಲಿ ಬದುಕುವ ಬಡವರ ಜೀವನ ಮಟ್ಟ ಸುಧಾರಿಸಲು ಶ್ರಮಿಸಿದರು. ಆದರೆ, ಬದನವಾಳಿನ ಅಭಿವೃದ್ಧಿ ಎಂದರೆ ಮರ ಕಡಿದು ಕಾಂಕ್ರೀಟ್ ಕಟ್ಟಡ ಕಟ್ಟುವುದು ಅಥವಾ 40 ಕೋಟಿ ಖರ್ಚು ಮಾಡಿ ಸಿಮೆಂಟ್ ಚರಕ ನಿರ್ಮಿಸುವುದಲ್ಲ. ಖಾದಿ ಮಾರುಕಟ್ಟೆ ನಕಲಿ ಪವರ್ ಲೂಮ್‌ಗಳಿಂದ ತುಂಬಿಹೋಗಿರುವಾಗ, ದಿನಕ್ಕೆ ಕೇವಲ 200 ರೂಪಾಯಿ ದುಡಿಯುತ್ತಿರುವ ನೇಕಾರ ಮಹಿಳೆಯರಿಗೆ ನಿರಂತರ ಕೆಲಸ ಹಾಗೂ ಯೋಗ್ಯ ಕೂಲಿ ಒದಗಿಸುವುದು ನಿಜವಾದ ಗ್ರಾಮ ಸ್ವರಾಜ್ಯ ಎಂದು ಅವರು ತಿರುಗೇಟು ನೀಡಿದ್ದಾರೆ. ಇತಿಹಾಸವನ್ನು ಉಳಿಸುವುದು ಎಂದರೆ ಹಳೆಯದನ್ನು ಕೆಡವಿ ಸಿಮೆಂಟ್ ಸ್ಮಾರಕ ಮಾಡುವುದಲ್ಲ, ಬದಲಾಗಿ ಆ ಇತಿಹಾಸದ ಆಶಯವನ್ನು ಜೀವಂತವಾಗಿರಿಸುವುದು ಎಂಬುದು ಗಾಂಧಿವಾದಿಗಳ ಸ್ಪಷ್ಟ ನಿಲುವಾಗಿದೆ.

Read More
Next Story