Ground Report| ಅರ್ಕಾವತಿ ನದಿ ಪಾತ್ರದಲ್ಲಿ ʼದ ಫೆಡರಲ್ʼ: ಜೀವನದಿಯ ಒಡಲಲ್ಲಿ ವಿಷವೇ ವಿಷ!
x
ದೊಡ್ಡಬಳ್ಳಾಪುರ ತಾಲೂಕಿನ ಚಿಕ್ಕತುಮಕೂರು ಬಳಿ ಅರ್ಕಾವತಿಯ ನದಿ ಪಾತ್ರ ಕೊಳಚೆ ನೀರಿನಿಂದ ಕಲುಷಿತವಾಗಿರುವುದು (ಚಿತ್ರಗಳು: ರಘು ಆರ್‌.ಡಿ.)

Ground Report| ಅರ್ಕಾವತಿ ನದಿ ಪಾತ್ರದಲ್ಲಿ ʼದ ಫೆಡರಲ್ʼ: ಜೀವನದಿಯ ಒಡಲಲ್ಲಿ ವಿಷವೇ ವಿಷ!

ಸೊಂಡೆಕೊಪ್ಪದ ಬಳಿ ಅರ್ಕಾವತಿಯ ಸ್ಥಿತಿ ಎಲ್ಲರನ್ನೂ ಮರುಗುವಂತೆ ಇದೆ. ಈ ಹಿಂದೆ ಜೀವನದಿಯಾಗಿ ಹರಿಯುತ್ತಿದ್ದ ಕಾವೇರಿಯ ಈ ಉಪನದಿಯು ಈಗ ಅಕ್ಷರಶಃ ಕಪ್ಪು ನೀರಿನ ಮೋರಿಯಾಗಿ ಬದಲಾಗಿದೆ.


ಏಷ್ಯಾದ ಪ್ರಸಿದ್ಧ ಗಿರಿಧಾಮ ನಂದಿಬೆಟ್ಟದಲ್ಲಿ ಹುಟ್ಟಿ, ಹಾಲ್ನೊರೆಯಂತೆ ಧುಮುಕಿ ತೊರೆ, ಕೆರೆ, ಕಾಲುವೆ ಮೂಲಕ ಕಾವೇರಿ ಒಡಲು ಸೇರುವ ಅರ್ಕಾವತಿ ಇಂದು ಕೈಗಾರಿಕೆಗಳ ತ್ಯಾಜ್ಯ, ನಗರ ಪ್ರದೇಶಗಳ ಒಳ ಚರಂಡಿ ನೀರಿನಿಂದ ಸಂಪೂರ್ಣ ಮಲಿನವಾಗಿದೆ.

4500 ಅಡಿ ಎತ್ತರದ ನಂದಿಬೆಟ್ಟದಿಂದ ಕೆಳಗಿಳಿದು ದಕ್ಷಿಣಾಭಿಮುಖವಾಗಿ ಹರಿಯುವ ಅರ್ಕಾವತಿ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಹಾಗೂ ರಾಮನಗರ ಮೂಲಕ ಕನಕಪುರದ ಸಂಗಮದ ಬಳಿ ಕಾವೇರಿ ನದಿ ಸೇರಲಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಅರ್ಕಾವತಿ ಹರಿದಿದ್ದೇ ವಿರಳ. ಜಲಮೂಲಗಳ ಒತ್ತುವರಿ, ನದಿ ಪಾತ್ರದ ಶೋಷಣೆಯಿಂದ ನದಿ ಬತ್ತಿ ಹೋಗಿದೆ.

ಆರು ದಶಕಗಳ ಕಾಲ ಬೆಂಗಳೂರಿನ ಜನರ ಬಾಯಾರಿಕೆ ನೀಗಿಸಿದ್ದ ಅರ್ಕಾವತಿ 2000ನೇ ಇಸವಿ ನಂತರ ಅತಿಯಾದ ನಗರೀಕರಣದಿಂದಾಗಿ ಅಳಿವಿನ ಅಂಚಿಗೆ ಬಂದು ನಿಂತಿದೆ.

ಅರ್ಕಾವತಿ ನದಿ ಪಾತ್ರದಲ್ಲಿ ʼದ ಫೆಡರಲ್‌ ಕರ್ನಾಟಕʼ ಸಾಗಿದ ಸಮಯ

ಅರ್ಕಾವತಿ ಮಾರ್ಗ ಹೇಗಿದೆ?

ಮೆಳೆಕೋಟೆ ದೊಡ್ಡಕೆರೆ, ಬೀಡಿಕೆರೆ, ಕಂಚಿಗನಾಳ, ರಾಜಘಟ್ಟ ಅಮಾನಿಕೆರೆ, ನಾಗರಕೆರೆ, ಚಿಕ್ಕತುಮಕೂರು, ದೊಡ್ಡತುಮಕೂರು, ಕಾಕೋಳು, ಹೆಸರಘಟ್ಟ, ಚಾಮರಾಜಸಾಗರ(ತಿಪ್ಪಗೊಂಡನಹಳ್ಳಿ), ಬಸವನತಾರಾ ಅರಣ್ಯದ ಮೂಲಕ ಮಂಚನಬೆಲೆ ಜಲಾಶಯ, ರಾಮನಗರ, ಕನಕಪುರ, ಟಿ.ಬೇಕುಪ್ಪೆ, ಅರ್ಕಾವತಿ ಜಲಾಶಯ, ಚುಂಚಿ ಅಣೆಕಟ್ಟೆ, ಕೊಕ್ಕೆದೊಡ್ಡಿ ಮೂಲಕ ಸಂಗಮ ಸೇರಲಿದೆ.

ನದಿ ಪಾತ್ರದಲ್ಲೇ ಹೆಚ್ಚು ಕಲುಷಿತ

ಅರ್ಕಾವತಿ ನದಿ ಪಾತ್ರದ ಪ್ರಮುಖ ಹಾಗೂ ಮೊದಲಿಗೆ ಮಲಿನವಾಗುವ ಕೆರೆ ದೊಡ್ಡಬಳ್ಳಾಪುರದ ನಾಗರಕೆರೆ. ಅರ್ಕಾವತಿಯ ಕಲುಷಿತದ ಪಯಣ ಅಧಿಕೃತವಾಗಿ ಇದೇ ಕೆರೆಯಿಂದ ಆರಂಭವಾಗುತ್ತದೆ.

ನಗರಸಭೆಯ ಅವೈಜ್ಞಾನಿಕ ಒಳಚರಂಡಿ ಮಾರ್ಗ ಹಾಗೂ ನಗರದ ತ್ಯಾಜ್ಯ ನೀರು ನೇರವಾಗಿ ಕೆರೆ ಸೇರುವ ಮೂಲಕ ನೀರು ಮಲಿನಗೊಂಡಿದೆ. ಪ್ರಸ್ತುತ, ಕೆರೆಯಲ್ಲಿ ಅಂತರಗಂಗೆ ಕಳೆ ಹೆಚ್ಚಾಗಿದೆ. ಜಲಚರಗಳಿಗೂ ಆಮ್ಲಜನಕವೂ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಮಳೆಗಾಲದಲ್ಲಿ ಮ್ಯಾನ್‌ಹೋಲ್‌ಗಳು ಉಕ್ಕಿ ಹರಿಯುವುದರಿಂದ ಜನರ ಮಲ ಮೂತ್ರದ ನೀರು ನೇರವಾಗಿ ನಾಗರಕೆರೆ ಸೇರಿ, ಅಲ್ಲಿಂದ ನೇರವಾಗಿ ತಾಲೂಕಿನ ಚಿಕ್ಕತುಮಕೂರು, ದೊಡ್ಡತುಮಕೂರು ಕೆರೆಗಳಿಗೆ ಹರಿಯುತ್ತದೆ.

ಬಾಶೆಟ್ಟಿಹಳ್ಳಿ ಕೈಗಾರಿಕೆಗಳಿಂದ ರಾಸಾಯನಿಕ ತ್ಯಾಜ್ಯ ಸೇರಿ, ಅಕ್ಷರಶಃ ಕೆರೆಯ ನೀರನ್ನು ವಿಷವನ್ನಾಗಿ ಪರಿವರ್ತಿಸಿದೆ. ಈ ರಾಸಾಯನಿಕ ಮಿಶ್ರಿತ ನೀರು ಅಂತರ್ಜಲಕ್ಕೂ ಇಳಿದಿದ್ದು, ಕುಡಿಯುವ ನೀರು ಕೂಡ ಕಲುಷಿತವಾಗಿದೆ. ದೊಡ್ಡತುಮಕೂರು ಹಾಗೂ ಮಜರಾ ಹೊಸಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳ ಕೊಳವೆಬಾವಿಗಳಲ್ಲಿ ಕ್ಯಾಡ್ಮಿಯಂ, ಸೀಸ, ಇಕೋಲಿ, ಫ್ಲೋರೈಡ್ ಅಂಶ ಕಂಡು ಬಂದಿದೆ.

ದೊಡ್ಡಬಳ್ಳಾಪುರದ ಕಲುಷಿತ ನೀರು ಕಾಕೋಳು ಕೆರೆಗೆ ಸಾಗಿ ಅಲ್ಲಿಂದ ಹೆಸರಘಟ್ಟ ಕೆರೆಗೆ ಬಂದು ಸಂಗ್ರಹವಾಗಲಿದೆ. 2000ನೇ ಸಾಲಿನವರೆಗೆ ಬೆಂಗಳೂರಿಗೆ ಇದೇ ಕೆರೆಯಿಂದ ಕುಡಿಯುವ ನೀರು ಪೂರೈಸಲಾಗುತ್ತಿತ್ತು. ನೀರು ಕಲುಷಿತವಾದ ಕಾರಣ ಹೆಸರಘಟ್ಟ ಕೆರೆಯ ನೀರಿನ ಬಳಕೆ ನಿಲ್ಲಿಸಲಾಯಿತು.

ಚಿಕ್ಕತುಮಕೂರು ಬಳಿಯ ಎಸ್‌ಟಿಪಿ ಘಟಕಕ್ಕೆ ನಗರಸಭೆಯ ಒಳಚರಂಡಿ ನೀರು ಹರಿಯುತ್ತಿರುವುದು

ಡೈಯಿಂಗ್ ಕಾರ್ಖಾನೆಗಳ ಬಣ್ಣದ ನೀರು ಕೆರೆಗೆ

ದೊಡ್ಡಬಳ್ಳಾಪುರದಲ್ಲಿ ಡೈಯಿಂಗ್(ಬಣ್ಣ) ಕಾರ್ಖಾನೆಗಳು ರಾಸಾಯನಿಕ ಬಣ್ಣದ ನೀರನ್ನು ರಾಜಕಾಲುವೆಗೆ ಬಿಡುತ್ತಿದ್ದು, ಇದು ನೇರವಾಗಿ ಕೆರೆಗಳನ್ನು ಸೇರುತ್ತಿದೆ. ಅನಧಿಕೃತ ರೇಷ್ಮೆ ನೂಲು ಕಾರ್ಖಾನೆಗಳ ವಿರುದ್ಧ ನಗರಸಭೆ ಸಾಕಷ್ಟು ದೂರು ನೀಡಿದರೂ ಯಾವುದೇ ಕ್ರಮ ಜರುಗಿಸಿಲ್ಲ. ಅಧಿಕಾರಿಗಳು ಕಾಟಾಚಾರಕ್ಕೆ ನೋಟಿಸ್ ನೀಡಿ ಕೈ ತೊಳೆದುಕೊಳ್ಳುತ್ತಿದ್ದಾರೆ ಎಂದು ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆ ಮುಖಂಡ ವಸಂತ್ ಕುಮಾರ್ 'ದ ಫೆಡರಲ್ ಕರ್ನಾಟಕ' ಕ್ಕೆ ತಿಳಿಸಿದರು.

ಚಿಕ್ಕತುಮಕೂರು ಹಾಗೂ ದೊಡ್ಡತುಮಕೂರು ಗ್ರಾಮದಲ್ಲಿ ಕೆರೆ ನೀರು ಕಲುಷಿತಗೊಂಡಿರುವ ಪರಿಣಾಮವನ್ನು ಜನರು ಎದುರಿಸುತ್ತಿದ್ದಾರೆ. ಚಿಕ್ಕತುಮಕೂರು ಗ್ರಾಮದಲ್ಲಿ ಕೆರೆಯ ದುರ್ವಾಸನೆಯಿಂದ ಜನ ಬೇಸತ್ತಿದ್ದಾರೆ. ಆ ಕೆರೆಯ ಆಸುಪಾಸಿನ ಪ್ರದೇಶದ ಬೋರ್ ವೆಲ್ ನೀರು ಸೇವನೆಯಿಂದ ಹಲವರಲ್ಲಿ ಕೈ-ಕಾಲು ಸೆಳೆತ, ಚರ್ಮಕಾಯಿಲೆ ಹಾಗೂ ಕ್ಯಾನ್ಸರ್ ಕಾಣಿಸಿಕೊಂಡಿದೆ. ಮಜರಾ ಹೊಸಹಳ್ಳಿ ಹಾಗೂ ದೊಡ್ಡತುಮಕೂರು ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಿಗೆ ಪ್ರತಿನಿತ್ಯ 1 ಟ್ಯಾಂಕರ್ ನೀರು ಕೊಡುತ್ತಾರೆ. ಈ ಟ್ಯಾಂಕರ್ ನೀರಿಗೆ ಒಂದು ತೊಟ್ಟ ವಿಷ ಹಾಕಿ ಕೊಟ್ಟರೆ ಎಲ್ಲರೂ ಸಾಯಬಹುದು. ಆ ಬಳಿಕ ಸರ್ಕಾರಗಳು ತಮಗೆ ಬೇಕಾದಂತೆ ಮಾಡಲಿ ಎಂದು ಚಿಕ್ಕತುಮಕೂರು ಗ್ರಾಮದ ನಿವಾಸಿ ಅಶ್ವತ್ಥನಾರಾಯಣ ಅವರು ʼದ ಫೆಡರಲ್ ಕರ್ನಾಟಕʼದ ಬಳಿ ಅಳಲು ತೋಡಿಕೊಂಡರು.

ಚಿಕ್ಕತುಮಕೂರು ಸಮೀಪ ದಶಕದ ಹಿಂದೆಯೇ ತ್ಯಾಜ್ಯ ನೀರು ಶುದ್ದೀಕರಣ ಘಟಕ(ಎಸ್‌ಪಿ) ನಿರ್ಮಿಸಿದ್ದರೂ ಈಗ ನಿಷ್ಕ್ರಿಯವಾಗಿದೆ. ಎಸ್‌ಟಿಪಿ ಘಟಕಕ್ಕೆ ನಗರಸಭೆಯ ಒಳಚರಂಡಿ ನೀರು ಹರಿಯುತ್ತಿದೆ. 2022 ರಲ್ಲಿ ಚಿಕ್ಕತುಮಕೂರು ಹಾಗೂ ನಾಗರಕೆರೆಗೆ ತ್ಯಾಜ್ಯ ನೀರು ಬಿಡದಂತೆ ಕ್ರಮ ವಹಿಸಬೇಕು ಎಂದು ರಾಷ್ಟ್ರೀಯ ಹಸಿರುಪೀಠ ರಚಿಸಿದ್ದ ಜಂಟಿ ಸಮಿತಿ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದರೂ ಈವರೆಗೆ ಜಿಲ್ಲಾಡಳಿತ ಯಾವುದೇ ಕ್ರಮ ಜರುಗಿಸಿಲ್ಲ ಎಂದು ವಕೀಲ ಹಾಗೂ ರಾಜ್ಯ ರೈತ ಸಂಘದ ಮುಖಂಡ ಬಿ.ಎಸ್.ಸತೀಶ್ 'ದ ಫೆಡರಲ್ ಕರ್ನಾಟಕ'ಕ್ಕೆ ತಿಳಿಸಿದರು.

ಸೊಂಡೇಕೊಪ್ಪದ ಬಳಿ ಅರ್ಕಾವತಿ ನದಿ ಪಾತ್ರ ಹಾಳಾಗಿದ್ದು, ಕೊಳಚೆ ನೀರಿನ ಮೋರಿಯಂತೆ ಕಾಣುತ್ತಿದೆ

ಕೈಗಾರಿಕೆ, ಜನವಸತಿ ತ್ಯಾಜ್ಯದಿಂದ ಇನ್ನಷ್ಟು ಹಾಳು

ಹೆಸರಘಟ್ಟ ಕೆರೆಯ ನೀರು ನೆಲಮಂಗಲ, ಸೊಂಡೇಕೊಪ್ಪ ಮಾರ್ಗದ ಮೂಲಕ ಕೂಡ್ಲು ಕೆರೆಗೆ ಹರಿಯಲಿದೆ. ಅಲ್ಲಿಂದ ತಿಪ್ಪಗೊಂಡನಹಳ್ಳಿ ಜಲಾಶಯ ಸೇರುತ್ತದೆ. ನೆಲಮಂಗಲದಲ್ಲಿರುವ ಕೈಗಾರಿಕೆಗಳು, ಜನವಸತಿ ಪ್ರದೇಶಗಳಿಂದ ಬರುವ ತ್ಯಾಜ್ಯವು ಚಾಮರಾಜ ಸಾಗರ (ತಿಪ್ಪಗೊಂಡನಹಳ್ಳಿ) ಸೇರಿ ಮುಂದೆ ಮಂಚನಬೆಲೆ ಜಲಾಶಯ ಸೇರಲಿದೆ. ನಗರಗಳ ಕೊಳಚೆ ನೀರು ಹರಿದು ಕಲುಷಿತವಾದ ಹಿನ್ನೆಲೆಯಲ್ಲಿ ದಶಕದ ಹಿಂದೆ ಕುಡಿಯುವ ನೀರಿನ ಬಳಕೆ ನಿಲ್ಲಿಸಲಾಗಿದೆ. ತಿಪ್ಪಗೊಂಡನಹಳ್ಳಿಯ ಈಗಿನ ಸ್ಥಿತಿ ವೃಷಭಾವತಿಗಿಂತಲೂ ಹೆಚ್ಚು ಹಾಳಾಗಿದೆ.

ಸೊಂಡೆಕೊಪ್ಪದ ಬಳಿ ಅರ್ಕಾವತಿಯ ಸ್ಥಿತಿ ಎಲ್ಲರನ್ನೂ ಮರುಗುವಂತೆ ಇದೆ. ಈ ಹಿಂದೆ ಜೀವನದಿಯಾಗಿ ಹರಿಯುತ್ತಿದ್ದ ಕಾವೇರಿಯ ಈ ಉಪನದಿಯು ಈಗ ಅಕ್ಷರಶಃ ಕಪ್ಪು ನೀರಿನ ಮೋರಿಯಾಗಿ ಬದಲಾಗಿದೆ.

ಇದೇ ನೀರು ಹಸಿರಿನ ಮಧ್ಯೆಯಿರುವ ಮಂಚನಬೆಲೆ ಜಲಾಶಯಕ್ಕೆ ಹರಿಯಲಿದೆ. ಕ್ವಾರಿಗಳ ಕಲುಷಿತ ನೀರು ಕೂಡ ಅರ್ಕಾವತಿ ಒಡಲು ಮತ್ತಷ್ಟು ಕೆಟ್ಟಿದೆ. ಚನಬೆಲೆ ಜಲಾಶಯದಿಂದಲೂ ಮಾಗಡಿ ಪಟ್ಟಣ ಹಾಗೂ ರಾಮನಗರಗಳಿಗೆ ಕುಡಿಯುವ ನೀರು ಒದಗಿಸಲಾಗುತ್ತಿತ್ತು. ನೀರು ಸಂಪೂರ್ಣ ಕಲುಷಿತವಾದ ಬಳಿಕ ಈಗ ಮೀನು ಸಾಕಾಣಿಗೆಗಷ್ಟೇ ಮಂಚನಬೆಲೆ ಜಲಾಶಯದ ನೀರು ಬಳಸಲಾಗುತ್ತಿದೆ.

ಮಂಚನಬೆಲೆಯಿಂದ ಕಾಲುವೆಯಿಂದ ರಾಮನಗರದತ್ತ ಹರಿಯುವ ಅರ್ಕಾವತಿ ರೇಷ್ಮೆ ಗೂಡಿನ ಸಂಸ್ಕರಣೆ, ಒಳಚರಂಡಿ ತ್ಯಾಜ್ಯದಿಂದ ಮಲಿನಗೊಂಡಿದೆ. ರಾಮನಗರದಲ್ಲಿ ಅರ್ಕಾವತಿ ಹರಿಯುವ ಕಾಲುವೆ ದೊಡ್ಡದಾಗಿದ್ದರೂ ಗಿಡಗಂಟಿಗಳು, ತ್ಯಾಜ್ಯ ಹರಿಯುವ ರಾಜಕಾಲುವೆಯಾಗಿದೆ.

ಮಂಚನಬೆಲೆಯಿಂದ ಹಿಡಿದು ಕನಕಪುರ ತಾಲೂಕಿನ ಟಿ. ಬೇಕುಪ್ಪೆವರೆಗಿ ಅರ್ಕಾವತಿ ಪಾತ್ರ ಸಂಪೂರ್ಣ ಮಲಿನವಾಗಿದೆ. ಹೀಗೆ ಹರಿಯುವ ನೀರು ಅಂತಿಮವಾಗಿ ಕೊಕ್ಕೆದೊಡ್ಡಿಯಲ್ಲಿ ಕಾವೇರಿ ನದಿ ಸೇರಲಿದೆ.

ನದಿ ಪಾತ್ರದ ಜಲಾನಯನ

ಅರ್ಕಾವತಿ ನದಿ ಪಾತ್ರವು ಕರ್ನಾಟಕದಲ್ಲಿ ಶೇ 96, ತಮಿಳುನಾಡಿನಲ್ಲಿ ಶೇ 4 ರಷ್ಟು ಪ್ರದೇಶದಲ್ಲಿ ಹರಡಿದ್ದು, 4150 ಚದರ ಕಿ.ಮೀ. ಪ್ರದೇಶದಲ್ಲಿ ಆವರಿಸಿದೆ. ಚಿಕ್ಕಬಳ್ಳಾಪುರದಲ್ಲಿ ಶೇ 0.2 ರಷ್ಟು, ಬೆಂಗಳೂರು ಗ್ರಾಮಾಂತರದಲ್ಲಿ ಶೇ 21, ಬೆಂಗಳೂರು ನಗರದಲ್ಲಿ ಶೇ 25 ಮತ್ತು ರಾಮನಗರದಲ್ಲಿ ಶೇ 50 ರಷ್ಟು ಪ್ರದೇಶದಲ್ಲಿ ನದಿ ಪಾತ್ರವಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲೇ ಅರ್ಕಾವತಿ ಜಲಾನಯನದ ಶೇ 6 ರಷ್ಟು ಪ್ರದೇಶ ಒತ್ತುವರಿಯಾಗಿದೆ. ಪ್ರಸ್ತುತ, ಒತ್ತುವರಿ ಪ್ರದೇಶವು ಕಾಂಕ್ರೀಟ್ಮಯವಾಗಿದ್ದು, ಮಾಲಿನ್ಯದ ಪ್ರಮುಖ ಮೂಲವಾಗಿದೆ.

ನದಿ ಪಾತ್ರವು ಸಣ್ಣ ನೀರಾವರಿ ಇಲಾಖೆಯಿಂದ ನಿರ್ವಹಿಸುವ ಸುಮಾರು 110 ಜಲಮೂಲಗಳನ್ನು ಹೊಂದಿದೆ. ಇವುಗಳಲ್ಲಿ ಬೈರಮಂಗಲ, ನೆಲ್ಲಿಗುಡ್ಡ, ಮಾರಲವಾಡಿ, ದೊಡ್ಡಾಲದಹಳ್ಳಿ, ನೀರಲಹಟ್ಟಿ, ಚಿಕ್ಕಗೊಂಡನಹಳ್ಳಿ, ರವುತನಹಳ್ಳಿ, ತಟ್ಟೆಕೆರೆ, ಮುನಿನಗರ, ವಡೇರಹಳ್ಳಿ, ಅಗ್ರ, ಬೆಳಗುಂಬ, ಬೇಗೂರು, ಬಿಲ್ಲನಕೋಟೆ, ಮಧುರೆ, ದೊಡ್ಡತುಮಕೂರು, ನಾಗರಕೆರೆಗಳು ಪ್ರಮುಖವಾಗಿವೆ.

ಅರ್ಕಾವತಿ, ಬೈರಮಂಗಲ ಮತ್ತು ಸುವರ್ಣಮುಖಿ ಅಣೆಕಟ್ಟನ್ನು ನೀರಾವರಿಗೆ ಮೀಸಲಿಡಲಾಗಿದೆ. ಮಂಚನಬೆಲೆ ಅಣೆಕಟ್ಟನ್ನು ಕುಡಿಯುವ ನೀರು ಮತ್ತು ಮೀನುಗಾರಿಕೆಗೆ ಬಳಸಲಾಗುತ್ತಿದೆ.

ರಾಮನಗರದ ಎಂ.ಜಿ.ರಸ್ತೆಯಲ್ಲಿ ಅರ್ಕಾವತಿ ನದಿ ಪಾತ್ರ ಸಂಪೂರ್ಣ ಕಲುಷಿತವಾಗಿರುವ ದೃಶ್ಯ

ನದಿ ಪುನಶ್ಚೇತನಕ್ಕೆ ಅಧಿಸೂಚನೆ

ಅರ್ಕಾವತಿ ನದಿ ಸಂಪೂರ್ಣ ಕಲುಷಿತವಾಗಿದ್ದು, ಭವಿಷ್ಯದ ಪೀಳಿಗೆಯ ದೃಷ್ಟಿಯಿಂದ ಪುನಶ್ಚೇತನಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.

ಬೆಂಗಳೂರಿಗೆ ಕುಡಿಯುವ ನೀರು ಪೂರೈಸುತ್ತಿದ್ದ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ನೀರಿನ ಒಳ ಹರಿವು ಕಡಿಮೆಯಾಗಿದ್ದು, ನೀರಿನ ಗುಣಮಟ್ಟವೂ ಕ್ಷೀಣಿಸಿದೆ. ಇದಕ್ಕೆ ಕಾರಣವಾದ ಅಂಶಗಳನ್ನು ಪತ್ತೆ ಮಾಡಲು ಇಸ್ರೋ ಹಾಗೂ ಭಾರತೀಯ ಸಂಪನ್ಮೂಲ ಮಾಹಿತಿ ಮತ್ತು ನಿರ್ವಹಣಾ ತಂತ್ರಜ್ಞಾನ ಪ್ರೈವೇಟ್ ಲಿಮಿಟೆಡ್ ಸಹಯೋಗದೊಂದಿಗೆ ಬಿಎಂಆರ್ಡಿಎ ಸಂಸ್ಥೆ ಅಧ್ಯಯನ ನಡೆಸಿದೆ.

ಜಲಾನಯನ ಪ್ರದೇಶದಲ್ಲಿ ಅನೇಕ ಕೈಗಾರಿಕೆಗಳಿದ್ದು, ಕಲುಷಿತ ರಾಸಾಯನಿಕ, ಒಳಚರಂಡಿ ನೀರು ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಹರಿಯುತ್ತಿದೆ. ಕೈಗಾರೀಕರಣ ಹಾಗೂ ನಗರೀಕರಣದಿಂದ ಜಲಾನಯನ ಪ್ರದೇಶದಲ್ಲಿ ನೀರಿನ ಹರಿವು ಬದಲಾಗಿದೆ. ಇದರಿಂದ ಒಳ ಹರಿವು ಕಡಿಮೆಯಾಗಿದೆ ಎಂದು ಹೇಳಿದೆ.

"ಅರ್ಕಾವತಿ ನದಿ ಪುನಶ್ಚೇತನಕ್ಕೆ ಸರ್ಕಾರ ತೀರ್ಮಾನ ಮಾಡಿದೆ. ಇದಕ್ಕೆ ಮೊದಲೂ ಕೂಡ ಪುನಶ್ಚೇತನದ ಪ್ರಯತ್ನಗಳು ನಡೆದಿದ್ದವು. ಆದರೆ, ಇಲ್ಲಿಯವರೆಗೆ ಯಾವುದೇ ಪುನಶ್ಚೇತನ ಆಗಿಲ್ಲ. ನಂದಿಬೆಟ್ಟದಲ್ಲಿ ಹುಟ್ಟುವ ಅರ್ಕಾವತಿ ನದಿ, ಒಂದು ಕಾಲದಲ್ಲಿ ಬೆಂಗಳೂರಿಗೆ ಸುರಕ್ಷಿತವಾದ ಕುಡಿಯುವ ನೀರು ಪೂರೈಸುತ್ತಿತ್ತು. ಇಂದು ತಿಪ್ಪಗೊಂಡನಹಳ್ಳಿ ನೀರನ್ನು ಜನಸಾಮಾನ್ಯರಲ್ಲ, ಜಾನುವಾರುಗಳು ಕೂಡ ಕುಡಿಯಲು ಬಳಸದಂತಾಗಿದೆ. ಅರ್ಕಾವತಿ ಮೂಲದಿಂದ ಹಿಡಿದು ಕೊನೆಯವರೆಗೆ ನದಿಯ ಅಸ್ತಿತ್ವ, ಗುರುತೇ ಮಾಯವಾಗಿದೆ. ಪುನಶ್ಚೇತನದ ಬಗ್ಗೆ ಮಾತನಾಡುವವರು ಮೊದಲ ಜಲಾನಯನದ ಬಗ್ಗೆ ಮಾತನಾಡಬೇಕು. ನದಿ ಶೋಷಣೆ ಬಗ್ಗೆ ಚರ್ಚೆಯಾಗದೇ ಹೋದರೆ ಅರ್ಕಾವತಿ ಬಗ್ಗೆ ಮಾತನಾಡುವ ನೈತಿಕತೆ ಯಾರಿಗೂ ಇರುವುದಿಲ್ಲ" ಎಂದು ಶಾಶ್ವತ ನೀರಾವತಿ ಹೋರಾಟ ಸಮಿತಿ ಅಧ್ಯಕ್ಷ ಆರ್‌.ಆಂಜನೇಯ ರೆಡ್ಡಿ ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ದೊಡ್ಡಬಳ್ಳಾಪುರದ ನಾಗರಕೆರೆಯ ನೋಟ

ವಿದೇಶಗಳಲ್ಲಿ ಆಗಿರುವ ನದಿ ಪುನಶ್ಚೇತನದ ಮಾದರಿಗಳನ್ನು ಅವಲೋಕಿಸಬೇಕು. ಅದಕ್ಕೂ ಮೊದಲು ನದಿ ಪಾತ್ರ ಗುರುತಿಸಬೇಕು. ಗಣಿಗಾರಿಕೆ, ಒತ್ತುವರಿ, ಕೈಗಾರಿಕೆ ಅಥವಾ ಸ್ವಂತಕ್ಕೆ ಬಳಸಿಕೊಂಡಿರುವುದನ್ನು ಗಮನಿಸಬೇಕು. ಮಳೆ ನೀರು ನದಿ ಸೇರುತ್ತದೋ, ಕಲುಷಿತವಾಗಲಿದೆಯೇ ಎಂಬುದನ್ನು ಗಮನಿಸದೇ ಹೋದರೆ ಪುನಶ್ಚೇತನದಿಂದ ಪ್ರಯೋಜನ ಆಗುವುದಿಲ್ಲ ಎಂದು ಹೇಳಿದರು.

ಅರ್ಕಾವತಿ ಈಗ ಋತುಮಾನದ ನದಿಯಾಗಿದೆ. ಈಗಿನ ಕಾಲಘಟ್ಟದಲ್ಲಿ ಮಾಲಿನ್ಯ ಮುಕ್ತವಾಗಿ ಮಾಡಿಕೊಂಡುಮ ನದಿ ಪಾತ್ರದ ಅನೈಸರ್ಗಿಕ ಚಟುವಟಿಕೆಗೆ ಅವಕಾಶ ಕೊಡದೇ ಕಾನೂನು ಸರಬೇಕು. ನದಿ ಪ್ರಾಧಿಕಾರ ಮಾಡಬೇಕು. ಅಧ್ಯಯನ ಮಾಡಿ, ಆಗಿರುವ ಬದಲಾವಣೆಗಳು ಪರಿಶೀಲಿಸಬೇಕು. ಈ ನಿಟ್ಟಿನಲ್ಲಿ ʼದ ಫೆಡರಲ್ನವರು ಕಾವೇರಿ ಉಗಮ ಸ್ಥಾನದಿಂದ ಹಿಡಿದ ಸಂಗಮದವರೆಗೆ ಅಧ್ಯಯನ ಮಾಡಿರುವುದು ಸರ್ಕಾರದ ಕಣ್ತೆರೆಸುವ ಕ್ರಮವಾಗಿದೆ.

ಅಭಿಯಾನಕ್ಕೆ ನಾವೆಲ್ಲರೂ ಕೈ ಜೋಡಿಸಬೇಕು. ಇದಕ್ಕೆ ಹಣದ ಹೊಳೆ ಹರಿಸುತ್ತಾರೆಯೇ ಹೊರತು ನೀರು ಹರಿಸಲ್ಲ.ʼ ಅರ್ಕಾವತಿ ಮಧ್ಯದಲ್ಲಿರು ಕೆರೆ ಅಚ್ಚುಕಟ್ಟುದಾರರು, ನಾಗರಿಕರು ನದಿ ಉಳಿಸಿಕೊಳ್ಳುವ ಜವಾಬ್ದಾರಿ ಇದೆ ಎಂದು ಆಂಜನೇಯ ರೆಡ್ಡಿ ಹೇಳಿದರು.

ಅರ್ಕಾವತಿ ನದಿ ಪಾತ್ರದಲ್ಲಿ ʼದ ಫೆಡರಲ್‌ ಕರ್ನಾಟಕʼದ ಪಯಣ ಹಾಗೂ ನದಿ ಕಲುಷಿತಗೊಂಡಿರುವ ಕುರಿತ ಗ್ರೌಂಡ್‌ ರಿಪೋರ್ಟ್‌ ಇಲ್ಲಿದೆ.

Read More
Next Story