ಬೆಂಗಳೂರು ಸಬ್‌ ಅರ್ಬನ್‌ ಯೋಜನೆ ಮಲ್ಲಿಗೆ ಕಾರಿಡಾರ್‌; ಅದಾನಿ ಸಮೂಹ ಸಂಸ್ಥೆ ಎಲ್‌-1 ಬಿಡ್ಡರ್‌
x

ಬೆಂಗಳೂರು ಸಬ್‌ ಅರ್ಬನ್‌ ಯೋಜನೆ ಮಲ್ಲಿಗೆ ಕಾರಿಡಾರ್‌; ಅದಾನಿ ಸಮೂಹ ಸಂಸ್ಥೆ ಎಲ್‌-1 ಬಿಡ್ಡರ್‌

ಇತ್ತೀಚೆಗಷ್ಟೇ ಬೆಂಗಳೂರಿನ ಸುರಂಗ ರಸ್ತೆ ಯೋಜನೆಯಲ್ಲೂ ಎಲ್-1 ಬಿಡ್‌ದಾರರಾಗಿದ್ದ ಅದಾನಿ ಗ್ರೂಪ್, ಇದೀಗ ಉಪನಗರ ರೈಲು ಯೋಜನೆಯಲ್ಲೂ ಕನಿಷ್ಠ ಬಿಡ್‌ದಾರ ಸಂಸ್ಥೆಯಾಗಿ ಟೆಂಡರ್‌ ಪಡೆದುಕೊಂಡಿದೆ.


ಸಿಲಿಕಾನ್‌ ಸಿಟಿಯ ಬಹುನಿರೀಕ್ಷಿತ 'ಬೆಂಗಳೂರು ಉಪನಗರ ರೈಲು ಯೋಜನೆ'ಯ ಮಲ್ಲಿಗೆ ಕಾರಿಡಾರ್ ವ್ಯಾಪ್ತಿಯ ಪ್ರಮುಖ ಸಿವಿಲ್ ಕಾಮಗಾರಿ ಟೆಂಡರ್‌ನಲ್ಲಿ ಅದಾನಿ ಸಮೂಹದ ಸೆಮಿಂಡಿಯಾ ಪ್ರಾಜೆಕ್ಟ್ಸ್ ಲಿಮಿಟೆಡ್ ಎಲ್-1 ಬಿಡ್‌ದಾರ ಸಂಸ್ಥೆಯಾಗಿ ಹೊರಹೊಮ್ಮಿದೆ.

ಕೇಂದ್ರ ರೈಲ್ವೆ ಸಚಿವಾಲಯ ಹಾಗೂ ಕರ್ನಾಟಕದ ಕೆ-ರೈಡ್ ಸಂಸ್ಥೆಯು 671.65 ಕೋಟಿ ರೂ. ಗಳಿಗೆ ಟೆಂಡರ್ ಬಿಡ್ ನಿಗದಿಪಡಿಸಿತ್ತು. ಅದಾನಿ ಸಮೂಹದ ಸೆಮಿಂಡಿಯಾ ಪ್ರಾಜೆಕ್ಟ್‌ ಟೆಂಡರ್‌ ಅನ್ನು 665.61 ಕೋಟಿಗೆ ಬಿಡ್ ಸಲ್ಲಿಸಿ ಗುತ್ತಿಗೆ ತನ್ನದಾಗಿಸಿಕೊಂಡಿದೆ. ಇತ್ತೀಚೆಗಷ್ಟೇ ಬೆಂಗಳೂರಿನ ಸುರಂಗ ರಸ್ತೆ ಯೋಜನೆಯಲ್ಲೂ ಎಲ್-1 ಬಿಡ್‌ದಾರರಾಗಿದ್ದ ಅದಾನಿ ಗ್ರೂಪ್, ಇದೀಗ ಉಪನಗರ ರೈಲು ಯೋಜನೆಯಲ್ಲೂ ಕನಿಷ್ಠ ಬಿಡ್‌ದಾರ ಸಂಸ್ಥೆಯಾಗಿ ಟೆಂಡರ್‌ ಪಡೆದುಕೊಂಡಿದೆ.

ಡಬಲ್-ಡೆಕ್ಕರ್‌ ಫ್ಲೈ ಓವರ್

ಮಲ್ಲಿಗೆ ಕಾರಿಡಾರ್-2 (ಬೆನ್ನಿಗಾನಹಳ್ಳಿ – ಚಿಕ್ಕಬಾಣಾವರ) ವ್ಯಾಪ್ತಿಯಲ್ಲಿ ನಿರ್ಮಾಣವಾಗುವ ಈ ಕಾಮಗಾರಿಯಲ್ಲಿ ಯಶವಂತಪುರ ಮತ್ತು ಮತ್ತಿಕೆರೆ ನಡುವಿನ 1.2 ಕಿ.ಮೀ ಉದ್ದದ ಡಬಲ್-ಡೇಕರ್ ಮೇಲ್ಸೇತುವೆ ನಿರ್ಮಿಸಲಾಗುವುದು. ನಮ್ಮ ಮೆಟ್ರೋ ಮಾದರಿಯಲ್ಲೇ ರಸ್ತೆ ಮತ್ತು ರೈಲು ಮಾರ್ಗವನ್ನು ಒಂದರ ಮೇಲೊಂದರಂತೆ ನಿರ್ಮಿಸುವುದರಿಂದ ಜಾಗದ ಅಭಾವ ನೀಗಲಿದ್ದು, ನಿರಂತರ ಟ್ರಾಫಿಕ್ನಿಂದ ಬಳಲುತ್ತಿದ್ದ ಯಶವಂತಪುರ – ಮತ್ತಿಕೆರೆ ಭಾಗದ ಜನತೆಗೆ ದೊಡ್ಡ ರಿಲೀಫ್ ಸಿಗಲಿದೆ. ಕಾರ್ಯಾದೇಶ ನೀಡಿದ ದಿನಾಂಕದಿಂದ 24 ತಿಂಗಳ ಒಳಗಾಗಿ ಸಿವಿಲ್ ಕಾಮಗಾರಿ ಪೂರ್ಣಗೊಳಿಸಲು ಕಾಲಮಿತಿ ನಿಗದಿಪಡಿಸಲಾಗಿದೆ.

ಕನಕ ಮಾರ್ಗದಲ್ಲೂ ಟೆಂಡರ್ ಚುರುಕು

ಉಪನಗರ ರೈಲು ಯೋಜನೆಯ 4ನೇ ಕಾರಿಡಾರ್ ಆದ ಕನಕ ಮಾರ್ಗದಲ್ಲಿ (ಹೀಲಲಿಗೆ - ರಾಜಾನುಕುಂಟೆ) ಕಾಮಗಾರಿಗಳಿಗೆ ಕರೆದಿರುವ ಟೆಂಡರ್‌ನಲ್ಲಿ ಆರ್‌ಎನ್‌ಎಸ್‌ -ಜಿಪಿಎಲ್ ಜೆವಿ ಸಂಸ್ಥೆಯು 342 ಕೋಟಿ ರೂ.ಗಳಿಗೆ ಬಿಡ್ ನಮೂದಿಸಿ ಗುತ್ತಿಗೆ ಪಡೆದಿದೆ. ಇದರ ಜೊತೆಗೆ ಕನಕ ಕಾರಿಡಾರ್ನ ಮತ್ತೊಂದು ಪ್ರಮುಖ ಕಾಮಗಾರಿಗೆ ಕೆ-ರೈಡ್ ಶೀಘ್ರದಲ್ಲೇ ಹೊಸ ಟೆಂಡರ್ ಕರೆಯಲಿದೆ. ಈಗಾಗಲೇ ಯೋಜನೆಯ ಇತರ ವಿಭಾಗಗಳ ಕಾಮಗಾರಿ ಗುತ್ತಿಗೆಯನ್ನು ಪಿಜೆಬಿ ಎಂಜಿನಿಯರ್ಸ್, ಸಿವಿಸಿಸಿ, ಎನ್‌ಸಿಸಿ ಹಾಗೂ ಐಟಿಡಿ ಸಿಮೆಂಟೇಶನ್ ಇಂಡಿಯಾ ಸಂಸ್ಥೆಗಳು ಪಡೆದುಕೊಂಡಿದ್ದು, ಬಿಎಸ್‌ಆರ್‌ಪಿ ಯೋಜನೆಗೆ ಮತ್ತೆ ಚೇತರಿಕೆ ಸಿಕ್ಕಂತಾಗಿದೆ.

ಬೆಂಗಳೂರು ಉಪನಗರ ರೈಲು ಯೋಜನೆಯು ನಗರದ ನಾಲ್ಕೂ ದಿಕ್ಕುಗಳನ್ನು ಜೋಡಿಸುವ 4 ಪ್ರಮುಖ ಕಾರಿಡಾರ್ಗಳನ್ನು ಹೊಂದಿದೆ. ಮಲ್ಲಿಗೆ ಕಾರಿಡಾರ್ ಬೆನ್ನಿಗಾನಹಳ್ಳಿ – ಚಿಕ್ಕಬಾಣಾವರದವರೆಗೆ 25 ಕಿ.ಮೀ. ಇರಲಿದೆ. ಇದರಲ್ಲಿ 14ನಿಲ್ದಾಣಗಳು, ಡಬಲ್‌ ಡೆಕರ್‌ ಫ್ಲೈ ಓವರ್‌ಗಳು ಇರಲಿವೆ. ಕನಕ ಕಾರಿಡಾರ್‌ ಹೀಲಲಿಗೆಯಿಂದ ರಾಜಾನುಕುಂಟೆವರೆಗೆ ಇರಲಿದೆ. 46 ಕಿ.ಮೀ. ಉದ್ದದ ಈ ಮಾರ್ಗದಲ್ಲಿ ಕೈಗಾರಿಕಾ ಹಾಗೂ ಪ್ರಮುಖ ವಸತಿ ವಲಯಗಳು ಸಂಪರ್ಕಿಸಲಿದೆ. ಸಂಪಿಗೆ ಕಾರಿಡಾರ್‌ ಮೆಜೆಸ್ಟಿಕ್‌ನಿಂದ ದೇವನಹಳ್ಳಿವರೆಗೆ ಇರಲಿದೆ.41 ಕಿ.ಮೀ. ಉದ್ದದ ಈ ಮಾರ್ಗವು ಕೆಂಪೇಗೌಡ ನಿಲ್ದಾಣದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಖ ಕಲ್ಪಿಸಲಿದೆ. ಪಾರಿಜಾತ್‌ ಕಾರಿಡಾರ್‌ ಕೆಂಗೇರಿಯಿಂದ ವೈಟ್‌ಫೀಲ್ಡ್‌ವರೆಗೆ ಇರಲಿದೆ. ಒಟ್ಟು 35 ಕಿ.ಮೀ. ಉದ್ದದ ಈ ಮಾರ್ಗವು ಐಟಿ ಕಾರಿಡಾರ್‌ಗೆ ಸಂಪರ್ಕ ಕಲ್ಪಿಸಲಿದೆ.

Read More
Next Story