
ಸಾಂದರ್ಭಿಕ ಚಿತ್ರ
ನೇರಳೆ ಹಣ್ಣು ಹೆಚ್ಚಾದರೆ ಬರಗಾಲ ಬರುತ್ತದೆಯೇ?
ಹಿರಿಯರ ನಂಬಿಕೆಯಂತೆ ನೇರಳೆ ಹಣ್ಣು ಅತಿಯಾಗಿ ಬಿಡುವುದಕ್ಕೂ, ಬರಗಾಲ ಬರುವುದಕ್ಕೂ ವೈಜ್ಞಾನಿಕವಾಗಿ ಯಾವುದೇ ಸಂಬಂಧವಿಲ್ಲ ಎಂದು ಡಾ. ಜಿ.ಎಸ್.ಕೆ. ಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗ ಮಾತ್ರವಲ್ಲದೆ, ನಗರ ಪ್ರದೇಶಗಳಲ್ಲೂ ಹಿಂದೆಂದೂ ಕಾಣದಷ್ಟು ಕಡು ನೇರಳೆ ಬಣ್ಣದ ಹಣ್ಣುಗಳಿಂದ ನೇರಳೆ ಮರಗಳು ಕಂಗೊಳಿಸುತ್ತಿವೆ. ಮಾರುಕಟ್ಟೆಯಲ್ಲೂ ನೇರಳೆ ಹಣ್ಣಿನ ಬಂಪರ್ ಫಸಲು ಕಂಡುಬರುತ್ತಿದೆ. ಆದರೆ, ಈ ಭರ್ಜರಿ ಇಳುವರಿಯ ಹಿಂದೆ ಸಾರ್ವಜನಿಕರಲ್ಲಿ ಮತ್ತು ರೈತರಲ್ಲಿ ಒಂದು ಆತಂಕದ ಚರ್ಚೆ ಶುರುವಾಗಿದೆ. ನಮ್ಮ ಹಿರಿಯರ ನಂಬಿಕೆಯ ಪ್ರಕಾರ, "ನೇರಳೆ ಹಣ್ಣು ಅತಿಯಾಗಿ ಬಿಟ್ಟರೆ ಅದು ಬರಗಾಲದ ಮುನ್ಸೂಚನೆ" ಎನ್ನಲಾಗುತ್ತದೆ. ಹಾಗಾದರೆ, ಈ ಬಾರಿಯ ಭರ್ಜರಿ ಫಸಲು ಪ್ರಕೃತಿ ನಮಗೆ ನೀಡುತ್ತಿರುವ ಬರಗಾಲದ ಎಚ್ಚರಿಕೆಯೋ ಅಥವಾ ಇದರ ಹಿಂದೆ ಬೇರೇನಾದರೂ ವೈಜ್ಞಾನಿಕ ಸತ್ಯವಿದೆಯೋ?
ಈ ಕುರಿತು ಸಾರ್ವಜನಿಕರ ಆತಂಕವನ್ನು ನಿವಾರಿಸಲು ಮತ್ತು ಇದರ ಹಿಂದಿನ ನಿಜವಾದ ವೈಜ್ಞಾನಿಕ ಸತ್ಯವನ್ನು ತಿಳಿಸಿಕೊಡಲು ʼʼದ ಫೆಡರಲ್ ಕರ್ನಾಟಕʼದ ವಿಶೇಷ ಸಂದರ್ಶನದಲ್ಲಿ ಬೆಂಗಳೂರಿನ ತೋಟಗಾರಿಕಾ ಮಹಾವಿದ್ಯಾಲಯದ ನಿವೃತ್ತ ಡೀನ್ ಆಗಿರುವ ಡಾ. ಜಿ.ಎಸ್.ಕೆ. ಸ್ವಾಮಿ ಅವರು ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಬರಗಾಲದ ಮುನ್ಸೂಚನೆ ಎಂಬ ನಂಬಿಕೆ ಕೇವಲ ಸುಳ್ಳು!
ಹಿರಿಯರ ನಂಬಿಕೆಯಂತೆ ನೇರಳೆ ಹಣ್ಣು ಅತಿಯಾಗಿ ಬಿಡುವುದಕ್ಕೂ, ಬರಗಾಲ ಬರುವುದಕ್ಕೂ ವೈಜ್ಞಾನಿಕವಾಗಿ ಯಾವುದೇ ಸಂಬಂಧವಿಲ್ಲ ಎಂದು ಡಾ. ಜಿ.ಎಸ್.ಕೆ. ಸ್ವಾಮಿ ಸ್ಪಷ್ಟಪಡಿಸಿದ್ದಾರೆ. "ನೇರಳೆ ಮೂಲತಃ ಒಣ ಪ್ರದೇಶಕ್ಕೆ ಸೂಕ್ತವಾದ ಹಣ್ಣಿನ ಬೆಳೆಯಾಗಿದೆ. ಹಿಂದೆ ಇದು ಕಾಡುಗಳಲ್ಲಿ, ಗುಡ್ಡಗಳಲ್ಲಿ ಮತ್ತು ನದಿ ಕೊಳ್ಳಗಳ ಪಕ್ಕದಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತಿತ್ತು. ಇದಕ್ಕೆ ಒಣ ವಾತಾವರಣ ಇದ್ದಷ್ಟೂ ಹಣ್ಣುಗಳು ಉತ್ತಮವಾಗಿ ಬರುತ್ತವೆ ಮತ್ತು ಹೆಚ್ಚು ರುಚಿಯಾಗಿರುತ್ತವೆ. ಮಾವಿನ ಮರದಲ್ಲಿ ಒಂದು ವರ್ಷ ಹೆಚ್ಚು, ಮತ್ತೊಂದು ವರ್ಷ ಕಡಿಮೆ ಫಸಲು ಬರುವಂತೆ, ನೇರಳೆಯಲ್ಲಿಯೂ ಕೆಲವು ತಳಿಗಳು ಒಂದು ವರ್ಷ ಅತಿ ಹೆಚ್ಚು ಫಸಲು ನೀಡುವ ನೈಸರ್ಗಿಕ ಗುಣ ಹೊಂದಿರುತ್ತವೆ. ಹಾಗಾಗಿ ಇದನ್ನು ಬರಗಾಲದ ಸೂಚನೆ ಎಂದು ಹೆದರಬೇಕಾಗಿಲ್ಲ" ಎಂದು ಅವರು ತಿಳಿಸಿದ್ದಾರೆ.
ಹಣ್ಣು ಹೆಚ್ಚಾಗಲು ಅಸಲಿ ಕಾರಣವೇನು?
ಕಳೆದ ನಾಲ್ಕು ದಶಕಗಳಿಗಿಂತ ಇತ್ತೀಚಿನ ವರ್ಷಗಳಲ್ಲಿ ನೇರಳೆ ಹಣ್ಣು ಮಾರುಕಟ್ಟೆಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಕಾಣಿಸಿಕೊಳ್ಳಲು ಮುಖ್ಯ ಕಾರಣ "ವಾಣಿಜ್ಯೀಕರಣ". ಹಿಂದೆ ಜನರು ಕಾಡಿಗೆ ಹೋಗಿ ಹಣ್ಣುಗಳನ್ನು ಕಿತ್ತು ತರುತ್ತಿದ್ದರು, ವಾಣಿಜ್ಯವಾಗಿ ಯಾರೂ ಬೆಳೆಯುತ್ತಿರಲಿಲ್ಲ. ಆದರೆ ಕಳೆದ 8-10 ವರ್ಷಗಳಿಂದ ನೇರಳೆ ಹಣ್ಣಿನಲ್ಲಿರುವ ಔಷಧಿ ಗುಣಗಳು ಮತ್ತು ಮಧುಮೇಹಕ್ಕೆ ಇದು ರಾಮಬಾಣ ಎಂಬ ಸತ್ಯ ತಿಳಿದ ಮೇಲೆ ಮಾರುಕಟ್ಟೆಯಲ್ಲಿ ಇದಕ್ಕೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಕೆ.ಜಿ. ಗೆ 100 ರಿಂದ 150 ರೂ. ದರ ಇರುವುದರಿಂದ ರೈತರು ಬೇರೆ ಬೆಳೆಗಳಿಗಿಂತ ನೇರಳೆಯನ್ನೇ ಲಾಭದಾಯಕ ವಾಣಿಜ್ಯ ಬೆಳೆಯಾಗಿ ಆಯ್ದುಕೊಳ್ಳುತ್ತಿದ್ದಾರೆ. ಬೆಂಗಳೂರು ಸುತ್ತಮುತ್ತ, ಕೋಲಾರ, ಚಿಕ್ಕಬಳ್ಳಾಪುರ ಮಾತ್ರವಲ್ಲದೆ ಆಂಧ್ರಪ್ರದೇಶದ ಅನಂತಪುರದಲ್ಲೂ ರೈತರು 15-20 ಎಕರೆಗಳಷ್ಟು ವಿಸ್ತಾರವಾದ ತೋಟಗಳನ್ನು ಮಾಡಿ ವಾಣಿಜ್ಯವಾಗಿ ಬೆಳೆಯುತ್ತಿರುವುದರಿಂದ ಫಸಲು ಹೆಚ್ಚಾಗಿ ಕಾಣಸಿಗುತ್ತಿದೆ.
ಏನಿದು 'ಸ್ಟ್ರೆಸ್ ಫ್ರೂಟಿಂಗ್'?
ಗಿಡ-ಮರಗಳು ಒತ್ತಡಕ್ಕೆ ಒಳಗಾದಾಗ ಹೆಚ್ಚು ಫಸಲು ನೀಡುವ ಪ್ರಕ್ರಿಯೆಯನ್ನು 'ಸ್ಟ್ರೆಸ್ ಫ್ರೂಟಿಂಗ್' ಎನ್ನಲಾಗುತ್ತದೆ. ನೇರಳೆ ಮರಕ್ಕೂ ಇದು ಅನ್ವಯಿಸುತ್ತದೆ. ನೇರಳೆ ಮರಕ್ಕೆ ಹೂ ಬಿಡುವುದಕ್ಕಿಂತ ಮುಂಚೆ ನಿರಂತರವಾಗಿ ನೀರು ಕೊಟ್ಟರೆ ಅದು ಕೇವಲ ಎಲೆ ಮತ್ತು ಕಾಂಡವಾಗಿ ಬೆಳೆಯುತ್ತದೆಯೇ ಹೊರತು ಹೂ ಬಿಡುವುದಿಲ್ಲ. ಹಾಗಾಗಿ ಹೂ ಬರುವ ಮುನ್ನ ನೀರನ್ನು ನಿಲ್ಲಿಸಿ ಗಿಡಕ್ಕೆ 'ಸ್ಟ್ರೆಸ್' (ಒತ್ತಡ) ನೀಡಬೇಕಾಗುತ್ತದೆ. ಒಣ ಪ್ರದೇಶದಲ್ಲಿ ಮಳೆ ಕಡಿಮೆಯಾದಾಗ ಸ್ವಾಭಾವಿಕವಾಗಿ ಗಿಡಕ್ಕೆ ಒತ್ತಡ ಬಿದ್ದು ಹೆಚ್ಚು ಹೂವು ಮತ್ತು ಕಾಯಿಗಳು ಕಚ್ಚುತ್ತವೆ. ನೇರಳೆ ಮರವು ಆಳವಾದ ತಾಯಿಬೇರು ಹೊಂದಿರುವುದರಿಂದ, ಭೂಮಿಯ ಕೆಳ ಪದರದಲ್ಲಿರುವ ತೇವಾಂಶವನ್ನು ಹೀರಿಕೊಂಡು ಬರಗಾಲದಲ್ಲೂ ಬದುಕಬಲ್ಲ ಅತ್ಯದ್ಭುತ ಸಾಮರ್ಥ್ಯ ಹೊಂದಿದೆ.
ಮುನ್ನೆಚ್ಚರಿಕೆ ಕ್ರಮಗಳೇನು ?
ಒಂದು ವೇಳೆ ಹವಾಮಾನ ಏರುಪೇರಾಗಿ ನೀರಿನ ಅಭಾವ ಸೃಷ್ಟಿಯಾದರೆ ತೇವಾಂಶ ಕಾಪಾಡಿಕೊಳ್ಳಲು ಡಾ. ಸ್ವಾಮಿ ಅವರು ಕೆಲವು ಬೇಸಾಯ ಕ್ರಮಗಳನ್ನು ಸೂಚಿಸಿದ್ದಾರೆ. ಹಣ್ಣು ಕಟಾವಿನ ನಂತರ ಮರದ ಸುತ್ತ ದೊಡ್ಡ ಪಾತಿ ಮಾಡಿ, ಮಳೆ ನೀರನ್ನು ಭೂಮಿಗೆ ಇಂಗಿಸಬೇಕು. ತೋಟದಲ್ಲಿ ಬೀಳುವ ನೇರಳೆ ಎಲೆ ಹಾಗೂ ಕಸ ಕಡ್ಡಿಗಳನ್ನು ಆ ಪಾತಿಯಲ್ಲಿ ಹಾಕಿ ಹೊದಿಕೆ ಮಾಡಬೇಕು. ಇದು ತೇವಾಂಶವನ್ನು ಕಾಯ್ದಿಡುವುದಲ್ಲದೆ ಕೊಳೆತು ಉತ್ತಮ ಗೊಬ್ಬರವಾಗುತ್ತದೆ. ತ್ಯಾಜ್ಯ ಸಿಗದಿದ್ದರೆ ಪ್ಲಾಸ್ಟಿಕ್ ಮಲ್ಚಿಂಗ್ ಮಾಡಬಹುದು. ಹೂ ಬರುವ ಮುನ್ನ ನೀರು ನಿಲ್ಲಿಸಬೇಕು. ಆದರೆ ಕಾಯಿ ಕಚ್ಚಿದ ನಂತರ ಗಿಡಕ್ಕೆ ಹನಿ ನೀರಾವರಿ ಪದ್ಧತಿಯ ಮೂಲಕ ನೀರು ಕೊಟ್ಟರೆ ಹಣ್ಣಿನ ಗಾತ್ರ ದೊಡ್ಡದಾಗಿ ಬರುತ್ತದೆ ಹಾಗೂ ಉತ್ತಮ ಇಳುವರಿ ಸಿಗುತ್ತದೆ.
ಔಷಧೀಯ ಗುಣ ಇರುವುದು ಹಣ್ಣಿನಲ್ಲಾ ಅಥವಾ ಬೀಜದಲ್ಲಾ?
ಮಾರುಕಟ್ಟೆಯಲ್ಲಿ ಸಿಗುವ ನೇರಳೆ ಹಣ್ಣುಗಳಿಗೆ ಯಾವುದೇ ಬಣ್ಣದ ಕೆಮಿಕಲ್ ಸಿಂಪಡಿಸುವುದಿಲ್ಲ, ಅದು ನೈಸರ್ಗಿಕವಾಗಿ ಬರುವ ಬಣ್ಣವಾಗಿದೆ. ನೇರಳೆ ಹಣ್ಣಿನಲ್ಲಿ ಆಂಟಿ-ಆಕ್ಸಿಡೆಂಟ್‌ಗಳು ಹೆಚ್ಚಾಗಿವೆ. ಆದರೆ, ಮಧುಮೇಹಕ್ಕೆ ನಿಜವಾದ ಔಷಧೀಯ ಗುಣ ಇರುವುದು ನೇರಳೆ ಹಣ್ಣಿನ ಬೀಜದಲ್ಲಿ! ಪ್ರಸ್ತುತ ಈ ಬೀಜಗಳನ್ನು ಒಣಗಿಸಿ ಪುಡಿ ಮಾಡಿ ಆಯುರ್ವೇದದಲ್ಲಿ ಬಳಸಲಾಗುತ್ತಿದೆ. ತೋಟಗಾರಿಕಾ ಮಹಾವಿದ್ಯಾಲಯದಲ್ಲಿ ಈ ಬೀಜದ ಪುಡಿಯಿಂದ ಟ್ಯಾಬ್ಲೆಟ್ ತಯಾರಿಸುವ ಸಂಶೋಧನೆ ಮತ್ತು ಕ್ಲಿನಿಕಲ್ ಟೆಸ್ಟಿಂಗ್ ಪ್ರಗತಿಯಲ್ಲಿದೆ. ಆದ್ದರಿಂದ ರೈತರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಮಾನ್ಸೂನ್ ತಡವಾಗುತ್ತಿರುವ ಈ ಸಂದರ್ಭದಲ್ಲಿ, ಕಡಿಮೆ ನೀರಿನಲ್ಲೂ ಬದುಕುವ ನೇರಳೆ, ಹುಣಸೆ, ಮಾವು, ಬೆಲ್ಲದ ಹಣ್ಣು ಮತ್ತು ನೆಲ್ಲಿಯಂತಹ ಒಣ ಬೇಸಾಯದ ಬೆಳೆಗಳನ್ನು ಬೆಳೆದು ರೈತರು ಆರ್ಥಿಕವಾಗಿ ಲಾಭ ಗಳಿಸಬಹುದಾಗಿದೆ.

