ಗ್ಯಾಸ್ ಸಿಲಿಂಡರ್ ಬೇಡ: ಎಲ್‌ಪಿಜಿ ಬಿಕ್ಕಟ್ಟಿನ ನಡುವೆಯೂ ಹಬೆಯಾಡುತ್ತಿದೆ ಅದಮ್ಯ ಚೇತನದ ಬಿಸಿಯೂಟ
x
'ಅದಮ್ಯ ಚೇತನ' ಸಂಸ್ಥೆಯ ಅಡುಗೆ ಮನೆ

ಗ್ಯಾಸ್ ಸಿಲಿಂಡರ್ ಬೇಡ: ಎಲ್‌ಪಿಜಿ ಬಿಕ್ಕಟ್ಟಿನ ನಡುವೆಯೂ ಹಬೆಯಾಡುತ್ತಿದೆ 'ಅದಮ್ಯ ಚೇತನ'ದ ಬಿಸಿಯೂಟ

'ಅದಮ್ಯ ಚೇತನ' ಸಂಸ್ಥೆಯು ಎಲ್‌ಪಿಜಿ ಬಳಸದೆ ಕೃಷಿ ತ್ಯಾಜ್ಯದ ಬ್ರಿಕೆಟ್‌ಗಳ ಮೂಲಕ ಲಕ್ಷಾಂತರ ಮಕ್ಕಳಿಗೆ ನಿರಂತರವಾಗಿ ಬಿಸಿಯೂಟ ನೀಡುವ ಮೂಲಕ ಇಂಧನ ಸ್ವಾವಲಂಬನೆಯ ಹೊಸ ಹಾದಿ ತೋರಿಸಿದೆ.


Click the Play button to hear this message in audio format

ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಭೀಕರ ಯುದ್ಧದ ನೇರ ಪರಿಣಾಮ ಇದೀಗ ಭಾರತದ ಅಡುಗೆಮನೆಗಳ ಮೇಲೂ ತಟ್ಟಲಾರಂಭಿಸಿದೆ. ಅಡುಗೆ ಅನಿಲದ (ಎಲ್‌ಪಿಜಿ) ಬೆಲೆ ಏರಿಕೆ ಹಾಗೂ ಪೂರೈಕೆಯಲ್ಲಿನ ತೀವ್ರ ಅಭಾವದಿಂದಾಗಿ ರಾಜ್ಯದಾದ್ಯಂತ ಅನೇಕ ಹೋಟೆಲ್‌ಗಳು ಬಾಗಿಲು ಹಾಕುವ ಸ್ಥಿತಿಗೆ ತಲುಪಿವೆ, ಪಿಜಿಗಳು ಸಂಕಷ್ಟಕ್ಕೆ ಸಿಲುಕಿವೆ.

ಆದರೆ, ಇಂತಹ ಇಂಧನ ತುರ್ತುಪರಿಸ್ಥಿತಿಯ ನಡುವೆಯೂ ಬೆಂಗಳೂರಿನ 'ಅದಮ್ಯ ಚೇತನ' ಸಂಸ್ಥೆಯ ಬೃಹತ್ ಅಡುಗೆಮನೆ ಮಾತ್ರ ಕಿಂಚಿತ್ತೂ ಅಲುಗಾಡದೆ ನಿತ್ಯ ಲಕ್ಷಾಂತರ ಮಕ್ಕಳಿಗೆ ಬಿಸಿಯೂಟ ಉಣಬಡಿಸುತ್ತಿದೆ. ಈ ಸಂಸ್ಥೆಯ ಅಡುಗೆಮನೆಗೆ ಕಳೆದ 15 ವರ್ಷಗಳಿಂದ ಒಂದೇ ಒಂದು ಗ್ಯಾಸ್ ಸಿಲಿಂಡರ್ ಕೂಡ ಪ್ರವೇಶಿಸಿಲ್ಲ ಎನ್ನುವುದು ಅಚ್ಚರಿಯಾದರೂ ಸತ್ಯ!

ಆತ್ಮನಿರ್ಭರತೆಯ ಹಾದಿಯಲ್ಲಿ ಹಬೆ ಮ್ಯಾಜಿಕ್

ಕೇಂದ್ರದ ಮಾಜಿ ಸಚಿವ ದಿವಂಗತ ಅನಂತಕುಮಾರ್ ಅವರು ಆರಂಭಿಸಿದ ಈ ಸಂಸ್ಥೆಯು, ಇಂದು ತನ್ನ ಪರಿಸರ ಸ್ನೇಹಿ ಮತ್ತು ಸ್ವದೇಶಿ ಇಂಧನ ಬಳಕೆಯ ಮೂಲಕ ವಿಶ್ವದ ಗಮನ ಸೆಳೆಯುತ್ತಿದೆ. 2009ರಿಂದಲೇ ಇಲ್ಲಿ ಗ್ಯಾಸ್ ಬಳಕೆಯನ್ನು ನಿಲ್ಲಿಸಲಾಗಿದ್ದು, ಕೇವಲ ನವೀಕರಿಸಬಹುದಾದ (Renewable) ಇಂಧನ ಮೂಲಗಳಿಂದ ಅಡುಗೆ ತಯಾರಿಸಲಾಗುತ್ತಿದೆ. ಕೃಷಿ ತ್ಯಾಜ್ಯದಿಂದ ತಯಾರಿಸಿದ ಬ್ರಿಕೆಟ್‌ಗಳನ್ನು (Briquettes) ಬಳಸಿ ಹಬೆ ಆಧಾರಿತ (Steam-based) ವ್ಯವಸ್ಥೆಯಡಿ ಇಲ್ಲಿ ಬಿಸಿಯೂಟ ಸಿದ್ಧವಾಗುತ್ತದೆ. ಪ್ಲಾಸ್ಟಿಕ್, ಕಲ್ಲು-ಮಣ್ಣು ಇರದ ಕೃಷಿ ತ್ಯಾಜ್ಯ, ತ್ಯಾಜ್ಯ ಕಾಗದಗಳು ಹಾಗೂ ಆರ್‌ಬಿಐ ವಿಲೇವಾರಿ ಮಾಡುವ ಖೋಟಾ ನೋಟುಗಳ ಪುಡಿಯಿಂದ ತಯಾರಿಸಿದ ಬ್ರಿಕೆಟ್‌ಗಳೇ ಇಲ್ಲಿನ ಇಂಧನ. ಅಷ್ಟೇ ಅಲ್ಲದೆ, ಅಕ್ಕಿಯ ತೌಡಿನಿಂದ ತಯಾರಿಸಿದ ಪೆಲೆಟ್ಸ್ ಮತ್ತು ತೆಂಗಿನ ಚಿಪ್ಪುಗಳನ್ನು ಬಳಸುವ ಮೂಲಕ ಅಡುಗೆ ಅನಿಲಕ್ಕೆ ಸಂಪೂರ್ಣ ವಿದಾಯ ಹೇಳಲಾಗಿದೆ.

ಶೂನ್ಯ ತ್ಯಾಜ್ಯ ಮಾದರಿಯ ಅಡುಗೆಮನೆ

ಅದಮ್ಯ ಚೇತನ ಫೌಂಡೇಶನ್ ಅಧ್ಯಕ್ಷೆ ಡಾ. ತೇಜಸ್ವಿನಿ ಅನಂತಕುಮಾರ್ ಅವರ ನೇತೃತ್ವದಲ್ಲಿ, ಬೆಂಗಳೂರು ಸೇರಿದಂತೆ ದೇಶದ ಐದು ಕಡೆಗಳಲ್ಲಿ ಬೃಹತ್ ಅಡುಗೆಮನೆಗಳು ಕಾರ್ಯನಿರ್ವಹಿಸುತ್ತಿವೆ. ಇಲ್ಲಿ ಪ್ರತಿದಿನ ಸುಮಾರು 3 ಟನ್ ಬ್ರಿಕೆಟ್‌ಗಳನ್ನು ಬಳಸಲಾಗುತ್ತಿದ್ದು, ಇದು ಸರಿಸುಮಾರು 120 ಗ್ಯಾಸ್ ಸಿಲಿಂಡರ್‌ಗಳ ಶಕ್ತಿಗೆ ಸಮಾನವಾಗಿದೆ. ಅಚ್ಚರಿಯ ವಿಷಯವೆಂದರೆ, ಇಲ್ಲಿ ಲಕ್ಷಾಂತರ ಮಂದಿಗೆ ಅಡುಗೆ ತಯಾರಿಸಿದರೂ ಯಾವುದೇ ಕಸವನ್ನು ಹೊರಗೆ ಹಾಕುವುದಿಲ್ಲ. ಚಪಾತಿ ಒತ್ತಲು ಸೌರಶಕ್ತಿ (Solar Power) ಬಳಸಿದರೆ, ಅದನ್ನು ಬೇಯಿಸಲು ತೆಂಗಿನ ಚಿಪ್ಪುಗಳಿಂದ ಉರಿಯುವ ಹೊಗೆರಹಿತ ಒಲೆಗಳನ್ನು ಬಳಸಲಾಗುತ್ತಿದೆ. 'ಶೂನ್ಯ ತ್ಯಾಜ್ಯ' ಪರಿಕಲ್ಪನೆಯಡಿ ನಡೆಯುತ್ತಿರುವ ಈ ಕಿಚನ್ ಇಂದು ಇಡೀ ದೇಶಕ್ಕೆ ಸ್ವದೇಶಿ ಇಂಧನದ ಪಾಠ ಕಲಿಸುತ್ತಿದೆ.

'ಅಕ್ಷಯ ಪಾತ್ರೆ'ಯಲ್ಲೂ ಇಂಧನ ಕ್ರಾಂತಿಯ ಹಬೆ

ಇದೇ ಮಾದರಿಯಲ್ಲಿ ಇಸ್ಕಾನ್ ಸಂಸ್ಥೆಯ 'ಅಕ್ಷಯ ಪಾತ್ರೆ' ಫೌಂಡೇಶನ್ ಕೂಡ ಕಳೆದ 25 ವರ್ಷಗಳಿಂದ ಕೃಷಿ ತ್ಯಾಜ್ಯದ ಬ್ರಿಕೆಟ್‌ಗಳ ಮೂಲಕವೇ ಲಕ್ಷಾಂತರ ಜನರಿಗೆ ಅನ್ನದಾಸೋಹ ನಡೆಸುತ್ತಿದೆ. ಮಧು ಪಂಡಿತ್ ದಾಸರ ದೂರದೃಷ್ಟಿಯಿಂದಾಗಿ ಬಹಳ ಹಿಂದೆಯೇ ಸ್ಟೀಮ್ ಆಧಾರಿತ ಅಡುಗೆ ವ್ಯವಸ್ಥೆಯನ್ನು ಇಲ್ಲಿ ಅಳವಡಿಸಿಕೊಳ್ಳಲಾಗಿತ್ತು. ಬೆಂಗಳೂರು ಇಸ್ಕಾನ್‌ನ ಆರು ಅಡುಗೆಮನೆಗಳಲ್ಲಿ ಇಂದಿಗೂ ಇಂಧನ ಕ್ರಾಂತಿ ಮುಂದುವರಿದಿದ್ದು, ನಿತ್ಯ ಸುಮಾರು 3 ಲಕ್ಷ ಮಂದಿಗೆ ಆಹಾರ ತಯಾರಾಗುತ್ತಿದೆ. ಯುದ್ಧ ಅಥವಾ ಜಾಗತಿಕ ರಾಜಕೀಯ ಏರಿಳಿತಗಳ ನಡುವೆಯೂ ನಮ್ಮ ಅಡುಗೆಮನೆಗಳು ಸುಗಮವಾಗಿ ನಡೆಯಬೇಕಾದರೆ, ಇಂತಹ ನವೀಕರಿಸಬಹುದಾದ ಇಂಧನ ಮೂಲಗಳೇ ಶಾಶ್ವತ ಪರಿಹಾರ ಎಂಬುದನ್ನು ಈ ಸಂಸ್ಥೆಗಳು ಸಾಬೀತುಪಡಿಸಿವೆ.

ರೈತರಿಗೆ ಆರ್ಥಿಕ ಬಲ: ಡಾ. ತೇಜಸ್ವಿನಿ ಅನಂತಕುಮಾರ್

ಈ ವ್ಯವಸ್ಥೆಯ ಬಗ್ಗೆ 'ದ ಫೆಡರಲ್ ಕರ್ನಾಟಕ'ದೊಂದಿಗೆ ಮಾತನಾಡಿದ ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷೆ ಡಾ. ತೇಜಸ್ವಿನಿ ಅನಂತಕುಮಾರ್, "ಅಡುಗೆ ಅನಿಲಕ್ಕಾಗಿ ಅನ್ಯ ರಾಷ್ಟ್ರಗಳನ್ನು ಅವಲಂಬಿಸುವ ಬದಲು, ಕೃಷಿ ತ್ಯಾಜ್ಯವನ್ನು ಇಂಧನವಾಗಿ ಬಳಸುವುದರಿಂದ ನೇರವಾಗಿ ನಮ್ಮ ರೈತರಿಗೆ ಆರ್ಥಿಕ ಅನುಕೂಲವಾಗಲಿದೆ. ಈ ವ್ಯವಸ್ಥೆಯನ್ನು ಹೋಟೆಲ್‌ಗಳು, ಪಿಜಿಗಳು ಮತ್ತು ದೊಡ್ಡ ಕುಟುಂಬಗಳೂ ಅಳವಡಿಸಿಕೊಳ್ಳಬಹುದು. ಆರಂಭದಲ್ಲಿ ಈ ವ್ಯವಸ್ಥೆ ಅಳವಡಿಸಿಕೊಳ್ಳುವುದು ಸ್ವಲ್ಪ ಕಷ್ಟವೆನಿಸಿದರೂ, ದೀರ್ಘಾವಧಿಯಲ್ಲಿ ಇದು ಆರ್ಥಿಕವಾಗಿ ಹಾಗೂ ಪರಿಸರದ ದೃಷ್ಟಿಯಿಂದ ಅತ್ಯಂತ ಲಾಭದಾಯಕವಾಗಿದೆ," ಎಂದರು.

ಏನಿದು 'ಅದಮ್ಯ ಚೇತನ' ಟ್ರಸ್ಟ್?

ತಮ್ಮ ತಾಯಿ ಗಿರಿಜಾ ಶಾಸ್ತ್ರಿ ಅವರ ಸ್ಮರಣಾರ್ಥವಾಗಿ 1998ರಲ್ಲಿ ಅನಂತಕುಮಾರ್ ಅವರು "ಅನ್ನ-ಅಕ್ಷರ-ಆರೋಗ್ಯ" ಎಂಬ ಘೋಷವಾಕ್ಯದೊಂದಿಗೆ 'ಅದಮ್ಯ ಚೇತನ' ಸಂಸ್ಥೆಯನ್ನು ಆರಂಭಿಸಿದರು. ಇಲ್ಲಿನ 'ಅನ್ನಪೂರ್ಣ' ಮಧ್ಯಾಹ್ನದ ಬಿಸಿಯೂಟ ಯೋಜನೆಯಿಂದಾಗಿ ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ರಾಣೆಬೆನ್ನೂರು, ರಾಜಸ್ಥಾನದ ಜೋಧಪುರ ಮತ್ತು ಉದಯಪುರಗಳಲ್ಲಿ ಒಟ್ಟು 1.60 ಲಕ್ಷ ವಿದ್ಯಾರ್ಥಿಗಳಿಗೆ ಹಾಗೂ ಇತರೆ 10 ಸ್ಥಳಗಳಲ್ಲಿ ಸೇರಿ ನಿತ್ಯ ಒಟ್ಟು 2 ಲಕ್ಷಕ್ಕೂ ಹೆಚ್ಚು ಶಾಲಾ ಮಕ್ಕಳಿಗೆ ಬಿಸಿಯೂಟ ನೀಡಲಾಗುತ್ತಿದೆ.

Read More
Next Story