
4 ವರ್ಷಗಳಲ್ಲಿ 42 ಕೋಟಿ ರೂ. ಮೌಲ್ಯದ ಅಕ್ರಮ ಕೃಷಿ ಪರಿಕರಗಳ ಜಪ್ತಿ ಮಾಡಿದ ಸರ್ಕಾರ
ರೈತರ ಹಿತಾಸಕ್ತಿಯನ್ನು ಬಲಿಕೊಟ್ಟು, ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದ ಉತ್ಪಾದಕರು ಮತ್ತು ಮಾರಾಟಗಾರರ ವಿರುದ್ಧ ಕೃಷಿ ಇಲಾಖೆಯ ಜಾಗೃತ ಕೋಶ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಂಡಿದೆ.
ರೈತರಿಗೆ ಕಳಪೆ ಬೀಜ, ನಕಲಿ ರಸಗೊಬ್ಬರ ಮತ್ತು ಕಲಬೆರಕೆ ಕೀಟನಾಶಕಗಳನ್ನು ಮಾರಾಟ ಮಾಡುವ ಮೂಲಕ ಲಾಭ ಗಳಿಸುವ ವಂಚಕರ ಜಾಲ ರಾಜ್ಯದಲ್ಲಿ ತಲೆಯೆತ್ತಿದ್ದು, ಇಂತಹ ವಂಚಕರ ವಿರುದ್ಧ ಇದೀಗ ಕೃಷಿ ಇಲಾಖೆಯ ಜಾಗೃತ ಕೋಶ ಸಮರ ಸಾರಿದೆ. ರೈತರ ಹಿತಾಸಕ್ತಿಯನ್ನು ಬಲಿಕೊಟ್ಟು, ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದ ಉತ್ಪಾದಕರು ಮತ್ತು ಮಾರಾಟಗಾರರ ಮೇಲೆ ಸರ್ಕಾರ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಂಡಿದೆ.
2026-27ನೇ ಸಾಲಿನ ಸೆಪ್ಟೆಂಬರ್ ಅಂತ್ಯದವರೆಗಿನ ದತ್ತಾಂಶಗಳ ಪ್ರಕಾರ, ಕೃಷಿ ಇಲಾಖೆಯ ಜಾಗೃತ ಕೋಶವು ರಾಜ್ಯಾದ್ಯಂತ ಮಿಂಚಿನ ಸಂಚಲನ ಮೂಡಿಸಿದೆ. ಈ ಅವಧಿಯಲ್ಲಿ ನಿಯಮಬಾಹಿರವಾಗಿ ಮಾರಾಟ ಮಾಡುತ್ತಿದ್ದ ಒಟ್ಟು 10.32 ಕೋಟಿ ರೂ. ಮೌಲ್ಯದ ಕೃಷಿ ಪರಿಕರಗಳನ್ನು ಜಪ್ತಿ ಮಾಡಲಾಗಿದೆ. ಇದರಲ್ಲಿ ಬಿತ್ತನೆ ಬೀಜ 330 ಕ್ವಿಂಟಾಲ್, ರಸಗೊಬ್ಬರ 1,114 ಮೆಟ್ರಿಕ್ ಟನ್, ಕೀಟನಾಶಕ 9,005 ಲೀಟರ್ ಆಗಿದೆ. ಈ ಅವಧಿಯಲ್ಲಿ ಒಟ್ಟು 273 ಪ್ರಕರಣಗಳನ್ನು ದಾಖಲಿಸಲಾಗಿದ್ದು, ಇಲಾಖೆಯು ಅಕ್ರಮದ ವಿರುದ್ಧ ಎಷ್ಟು ಕಟ್ಟುನಿಟ್ಟಾಗಿದೆ ಎಂಬುದನ್ನು ಇದು ತೋರಿಸುತ್ತದೆ. ಈಗಾಗಲೇ 58 ಪ್ರಕರಣಗಳಲ್ಲಿ ನ್ಯಾಯಾಲಯವು ಅಂತಿಮ ತೀರ್ಪು ನೀಡಿದ್ದು, 18.23 ಲಕ್ಷ ರೂ. ದಂಡ ವಿಧಿಸಲಾಗಿದೆ. ಜೈವಿಕ ಉತ್ಪನ್ನಗಳ ಹೆಸರಿನಲ್ಲಿ ವಂಚನೆ ಎಸಗುತ್ತಿದ್ದ 7 ಪ್ರಕರಣಗಳನ್ನು ದಾಖಲಿಸಲಾಗಿದೆ. ಅಷ್ಟೇ ಅಲ್ಲದೆ, ನಿಯಮ ಉಲ್ಲಂಘಿಸಿದ 46 ಮಂದಿಯ ಮಾರಾಟ ಪರವಾನಗಿಯನ್ನು ಅಮಾನತು ಮಾಡಲಾಗಿದ್ದು, 3 ಪರವಾನಗಿಗಳನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದೆ.
4 ವರ್ಷಗಳಲ್ಲಿ 42.57 ಕೋಟಿ ರೂ. ಜಪ್ತಿ
ಕೃಷಿ ಇಲಾಖೆಯ ಜಾಗೃತ ಕೋಶವು 4 ವರ್ಷಗಳಲ್ಲಿ (2023-24 ರಿಂದ 2026-27) ಒಟ್ಟು 42.57 ಕೋಟಿ ರೂ. ಮೌಲ್ಯದ ಕೃಷಿ ಪರಿಕರಗಳನ್ನು ಜಪ್ತಿ ಮಾಡಿದ್ದು, ನ್ಯಾಯಾಲಯದಲ್ಲಿ ಒಟ್ಟು 1,420 ಪ್ರಕರಣಗಳನ್ನು ದಾಖಲಿಸಿದೆ. ಅನಧಿಕೃತವಾಗಿ ಬಿತ್ತನೆ ಬೀಜ ಮಾರಾಟ ಮಾಡಿದವರ ವಿರುದ್ಧ 124 ಪ್ರಕರಣ ದಾಖಲಿಸಿ, 3.06 ಕೋಟಿ ರೂ. ಮೌಲ್ಯದ 1,603 ಕ್ವಿಂಟಾಲ್ ಬಿತ್ತನೆ ಬೀಜ ಜಪ್ತಿ ಮಾಡಲಾಗಿದೆ. ರಸಗೊಬ್ಬರ ಮಾರಾಟಗಾರರ ವಿರುದ್ಧ 582 ಪ್ರಕರಣಗಳನ್ನು ದಾಖಲು ಮಾಡಿ, 22.43 ಕೋಟಿ ರೂ. ಮೌಲ್ಯದ 4,505 ಮೆಟ್ರಿಕ್ ಟನ್ ರಸಗೊಬ್ಬರ ಜಪ್ತಿ ಮಾಡಲಾಗಿದೆ. ನಿಯಮಬಾಹಿರವಾಗಿ ಕೀಟನಾಶಕ ಮಾರಾಟ ಮಾಡಿದವರ ವಿರುದ್ಧ 714 ಪ್ರಕರಣಗಳನ್ನು ದಾಖಲಿಸಿ, 17.08 ಕೋಟಿ ರೂ. ಮೌಲ್ಯದ 6,39,288 ಲೀ. ಜಪ್ತಿ ಮಾಡಲಾಗಿದೆ. ಜಾಗೃತ ಕೋಶದಿಂದ ದಾಖಲಿಸಲಾದ 378 ಪ್ರಕರಣಗಳಲ್ಲಿ ನ್ಯಾಯಾಲಯವು ಅಂತಿಮ ತೀರ್ಪು ನೀಡಿದ್ದು, ತಪ್ಪು ಎಸಗಿದ ಉತ್ಪಾದಕರು ಹಾಗೂ ಮಾರಾಟಗಾರರಿಗೆ 1 ಕೋಟಿ 2 ಲಕ್ಷದ 53 ಸಾವಿರ ರೂ. ದಂಡ ವಿಧಿಸಲಾಗಿದೆ.
ಜೈವಿಕ ಉತ್ಪನ್ನಗಳಲ್ಲಿ ಅಕ್ರಮವಾಗಿ ಕೀಟನಾಶಕ ಅಂಶಗಳು ಕಂಡುಬಂದ ಹಿನ್ನೆಲೆಯಲ್ಲಿ 105 ಪ್ರಕರಣಗಳನ್ನು ದಾಖಲಿಸಲಾಗಿದೆ. ನಿಯಮ ಉಲ್ಲಂಘಿಸಿದ 181 ಪರವಾನಗಿಗಳನ್ನು ಅಮಾನತು ಮಾಡಲಾಗಿದ್ದು, 117 ಪರವಾನಗಿಗಳನ್ನು ರದ್ದುಪಡಿಸಲಾಗಿದೆ. ವಿವಿಧ ಮೂಲಗಳಿಂದ ಒಟ್ಟು 1,088 ದೂರುಗಳು ಸ್ವೀಕೃತವಾಗಿದ್ದು, ಅವುಗಳಲ್ಲಿ 1,028 ದೂರುಗಳನ್ನು ಇತ್ಯರ್ಥಪಡಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. 60 ಪ್ರಕರಣಗಳ ತನಿಖೆ ಪ್ರಗತಿಯಲ್ಲಿದೆ ಎಂದು ಕೃಷಿ ಇಲಾಖೆ ಸಚಿವಾಲಯ ವಿಭಾಗದ ಜಾಗೃತ ಕೋಶ ಪ್ರಕಟಣೆ ತಿಳಿಸಿದೆ.
ಕೃಷಿ ಸಚಿವರ ಎಚ್ಚರಿಕೆ
ಈ ಕುರಿತು ಪ್ರತಿಕ್ರಿಯಿಸಿರುವ ಕೃಷಿ ಸಚಿವ ಪಿ.ಎಂ. ನರೇಂದ್ರ ಸ್ವಾಮಿ ಅವರು, ರಾಜ್ಯದಲ್ಲಿನ ಬರ ಪರಿಸ್ಥಿತಿಯನ್ನು ನೆಪ ಮಾಡಿಕೊಂಡು ಅಕ್ರಮ ಎಸಗುವವರಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. "ಬರದಿಂದ ರೈತರು ಕಂಗಾಲಾಗಿದ್ದಾರೆ. ಅಂತಹ ಸಂದರ್ಭದಲ್ಲಿ ರೈತರ ಆದಾಯ ಕುಸಿಯುತ್ತಿರುವುದನ್ನು ಗಮನಿಸಿ, ನವೆಂಬರ್ 1ರಿಂದ ರಾಜ್ಯ ಸರ್ಕಾರ ‘ಮುಖ್ಯಮಂತ್ರಿಗಳ ನೇಗಿಲ ಯೋಜನೆ’ ಜಾರಿಗೆ ತರುತ್ತಿದೆ. ಉಳುಮೆಯ ಖರ್ಚನ್ನು ಸರ್ಕಾರವೇ ಭರಿಸಲಿದೆ. ಇಂತಹ ಸನ್ನಿವೇಶದಲ್ಲಿ ಕಾಳಸಂತೆಯಲ್ಲಿ ಅಥವಾ ನಿಯಮಬಾಹಿರವಾಗಿ ಕೃಷಿ ಪರಿಕರ ಮಾರಾಟ ಮಾಡಿದರೆ, ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು," ಎಂದು ಅವರು ಖಡಕ್ ಆಗಿ ತಿಳಿಸಿದ್ದಾರೆ.
ಪಾರದರ್ಶಕತೆ ಮತ್ತು ದೂರು ನಿರ್ವಹಣೆ
ಕೃಷಿ ಇಲಾಖೆಯು ರೈತರ ದೂರುಗಳಿಗೆ ಹೆಚ್ಚಿನ ಮಹತ್ವ ನೀಡಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಒಟ್ಟು 1,088 ದೂರುಗಳು ಸ್ವೀಕೃತವಾಗಿದ್ದು, ಅವುಗಳಲ್ಲಿ 1,028 ದೂರುಗಳನ್ನು ಇತ್ಯರ್ಥಪಡಿಸಲಾಗಿದೆ. ಕೇವಲ 60 ಪ್ರಕರಣಗಳು ಮಾತ್ರ ತನಿಖೆಯ ಹಂತದಲ್ಲಿವೆ. ಜೈವಿಕ ಉತ್ಪನ್ನಗಳಲ್ಲಿ ಅಕ್ರಮವಾಗಿ ಕೀಟನಾಶಕ ಅಂಶಗಳನ್ನು ಬೆರೆಸುವ ವಂಚನೆಯನ್ನೂ ಜಾಗೃತ ಕೋಶ ಪತ್ತೆ ಹಚ್ಚುತ್ತಿರುವುದು ರೈತರಿಗೆ ದೊಡ್ಡ ಆಶಾಕಿರಣವಾಗಿದೆ.
