ಆಲಮಟ್ಟಿ ಎತ್ತರ ಹೆಚ್ಚಳಕ್ಕೆ ಆಂಧ್ರ ಕ್ಯಾತೆ: ಕರ್ನಾಟಕಕ್ಕೆ ಕೇಂದ್ರದಿಂದ ನೋಟೀಸ್, ಮಹತ್ವಾಕಾಂಕ್ಷಿ ಯೋಜನೆಗೆ ವಿಘ್ನ?
x

ಆಲಮಟ್ಟಿ ಎತ್ತರ ಹೆಚ್ಚಳಕ್ಕೆ ಆಂಧ್ರ ಕ್ಯಾತೆ: ಕರ್ನಾಟಕಕ್ಕೆ ಕೇಂದ್ರದಿಂದ 'ನೋಟೀಸ್', ಮಹತ್ವಾಕಾಂಕ್ಷಿ ಯೋಜನೆಗೆ ವಿಘ್ನ?

ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು ಪ್ರಸ್ತುತ ಇರುವ 519.60 ಮೀಟರ್‌ಗಳಿಂದ 524.256 ಮೀಟರ್‌ಗೆ ಏರಿಸುವ ಕುರಿತು ಕರ್ನಾಟಕ ಸರ್ಕಾರವು ಕೇಂದ್ರಕ್ಕೆ ಈ ಹಿಂದೆ ಪತ್ರ ಬರೆದಿತ್ತು. ಅದಕ್ಕೆ ಆಂಧ್ರ ಪ್ರದೇಶ ಕ್ಯಾತೆ ತೆಗೆದಿದೆ.


Click the Play button to hear this message in audio format

ಉತ್ತರ ಕರ್ನಾಟಕದ ಜೀವನಾಡಿ ಎಂದೇ ಕರೆಯಲ್ಪಡುವ ಆಲಮಟ್ಟಿ ಜಲಾಶಯದ ಎತ್ತರವನ್ನು ಹೆಚ್ಚಿಸುವ ರಾಜ್ಯ ಸರ್ಕಾರದ ಪ್ರಮುಖ ಯೋಜನೆಗೆ ಇದೀಗ ಹೊಸ ಅಡ್ಡಿಯೊಂದು ಎದುರಾಗಿದೆ. ಅಣೆಕಟ್ಟಿನ ಎತ್ತರ ಹೆಚ್ಚಳಕ್ಕೆ ನೆರೆ ರಾಜ್ಯ ಆಂಧ್ರಪ್ರದೇಶ ತೀವ್ರ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ, ಈ ಕುರಿತು ವಿಸ್ತೃತ ವಿವರಣೆ ಹಾಗೂ ತಮ್ಮ ನಿಲುವನ್ನು ಸ್ಪಷ್ಟಪಡಿಸುವಂತೆ ಕೇಂದ್ರ ಜಲಶಕ್ತಿ ಸಚಿವಾಲಯವು ಕರ್ನಾಟಕ ಸರ್ಕಾರಕ್ಕೆ ಅಧಿಕೃತ ಪತ್ರದ ಮೂಲಕ ಸೂಚನೆ ನೀಡಿದೆ.

ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು ಪ್ರಸ್ತುತ ಇರುವ 519.60 ಮೀಟರ್‌ಗಳಿಂದ 524.256 ಮೀಟರ್‌ಗೆ ಏರಿಸುವ ಕುರಿತು ಕರ್ನಾಟಕ ಸರ್ಕಾರವು ಕೇಂದ್ರಕ್ಕೆ ಈ ಹಿಂದೆ ಪತ್ರ ಬರೆದಿತ್ತು. ಆದರೆ, ಈ ನಿರ್ಧಾರದಿಂದ ತಳಭಾಗದ ರಾಜ್ಯವಾದ ತಮಗೆ ಭಾರಿ ತೊಂದರೆಯಾಗಲಿದೆ ಎಂದು ಆಂಧ್ರಪ್ರದೇಶ ಸರ್ಕಾರ ಕೇಂದ್ರದ ಮೊರೆ ಹೋಗಿದೆ. 2025ರ ಡಿಸೆಂಬರ್ 29ರಂದು ಆಂಧ್ರಪ್ರದೇಶ ಸರ್ಕಾರದ ಜಲಸಂಪನ್ಮೂಲ ಇಲಾಖೆಯ ವಿಶೇಷ ಮುಖ್ಯ ಕಾರ್ಯದರ್ಶಿಗಳು ಕೇಂದ್ರ ಜಲಶಕ್ತಿ ಸಚಿವಾಲಯಕ್ಕೆ ಸುದೀರ್ಘ ಪತ್ರವೊಂದನ್ನು ಬರೆದು, ಕರ್ನಾಟಕದ ಈ ನಡೆಯ ಕುರಿತು ತಮ್ಮ ತೀವ್ರ ಆತಂಕ ಮತ್ತು ಕಳವಳವನ್ನು ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ಕೇಂದ್ರ ಸರ್ಕಾರ ಇದೀಗ ರಾಜ್ಯ ಸರ್ಕಾರದಿಂದ ಸ್ಪಷ್ಟೀಕರಣ ಕೇಳಿದೆ.

ತುರ್ತು ವರದಿಗೆ ಸೂಚನೆ

ಆಂಧ್ರಪ್ರದೇಶದ ಲಿಖಿತ ದೂರಿನ ಆಧಾರದ ಮೇಲೆ ಕಾರ್ಯಪ್ರವೃತ್ತವಾಗಿರುವ ಕೇಂದ್ರ ಜಲಶಕ್ತಿ ಸಚಿವಾಲಯದ 'ಪೆನಿನ್ಸುಲರ್ ನದಿಗಳ ವಿಭಾಗವು', ಕರ್ನಾಟಕ ಸರ್ಕಾರದಿಂದ ತುರ್ತು ವಿವರಣೆಯನ್ನು ಕೋರಿದೆ. ವಿವಾದಾತ್ಮಕ ವಿಷಯಕ್ಕೆ ಸಂಬಂಧಿಸಿದಂತೆ ನೆರೆ ರಾಜ್ಯವು ಎತ್ತಿರುವ ಆಕ್ಷೇಪಣೆಗಳಿಗೆ ತಕ್ಷಣವೇ ಸಮಗ್ರ ಮಾಹಿತಿ ಹಾಗೂ ರಾಜ್ಯದ ಅಧಿಕೃತ ಅಭಿಪ್ರಾಯಗಳನ್ನು ಮಂಡಿಸುವಂತೆ ಪತ್ರದಲ್ಲಿ ಸೂಚನೆ ನೀಡಲಾಗಿದೆ. ವಿಷಯದ ಗಾಂಭೀರ್ಯವನ್ನು ಅರಿತು, ಈ ಬಗ್ಗೆ ಆದಷ್ಟು ಶೀಘ್ರವಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರ ಜಲಶಕ್ತಿ ಸಚಿವಾಲಯದ ಹಿರಿಯ ಜಂಟಿ ಕಮಿಷನರ್ ಮನೋಜ್ ಕುಮಾರ್ ಅವರು ಕರ್ನಾಟಕ ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ನೇರ ನಿರ್ದೇಶನ ರವಾನಿಸಿದ್ದಾರೆ.

ನೀರಾವರಿ ಯೋಜನೆಗಳ ಮೇಲೆ ಪ್ರಭಾವ

ಕೃಷ್ಣಾ ಮೇಲ್ದಂಡೆ ಯೋಜನೆಯ (ಯುಕೆಪಿ) ಮೂರನೇ ಹಂತದ ಅಡಿಯಲ್ಲಿ ಆಲಮಟ್ಟಿ ಜಲಾಶಯದ ಎತ್ತರವನ್ನು 524 ಮೀಟರ್‌ಗೆ ಹೆಚ್ಚಿಸುವ ಕಾರ್ಯವು ಉತ್ತರ ಕರ್ನಾಟಕದ ಲಕ್ಷಾಂತರ ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಒದಗಿಸುವ ದೃಷ್ಟಿಯಿಂದ ಅತ್ಯಂತ ನಿರ್ಣಾಯಕವಾಗಿದೆ. ಇದೀಗ ನೆರೆ ರಾಜ್ಯದ ಕ್ಯಾತೆಯಿಂದಾಗಿ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಿದ್ದು, ರಾಜ್ಯದ ಮಹತ್ವಾಕಾಂಕ್ಷಿ ಯೋಜನೆಗೆ ಹಿನ್ನಡೆಯಾಗುವ ಆತಂಕ ಸೃಷ್ಟಿಯಾಗಿದೆ. ಕೇಂದ್ರದ ಈ ನೋಟಿಸ್‌ಗೆ ಕರ್ನಾಟಕ ಸರ್ಕಾರವು ಯಾವ ರೀತಿಯ ಬಲವಾದ ತಾಂತ್ರಿಕ ಸಾಕ್ಷ್ಯಗಳು ಮತ್ತು ಕಾನೂನಾತ್ಮಕ ವಿವರಣೆಗಳನ್ನು ಒದಗಿಸಲಿದೆ ಹಾಗೂ ಜಲ ವಿವಾದವನ್ನು ಹೇಗೆ ಸಮರ್ಥವಾಗಿ ಎದುರಿಸಲಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.

Read More
Next Story