ಅಡ್ಡಂಡ ಕಾರ್ಯಪ್ಪಗೆ ಮಸಿ ಬಳಿದು ಆಕ್ರೋಶ: ‘ಗಾಂಧಿ ಹತ್ಯೆಯ ಸತ್ಯ’ ನಾಟಕ ಪ್ರದರ್ಶನಕ್ಕೆ ಅಡ್ಡಿ
x

ಅಡ್ಡಂಡ ಕಾರ್ಯಪ್ಪಗೆ ಮಸಿ ಬಳಿದು ಆಕ್ರೋಶ: ‘ಗಾಂಧಿ ಹತ್ಯೆಯ ಸತ್ಯ’ ನಾಟಕ ಪ್ರದರ್ಶನಕ್ಕೆ ಅಡ್ಡಿ

ಬೆಂಗಳೂರಿನ ಬನಶಂಕರಿಯ ಸುಚಿತ್ರಾ ಅಕಾಡೆಮಿಯಲ್ಲಿ ‘ಗಾಂಧಿ ಹತ್ಯೆಯ ಸತ್ಯ’ ನಾಟಕ ಪ್ರದರ್ಶನದ ವೇಳೆ ಗದ್ದಲ ಉಂಟಾಗಿದೆ. ಮಹಾತ್ಮ ಗಾಂಧೀಜಿ ಕುರಿತು ಆಕ್ಷೇಪಾರ್ಹ ಸಂಭಾಷಣೆ ಬಳಸಲಾಗಿದೆ ಎಂದು ಆರೋಪಿಸಿ ನಾಟಕಕಾರ ಅಡ್ಡಂಡ ಕಾರ್ಯಪ್ಪಗೆ ಮಸಿ ಬಳಿದು ಪ್ರತಿಭಟನೆ ನಡೆಸಲಾಗಿದೆ.


ಮಹಾತ್ಮ ಗಾಂಧೀಜಿ ಕುರಿತು ಆಕ್ಷೇಪಾರ್ಹ ಸಂಭಾಷಣೆಗಳನ್ನು ಬಳಸಲಾಗಿದೆ ಎಂದು ಆರೋಪಿಸಿ, ನಾಟಕಕಾರ ಅಡ್ಡಂಡ ಕಾರ್ಯಪ್ಪ ವಿರುದ್ಧ ಸಂಘಟನೆಗಳ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಬನಶಂಕರಿಯ ಸುಚಿತ್ರಾ ಅಕಾಡೆಮಿಯಲ್ಲಿ ‘ಗಾಂಧಿ ಹತ್ಯೆಯ ಸತ್ಯ’ ನಾಟಕ ಪ್ರದರ್ಶನದ ವೇಳೆ ಗದ್ದಲ ಉಂಟಾಗಿದ್ದು, ಅಡ್ಡಂಡ ಕಾರ್ಯಪ್ಪ ಅವರಿಗೆ ಮಸಿ ಬಳಿದು ಪ್ರತಿಭಟನೆ ನಡೆಸಲಾಗಿದೆ. ಈ ಘಟನೆಯಿಂದ ನಾಟಕ ಪ್ರದರ್ಶನಕ್ಕೂ ಅಡ್ಡಿಯಾಗಿದೆ.

ಬನಶಂಕರಿ ಎರಡನೇ ಹಂತದಲ್ಲಿರುವ ಸುಚಿತ್ರಾ ಫಿಲ್ಮ್ ಸೊಸೈಟಿಯಲ್ಲಿ ಕೊಡಗು ರಂಗಭೂಮಿ ಟ್ರಸ್ಟ್ ವತಿಯಿಂದ ಈ ನಾಟಕವನ್ನು ಆಯೋಜಿಸಲಾಗಿತ್ತು. ನಾಟಕವನ್ನು ಅಡ್ಡಂಡ ಕಾರ್ಯಪ್ಪ ಅವರೇ ರಚಿಸಿ ನಿರ್ದೇಶಿಸಿದ್ದಾರೆ. ನಾಟಕದಲ್ಲಿ ಮಹಾತ್ಮ ಗಾಂಧೀಜಿಯವರನ್ನು ದೇಶವಿರೋಧಿ ಹಾಗೂ ಮುಸ್ಲಿಮರ ಪರ ಎಂದು ಬಿಂಬಿಸುವ ಮೂಲಕ ಅಪಪ್ರಚಾರ ಮಾಡಲಾಗುತ್ತಿದೆ ಎಂಬುದು ಪ್ರತಿಭಟನಾಕಾರರ ಆರೋಪ.

ಕಾಂಗ್ರೆಸ್ ಮತ್ತು ಮಹಾತ್ಮ ಗಾಂಧೀಜಿಯವರೇ ದೇಶ ವಿಭಜನೆಗೆ ಕಾರಣ ಎಂಬ ರೀತಿಯಲ್ಲಿ ನಾಟಕದ ಮೂಲಕ ತಪ್ಪು ಸಂದೇಶ ಹರಡಲಾಗುತ್ತಿದೆ. ಗೋಡ್ಸೆಯನ್ನು ದೇಶಭಕ್ತನೆಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿರುವ ಸಂಘಟನೆಗಳ ಮುಖಂಡರು, ಈ ಸಂಬಂಧ ಬನಶಂಕರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಎರಡೂ ಕಡೆಯಿಂದ ದೂರು ಮತ್ತು ಪ್ರತಿದೂರು ದಾಖಲಾಗಿವೆ. ಅಡ್ಡಂಡ ಕಾರ್ಯಪ್ಪ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕಾಂಗ್ರೆಸ್ ಮುಖಂಡರು ಪೊಲೀಸ್ ಆಯುಕ್ತರ ಕಚೇರಿಗೆ ತೆರಳಲು ಮುಂದಾಗಿದ್ದರು. ಆದರೆ ಪೊಲೀಸರು ಗೇಟ್‌ನಲ್ಲೇ ಅವರನ್ನು ತಡೆದು, ಮನವೊಲಿಸಿ ವಾಪಸ್ ಕಳುಹಿಸಿದ್ದಾರೆ. ಘಟನೆಯ ಬೆನ್ನಲ್ಲೇ ಸುಚಿತ್ರಾ ಅಕಾಡೆಮಿ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

‘ಕಾನೂನು ಹೋರಾಟಕ್ಕೆ ಸಿದ್ಧ’ ಎಂದ ಅಡ್ಡಂಡ ಕಾರ್ಯಪ್ಪ

ಘಟನೆ ಕುರಿತು ಪ್ರತಿಕ್ರಿಯಿಸಿರುವ ಅಡ್ಡಂಡ ಕಾರ್ಯಪ್ಪ, ನೂರು ಜನರಿಗೆ ಮಾತ್ರ ಅವಕಾಶವಿದ್ದ ಸಣ್ಣ ಸಭಾಂಗಣದಲ್ಲಿ ನಾಟಕ ಪ್ರದರ್ಶನ ನಡೆಯುತ್ತಿತ್ತು. ಇದು ನಾಟಕದ ಹತ್ತನೇ ಪ್ರದರ್ಶನವಾಗಿತ್ತು. ಈ ವೇಳೆ ಏಕಾಏಕಿ ಒಳನುಗ್ಗಿದ ಕೆಲವರು ಹಲ್ಲೆ ನಡೆಸಿ ಮೈಮೇಲೆ ದ್ರಾವಣ ಎರಚಿದ್ದಾರೆ. ಪ್ರಶ್ನಿಸಿದ ಮಹಿಳೆಯರ ಮೇಲೂ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಮುಂದುವರಿದು, ಕರ್ನಾಟಕ ಸರ್ಕಾರ ಎಂದು ಬರೆದ ವಾಹನಗಳಲ್ಲಿ ಬಂದವರು ಈ ಕೃತ್ಯ ಎಸಗಿದ್ದಾರೆ. ನಾಟಕಕ್ಕೆ ಸಂಬಂಧಿಸಿದ ಸಾಮಗ್ರಿಗಳನ್ನು ಒಡೆದು, ಟಿಕೆಟ್‌ಗಳು ಮತ್ತು ಪಟ್ಟಿಗಳನ್ನು ಹಾಳು ಮಾಡಿದ್ದಾರೆ ಎಂದು ದೂರಿದ್ದಾರೆ. ನಾನು 50ಕ್ಕೂ ಹೆಚ್ಚು ನಿಷೇಧಿತವಲ್ಲದ ಪುಸ್ತಕಗಳನ್ನು ಓದಿ ಈ ನಾಟಕ ಬರೆದಿದ್ದೇನೆ. ಗಾಂಧಿ ಹತ್ಯೆಯ ನಂತರ ಗೋಡ್ಸೆ ಹೇಳಿದ ಮಾತುಗಳನ್ನು ನಾಟಕದಲ್ಲಿ ಚರ್ಚೆಗೆ ಒಳಪಡಿಸಿದ್ದೇನೆ. ನನ್ನ ನಾಟಕದಲ್ಲಿ ತಪ್ಪಿದ್ದರೆ ಪ್ರಕರಣ ದಾಖಲಿಸಲಿ, ನ್ಯಾಯಾಲಯಕ್ಕೆ ಹೋಗಲಿ. ಕಾನೂನಾತ್ಮಕವಾಗಿ ಏನೇ ಕ್ರಮ ಕೈಗೊಂಡರೂ ಎದುರಿಸಲು ಸಿದ್ಧನಿದ್ದೇನೆ ಎಂದು ಸವಾಲು ಹಾಕಿದ್ದಾರೆ.

ನವೆಂಬರ್‌ 1ರಂದು ನಡೆಯಲಿರುವ ಮುಂದಿನ ಪ್ರದರ್ಶನಗಳಿಗೆ ಪೊಲೀಸ್ ರಕ್ಷಣೆ ಕೋರಿ ಪತ್ರ ನೀಡಿದ್ದೇನೆ. ನಡೆದ ಘಟನೆಯ ಕುರಿತು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ಸಲ್ಲಿಸಿದ್ದೇನೆ ಎಂದೂ ತಿಳಿಸಿದ್ದಾರೆ.

‘ಗಾಂಧೀಜಿ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ’ ಎಂದ ಕಾಂಗ್ರೆಸ್ ಮುಖಂಡ

ಇನ್ನೊಂದೆಡೆ, ಕಾಂಗ್ರೆಸ್ ಮುಖಂಡ ಮನೋಹರ್ ಪ್ರತಿಕ್ರಿಯಿಸಿ, ನಾವೆಲ್ಲರೂ ಟಿಕೆಟ್ ಪಡೆದುಕೊಂಡೇ ಸುಚಿತ್ರಾ ಅಕಾಡೆಮಿಗೆ ಹೋಗಿದ್ದೆವು. ಅಲ್ಲಿ ಗಾಂಧೀಜಿಗೆ ಧಿಕ್ಕಾರ ಕೂಗಲಾಗುತ್ತಿದೆ. ಗೋಡ್ಸೆಯನ್ನು ದೇಶಭಕ್ತನೆಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ಗಾಂಧೀಜಿ ಕುರಿತು ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ, ನಮ್ಮವರೇ ಅಡ್ಡಂಡ ಕಾರ್ಯಪ್ಪ ಅವರಿಗೆ ಮಸಿ ಬಳಿದಿದ್ದಾರೆ ಎಂದು ಘಟನೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಇಂದು ಮತ್ತೆ ನಾಟಕ ಪ್ರದರ್ಶನ

ವಿವಾದ ಮತ್ತು ಪ್ರತಿಭಟನೆಯ ನಡುವೆಯೇ ನವೆಂಬರ್‌ 1ರಂದು ಮತ್ತೆ ನಾಟಕ ಪ್ರದರ್ಶನ ನಡೆಸಲು ಅಡ್ಡಂಡ ಕಾರ್ಯಪ್ಪ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸ್ ರಕ್ಷಣೆ ಕೋರಿದ್ದಾರೆ. ಮತ್ತೊಂದೆಡೆ, ಎರಡೂ ಕಡೆಯ ದೂರುಗಳ ಹಿನ್ನೆಲೆಯಲ್ಲಿ ಪೊಲೀಸರು ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆಯಿದ್ದು, ಸುಚಿತ್ರಾ ಅಕಾಡೆಮಿ ಸುತ್ತಮುತ್ತ ಬಿಗಿ ಭದ್ರತೆ ಮುಂದುವರಿದಿದೆ. ನಾಟಕದ ವಿಚಾರವಾಗಿ ಆರಂಭವಾದ ವಿವಾದ ಇದೀಗ ರಾಜಕೀಯ ಸಂಘರ್ಷದ ಸ್ವರೂಪ ಪಡೆದುಕೊಂಡಿದ್ದು, ಮುಂದಿನ ಬೆಳವಣಿಗೆಗಳು ಕುತೂಹಲ ಮೂಡಿಸಿವೆ.

Read More
Next Story