ಇವ ನಮ್ಮವ, ಇವ ನಮ್ಮವ ವಿಧೇಯಕಕ್ಕೆ ಸಂಪುಟ ಅಸ್ತು; ಮರ್ಯಾದಾ ಹತ್ಯೆಗೆ ಶಿಕ್ಷೆ ಖಚಿತ
x

ಇವ ನಮ್ಮವ, ಇವ ನಮ್ಮವ ವಿಧೇಯಕಕ್ಕೆ ಸಂಪುಟ ಅಸ್ತು; ಮರ್ಯಾದಾ ಹತ್ಯೆಗೆ ಶಿಕ್ಷೆ ಖಚಿತ

ಗೌರವದ ಹೆಸರಿನಲ್ಲಿ ಕೊಲೆ ಮಾಡುವವರಿಗೆ ಕನಿಷ್ಠ 5 ವರ್ಷಗಳ ಜೈಲು ಹಾಗೂ ಭಾರತೀಯ ನ್ಯಾಯ ಸಂಹಿತೆಯಡಿ ನೀಡುವ ಶಿಕ್ಷೆಯೂ ಇರಲಿದೆ.


ಮರ್ಯಾದಾ ಹತ್ಯೆ ಪ್ರಕರಣಗಳನ್ನು ತಡೆಯುವ ಸಲುವಾಗಿ 'ಕರ್ನಾಟಕ ವಿವಾಹ ಮತ್ತು ಸಂಗಾತಿ ಆಯ್ಕೆ ಸ್ವಾತಂತ್ರ್ಯ ಹಾಗೂ ಗೌರವ ಮತ್ತು ಸಂಪ್ರದಾಯದ ಹೆಸರಿನಲ್ಲಿ ಅಪರಾಧಗಳ ತಡೆಗಟ್ಟುವಿಕೆ ಮತ್ತು ನಿಷೇಧ ವಿಧೇಯಕ-2026'ಕ್ಕೆ (ಇವ ನಮ್ಮವ ವಿಧೇಯಕ) ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.

ಕರ್ನಾಟಕ ಸರ್ಕಾರವು ಮರ್ಯಾದಾ ಹತ್ಯೆಗಳಿಗೆ ಇತಿಶ್ರೀ ಹಾಡಲು ಈ ಮಸೂದೆಯನ್ನು ಸಿದ್ಧಪಡಿಸಿದೆ. ಹುಬ್ಬಳ್ಳಿಯಲ್ಲಿ ನಡೆದ ಮಾನ್ಯಾ ಪಾಟೀಲ್ ಹತ್ಯೆಯ ನಂತರ ಇಂತಹ ವಿಧೇಯಕ ಜಾರಿಗೆ ತರಲು ಸರ್ಕಾರ ತೀರ್ಮಾನಿಸಿದೆ.

ಗೌರವದ ಹೆಸರಿನಲ್ಲಿ ಕೊಲೆ ಮಾಡುವವರಿಗೆ ಕನಿಷ್ಠ 5 ವರ್ಷಗಳ ಜೈಲು ಶಿಕ್ಷೆ ಹಾಗೂ ಭಾರತೀಯ ನ್ಯಾಯ ಸಂಹಿತೆಯಡಿ ನೀಡಲಾಗುವ ಗರಿಷ್ಠ ಶಿಕ್ಷೆಯೂ ಅನ್ವಯವಾಗಲಿದೆ. ದಂಪತಿಗಳ ಮೇಲೆ ತೀವ್ರ ಹಲ್ಲೆ ನಡೆಸಿದರೆ 10 ವರ್ಷದಿಂದ ಜೀವಾವಧಿವರೆಗೆ ಶಿಕ್ಷೆ ಹಾಗೂ 3 ಲಕ್ಷ ರೂ. ವರೆಗೆ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.

ಸಾಮಾನ್ಯ ಹಲ್ಲೆ ಪ್ರಕರಣಗಳಲ್ಲಿ 3 ರಿಂದ 5 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 2 ಲಕ್ಷ ರೂ. ದಂಡ ವಿಧಿಸಬಹುದಾಗಿದೆ. ಅಂತರ್ಜಾತಿ ವಿವಾಹದ ಭರವಸೆ ನೀಡಿ ದೈಹಿಕ ಸಂಪರ್ಕ ಬೆಳೆಸಿ, ನಂತರ ಜಾತಿಯ ಕಾರಣ ನೀಡಿ ವಂಚಿಸಿದರೆ ಅದನ್ನು 'ಅತ್ಯಾಚಾರ' ಎಂದು ಪರಿಗಣಿಸಲಾಗುತ್ತದೆ.

ಜೀವ ಬೆದರಿಕೆ ಇರುವ ದಂಪತಿಗೆ ಸರ್ಕಾರವು ಸುರಕ್ಷಿತ ಮನೆಗಳನ್ನು ಒದಗಿಸುವುದು ಕಡ್ಡಾಯವಾಗಿದೆ. ಅಲ್ಲದೆ, ದಂಪತಿಗಳು ರಕ್ಷಣೆ ಕೋರಿದ 6 ಗಂಟೆಗಳೊಳಗಾಗಿ ಪೊಲೀಸ್ ಇಲಾಖೆಯು ಭದ್ರತೆ ನೀಡಬೇಕೆಂದು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ.

ಅಂತರ್ಜಾತಿ ಹಾಗೂ ಪ್ರೇಮ ವಿವಾಹದ ವಿರುದ್ಧ ನಿರ್ಧಾರ ಕೈಗೊಳ್ಳಲು ಪಂಚಾಯಿತಿ ಅಥವಾ ಐದಕ್ಕಿಂತ ಹೆಚ್ಚು ಜನರ ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. ಇಂತಹ ಕೃತ್ಯಗಳಿಗೆ 6 ತಿಂಗಳಿನಿಂದ 5 ವರ್ಷಗಳವರೆಗೆ ವಿಧೇಯಕದಡಿ ಶಿಕ್ಷೆ ವಿಧಿಸಬಹುದಾಗಿದೆ.

Read More
Next Story