
ರಾಜ್ಯ ಬಜೆಟ್ ಕನ್ನಡಿಗರ ಪಾಲಿನ ‘ಆರ್ಥಿಕ ಮರಣ ಶಾಸನ’: ಸದನದಲ್ಲಿ ಅರವಿಂದ ಬೆಲ್ಲದ್ ಕಿಡಿ
ಸಿದ್ದರಾಮಯ್ಯ ಮಂಡಿಸಿರುವ ತಮ್ಮ ವೃತ್ತಿಜೀವನದ 17ನೇ ಬಜೆಟ್‌ನಲ್ಲಿ ಅಂತಹ ಯಾವುದೇ ದೃಷ್ಟಿಕೋನ ಕಾಣುತ್ತಿಲ್ಲ. ರಾಜ್ಯವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುವ ಬದಲು, ಸಾಲದ ಕೂಪಕ್ಕೆ ತಳ್ಳುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ ಕೇವಲ ಅಂಕಿ-ಅಂಶಗಳ ತೋರಿಕೆಯ ಪ್ರದರ್ಶನವೇ ಹೊರತು ಅಭಿವೃದ್ಧಿಯ ದಿಕ್ಸೂಚಿಯಲ್ಲ. ಮಾತ್ರವಲ್ಲದೇ, ಯೋಜನೆಗಳಿಲ್ಲದ, ದಿಸೆ ತೋರದ ಅಂಕಿ-ಅಂಶಗಳ ಸಮೂಹವಾಗಿದ್ದು, ಇದು ಕನ್ನಡಿಗರ ಭವಿಷ್ಯಕ್ಕೆ ಆರ್ಥಿಕ ಮರಣ ಶಾಸನವಾಗಲಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಕಿಡಿಕಾರಿದ್ದಾರೆ.
ಬಜೆಟ್ ಮೇಲಿನ ಭಾಷಣದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಜೆಟ್ ಎಂಬುದು ಕೇವಲ ನಿರ್ಜೀವ ಅಂಕಿ-ಅಂಶಗಳ ಪಟ್ಟಿಯಲ್ಲ. ಅದು ರಾಜ್ಯದ ಏಳು ಕೋಟಿ ಜನರ ಬದುಕಿಗೆ ಭರವಸೆ ನೀಡುವ, ಅಭಿವೃದ್ಧಿಯ ಹೊಸ ಹಾದಿಯನ್ನು ತೋರಿಸುವ ಜೀವಂತ ದಸ್ತಾವೇಜಾಗಿರಬೇಕು. ಆದರೆ ಸಿದ್ದರಾಮಯ್ಯ ಮಂಡಿಸಿರುವ ತಮ್ಮ ವೃತ್ತಿಜೀವನದ 17ನೇ ಬಜೆಟ್‌ನಲ್ಲಿ ಅಂತಹ ಯಾವುದೇ ದೃಷ್ಟಿಕೋನ ಕಾಣುತ್ತಿಲ್ಲ. ಕಾಂಗ್ರೆಸ್ ಸರ್ಕಾರವು ರಾಜ್ಯವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುವ ಬದಲು, ಸಾಲದ ಕೂಪಕ್ಕೆ ತಳ್ಳುತ್ತಿದೆ ಎಂದು ಆರೋಪಿಸಿದರು.
ಇದೇ ವೇಳೆ ಬಜೆಟ್ ಕಾಂಗ್ರೆಸ್ ನಾಯಕರ ಪಾಲಿಗೆ ಅಕ್ಷಯ ಪಾತ್ರೆಯಾದರೆ, ಸಾಮಾನ್ಯ ಜನರ ಪಾಲಿಗೆ ಮಾತ್ರ ಖಾಲಿ ಚೊಂಬು ನೀಡಿದಂತಾಗಿದೆ ಎಂದರು. ಈ ಹೇಳಿಕೆಯು ಸದನದಲ್ಲಿ ಪರ-ವಿರೋಧದ ಚರ್ಚೆಗೆ ಕಾರಣವಾಯಿತು. ಅಲ್ಲದೇ, ಆಡಳಿತ ಮತ್ತು ಪ್ರತಿಪಕ್ಷ ನಡುವೆ ವಾಕ್ಸಮರಕ್ಕೆ ಎಡೆಮಾಡಿಕೊಟ್ಟಿತು. ವಸತಿ ಕ್ಷೇತ್ರದ ಕುರಿತು ಅಂಕಿ-ಅಂಶಗಳನ್ನು ವಿವರಿಸಿದ ಬೆಲ್ಲದ್, ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ರಾಜ್ಯದಲ್ಲಿ 7.03 ಲಕ್ಷ ಮನೆಗಳ ನಿರ್ಮಾಣದ ಗುರಿ ಹೊಂದಲಾಗಿದ್ದರೂ, ಈವರೆಗೆ ಕೇವಲ 3.13 ಲಕ್ಷ ಮನೆಗಳಿಗೆ ಮಾತ್ರ ಮಂಜೂರಾತಿ ಸಿಕ್ಕಿದೆ. ಅದರಲ್ಲಿಯೂ ಕೇವಲ 9,757 ಮನೆಗಳು ಮಾತ್ರ ಪೂರ್ಣಗೊಂಡಿವೆ ಎನ್ನುವುದು ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ. ಬಾಕಿ ಉಳಿದಿರುವ 4.19 ಲಕ್ಷ ಮನೆಗಳ ಪೂರ್ಣಗೊಳಿಸುವಿಕೆಗೆ ಸುಮಾರು 13,500 ಕೋಟಿ ರೂ. ಅನುದಾನದ ಅಗತ್ಯವಿದ್ದರೂ, ಬಜೆಟ್‌ನಲ್ಲಿ ಇದಕ್ಕೆ ಯಾವುದೇ ಸ್ಪಷ್ಟ ಹಣಕಾಸಿನ ಹಂಚಿಕೆ ಮಾಡಿಲ್ಲ ಎಂದು ದೂರಿದರು.
ಘೋಷಣೆಗಳ ಅಬ್ಬರ, ಶೂನ್ಯ ಸಾಧನೆ
ಶಿಕ್ಷಣ ಕ್ಷೇತ್ರಕ್ಕೆ ಕಳೆದ ಬಜೆಟ್‌ನಲ್ಲಿ ಘೋಷಿಸಲಾಗಿದ್ದ 500 ಹೊಸ ಕರ್ನಾಟಕ ಪಬ್ಲಿಕ್ ಶಾಲೆಗಳ (ಕೆಪಿಎಸ್) ಭರವಸೆ ಏನಾಯಿತು ಎಂದು ಪ್ರಶ್ನಿಸಿದರು. ಘೋಷಣೆ ಮಾಡಿ ವರ್ಷ ಕಳೆದರೂ ಒಂದೇ ಒಂದು ಶಾಲೆಯೂ ಆರಂಭವಾಗಿಲ್ಲ. ಕೇವಲ ಕಾಗದದ ಮೇಲೆ ಯೋಜನೆಗಳನ್ನು ರೂಪಿಸುವುದರಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವುದಿಲ್ಲ. ಸರ್ಕಾರಕ್ಕೆ ಉದ್ಯೋಗಮುಖಿ ಶಿಕ್ಷಣ ನೀಡುವ ಬಗ್ಗೆ ಕಾಳಜಿಯೇ ಇಲ್ಲ ಎಂದು ಟೀಕಿಸಿದರು. ಯುವ ನಿಧಿ ಯೋಜನೆಯ ಘೋಷಣೆಯಾಗಿದ್ದರೂ, ಅದಕ್ಕೆ ಪೂರಕವಾದ ಅನುದಾನ ಒದಗಿಸದಿರುವುದು ಯುವಜನತೆಗೆ ಮಾಡಿದ ದ್ರೋಹ ಎಂದು ಕಿಡಿಕಾರಿದರು.
ರೈತರ ಹಿತಾಸಕ್ತಿ ಬಲಿ
ರಾಜ್ಯದ ಬೆನ್ನೆಲುಬಾದ ಕೃಷಿ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ತೀವ್ರ ಅನ್ಯಾಯವಾಗಿದೆ. ವಿಶೇಷವಾಗಿ ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಎಲೆ ಚುಕ್ಕಿ ರೋಗದಂತಹ ಸಮಸ್ಯೆಗಳಿಗೆ ಕನಿಷ್ಠ 500 ಕೋಟಿ ರೂ. ಪ್ಯಾಕೇಜ್ ಅಗತ್ಯವಿತ್ತು. ಆದರೆ ಸರ್ಕಾರ ಕೇವಲ 10 ಕೋಟಿ ರೂ. ಮೀಸಲಿಟ್ಟು ರೈತರನ್ನು ಅಪಹಾಸ್ಯ ಮಾಡಿದೆ. ನೀರಾವರಿ ಯೋಜನೆಗಳ ವಿಷಯದಲ್ಲೂ ರಾಜ್ಯ ಸರ್ಕಾರದ ಧೋರಣೆ ನಿರಾಶಾದಾಯಕವಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆ, ಮಹಾದಾಯಿ ಮತ್ತು ಮೇಕೆದಾಟು ಯೋಜನೆಗಳ ಬಗ್ಗೆ ಕೇವಲ ರಾಜಕೀಯ ಭಾಷಣಗಳನ್ನು ಮಾಡುವ ಕಾಂಗ್ರೆಸ್, ಬಜೆಟ್‌ನಲ್ಲಿ ಈ ಯೋಜನೆಗಳಿಗೆ ತಕ್ಕ ಮಟ್ಟಿನ ಅನುದಾನ ನೀಡದೆ ನಿರ್ಲಕ್ಷಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಾದೇಶಿಕ ಅಸಮಾನತೆ, ಉದ್ಯೋಗದ ಬಿಕ್ಕಟ್ಟು
ರಾಜ್ಯದ ಪ್ರಾದೇಶಿಕ ಅಸಮಾನತೆಯು ಗಂಭೀರ ವಿಷಯವಾಗಿದೆ. ರಾಜ್ಯದ ಒಟ್ಟು ಇಪಿಎಫ್ ಖಾತೆದಾರರಲ್ಲಿ ಶೇ. 78 ರಷ್ಟು ಮಂದಿ ಬೆಂಗಳೂರಿನವರೇ ಆಗಿದ್ದಾರೆ. ಉದ್ಯೋಗ ಸೃಷ್ಟಿ ಕೇವಲ ಒಂದು ನಗರಕ್ಕೆ ಸೀಮಿತವಾಗಿದೆ. ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಭಾಗದ ಯುವಕರು ಉದ್ಯೋಗಕ್ಕಾಗಿ ಇಂದಿಗೂ ಪರದಾಡುತ್ತಿದ್ದಾರೆ. ಸರ್ಕಾರಕ್ಕೆ ವಿಕೇಂದ್ರೀಕರಣದ ಬಗ್ಗೆ ಕಿಂಚಿತ್ತೂ ಆಸಕ್ತಿಯಿಲ್ಲ. ಇನ್ನು, ರಾಜ್ಯದಲ್ಲಿ ಕೈಗಾರಿಕಾ ವಾತಾವರಣ ಹದಗೆಟ್ಟಿದ್ದು, ಮೂಲಸೌಕರ್ಯಗಳ ಕೊರತೆ ಮತ್ತು ಸರ್ಕಾರದ ಅಸ್ಪಷ್ಟ ನೀತಿಗಳಿಂದಾಗಿ ಕಳೆದ ಕೆಲವು ತಿಂಗಳುಗಳಲ್ಲಿ ಸುಮಾರು 629 ಕಂಪನಿಗಳು ರಾಜ್ಯವನ್ನು ಬಿಟ್ಟು ನೆರೆಹೊರೆಯ ರಾಜ್ಯಗಳಿಗೆ ವಲಸೆ ಹೋಗಿವೆ. ಇದು ರಾಜ್ಯದ ಆರ್ಥಿಕತೆಗೆ ಮತ್ತು ಉದ್ಯೋಗ ಸೃಷ್ಟಿಗೆ ದೊಡ್ಡ ಹೊಡೆತ ನೀಡಿದೆ. ಸುಮಾರು 56 ಸಾವಿರ ಸರ್ಕಾರಿ ಹುದ್ದೆಗಳು ಖಾಲಿ ಇದ್ದರೂ ಅವುಗಳ ಭರ್ತಿಗೆ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ ಎಂದರು.
ರಾಜ್ಯವು ಈಗ ಸಾಲದ ಸುಳಿಗೆ ಸಿಲುಕುತ್ತಿದೆ. ಅಭಿವೃದ್ಧಿ ಕಾಮಗಾರಿಗಳಿಗೆ ಹಣವಿಲ್ಲದಿದ್ದರೂ, ಗ್ಯಾರಂಟಿ ಯೋಜನೆಗಳಿಗಾಗಿ ಸಾಲ ಮಾಡುವುದು ಆರ್ಥಿಕ ಶಿಸ್ತನ್ನು ತಪ್ಪಿಸುತ್ತದೆ. ಸಾಲದ ಹಣದಿಂದ ಯೋಜನೆಗಳನ್ನು ನಡೆಸುವುದು ಸುಲಭ. ಆದರೆ ಅದರ ಬಡ್ಡಿಯ ಹೊರೆ ಹೊರುವವರು ಮುಂದಿನ ಪೀಳಿಗೆಯ ಕನ್ನಡಿಗರು ಎಂದು ಕಿಡಿಕಾರಿದರು.

