
ಆನೇಕಲ್‌ನಲ್ಲಿ 28ಕ್ಕೂ ಹೆಚ್ಚು ಅನಧಿಕೃತ ಪಿಜಿ ಕಟ್ಟಡಗಳ ಮೇಲೆ ಅಧಿಕಾರಿಗಳ ದಾಳಿ
ಜಿ+2 ಕಟ್ಟಡಗಳಿಗೆ ಅನುಮತಿ ಪಡೆದಿದ್ದ ಮಾಲೀಕರು, ಕಾನೂನು ಬಾಹಿರವಾಗಿ 7ರಿಂದ 8 ಅಂತಸ್ತುಗಳ ಬೃಹತ್ ಕಟ್ಟಡಗಳನ್ನು ನಿರ್ಮಿಸಿದ್ದರು. ನಿರ್ಮಾಣ ಹಂತದ 18 ಅನಧಿಕೃತ ಕಟ್ಟಡಗಳಿಗೆ ಬೀಗ ಹಾಕಲಾಗಿದೆ.
ಆನೇಕಲ್ ತಾಲೂಕಿನ ಬ್ಯಾಗಡದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ, ಯಾವುದೇ ಪರವಾನಗಿ ಇಲ್ಲದೆ ನಡೆಸಲಾಗುತ್ತಿದ್ದ ಅಕ್ರಮ ಪಿಜಿ ಕೇಂದ್ರಗಳು ಮತ್ತು ಅನಧಿಕೃತ ಬಹುಮಹಡಿ ಕಟ್ಟಡಗಳ ಮೇಲೆ ಪಂಚಾಯಿತಿ ಅಧಿಕಾರಿಗಳು ಮಫ್ತಿ ಕಾರ್ಯಾಚರಣೆ ನಡೆಸಿ, ಬೃಹತ್ ಅಕ್ರಮವನ್ನು ಬೆಳಕಿಗೆ ತಂದಿದ್ದಾರೆ.
ಬೆಂಗಳೂರಿನ ಹೊರವಲಯದಲ್ಲಿರುವ ಪ್ರತಿಷ್ಠಿತ ಅಲಯನ್ಸ್ ಕಾಲೇಜಿನ ಸಮೀಪದ ಈಡನ್ ಗಾರ್ಡನ್, ನಕ್ಷತ್ರ ಮತ್ತು ಸಾಯಿ ಬಡಾವಣೆಗಳಲ್ಲಿ ಕಳೆದ ಐದಾರು ವರ್ಷಗಳಿಂದ ಅಕ್ರಮವಾಗಿ 28ಕ್ಕೂ ಹೆಚ್ಚು ಪಿಜಿಗಳು ತಲೆಯೆತ್ತಿದ್ದವು. ಈ ಕಟ್ಟಡಗಳ ಮಾಲೀಕರು ಸ್ಥಳೀಯ ಗ್ರಾಮ ಪಂಚಾಯಿತಿ, ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಬೆಸ್ಕಾಂ ಹಾಗೂ ಅಗ್ನಿಶಾಮಕ ದಳದಿಂದ ಯಾವುದೇ ಅಗತ್ಯ ನಿರಾಕ್ಷೇಪಣಾ ಪತ್ರಗಳನ್ನು ಪಡೆದಿರಲಿಲ್ಲ. ವಸತಿ ಉದ್ದೇಶಕ್ಕೆ ಎಂದು ಅನುಮತಿ ಪಡೆದು, ವಾಣಿಜ್ಯ ಉದ್ದೇಶಕ್ಕಾಗಿ ಇವುಗಳನ್ನು ಬಳಸುತ್ತಿರುವುದು ಕಂಡುಬಂದಿದೆ. ತನಿಖೆಯ ಸಂದರ್ಭದಲ್ಲಿ ಕಂಡುಬಂದ ಆಘಾತಕಾರಿ ಅಂಶವೆಂದರೆ, ಕೇವಲ ಜಿ+2 (ನೆಲಮಹಡಿ ಮತ್ತು ಎರಡು ಅಂತಸ್ತು) ಕಟ್ಟಡಗಳಿಗೆ ಅನುಮತಿ ಪಡೆದಿದ್ದ ಮಾಲೀಕರು, ಕಾನೂನು ಬಾಹಿರವಾಗಿ 7ರಿಂದ 8 ಅಂತಸ್ತುಗಳ ಬೃಹತ್ ಕಟ್ಟಡಗಳನ್ನು ನಿರ್ಮಿಸಿದ್ದರು. ಈ ಕಟ್ಟಡಗಳು ಯಾವುದೇ ರೀತಿಯ ಭದ್ರತಾ ಮಾನದಂಡಗಳನ್ನು ಪಾಲಿಸುತ್ತಿರಲಿಲ್ಲ. ನಿರ್ಮಾಣ ಹಂತದಲ್ಲಿರುವ 18 ಅನಧಿಕೃತ ಕಟ್ಟಡಗಳನ್ನು ಅಧಿಕಾರಿಗಳು ತಕ್ಷಣವೇ ಬೀಗ ಹಾಕಿದ್ದಾರೆ.
ತೆರಿಗೆ ವಂಚನೆ ಹಾಗೂ ಸಾರ್ವಜನಿಕ ಸಮಸ್ಯೆಗಳು
ಹೊರರಾಜ್ಯ ಮೂಲದ ಮಾಲೀಕರು ವಿದ್ಯಾರ್ಥಿಗಳಿಂದ ಪ್ರತಿ ತಿಂಗಳು 10 ಸಾವಿರ ರೂ.ನಿಂದ 15 ಸಾವಿರ ರೂ.ವರೆಗೆ ಸುಲಿಗೆ ಮಾಡುತ್ತಿದ್ದರೂ, ಪಂಚಾಯಿತಿಗೆ ಪಾವತಿಸಬೇಕಾದ ವಾಣಿಜ್ಯ ತೆರಿಗೆಯನ್ನು ವಂಚಿಸುತ್ತಿದ್ದರು. ವಸತಿ ಗೃಹಗಳೆಂದು ಸುಳ್ಳು ಮಾಹಿತಿ ನೀಡಿ ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂಪಾಯಿ ನಷ್ಟ ಉಂಟು ಮಾಡುತ್ತಿದ್ದರು. ಅಲ್ಲದೆ, ಈ ಅಕ್ರಮ ಪಿಜಿಗಳಿಂದ ಹೊರಬರುವ ಕೊಳಚೆ ನೀರು ಮತ್ತು ಕಸವನ್ನು ಎಲ್ಲೆಂದರಲ್ಲಿ ಸುರಿಯುತ್ತಿರುವುದರಿಂದ ಸುತ್ತಮುತ್ತಲಿನ ನಿವಾಸಿಗಳು ತೀವ್ರ ಅನಾರೋಗ್ಯದ ಭೀತಿಯಲ್ಲಿದ್ದಾರೆ. ರಸ್ತೆಯಲ್ಲೇ ಹರಿಯುವ ತ್ಯಾಜ್ಯ ನೀರು ಮತ್ತು ದುರ್ವಾಸನೆಯಿಂದ ಸ್ಥಳೀಯರ ಬದುಕು ದುಸ್ತರವಾಗಿತ್ತು.
ವಿದ್ಯಾರ್ಥಿಗಳ ಸುರಕ್ಷತೆಗೆ ಕುತ್ತು
ಪಿಜಿಗಳಲ್ಲಿ ಕನಿಷ್ಠ ಭದ್ರತಾ ವ್ಯವಸ್ಥೆಗಳಿಲ್ಲ. ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ ಇಲ್ಲದೆ ಇರುವುದು ಮತ್ತು ಅಗ್ನಿಶಾಮಕ ಉಪಕರಣಗಳ ಕೊರತೆಯಿಂದಾಗಿ ಇಲ್ಲಿ ವಾಸಿಸುವ ನೂರಾರು ವಿದ್ಯಾರ್ಥಿಗಳು ಮತ್ತು ಯುವತಿಯರ ಸುರಕ್ಷತೆ ಪ್ರಶ್ನಾರ್ಹವಾಗಿತ್ತು. ಯಾವುದೇ ಅಹಿತಕರ ಘಟನೆಗಳು ನಡೆದರೆ ಹೊಣೆ ಯಾರು ಎಂಬ ಪ್ರಶ್ನೆ ಎದ್ದಿತ್ತು. ಬ್ಯಾಗಡದೇನಹಳ್ಳಿ ಪಿಡಿಒ ನಾಗರಾಜ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯು ಅಕ್ರಮದಾರರಿಗೆ ಬಿಸಿ ಮುಟ್ಟಿಸಿದೆ. ಅಧಿಕಾರಿಗಳು 12 ಅಕ್ರಮ ಪಿಜಿಗಳಿಗೆ ನೋಟಿಸ್ ಜಾರಿಗೊಳಿಸಿದ್ದು, ಒಂದು ವಾರದೊಳಗೆ ತೆರವುಗೊಳಿಸಲು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. "ನಾವು ಈಗಾಗಲೇ ಹತ್ತಾರು ಬಾರಿ ನೋಟಿಸ್ ನೀಡಿದ್ದರೂ ಮಾಲೀಕರು ಸೊಪ್ಪು ಹಾಕಿರಲಿಲ್ಲ. ಅಕ್ರಮದ ಬಗ್ಗೆ ಬೆಸ್ಕಾಂ ಅಧಿಕಾರಿಗಳಿಗೆ ಪತ್ರ ಬರೆದರೂ ಅವರು ಕಾನೂನುಬಾಹಿರವಾಗಿ ವಿದ್ಯುತ್ ಸಂಪರ್ಕ ನೀಡುತ್ತಿದ್ದರು. ಪೊಲೀಸರು ಸಹ ಎಫ್‌ಐಆರ್ ದಾಖಲಿಸಲು ಹಿಂದೇಟು ಹಾಕುತ್ತಿದ್ದರು. ಈಗ ನಾವು ಕಠಿಣ ಕ್ರಮ ಕೈಗೊಂಡಿದ್ದು, ಗಡುವು ಮುಗಿದ ನಂತರ ಯಾವುದೇ ಮುಲಾಜಿಲ್ಲದೆ ತೆರವು ಕಾರ್ಯಾಚರಣೆ ನಡೆಸುತ್ತೇವೆ" ಎಂದು ಪಿಡಿಒ ನಾಗರಾಜ್ ಸ್ಪಷ್ಟಪಡಿಸಿದ್ದಾರೆ.
ಮುಂದೆ ಕಠಿಣ ಸವಾಲುಗಳು
ಈ ಕಾರ್ಯಾಚರಣೆಯು ಕೇವಲ ಒಂದು ಗ್ರಾಮ ಪಂಚಾಯಿತಿಗೆ ಸೀಮಿತವಾಗದೆ, ರಾಜ್ಯಾದ್ಯಂತ ಇರುವ ಇಂತಹ ಅಕ್ರಮ ಪಿಜಿಗಳ ಕಡೆಗೆ ಗಮನ ಹರಿಸಲು ಇತರ ಅಧಿಕಾರಿಗಳಿಗೆ ಪ್ರೇರಣೆಯಾಗಿದೆ. ಆದರೆ, ಸಾವಿರಾರು ವಿದ್ಯಾರ್ಥಿಗಳು ವಾಸವಿರುವ ಈ ಪಿಜಿಗಳನ್ನು ಇದ್ದಕ್ಕಿದ್ದಂತೆ ಮುಚ್ಚಿದರೆ ವಿದ್ಯಾರ್ಥಿಗಳ ವಸತಿ ಸಮಸ್ಯೆ ಉಲ್ಬಣಿಸಲಿದೆ ಎಂಬ ಆತಂಕವೂ ವ್ಯಕ್ತವಾಗಿದೆ. ಆದರೂ, ಜೀವ ರಕ್ಷಣೆಯ ದೃಷ್ಟಿಯಿಂದ ಹಾಗೂ ಸರ್ಕಾರದ ಆದಾಯ ವಂಚನೆಯನ್ನು ತಡೆಯಲು ಈ ಕ್ರಮ ಅಗತ್ಯವಾಗಿದೆ ಎಂದು ಸಾರ್ವಜನಿಕರು ಸ್ವಾಗತಿಸಿದ್ದಾರೆ. ಪ್ರಕರಣವು ಕೇವಲ ಕಟ್ಟಡಗಳ ಅಕ್ರಮವಲ್ಲ, ಬದಲಾಗಿ, ಸ್ಥಳೀಯ ಸಂಸ್ಥೆಗಳ ನಿರ್ಲಕ್ಷ್ಯ, ಬೆಸ್ಕಾಂ ಹಾಗೂ ಇತರೆ ಇಲಾಖೆಗಳ ನಡುವಿನ ಹೊಂದಾಣಿಕೆಯ ಕೊರತೆ ಮತ್ತು ಅಕ್ರಮ ಸಂಪರ್ಕಗಳ ಜಾಲವನ್ನು ಬಯಲು ಮಾಡಿದೆ. ಮುಂಬರುವ ದಿನಗಳಲ್ಲಿ ಈ ಅಕ್ರಮ ಪಿಜಿಗಳ ಮಾಲೀಕರ ವಿರುದ್ಧ ಸರ್ಕಾರ ಯಾವ ರೀತಿಯ ಕಠಿಣ ಕ್ರಮ ಕೈಗೊಳ್ಳಲಿದೆ ಎಂಬುದು ಕಾದು ನೋಡಬೇಕಿದೆ.
