
ಧಾರ್ಮಿಕ, ವೈದ್ಯಕೀಯ ಶಿಕ್ಷಣಕ್ಕಾಗಿ ಅವಲಂಬನೆ; ಇರಾನ್‌ನಲ್ಲಿವೆ ಕರ್ನಾಟಕದ ನೂರಾರು ಕುಟುಂಬಗಳು
ಅಲಿಪುರದ ನೂರಾರು ಯುವಕರು ಇರಾನ್‌ನ ಟೆಹ್ರಾನ್, ಮಶಾದ್ ಮತ್ತು ಖೋಮ್ ನಗರಗಳಲ್ಲಿ ಧಾರ್ಮಿಕ ಶಿಕ್ಷಣ ಮತ್ತು ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ.
ಇಸ್ರೇಲ್ ಹಾಗೂ ಅಮೆರಿಕದ ಜಂಟಿ ವಾಯುದಾಳಿಯಲ್ಲಿ ಇರಾನ್ ಪರಮೋಚ್ಛ ನಾಯಕ ಅಯಾತೊಲ್ಲಾ ಅಲಿ ಖಮೇನಿ ಹತ್ಯೆಯಾದ ಬಳಿಕ ಕರ್ನಾಟಕದಲ್ಲಿ ಶಿಯಾ ಸಮುದಾಯದವರು ವಾಸಿಸುವ ಪ್ರದೇಶಗಳು ಇರಾನ್ ಜೊತೆಗಿನ ಗಾಢ ಸಂಬಂಧದ ಚರ್ಚೆಗಳು ಮುನ್ನೆಲೆಗೆ ಬಂದಿವೆ.
1986 ರಲ್ಲಿ ಬೆಂಗಳೂರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ತೊಂಡೇಬಾವಿ ಸಮೀಪದ ಅಲಿಪುರಕ್ಕೆ ಖಮೇನಿ ಅವರು ಭೇಟಿ ನೀಡಿದ ಬಳಿಕ ಇರಾನ್- ಕರ್ನಾಟಕ ಸಾಂಸ್ಕೃತಿಕ, ಶೈಕ್ಷಣಿಕ, ಧಾರ್ಮಿಕ ಸಂಬಂಧ ವೃದ್ಧಿಯಾಗಿತ್ತು. ಅಲಿಪುರ ಹಾಗೂ ಬೆಂಗಳೂರಿನ ವಿವಿಧೆಡೆ ವಾಸವಾಗಿರುವ ಶಿಯಾ ಮುಸ್ಲಿಮರು ತಮ್ಮ ಶಿಕ್ಷಣ, ವ್ಯಾಪಾರಕ್ಕಾಗಿ ಇರಾನ್ ದೇಶವನ್ನೇ ಅವಲಂಬಿಸಿದ್ದರು. ಅದರಲ್ಲೂ ಅಲಿಪುರದ ನೂರಾರು ಯುವಕರು ಇರಾನ್‌ನ ಟೆಹ್ರಾನ್, ಮಶಾದ್ ಮತ್ತು ಖೋಮ್ ನಗರಗಳಲ್ಲಿ ಧಾರ್ಮಿಕ ಶಿಕ್ಷಣ ಮತ್ತು ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ.
ಖಮೇನಿ ಅವರು ಅಲಿಪುರಕ್ಕೆ ಭೇಟಿ ನೀಡಿದ್ದಾಗ ತಮ್ಮ ಗುರುಗಳಾದ ಇಮಾಮ್ ಖೊಮೇನಿ ಹೆಸರಿನ ಆಸ್ಪತ್ರೆಗೂ ಶಂಕುಸ್ಥಾಪನೆ ನೆರವೇರಿಸಿದ್ದರು. ಈಗ ಈ ಆಸ್ಪತ್ರೆಯಲ್ಲಿ ಅಗ್ಗದ ದರದಲ್ಲಿ ಎಲ್ಲ ರೀತಿಯ ಚಿಕಿತ್ಸೆ ಸಿಗುತ್ತಿದೆ. ಇನ್ನು ಗ್ರಾಮದಲ್ಲಿರುವ ಅಂಜುಮನ್-ಎ-ಜಾಫರಿಯಾ ಸಮಿತಿ ಕೂಡ ಇರಾನ್ ಪರಮೋಚ್ಛ ನಾಯಕನ ಆಜ್ಞಾನುಸಾರವೇ ಕಾರ್ಯನಿರ್ವಹಿಸುತ್ತಿದೆ.
ಇರಾನ್ ಶೈಲಿನ ಮಸೀದಿಗಳು
ಅಲಿಪುರದಲ್ಲಿ ಇರಾನ್ ಶೈಲಿಯ ಮಸೀದಿಗಳು ಮತ್ತು ಕಟ್ಟಡಗಳು ಇರಾನ್ ಜತೆಗಿನ ಸಂಬಂಧಕ್ಕೆ ಸಾಕ್ಷಿಯಾಗಿವೆ. ಇರಾನ್ ವಾಸ್ತುಶಿಲ್ಪ ಶೈಲಿಯಲ್ಲೇ (ಈರುಳ್ಳಿ ಆಕಾರದ ಗುಮ್ಮಟಗಳು) ಮಸೀದಿಗಳನ್ನು ನಿರ್ಮಿಸಲಾಗಿದೆ. ಇಲ್ಲಿ ಗ್ರಾಮದ ಮುಖ್ಯ ರಸ್ತೆಗೂ 'ಇಮಾಮ್ ಖೊಮೇನಿ ರಸ್ತೆ' ಎಂದು ನಾಮಕರಣ ಮಾಡಲಾಗಿದೆ.
ಶಿಯಾ ಪಂಗಡದ ಮುಸ್ಲಿಮರು ಬೆಂಗಳೂರಿನ ರಿಚ್ಮಂಡ್ ಟೌನ್, ನೀಲಸಂದ್ರ, ಯಶವಂತಪುರ, ಮೈಸೂರು ಹಾಗೂ ಕರಾವಳಿಯ ಜಿಲ್ಲೆಗಳಲ್ಲಿ ಇದ್ದಾರೆ. ಬಹುತೇಕರು ನೇರವಾಗಿ ಇರಾನ್ ಹಾಗೂ ಮಧ್ಯಪ್ರಾಚ್ಯ ರಾಷ್ಟ್ರಗಳೊಂದಿಗೆ ವ್ಯವಹಾರ ಇಟ್ಟುಕೊಂಡಿದ್ದಾರೆ.
ಇರಾನ್‌ನಲ್ಲಿ ರಾಜ್ಯದ 300 ಮಂದಿ ಶಿಯಾ ಮುಸ್ಲಿಮರು
ಇರಾನ್‌ನ ಟೆಹ್ರಾನ್‌ನಲ್ಲಿ ಗೌರಿಬಿದನೂರಿನ ಅಲಿಪುರ, ಬೆಂಗಳೂರು ಹಾಗೂ ಕರಾವಳಿ ಭಾಗದ ಸಾವಿರಾರು ಜನರು ಇದ್ದಾರೆ. ಅಲಿಪುರ ಗ್ರಾಮದ 15 ಮಂದಿ ವಿದ್ಯಾರ್ಥಿಗಳು ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದರೆ, 50 ಮಂದಿ ಧಾರ್ಮಿಕ ಶಿಕ್ಷಣ ಪಡೆಯುತ್ತಿದ್ದಾರೆ. ಹರಳಿನ ವ್ಯವಹಾರದಲ್ಲಿ ತೊಡಗಿಸಿಕೊಂಡವರೂ ಇದ್ದಾರೆ. ಇಸ್ರೇಲ್-ಇರಾನ್ ಸಂಘರ್ಷ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದವರನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರ ಮಾಡಲಾಗಿದೆ ಎಂದು ಅಂಜುಮನ್ ಜಾಫರಿಯಾ ಸಮಿತಿ ಸದಸ್ಯ ಮಿರ್ ಶಬಾಹತ್ ಹುಸೇನ್ ಹೇಳಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ವ್ಯವಹಾರದ ನಂಟು
ರಾಜ್ಯದ ಬಹುತೇಕ ಶಿಯಾ ಮುಸ್ಲಿಮರು ಚಿನ್ನಾಭರಣ, ಜೆಮ್ಸ್ ಸ್ಟೋನ್ ವ್ಯಾಪಾರದ ಸಲುವಾಗಿ ಮಧ್ಯಪ್ರಾಚ್ಯದ ರಾಷ್ಟ್ರಗಳಲ್ಲಿದ್ದು, ವ್ಯವಹಾರ ನಡೆಸುತ್ತಿದ್ದಾರೆ. ಪ್ರತಿ ವರ್ಷ ಮೊಹರಂ ಸಂದರ್ಭದಲ್ಲಿ ವಿದೇಶಗಳಿಂದ ತಾಯ್ನಾಡಿಗೆ ಆಗಮಿಸುವ ಇವರು, ಸಾಮಾಜಿಕ ಸೇವಾ ಚಟುವಟಿಕೆಗಳಿಗೆ ನೆರವು ನೀಡುತ್ತಿದ್ದಾರೆ. ಸ್ಥಳೀಯವಾಗಿಯೂ ವ್ಯವಹಾರ ವಿಸ್ತರಿಸುತ್ತಿದ್ದಾರೆ.
ಪ್ರತ್ಯೇಕ ಕೇಬಲ್ ಚಾನೆಲ್
ಗೌರಿಬಿದನೂರು ತಾಲೂಕಿನ ಅಲಿಪುರದಲ್ಲಿ ಶಿಯಾ ಮುಸ್ಲಿಮರಿಗಾಗಿಯೇ ಅಂಜುಮನ್ ಜಾಫರಿಯಾ ಸಮಿತಿಯು ಪ್ರತ್ಯೇಕ ಕೇಬಲ್ ಚಾನೆಲ್ ಆರಂಭಿಸಿದೆ.
'ಅಲಿ ಟಿವಿ' ಹೆಸರಿನಲ್ಲಿ ಈ ಚಾನೆಲ್ನಲ್ಲಿ ನಿತ್ಯ ಪ್ರಾರ್ಥನೆ, ವಿಶೇಷ ಆಚರಣೆಗಳು, ಕುರಾನ್ ಪಠಣ, ಧಾರ್ಮಿಕ ಗುರುಗಳ ಸಂದೇಶ ಹಾಗೂ ಗ್ರಾಮಕ್ಕೆ ಭೇಟಿ ನೀಡುವ ಅತಿಥಿಗಳ ಮಾತನ್ನು ಪ್ರಸಾರ ಮಾಡಲಾಗುತ್ತದೆ.
ಪ್ರತಿಯೊಬ್ಬರೂ ಕೇಬಲ್ ಚಾನೆಲ್ಗೆ ಮಾಸಿಕ 350ರೂ. ಶುಲ್ಪ ನಿಗದಿ ಮಾಡಲಾಗಿದೆ. ಚಾನೆಲ್ನಲ್ಲಿ ಯಾವುದೇ ಸಿನಿಮಾಗಳ ಪ್ರದರ್ಶನಕ್ಕೆ ಅವಕಾಶ ಇರುವುದಿಲ್ಲ ಎಂದು ಮಿರ್ ತಸ್ವೀರ್ ಅಬ್ಬಾಸ್ ತಿಳಿಸಿದ್ದಾರೆ.

