
ಮೈಸೂರಿನ ಅಶೋಕಪುರಂ ರೈಲ್ವೆ ನಿಲ್ದಾಣ
ಮೈಸೂರಿನ ಅಶೋಕಪುರ ರೈಲ್ವೆ ನಿಲ್ದಾಣದ ಹೆಸರು ಬದಲಾವಣೆ: ಸಚಿವ ವಿ. ಸೋಮಣ್ಣ ಸ್ಪಷ್ಟನೆ ಏನು?
ಇತ್ತೀಚೆಗೆ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಅಶೋಕಪುರ ರೈಲ್ವೆ ನಿಲ್ದಾಣವನ್ನು 'ಅಮೃತ್ ಭಾರತ್ ನಿಲ್ದಾಣ ಯೋಜನೆ'ಯ ಅಡಿಯಲ್ಲಿ ಸಮಗ್ರವಾಗಿ ಅಭಿವೃದ್ಧಿಪಡಿಸುವಂತೆ ಕೋರಿ ಮನವಿ ಸಲ್ಲಿಸಿದ್ದರು.
ಮೈಸೂರಿನ ಅಶೋಕಪುರ ರೈಲ್ವೆ ನಿಲ್ದಾಣದ ಹೆಸರನ್ನು ಬದಲಾಯಿಸಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳು ಕೇವಲ ವದಂತಿ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಸ್ಪಷ್ಟಪಡಿಸಿದ್ದಾರೆ. ಈ ನಿಲ್ದಾಣದ ಮರುನಾಮಕರಣ ಮಾಡುವ ಯಾವುದೇ ಪ್ರಸ್ತಾವನೆ ರೈಲ್ವೆ ಇಲಾಖೆಯ ಮುಂದಿಲ್ಲ ಎಂದು ಅವರು ಖಚಿತಪಡಿಸಿದ್ದಾರೆ.
ಈ ಕುರಿತು ತಮ್ಮ ಅಧಿಕೃತ 'ಎಕ್ಸ್' (ಟ್ವಿಟರ್) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಸಚಿವ ವಿ. ಸೋಮಣ್ಣ ಅವರು, ಅಶೋಕಪುರ ರೈಲ್ವೆ ನಿಲ್ದಾಣದ ಹೆಸರು ಬದಲಾವಣೆ ಕುರಿತಾದ ವದಂತಿಗಳು ಸಂಪೂರ್ಣ ಆಧಾರರಹಿತವಾಗಿವೆ ಎಂದಿದ್ದಾರೆ. ಇಲಾಖೆಯು ಈ ಬಗ್ಗೆ ಯಾವುದೇ ಚಿಂತನೆ ನಡೆಸಿಲ್ಲ ಅಥವಾ ಅಂತಹ ಯಾವುದೇ ಪ್ರಸ್ತಾವನೆ ಪರಿಗಣನೆಯಲ್ಲಿಲ್ಲ, ಹೀಗಾಗಿ ಸಾರ್ವಜನಿಕರು ಇಂತಹ ಸುಳ್ಳು ಸುದ್ದಿಗಳನ್ನು ನಂಬಬಾರದು ಎಂದು ಅವರು ತಿಳಿಸಿದ್ದಾರೆ.
ಅಮೃತ್ ಭಾರತ್ ಯೋಜನೆಯಡಿ ಅಭಿವೃದ್ಧಿ ಭರವಸೆ
ಇತ್ತೀಚೆಗೆ ತಾವು ಮೈಸೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಅಶೋಕಪುರ ರೈಲ್ವೆ ನಿಲ್ದಾಣವನ್ನು 'ಅಮೃತ್ ಭಾರತ್ ನಿಲ್ದಾಣ ಯೋಜನೆ'ಯ (Amrit Bharat Station Scheme) ಅಡಿಯಲ್ಲಿ ಸಮಗ್ರವಾಗಿ ಅಭಿವೃದ್ಧಿಪಡಿಸುವಂತೆ ಕೋರಿ ಮನವಿ ಸಲ್ಲಿಸಿದ್ದರು. ಈ ಅಭಿವೃದ್ಧಿ ಪ್ರಸ್ತಾವನೆಯನ್ನು ಮುಂದಿನ ದಿನಗಳಲ್ಲಿ ಕೂಲಂಕಷವಾಗಿ ಪರಿಶೀಲಿಸಲಾಗುವುದು ಎಂಬ ಭರವಸೆಯನ್ನು ತಾವು ನೀಡಿರುವುದಾಗಿ ವಿ. ಸೋಮಣ್ಣ ಅವರು ತಮ್ಮ ಪೋಸ್ಟ್‌ನಲ್ಲಿ ವಿವರಿಸಿದ್ದಾರೆ.
ಸೋಮಣ್ಣ ಟ್ವೀಟ್ನಲ್ಲಿ ಏನಿದೆ?
ಮೈಸೂರಿನ ಅಶೋಕಪುರಂ ರೈಲ್ವೆ ನಿಲ್ದಾಣದ ಹೆಸರು ಬದಲಾವಣೆಯಾಗಲಿದೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಕುರಿತು ಸ್ಪಷ್ಟನೆ ನೀಡಲು ಬಯಸುತ್ತೇನೆ. ಅಶೋಕಪುರಂ ರೈಲ್ವೆ ನಿಲ್ದಾಣದ ಹೆಸರನ್ನು ಬದಲಾಯಿಸುವ ಯಾವುದೇ ಪ್ರಸ್ತಾವನೆ ರೈಲ್ವೆ ಇಲಾಖೆಯ ಮುಂದೆ ಇಲ್ಲ.
ನನ್ನ ಇತ್ತೀಚಿನ ಮೈಸೂರು ಭೇಟಿಯ ಸಂದರ್ಭದಲ್ಲಿ, ಮಾಜಿ ಸಂಸದರಾದ ಶ್ರೀ ಪ್ರತಾಪ್ ಸಿಂಹ ಅವರು ಅಶೋಕಪುರಂ ರೈಲ್ವೆ ನಿಲ್ದಾಣವನ್ನು 'ಅಮೃತ್ ಭಾರತ್ ಸ್ಟೇಷನ್' ಯೋಜನೆಯಡಿ ಅಭಿವೃದ್ಧಿಪಡಿಸುವಂತೆ ಮನವಿ ಸಲ್ಲಿಸಿದ್ದರು. ಈ ಪ್ರಸ್ತಾವನೆಯನ್ನು ಮುಂದಿನ ದಿನಗಳಲ್ಲಿ ಕೂಲಂಕಷವಾಗಿ ಪರಿಶೀಲಿಸಲಾಗುವುದು ಎಂದು ನಾನು ಅವರಿಗೆ ಭರವಸೆ ನೀಡಿದ್ದೇನೆ. ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಹೆಸರು ಬದಲಾವಣೆಯ ಸುದ್ದಿಗಳು ಸಂಪೂರ್ಣವಾಗಿ ಆಧಾರರಹಿತವಾಗಿದ್ದು, ಸಾರ್ವಜನಿಕರು ಇಂತಹ ವದಂತಿಗಳಿಗೆ ಕಿವಿಗೊಡಬಾರದು ಎಂದು ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇನೆ ಎಂದು ಸೋಮಣ್ಣ ಎಕ್ಸ್ನಲ್ಲಿ ಬರೆದಕೊಂಡಿದ್ದಾರೆ.

