
ಸಾಂದರ್ಭಿಕ ಚಿತ್ರ
Job News | ಭರ್ತಿಯಾಗದ ಲಕ್ಷಾಂತರ ಸರ್ಕಾರಿ ಹುದ್ದೆ; ಯುವಜನರ ಭವಿಷ್ಯದ ಜೊತೆ ಸರ್ಕಾರ ಚೆಲ್ಲಾಟ
ರಾಜ್ಯದ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಸುಮಾರು 2.84 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಬಿದ್ದಿದ್ದರೂ, ಕಾನೂನು ಸಂಘರ್ಷ ಮತ್ತು ಆಡಳಿತಾತ್ಮಕ ವಿಳಂಬದಿಂದಾಗಿ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಂಡಿದೆ.
ರಾಜ್ಯದಲ್ಲಿ ಸೂಕ್ತ ಸಿಬ್ಬಂದಿ ಇಲ್ಲದೇ ಇಲಾಖೆ ಕೆಲಸಗಳು ವಿಳಂಬವಾಗುತ್ತಿದ್ದರೆ, ಮತ್ತೊಂದೆಡೆ ಲಕ್ಷಾಂತರ ಸುಶಿಕ್ಷಿತ ಯುವಜನತೆ ಉದ್ಯೋಗಕ್ಕಾಗಿ ಬೀದಿಗಿಳಿದು ಹೋರಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಆಡಳಿತಾತ್ಮಕ ವಿಳಂಬ, ಕಾನೂನು ಸಂಘರ್ಷ ಮತ್ತು ರಾಜಕೀಯ ಆರೋಪ-ಪ್ರತ್ಯಾರೋಪಗಳ ನಡುವೆ ದುರ್ಬಲವಾಗುತ್ತಿರುವ ಆಡಳಿತ ವ್ಯವಸ್ಥೆಯಿಂದ ರಾಜ್ಯದಲ್ಲಿ ಒಟ್ಟು 2,84,881 ಸರ್ಕಾರಿ ಹುದ್ದೆಗಳು ಖಾಲಿ ಇವೆ. ನಿಗಮ ಮಂಡಳಿಗಳು, ವಿಶ್ವವಿದ್ಯಾಲಯಗಳು, ಹೊರಗುತ್ತಿಗೆ ನೌಕರರು ಸೇರಿ 4,00,978 ಹುದ್ದೆಗಳು ಖಾಲಿ ಹೊಡೆಯುತ್ತಿವೆ.
ಈ ವ್ಯವಸ್ಥೆ ಕಾರ್ಯಾಂಗದ ಮೇಲೆ ಒತ್ತಡ ಹೆಚ್ಚಿಸಿದ್ದರೆ, ಉದ್ಯೋಗಾಕಾಂಕ್ಷಿಗಳಿಂದ ಒತ್ತಾಯವೂ ತೀವ್ರವಾಗಿದೆ. ಶಿಕ್ಷಣ ಹಾಗೂ ಪೊಲೀಸ್ ಇಲಾಖೆಯಲ್ಲಿನ ಖಾಲಿ ಹುದ್ದೆ ಭರ್ತಿ ಆದ್ಯತೆ ಮೇರೆಗೆ ನಡೆಯಬೇಕಿದ್ದು, ಯುವಜನತೆ ಹಾಗೂ ಉದ್ಯೋಗಾಕಾಂಕ್ಷಿಗಳು ಬಜೆಟ್‌ನತ್ತ ದೃಷ್ಟಿ ನೆಟ್ಟಿದ್ದಾರೆ. ಖಾಲಿಯಿರುವ ಒಟ್ಟು 2.84 ಲಕ್ಷ ಹುದ್ದೆ ಪೈಕಿ ಅತಿ ಹೆಚ್ಚು ಅಂದರೆ 'ಸಿ' ಶ್ರೇಣಿಯ 1,66,021 ಹಾಗೂ 'ಡಿ' ಶ್ರೇಣಿಯ 77,614 ಹುದ್ದೆಗಳೇ ಖಾಲಿಯಿವೆ.
ಇದರಲ್ಲಿ ಸುಮಾರು 37,000 ಹುದ್ದೆ ಹೊರಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿದ್ದರೂ ಕಾಯಂ ನೌಕರರು ಕಾರ್ಯನಿರ್ವಹಿಸಿದಷ್ಟು ಪರಿಣಾಮಕಾರಿ ಎನಿಸುತ್ತಿಲ್ಲ. ಗುತ್ತಿಗೆ ನೇಮಕ ಹೊರತಾಗಿಯೂ 2.84 ಲಕ್ಷ ಹುದ್ದೆ ಖಾಲಿ ಉಳಿದಿರುವುದು ಸೇವಾನಿರತ ನೌಕರರು, ಸಿಬ್ಬಂದಿ ಮೇಲೆ ಕಾರ್ಯದ ಒತ್ತಡ ಹೆಚ್ಚಿಸಿದೆ. ಪ್ರಸಕ್ತ ಆರ್ಥಿಕ ವರ್ಷ ಮುಗಿಯುತ್ತಿದ್ದು, 56,000 ಹುದ್ದೆ ಭರ್ತಿಗೆ ಸರ್ಕಾರ ಅನುಮೋದನೆ ನೀಡಿದರೂ ನೇಮಕ ಪ್ರಕ್ರಿಯೆ ಶುರುವಾಗಿಲ್ಲ. ಹಾಗಾಗಿ 2026-27ನೇ ಸಾಲಿನ ಬಜೆಟ್‌ನಲ್ಲಾದರೂ ಈ 56,000 ಹುದ್ದೆ ಜತೆಗೆ ಒಟ್ಟು 1 ಲಕ್ಷ ಹುದ್ದೆ ಭರ್ತಿಗೆ ಅನುದಾನ ಒದಗಿಸಿ ನೇಮಕ ಮಾಡಬೇಕೆಂಬ ಉದ್ಯೋಗಾಕಾಂಕ್ಷಿಗಳ ನಿರೀಕ್ಷೆಗೆ ಸರ್ಕಾರ ಸ್ಪಂದಿಸಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಬೀದಿಗಿಳಿದು ಪ್ರತಿಭಟನೆ
ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಬೇಕು, ಉದ್ಯೋಗ ಕಲ್ಪಿಸಿಕೊಡಬೇಕೆಂದು ಆಗ್ರಹಿಸಿ ಧಾರವಾಡದಲ್ಲಿ ನಿನ್ನೆಯಷ್ಟೇ ಯುವಸಮೂಹ ಬೀದಿಗಿಳಿದು ಹೋರಾಟ ನಡೆಸಿದೆ. ಸಾವಿರಾರು ಯುವಕ-ಯುವತಿಯರು ಹಳ್ಳಿಗಳಿಂದ ಬಂದು ಪಿಜಿ, ಹಾಸ್ಟೆಲ್‌ಗಳಲ್ಲಿ ಇದ್ದುಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುತ್ತಿದ್ದಾರೆ. ಆದರೆ, ವರ್ಷಗಳು ಕಳೆದರೂ ಕೆಪಿಎಸ್‌ಸಿ, ಪೊಲೀಸ್ ಇಲಾಖೆ ಸೇರಿದಂತೆ ಯಾವುದೇ ಪ್ರಮುಖ ಇಲಾಖೆಗಳ ನೇಮಕಾತಿ ಅಧಿಸೂಚನೆ ಬಂದಿಲ್ಲ. ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಸಾವಿರಾರು ಅಭ್ಯರ್ಥಿಗಳು ನೇಮಕಾತಿ ಅಧಿಸೂಚನೆಗಳು ಮತ್ತು ಪರೀಕ್ಷೆಗಳ ವಿಳಂಬದಿಂದ ಕಂಗೆಟ್ಟಿದ್ದು, ಸರ್ಕಾರದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದರು.
ಕೂಡಲೇ ಬಾಕಿ ಇರುವ ನೇಮಕಾತಿ ಪರೀಕ್ಷೆಗಳ ಫಲಿತಾಂಶ ಪ್ರಕಟಿಸಬೇಕು, ಹೊಸ ಅಧಿಸೂಚನೆಗಳನ್ನು ಹೊರಡಿಸಬೇಕು ಹಾಗೂ ವಯೋಮಿತಿ ಮೀರುತ್ತಿರುವ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ. ಸರ್ಕಾರ ಸ್ಪಷ್ಟ ಭರವಸೆ ನೀಡದಿದ್ದರೆ ಮುಂದಿನ ದಿನಗಳಲ್ಲಿ ಈ ಹೋರಾಟವನ್ನು ಉಗ್ರರೂಪಕ್ಕೆ ಕೊಂಡೊಯ್ಯುವುದಾಗಿ ಹಾಗೂ ರಾಜ್ಯಾದ್ಯಂತ ವಿಸ್ತರಿಸುವುದಾಗಿ ವಿದ್ಯಾರ್ಥಿ ಸಂಘಟನೆಗಳು ಎಚ್ಚರಿಕೆ ನೀಡಿದ್ದವು.
ನೇಮಕಾತಿ ಸಂಕಷ್ಟ
ರಾಜ್ಯ ಸರ್ಕಾರ ಶೇ. 56ರ ಮೀಸಲಾತಿಯಂತೆ ನೇಮಕಾತಿ ನಡೆಸುವುದನ್ನು ವಿರೋಧಿಸಿ ಹಲವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಹೈಕೋರ್ಟ್ ನೇಮಕಾತಿ ಆದೇಶಗಳಿಗೆ ತಡೆ ನೀಡಿದ್ದು, ನೇಮಕಾತಿ ನಡೆಸುವುದೇ ಆದರೆ, ಶೇ. 50 ರ ಮೀಸಲಾತಿಯಲ್ಲಿಯೇ ನಡೆಸಿ ಎಂದಿತ್ತು. ಹೀಗಾಗಿ ರಾಜ್ಯ ಸರ್ಕಾರ ನೂತನ ನೇಮಕಾತಿಗಳಿಗೆ ಹಿಂದೇಟು ಹಾಕುತ್ತಿದೆ. ಪ್ರಶ್ನೆ ಪತ್ರಿಕೆ ಸೋರಿಕೆ, ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿನ ದೋಷ ಅಥವಾ ಮೀಸಲಾತಿ ನಿಯಮಗಳ ಉಲ್ಲಂಘನೆಯಿಂದಾಗಿ ಬಹುತೇಕ ನೇಮಕಾತಿಗಳು ನ್ಯಾಯಾಲಯದ ಮೆಟ್ಟಿಲೇರಿರುವುದೇ ನೇಮಕಾತಿಗೆ ಇನ್ನಷ್ಟು ಸಂಕಷ್ಟ ಉಂಟು ಮಾಡಿದೆ.
ರಾಜ್ಯದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗೆ ಕಳೆದ 15 ವರ್ಷಗಳಿಂದ ನೇಮಕಾತಿ ನಡೆದಿಲ್ಲ. ಅರಣ್ಯ ಇಲಾಖೆಯಲ್ಲಿ 5 ವರ್ಷ, ಕೃಷಿ ಇಲಾಖೆಯಲ್ಲಿ 8 ವರ್ಷ, ತೋಟಗಾರಿಕೆ ಇಲಾಖೆಯಲ್ಲಿ 7 ವರ್ಷ, ಪೊಲೀಸ್ ಇಲಾಖೆ ಪಿಎಸ್‌ಐ ಹುದ್ದೆಗೆ 5 ವರ್ಷ, ಸಬ್ ರಿಜಿಸ್ಟ್ರಾರ್ ಹುದ್ದೆಗೆ 10 ವರ್ಷ ಹಾಗೂ ಅಬಕಾರಿ ಇಲಾಖೆಯಲ್ಲಿ 9 ವರ್ಷಗಳಿಂದ ನೇಮಕಾತಿಯೇ ನಡೆದಿಲ್ಲ.
ಎಷ್ಟು ಹುದ್ದೆಗಳು ಖಾಲಿ?
2024ರಲ್ಲಿ ಒಟ್ಟು ಮಂಜೂರಾದ ಸುಮಾರು 2,58,000ಕ್ಕೂ ಅಧಿಕ ಹುದ್ದೆಗಳಲ್ಲಿ ನೇಮಕಾತಿಯೇ ನಡೆದಿಲ್ಲ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಲ್ಲಿ 70,727, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 37,069, ಒಳಾಡಳಿತ ಇಲಾಖೆ (ಪೊಲೀಸ್ ಸೇರಿ) 26,168, ಉನ್ನತ ಶಿಕ್ಷಣ ಇಲಾಖೆ 13,227, ಕಂದಾಯ ಇಲಾಖೆಯಲ್ಲಿ 11,145, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ 10,898, ಪಶುಸಂಗೋಪನೆ ಇಲಾಖೆ 10,755, ಸಮಾಜ ಕಲ್ಯಾಣ ಇಲಾಖೆ 9,980, ಆರ್ಥಿಕ ಇಲಾಖೆ 9,536, ಕೃಷಿ ಇಲಾಖೆ 6,773 ಹುದ್ದೆಗಳು ಖಾಲಿ ಇದ್ದವು.
ಪ್ರಸಕ್ತ ಸಾಲಿನಲ್ಲಿ ಈ ಸಂಖ್ಯೆ ಇನ್ನಷ್ಟು ಏರಿಕೆಯಾಗಿದ್ದು, ಈಗ 2,84,881 ಖಾಲಿ ಹುದ್ದೆಗಳಿಗೆ ಏರಿಕೆಯಾಗಿದೆ. ಶಿಕ್ಷಣ ಇಲಾಖೆಯಲ್ಲಿ 79,694 ಹುದ್ದೆಗಳು ಖಾಲಿ ಇದ್ದರೆ, ಆರೋಗ್ಯ ಇಲಾಖೆಯಲ್ಲಿ 37,572 ಹುದ್ದೆಗಳು, ಗೃಹ ಇಲಾಖೆ (ಪೊಲೀಸ್)ಯಲ್ಲಿ 28,188 ಹುದ್ದೆಗಳು ಖಾಲಿ ಇವೆ. ಉನ್ನತ ಶಿಕ್ಷಣ ಇಲಾಖೆ 13,599, ಕಂದಾಯ ಇಲಾಖೆ 10,867, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ 10,504 ಹುದ್ದೆಗಳು ಖಾಲಿ ಇವೆ.
ಸರ್ಕಾರವು 2026ರಲ್ಲಿ ಸುಮಾರು 56,000 ಹುದ್ದೆಗಳನ್ನು ಭರ್ತಿ ಮಾಡುವ ಗುರಿ ಇಟ್ಟುಕೊಂಡಿದೆ. ಈಗಾಗಲೇ ಆರ್ಥಿಕ ಇಲಾಖೆಯು ಮೊದಲ ಹಂತದಲ್ಲಿ 24,300 ಹುದ್ದೆಗಳ ನೇಮಕಾತಿಗೆ ಚಾಲನೆ ನೀಡಿದ್ದು, ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಸುಮಾರು 30,000ಕ್ಕೂ ಹೆಚ್ಚು ಬ್ಯಾಕ್‌ಲಾಗ್ ಮತ್ತು ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಆದ್ಯತೆ ನೀಡಲಾಗುತ್ತಿದೆ. ಆದರೆ, ನೇಮಕಾತಿ ಪ್ರತಿ ವಿತರಿಸುವ ಹಂತಕ್ಕೆ ತಲುಪಿಲ್ಲ. ಇದರೊಂದಿಗೆ 2026ರ ಆರಂಭದಲ್ಲಿ ಕೆಪಿಎಸ್‌ಸಿ (KPSC) ಮೂಲಕ ಗ್ರೂಪ್ 'ಎ' ಮತ್ತು 'ಬಿ' ಹುದ್ದೆಗಳು ಹಾಗೂ ಗ್ರಾಮ ಆಡಳಿತ ಅಧಿಕಾರಿ (VAO) ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಈ ಬಗ್ಗೆ ಸರ್ಕಾರಿ ನೌಕರರ ಸಂಘದ ರಾಜ್ಯಾಉಪಾಧ್ಯಕ್ಷ ಕೆ.ಸತೀಶ್ "ದ ಫೆಡರಲ್ ಕರ್ನಾಟಕ"ದೊಂದಿಗೆ ಮಾತನಾಡಿ, "ಸರಕಾರದಲ್ಲಿ 2.84 ಲಕ್ಷ ಹುದ್ದೆ ಖಾಲಿ ಇದೆ. ಹೀಗಾಗಿ ಮೂರು ಹುದ್ದೆಗಳನ್ನು ಒಬ್ಬರೆ ಸರಕಾರಿ ನೌಕರ ನಿರ್ವಹಿಸಬೇಕಿದೆ. ಇದು ಸಾಕಷ್ಟು ಹೊರೆಯಾಗಿ ಪರಿಣಮಿಸಿದೆ. ಇದರಿಂದ ಕೆಲಸಗಳು ವಿಳಂಭಗೊಳ್ಳುತ್ತಿದೆ. ಹೀಗಾಗಿ ಸರಕಾರ ಆದಷ್ಟು ಬೇಗ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಯುವಕರಿಗೆ ಅವಕಾಶ ಕಲ್ಪಿಸಬೇಕಿದೆ" ಎಂದರು.
ರಾಜ್ಯದಲ್ಲಿ ಖಾಲಿ ಇರುವ ಸರಕಾರಿ ಇಲಾಖೆಗಳ ಹುದ್ದೆಗಳು
ಆರೋಪಗಳಲ್ಲೇ ನಿರತ
ನಮ್ಮ ಕಾಲದಲ್ಲಿ ಸಾಕಷ್ಟು ಹುದ್ದೆ ಸೃಜಿಸಲಾಗಿದೆ. ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಮಾಡಿದ ಎಡವಟ್ಟಿನಿಂದಾಗಿ ಖಾಲಿ ಇರುವ ಹುದ್ದೆಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಆಡಳಿತದಲ್ಲಿನ ಕಾಂಗ್ರೆಸ್ ಆರೋಪಿಸುತ್ತಿದ್ದರೆ, ಪ್ರತಿಪಕ್ಷಗಳು ಸಹ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿವೆ. "ನಾವು 40 ಸಾವಿರ ಹುದ್ದೆ ಸೃಷ್ಟಿಸಿದ್ದೇವೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದರೆ, ಪ್ರತಿಪಕ್ಷ ನಾಯಕರು ಸಹ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸೃಷ್ಟಿಸಿದ್ದ ಹುದ್ದೆಗಳ ಪಟ್ಟಿಯೊಂದಿಗೆ, ಕಾಂಗ್ರೆಸ್ ಈವರೆಗೂ ಯಾವುದೇ ಹುದ್ದೆ ಸೃಷ್ಟಿಸಿಲ್ಲ ಎಂದು ಆರೋಪಿಸುತ್ತಿದ್ದಾರೆ.

