
ಕೆಪಿಎಸ್‌ಸಿಯಿಂದ ಕೆಇಎಗೆ ಕೃಷಿ ಅಧಿಕಾರಿ ಅಧಿಸೂಚನೆ ವರ್ಗಾಯಿಸಿದ ಸರ್ಕಾರ
ಕೆಪಿಎಸ್‌ಸಿಗೆ ಬಿಗ್ ಶಾಕ್| ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಈಗ ಕೆಇಎಗೆ ವರ್ಗ
ಗ್ರಾಮೀಣ ಭಾಗದ, ಕೃಷಿ ಕುಟುಂಬದ ಹಿನ್ನೆಲೆಯುಳ್ಳ ಪ್ರತಿಭಾವಂತ ಯುವಕರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಕರ್ನಾಟಕ ಲೋಕಸೇವಾ ಆಯೋಗದ ವಿರುದ್ಧ ಭ್ರಷ್ಟಾಚಾರ ಹಾಗೂ ವಿಳಂಬ ನೀತಿಯ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ಕೆಪಿಎಸ್‌ಸಿಯಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಹಲವು ಅಧಿಸೂಚನೆಗಳನ್ನು ವರ್ಗಾಯಿಸಿತ್ತು. ಇದೀಗ ಕೃಷಿ ಇಲಾಖೆಯ 945 ಹುದ್ದೆಗಳನ್ನು ಕೆಇಎಗೆ ವರ್ಗಾಯಿಸುವ ಮೂಲಕ ಕೆಪಿಎಸ್‌ಸಿಯಲ್ಲಿ ಎಲ್ಲವೂ ಸರಿ ಇಲ್ಲ ಎಂದು ಸರ್ಕಾರವೇ ಒಪ್ಪಿಕೊಂಡಂತಾಗಿದೆ.
ಕೆಪಿಎಸ್‌ಸಿ 2024ರ ಸೆ. 20ರಂದು ಕೃಷಿ ಇಲಾಖೆಯಲ್ಲಿ ಖಾಲಿ ಉಳಿದಿದ್ದ ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿಗಳ 945 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿತ್ತು. ಕ್ರೀಡಾಪಟುಗಳ ಮೀಸಲಾತಿ ಸೇರಿಸಿ ತಿದ್ದುಪಡಿ ಮಾಡಿ, 2024ರ ಡಿಸೆಂಬರ್ 31ರಂದು ಮರು ಅಧಿಸೂಚನೆ ಹೊರಡಿಸಿ ಪರೀಕ್ಷೆಗೆ ಸಿದ್ಧತೆ ನಡೆಸಿತ್ತು. ಆದರೆ, ಒಳ ಮೀಸಲಾತಿ ಅನ್ವಯ ಅಧಿಸೂಚನೆಯಾಗಬೇಕು ಎಂದು ಒತ್ತಡ ಬಂದ ಕಾರಣ ಅಧಿಸೂಚನೆಯನ್ನು ರದ್ದುಗೊಳಿಸಿತ್ತು.
ಸ್ಪರ್ಧಾರ್ಥಿಗಳ ಒತ್ತಡಕ್ಕೆ ಮಣಿದ ಸರ್ಕಾರ
ಪರೀಕ್ಷೆ ನಡೆಸಲು ಕೆಪಿಎಸ್‌ಸಿ ವಿಳಂಬ ಮಾಡುತ್ತಿದೆ. ಒಂದು ಅಧಿಸೂಚನೆ ಪೂರ್ಣಗೊಳಿಸಲು ಕನಿಷ್ಠ ಮೂರು ವರ್ಷ ಸಮಯ ತೆಗೆದುಕೊಳ್ಳುತ್ತಿದೆ. ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಇಲ್ಲ. ಆದ್ದರಿಂದ ಕೃಷಿ ಇಲಾಖೆಯ ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ಅಧಿಸೂಚನೆಯನ್ನು ಕೆಪಿಎಸ್‌ಸಿಯಿಂದ ಕೆಇಎಗೆ ವರ್ಗಾಯಿಸಬೇಕು ಎಂದು ಸಾವಿರಾರು ಸ್ಪರ್ಧಾರ್ಥಿಗಳು ಹಾಗೂ ವಿದ್ಯಾರ್ಥಿ ಸಂಘಟನೆಗಳು ಆಗ್ರಹಿಸಿದ್ದವು.
ಕೃಷಿ ಸಚಿವರು ಹೇಳಿದ್ದೇನು?
ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಅಧಿಕೃತವಾಗಿ ತಿಳಿಸಿದ್ದು, "ನಮ್ಮ ರಾಜ್ಯದ ಸಾವಿರಾರು ನಿರುದ್ಯೋಗಿ ಯುವಜನತೆಯ ಹಾಗೂ ಲಕ್ಷಾಂತರ ರೈತಾಪಿ ಕುಟುಂಬಗಳ ಆಶೋತ್ತರಗಳಿಗೆ ಸ್ಪಂದಿಸುವುದು ನಮ್ಮ ಸರ್ಕಾರದ ಮೊದಲ ಆದ್ಯತೆಯಾಗಿದೆ. ಕಳೆದ ವರ್ಷ ಕೃಷಿ ಇಲಾಖೆಯ ಸುಮಾರು 945 ಕೃಷಿ ಅಧಿಕಾರಿ (AO) ಹಾಗೂ ಸಹಾಯಕ ಕೃಷಿ ಅಧಿಕಾರಿ (AAO) ಹುದ್ದೆಗಳ ನೇಮಕಾತಿಯನ್ನು ಕೆಪಿಎಸ್‌ಸಿ ಮೂಲಕ ನಡೆಸಲು ಆದೇಶಿಸಲಾಗಿತ್ತು" ಎಂದಿದ್ದಾರೆ.
ಮುಂದುವರಿದು, "ಈ ಪ್ರಕ್ರಿಯೆಯಲ್ಲಿ ಹೆಚ್ಚಿನ ಪಾರದರ್ಶಕತೆ ಇರಬೇಕು ಮತ್ತು ಶೀಘ್ರವಾಗಿ ನೇಮಕಾತಿ ನಡೆಯಬೇಕು ಎಂಬುದು ರಾಜ್ಯದ ಸಾವಿರಾರು ಅಭ್ಯರ್ಥಿಗಳ ಮನವಿ ಹಾಗೂ ಒತ್ತಾಯವಾಗಿತ್ತು. ಈ ನ್ಯಾಯಯುತ ಬೇಡಿಕೆಯನ್ನು ಪರಿಗಣಿಸಿ, ಕೆಪಿಎಸ್‌ಸಿ ಮೂಲಕ ನೇಮಕಾತಿ ನಡೆಸುವ ಹಳೆಯ ಆದೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಇಂದು ರದ್ದುಗೊಳಿಸಿದ್ದೇವೆ. ಈ ಎಲ್ಲಾ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಇನ್ನು ಮುಂದೆ ಕೆಇಎ ಮೂಲಕವೇ ನಡೆಸಲು ಅಧಿಕೃತವಾಗಿ ಆದೇಶ ಹೊರಡಿಸಿದ್ದೇವೆ" ಎಂದು ತಿಳಿಸಿದ್ದಾರೆ.
ಪಾರದರ್ಶಕತೆ ಮತ್ತು ಅರ್ಹತೆಗೆ ಆದ್ಯತೆ ನೀಡುವುದು ನಮ್ಮ ಬದ್ಧತೆ. ಗ್ರಾಮೀಣ ಭಾಗದ, ಕೃಷಿ ಕುಟುಂಬದ ಹಿನ್ನೆಲೆಯುಳ್ಳ ಪ್ರತಿಭಾವಂತ ಯುವಕರಿಗೆ ಯಾವುದೇ ಅನ್ಯಾಯವಾಗದಂತೆ ನೋಡಿಕೊಳ್ಳಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಎಲ್ಲಾ ಅಭ್ಯರ್ಥಿಗಳಿಗೆ ನನ್ನ ಕಡೆಯಿಂದ ಶುಭ ಹಾರೈಕೆಗಳು. ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿ, ನಮ್ಮ ಸರ್ಕಾರ ಸದಾ ನಿಮ್ಮ ಬೆನ್ನಿಗಿರುತ್ತದೆ ಎಂದು ತಮ್ಮ ಪೋಸ್ಟ್‌ನಲ್ಲಿ ಶುಭ ಹಾರೈಸಿದ್ದಾರೆ.

