
ಪದಕ ಗೆದ್ದ ಕ್ರೀಡಾಪಟುಗಳಿಗೆ ಮಾತ್ರವಲ್ಲದೆ, ಏಷ್ಯನ್ ಗೇಮ್ಸ್ 2026ರಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಎಲ್ಲ ಅರ್ಹ ಕ್ರೀಡಾಪಟುಗಳಿಗೂ ಸರ್ಕಾರ ಪ್ರೋತ್ಸಾಹ ನೀಡಿದೆ.
ಏಷ್ಯನ್ ಗೇಮ್ಸ್ ಸಾಧಕರಿಗೆ ಸಿಎಂ ಅಭಿನಂದನೆ – ಚಿನ್ನ ಗೆದ್ದವರಿಗೆ 1 ಕೋಟಿ ರೂ. ಬಹುಮಾನ
ಒಲಿಂಪಿಕ್ಸ್‌ನಲ್ಲಿ ಕರ್ನಾಟಕದ ಕ್ರೀಡಾಪಟುಗಳ ಭಾಗವಹಿಸುವಿಕೆ ಮತ್ತು ಪದಕ ಸಾಧನೆಯನ್ನು ಹೆಚ್ಚಿಸುವ ಉದ್ದೇಶದಿಂದ ಜಾರಿಯಲ್ಲಿರುವ ‘ಗುರಿ: ಒಲಿಂಪಿಕ್ಸ್’ ಯೋಜನೆಗೂ ಏಷ್ಯನ್ ಗೇಮ್ಸ್ ಮತ್ತು ಕಾಮನ್‌ವೆಲ್ತ್ ಗೇಮ್ಸ್ ಸಾಧಕರನ್ನು ಸೇರಿಸಲಾಗಿದೆ.
ಏಷ್ಯನ್ ಗೇಮ್ಸ್ 2026ರಲ್ಲಿ ಪದಕ ಗೆದ್ದು ಕರ್ನಾಟಕ ಹಾಗೂ ದೇಶಕ್ಕೆ ಹೆಮ್ಮೆ ತಂದ ರಾಜ್ಯದ ಕ್ರೀಡಾಪಟುಗಳನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಉಪ ಮುಖ್ಯಮಂತ್ರಿ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ಜಿ. ಪರಮೇಶ್ವರ್ ವಿಧಾನಸೌಧದಲ್ಲಿ ಸನ್ಮಾನಿಸಿ ಅಭಿನಂದಿಸಿದರು.
ಕ್ರೀಡಾ ಕ್ಷೇತ್ರದಲ್ಲಿ ರಾಜ್ಯದ ಸಾಧಕರನ್ನು ಗೌರವಿಸುವ ಜೊತೆಗೆ, ಭವಿಷ್ಯದ ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ಹಲವು ಮಹತ್ವದ ಘೋಷಣೆಗಳನ್ನು ಮಾಡಿದೆ. ಪದಕ ವಿಜೇತರಿಗೆ ಹೆಚ್ಚುವರಿ ನಗದು ಬಹುಮಾನ, ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸುವವರಿಗೆ ಪ್ರೋತ್ಸಾಹಧನ, ಸರ್ಕಾರಿ ಉದ್ಯೋಗದಲ್ಲಿ ಅವಕಾಶ ಹಾಗೂ ಕ್ರೀಡಾಪಟುಗಳಿಗೆ ಮೀಸಲಾತಿ ಸೇರಿದಂತೆ ಹಲವು ಕ್ರಮಗಳನ್ನು ಜಾರಿಗೊಳಿಸಲಾಗಿದೆ.
ಚಿನ್ನದ ಪದಕಕ್ಕೆ 1 ಕೋಟಿ ರೂ.
ಏಷ್ಯನ್ ಗೇಮ್ಸ್‌ನಲ್ಲಿ ಕರ್ನಾಟಕದ ಕ್ರೀಡಾಪಟುಗಳು ಗೆಲ್ಲುವ ಪದಕಗಳಿಗೆ ನೀಡಲಾಗುತ್ತಿದ್ದ ನಗದು ಬಹುಮಾನವನ್ನು ರಾಜ್ಯ ಸರ್ಕಾರ ಗಣನೀಯವಾಗಿ ಹೆಚ್ಚಿಸಿದೆ.
ಈ ಹಿಂದೆ ಚಿನ್ನದ ಪದಕ ವಿಜೇತರಿಗೆ 35 ಲಕ್ಷ ರೂ., ಬೆಳ್ಳಿ ಪದಕ ವಿಜೇತರಿಗೆ 25 ಲಕ್ಷ ರೂ. ಹಾಗೂ ಕಂಚಿನ ಪದಕ ವಿಜೇತರಿಗೆ 15 ಲಕ್ಷ ರೂ. ನೀಡಲಾಗುತ್ತಿತ್ತು. ಪರಿಷ್ಕೃತ ನಿಯಮದಂತೆ ಇನ್ನು ಮುಂದೆ ಚಿನ್ನದ ಪದಕ ಗೆದ್ದವರಿಗೆ 1 ಕೋಟಿ ರೂ., ಬೆಳ್ಳಿ ಪದಕ ವಿಜೇತರಿಗೆ 75 ಲಕ್ಷ ರೂ. ಹಾಗೂ ಕಂಚಿನ ಪದಕ ಗೆದ್ದವರಿಗೆ 50 ಲಕ್ಷ ರೂ. ನಗದು ಬಹುಮಾನ ದೊರೆಯಲಿದೆ.
ಏಷ್ಯನ್ ಗೇಮ್ಸ್ 2026ರಲ್ಲಿ ಪದಕ ಗೆದ್ದ ಎಂಟು ಕರ್ನಾಟಕದ ಕ್ರೀಡಾಪಟುಗಳು ಈ ಪರಿಷ್ಕೃತ ಬಹುಮಾನಕ್ಕೆ ಅರ್ಹರಾಗಿದ್ದಾರೆ. ಇದರ ಜೊತೆಗೆ, ಕ್ರೀಡಾಕೂಟದಲ್ಲಿ ಭಾಗವಹಿಸಿ ಸಾಧನೆ ಮಾಡಿದ ಈ ಎಂಟು ಮಂದಿಗೆ ತಲಾ 5 ಲಕ್ಷ ರೂ. ಹೆಚ್ಚುವರಿ ಪ್ರೋತ್ಸಾಹಧನವನ್ನೂ ನೀಡಲಾಗುತ್ತದೆ.
ಏಷ್ಯನ್ ಗೇಮ್ಸ್‌ನಲ್ಲಿ ಸ್ಪರ್ಧಿಸಿದ 20 ಮಂದಿಗೂ 5 ಲಕ್ಷ ರೂ.
ಪದಕ ಗೆದ್ದ ಕ್ರೀಡಾಪಟುಗಳಿಗೆ ಮಾತ್ರವಲ್ಲದೆ, ಏಷ್ಯನ್ ಗೇಮ್ಸ್ 2026ರಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಎಲ್ಲ ಅರ್ಹ ಕ್ರೀಡಾಪಟುಗಳಿಗೂ ಸರ್ಕಾರ ಪ್ರೋತ್ಸಾಹ ನೀಡಿದೆ. ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆದು ಸ್ಪರ್ಧಿಸಿದ ರಾಜ್ಯದ 20 ಕ್ರೀಡಾಪಟುಗಳಿಗೆ ಇದೇ ಮೊದಲ ಬಾರಿಗೆ ತಲಾ 5 ಲಕ್ಷ ರೂ. ಪ್ರೋತ್ಸಾಹಧನ ನೀಡಲು ನಿರ್ಧರಿಸಲಾಗಿದೆ.
ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ದೇಶವನ್ನು ಪ್ರತಿನಿಧಿಸುವ ಮಟ್ಟಕ್ಕೆ ತಲುಪುವುದೇ ದೊಡ್ಡ ಸಾಧನೆಯಾಗಿರುವುದರಿಂದ, ಪದಕ ಗೆಲ್ಲದಿದ್ದರೂ ಸ್ಪರ್ಧೆಯಲ್ಲಿ ಭಾಗವಹಿಸಿದ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಪದಕ ವಿಜೇತರಿಗೆ ಸರ್ಕಾರಿ ಉದ್ಯೋಗದ ಅವಕಾಶ
ಏಷ್ಯನ್ ಗೇಮ್ಸ್ ಮತ್ತು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆದ್ದ ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗ ಪಡೆಯಲು ಮತ್ತಷ್ಟು ಅವಕಾಶ ಕಲ್ಪಿಸಲಾಗಿದೆ.
ಅರ್ಹತೆ ಹೊಂದಿರುವ ಹಾಗೂ ಆಸಕ್ತಿ ತೋರಿಸುವ ಪದಕ ವಿಜೇತರನ್ನು ರಾಜ್ಯ ಸರ್ಕಾರದ ಗ್ರೂಪ್-ಬಿ ಹುದ್ದೆಗಳಿಗೆ ನೇರವಾಗಿ ನೇಮಕ ಮಾಡುವ ವ್ಯವಸ್ಥೆ ಜಾರಿಯಲ್ಲಿದೆ. ರಾಜ್ಯ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯ ಆಯ್ಕೆ ಸಮಿತಿಯ ಮೂಲಕ ಈ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.
ಕ್ರೀಡಾ ಸಾಧನೆಯ ಬಳಿಕ ಕ್ರೀಡಾಪಟುಗಳು ಉದ್ಯೋಗ ಹಾಗೂ ಭವಿಷ್ಯದ ಬಗ್ಗೆ ಆತಂಕಪಡದಂತೆ ಅವರಿಗೆ ವೃತ್ತಿಜೀವನದ ಭದ್ರತೆ ಒದಗಿಸುವುದು ಇದರ ಉದ್ದೇಶವಾಗಿದೆ.
`ಒಲಿಂಪಿಕ್ಸ್’ ಯೋಜನೆಯಡಿ 4 ಕ್ರೀಡಾಪಟುಗಳಿಗೆ 10 ಲಕ್ಷ ರೂ.
ಒಲಿಂಪಿಕ್ಸ್‌ನಲ್ಲಿ ಕರ್ನಾಟಕದ ಕ್ರೀಡಾಪಟುಗಳ ಭಾಗವಹಿಸುವಿಕೆ ಮತ್ತು ಪದಕ ಸಾಧನೆಯನ್ನು ಹೆಚ್ಚಿಸುವ ಉದ್ದೇಶದಿಂದ ಜಾರಿಯಲ್ಲಿರುವ ‘ಗುರಿ: ಒಲಿಂಪಿಕ್ಸ್’ ಯೋಜನೆಗೂ ಏಷ್ಯನ್ ಗೇಮ್ಸ್ ಮತ್ತು ಕಾಮನ್‌ವೆಲ್ತ್ ಗೇಮ್ಸ್ ಸಾಧಕರನ್ನು ಸೇರಿಸಲಾಗಿದೆ. 2026-27ನೇ ಸಾಲಿನಲ್ಲಿ ಎಂ.ಆರ್. ಪೂವಮ್ಮ, ಸ್ನೇಹಾ ಎಸ್.ಎಸ್., ಶ್ರೇಯಾಂಕ ಪಾಟೀಲ್ ಮತ್ತು ಶಿಲ್ಪಾ ಕೆ.ಎಸ್. ಅವರನ್ನು ಈ ಯೋಜನೆಯಡಿ ಆಯ್ಕೆ ಮಾಡಲಾಗಿದೆ.
ಈ ನಾಲ್ವರು ಕ್ರೀಡಾಪಟುಗಳಿಗೆ ಒಲಿಂಪಿಕ್ಸ್‌ಗಾಗಿ ತರಬೇತಿ, ಸಿದ್ಧತೆ ಮತ್ತು ಇತರ ಅಗತ್ಯ ವೆಚ್ಚಗಳಿಗೆ ತಲಾ 10 ಲಕ್ಷ ರೂ. ಪ್ರೋತ್ಸಾಹಧನ ನೀಡಲಾಗುತ್ತದೆ.
ಸರ್ಕಾರಿ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ 2% ಮೀಸಲಾತಿ
ಕ್ರೀಡಾಪಟುಗಳ ಭವಿಷ್ಯಕ್ಕೆ ಉದ್ಯೋಗ ಭದ್ರತೆ ಒದಗಿಸುವ ಮತ್ತೊಂದು ಮಹತ್ವದ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಅಕ್ಟೋಬರ್ 3ರಂದು ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ರಾಜ್ಯ ಸರ್ಕಾರದ ನೇರ ನೇಮಕಾತಿಯಲ್ಲಿ ಸಾಧಕ ಕ್ರೀಡಾಪಟುಗಳಿಗೆ ಶೇ.2ರಷ್ಟು ಮೀಸಲಾತಿ ಕಲ್ಪಿಸಲಾಗಿದೆ.
ಗ್ರೂಪ್-ಎ, ಗ್ರೂಪ್-ಬಿ, ಗ್ರೂಪ್-ಸಿ ಮತ್ತು ಗ್ರೂಪ್-ಡಿ ಸೇರಿದಂತೆ ರಾಜ್ಯ ಸರ್ಕಾರದ ವಿವಿಧ ಹಂತದ ಹುದ್ದೆಗಳ ನೇರ ನೇಮಕಾತಿಗೆ ಈ ಮೀಸಲಾತಿ ಅನ್ವಯವಾಗಲಿದೆ.
ಕರ್ನಾಟಕವನ್ನು ಕ್ರೀಡಾ ಶಕ್ತಿಕೇಂದ್ರವಾಗಿಸುವ ಗುರಿ
ಕ್ರೀಡಾ ಪ್ರತಿಭೆಗಳನ್ನು ಆರಂಭಿಕ ಹಂತದಲ್ಲೇ ಗುರುತಿಸಿ ಅವರಿಗೆ ಗುಣಮಟ್ಟದ ತರಬೇತಿ, ಆರ್ಥಿಕ ನೆರವು ಮತ್ತು ಅಂತಾರಾಷ್ಟ್ರೀಯ ಸ್ಪರ್ಧೆಗಳಿಗೆ ಅಗತ್ಯ ಸೌಲಭ್ಯ ಒದಗಿಸುವುದು ಸರ್ಕಾರದ ಗುರಿಯಾಗಿದೆ.
ಒಲಿಂಪಿಕ್ಸ್ ಸೇರಿದಂತೆ ಜಾಗತಿಕ ಮಟ್ಟದ ಕ್ರೀಡಾಕೂಟಗಳಲ್ಲಿ ಕರ್ನಾಟಕದ ಕ್ರೀಡಾಪಟುಗಳು ಹೆಚ್ಚಿನ ಪದಕ ಗೆಲ್ಲುವಂತೆ ಸಜ್ಜುಗೊಳಿಸುವುದರ ಜೊತೆಗೆ, ಅವರ ಕ್ರೀಡಾ ಬದುಕಿನ ನಂತರವೂ ಉದ್ಯೋಗ ಹಾಗೂ ಆರ್ಥಿಕ ಭದ್ರತೆ ದೊರೆಯುವಂತೆ ವ್ಯವಸ್ಥೆ ರೂಪಿಸಲಾಗುತ್ತಿದೆ. ಈ ಕ್ರಮಗಳ ಮೂಲಕ ಕರ್ನಾಟಕವನ್ನು ದೇಶದ ಪ್ರಮುಖ ಕ್ರೀಡಾ ರಾಜ್ಯವನ್ನಾಗಿ ಬೆಳೆಸುವ ಉದ್ದೇಶವನ್ನು ಸರ್ಕಾರ ಹೊಂದಿದೆ ಎಂದು ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
