x

ಎಸ್‌ಐಆರ್‌ ಹೊರೆ: ‘ಅಂಗನವಾಡಿ ಕೆಲಸ ಸಾಕೋ ಸಾಕು ಎನ್ನುವಷ್ಟು ಜಿಗುಪ್ಸೆ ಬಂದಿದೆ’

ಎಸ್‌ಐಆರ್‌ ಪ್ರಕ್ರಿಯೆ ಆಡಳಿತಾತ್ಮಕ ವಿಚಾರದ ಜತೆಗೆ ರಾಜಕೀಯ ಚರ್ಚೆಯ ಕೇಂದ್ರವಾಗಿಯೂ ಮಾರ್ಪಟ್ಟಿದೆ. ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ವಿವಿಧ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಪ್ರಶ್ನೆಗಳನ್ನು ಎತ್ತಿವೆ.


Click the Play button to hear this message in audio format

“ಎಸ್‌ಐಆರ್‌ನಿಂದ ನಮಗೆ ಮನೋರೋಗ ಬಂದುಬಿಟ್ಟಿದೆ. ಮೊನ್ನೆಯಷ್ಟೇ ಲೋ ಬಿಪಿಯಾಗಿ ಆಸ್ಪತ್ರೆಗೆ ದಾಖಲಾಗಿದ್ದೆ. ಮ್ಯಾಪಿಂಗ್‌ನಿಂದ ಹಿಡಿದು ಕರಡು ಮತದಾರರ ಪಟ್ಟಿ ಸಿದ್ಧಪಡಿಸುವವರೆಗೆ ಕೆಲಸ ಮಾಡುತ್ತಾ, ಈ ಕೆಲಸವೇ ಬೇಡ ಎನ್ನುವಷ್ಟು ಜಿಗುಪ್ಸೆ ಹುಟ್ಟಿದೆ. ಆದರೆ ವಿಧಿಯಿಲ್ಲ. ನನಗೆ ಕೊಂಚ ಅಂಗವೈಕಲ್ಯವಿದೆ. ಬೇರೆ ಕಡೆ ಹೋಗಿ ಕೆಲಸ ಮಾಡಲು ಆಗುವುದಿಲ್ಲ. ಅಂಗನವಾಡಿಯಲ್ಲಿ ಸಿಗುವ 12,200 ರೂಪಾಯಿಗೆ ಇಷ್ಟೆಲ್ಲಾ ಒದ್ದಾಡಬೇಕಾಗಿದೆ.”

ಇದು ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಬೂತ್ ಮಟ್ಟದ ಅಧಿಕಾರಿಯಾಗಿ (ಬಿಎಲ್‌ಒ) ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಶಿಕ್ಷಕಿಯೊಬ್ಬರ ನೋವು. ಮಕ್ಕಳ ಲಾಲನೆ-ಪಾಲನೆ, ಪೌಷ್ಟಿಕಾಂಶ, ಪೂರ್ವ ಪ್ರಾಥಮಿಕ ಶಿಕ್ಷಣದ ಜತೆಗೆ ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನದಲ್ಲಿ ತೊಡಗಿರುವ ಅಂಗನವಾಡಿ ಕಾರ್ಯಕರ್ತೆಯರ ಮೇಲೆ ಇದೀಗ ಮತದಾರರ ಪಟ್ಟಿ ಪರಿಷ್ಕರಣೆಯ ಹೆಚ್ಚುವರಿ ಹೊರೆ ಬಿದ್ದಿದೆ ಎಂಬ ಅಸಮಾಧಾನ ವ್ಯಕ್ತವಾಗಿದೆ.

ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಮನೆಮನೆಗೆ ಭೇಟಿ, ಮತದಾರರ ಮಾಹಿತಿ ಪರಿಶೀಲನೆ, ಮ್ಯಾಪಿಂಗ್‌, ದಾಖಲೆ ಸಂಗ್ರಹ, ನೋಟಿಸ್‌ ವಿತರಣೆ ಹಾಗೂ ನಂತರದ ಪ್ರಕ್ರಿಯೆಗಳನ್ನು ನಿರ್ವಹಿಸಬೇಕಾಗಿರುವುದರಿಂದ ಈಗಾಗಲೇ ಹಲವು ಜವಾಬ್ದಾರಿಗಳ ನಡುವೆ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಶಿಕ್ಷಕಿಯರ ಕೆಲಸದ ಒತ್ತಡ ಮತ್ತಷ್ಟು ಹೆಚ್ಚಾಗಿದೆ ಎಂಬುದು ಅವರ ಅಳಲು.

ಮಕ್ಕಳ ಜವಾಬ್ದಾರಿಯ ಜತೆಗೆ ಮತದಾರರ ಪಟ್ಟಿಯ ಕೆಲಸ

ಅಂಗನವಾಡಿ ಕೇಂದ್ರಗಳು ಸರ್ಕಾರದ ವಿವಿಧ ಕಲ್ಯಾಣ ಕಾರ್ಯಕ್ರಮಗಳ ನೆಲಮಟ್ಟದ ಪ್ರಮುಖ ಕೇಂದ್ರಗಳಾಗಿವೆ. ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸುವುದು, ಅವರ ಬೆಳವಣಿಗೆಯ ಮೇಲ್ವಿಚಾರಣೆ, ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಸಿದ್ಧಪಡಿಸುವುದು ಸೇರಿದಂತೆ ಹಲವು ಜವಾಬ್ದಾರಿಗಳನ್ನು ಅಂಗನವಾಡಿ ಶಿಕ್ಷಕಿಯರು ನಿರ್ವಹಿಸುತ್ತಾರೆ.

ಮಹಿಳೆಯರು ಮತ್ತು ಮಕ್ಕಳಿಗೆ ಸಂಬಂಧಿಸಿದ ವಿವಿಧ ಸರ್ಕಾರಿ ಯೋಜನೆಗಳ ಮಾಹಿತಿ ಮತ್ತು ಸೇವೆಗಳನ್ನು ಫಲಾನುಭವಿಗಳಿಗೆ ತಲುಪಿಸುವಲ್ಲಿಯೂ ಅವರು ಪ್ರಮುಖ ಪಾತ್ರ ವಹಿಸುತ್ತಾರೆ. ಇಂತಹ ಕೆಲಸಗಳ ನಡುವೆಯೇ ಚುನಾವಣಾ ಆಯೋಗದ ಎಸ್‌ಐಆರ್‌ ಪ್ರಕ್ರಿಯೆಯ ಬಿಎಲ್‌ಒ ಜವಾಬ್ದಾರಿಯನ್ನೂ ನಿರ್ವಹಿಸಬೇಕಾಗಿರುವುದು ಕಾರ್ಯಕರ್ತೆಯರ ಮೇಲೆ ಹೆಚ್ಚುವರಿ ಹೊರೆ ತಂದಿದೆ.

“ಒಂದು ಕಾಲದಲ್ಲಿ ಅಂಗನವಾಡಿ ಶಿಕ್ಷಕಿ ಹಾಗೂ ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನಿಸಿದರೆ ಸಾಕು, ಅರ್ಜಿ ಸಲ್ಲಿಸಲು ಜನರು ಮುಗಿಬೀಳುತ್ತಿದ್ದರು. ಈಗಿನ ಪರಿಸ್ಥಿತಿಯಲ್ಲಿ ಅಂಗನವಾಡಿ ಕೆಲಸವೇ ಬೇಡ ಎನ್ನುವಂತಾಗಿದೆ. ಕಡಿಮೆ ಗೌರವಧನದ ಜತೆಗೆ ಹೆಚ್ಚುವರಿ ಕೆಲಸದ ಹೊರೆ, ಅಧಿಕಾರಿಗಳ ಒತ್ತಡದಿಂದ ನೆಮ್ಮದಿಯೂ ಇಲ್ಲ” ಎಂಬುದು ಅಂಗನವಾಡಿ ಕಾರ್ಯಕರ್ತೆಯರ ಅಳಲು.

ಕೆಲಸದ ಒತ್ತಡದಿಂದಾಗಿ ಹಲವು ಕಾರ್ಯಕರ್ತೆಯರು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ ಎಂಬ ಆರೋಪಗಳೂ ಕೇಳಿಬರುತ್ತಿವೆ. ಕೆಲವು ಸಂದರ್ಭಗಳಲ್ಲಿ ಹೃದಯಾಘಾತದಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಒಳಗಾಗಿದ್ದಾರೆ ಎಂದು ಕಾರ್ಯಕರ್ತೆಯರು ಹೇಳುತ್ತಿದ್ದಾರೆ. ಆದರೆ ಈ ಆರೋಪಗಳಿಗೆ ಸಂಬಂಧಿಸಿದಂತೆ ಅಧಿಕೃತ ಅಂಕಿ-ಅಂಶಗಳು ಸಾರ್ವಜನಿಕವಾಗಿ ಲಭ್ಯವಿಲ್ಲ.

ದಾಖಲೆ ಇದ್ದರೆ ಎರಡು ನಿಮಿಷದಲ್ಲೇ ಪರಿಶೀಲನೆ

ಎಸ್‌ಐಆರ್‌ ಪ್ರಕ್ರಿಯೆಯ ಕುರಿತು ಮಾತನಾಡಿದ ಎಇಆರ್‌ಒ ಡಾ. ರಘು ಸಿ., ಆರಂಭದಲ್ಲಿ ನೂರಾರು ಮಂದಿಗೆ ನೋಟಿಸ್‌ ನೀಡಲಾಗಿತ್ತು. ಪ್ರತಿ ದಿನ ಸುಮಾರು 40 ಮಂದಿ ದಾಖಲೆಗಳೊಂದಿಗೆ ಬರುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ನೋಟಿಸ್‌ ನೀಡುವ ಸಂದರ್ಭದಲ್ಲಿಯೇ ಯಾವ ದಾಖಲೆಗಳನ್ನು ಸಲ್ಲಿಸಬೇಕು ಎಂಬ ಮಾಹಿತಿ ನೀಡಲಾಗಿತ್ತು. ಕೆಲವರು ದಾಖಲೆಗಳನ್ನು ಸಲ್ಲಿಸದ ಹಿನ್ನೆಲೆಯಲ್ಲಿ ಅವರಿಗೆ ಮತ್ತೊಂದು ದಿನಾಂಕ ನೀಡಿ ದಾಖಲೆ ಒದಗಿಸಲು ಅವಕಾಶ ನೀಡಲಾಗಿದೆ. ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳಲಾಗುತ್ತಿದೆ. ಅಗತ್ಯ ದಾಖಲೆಗಳೆಲ್ಲ ಇದ್ದರೆ ಪರಿಶೀಲನೆ ಎರಡು ನಿಮಿಷದಲ್ಲೇ ಪೂರ್ಣಗೊಳಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಅಧಿಕಾರಿಗಳ ಪ್ರಕಾರ ಪ್ರಕ್ರಿಯೆಯನ್ನು ಸಾಧ್ಯವಾದಷ್ಟು ಸರಳವಾಗಿ ನಡೆಸಲಾಗುತ್ತಿದೆ. ಆದರೆ ನೆಲಮಟ್ಟದಲ್ಲಿ ಮತದಾರರು ಹಾಗೂ ಬಿಎಲ್‌ಒಗಳು ಎದುರಿಸುತ್ತಿರುವ ಅನುಭವ ಇದಕ್ಕಿಂತ ಭಿನ್ನವಾಗಿದೆ ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ.

“ನಡೆಯಲು ಆಗುವುದಿಲ್ಲ, ಬಿಎಲ್‌ಒ ಮನೆಗೇ ಬರಬೇಕಿತ್ತು”

ಬೆಂಗಳೂರಿನ ಬಸವನಗುಡಿ ನಿವಾಸಿ ವೃದ್ಧೆ ಸರಸ್ವತಿ ಅವರಿಗೆ ಎಸ್‌ಐಆರ್‌ ನೋಟಿಸ್‌ ಬಂದಿದ್ದು, ಅಗತ್ಯ ದಾಖಲೆಗಳೊಂದಿಗೆ ಕಚೇರಿಗೆ ತೆರಳಿದ್ದಾರೆ.

“ನನಗೆ ವಯಸ್ಸಾಗಿದೆ. ನಡೆಯಲು ಆಗುವುದಿಲ್ಲ. ಬಿಎಲ್‌ಒಗಳೇ ಮನೆಗೆ ಬಂದು ದಾಖಲೆಗಳನ್ನು ಪರಿಶೀಲಿಸಬಹುದಾಗಿತ್ತು. ಆದರೂ ನೋಟಿಸ್‌ ಜತೆಗೆ ಕೇಳಿರುವ ದಾಖಲೆಗಳನ್ನು ತಂದಿದ್ದೇನೆ. ಬೇಗ ಪ್ರಕ್ರಿಯೆ ಮುಗಿಸಿದರೆ ಒಳ್ಳೆಯದು” ಎಂದು ಅವರು ಹೇಳಿದ್ದಾರೆ.

ಹಿರಿಯ ನಾಗರಿಕರು, ಅಂಗವಿಕಲರು ಹಾಗೂ ಮನೆಯಿಂದ ಹೊರಬರಲು ಕಷ್ಟಪಡುವವರಿಗೆ ಮನೆಮಟ್ಟದಲ್ಲೇ ದಾಖಲೆ ಪರಿಶೀಲನೆ ನಡೆಸಬೇಕು ಎಂಬ ಬೇಡಿಕೆ ಇದರಿಂದ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

43 ಲಕ್ಷಕ್ಕೂ ಹೆಚ್ಚು ನೋಟಿಸ್‌; ದಾಖಲೆಗಳದ್ದೇ ತಲೆನೋವು

ಕರ್ನಾಟಕದಲ್ಲಿ ಎಸ್‌ಐಆರ್‌ ಪ್ರಕ್ರಿಯೆಯಡಿ ಸುಮಾರು 43 ಲಕ್ಷ ಮತದಾರರಿಗೆ ನೋಟಿಸ್‌ ನೀಡಲಾಗಿದೆ. ಮತದಾರರ ಪಟ್ಟಿಯಲ್ಲಿನ ಹೆಸರು, ಹಿಂದಿನ ದಾಖಲೆಗಳೊಂದಿಗೆ ಮ್ಯಾಪಿಂಗ್‌ ಆಗದಿರುವುದು ಅಥವಾ ಮಾಹಿತಿ ಹೊಂದಾಣಿಕೆಯಾಗದಿರುವ ಹಿನ್ನೆಲೆಯಲ್ಲಿ ಈ ನೋಟಿಸ್‌ಗಳನ್ನು ನೀಡಲಾಗಿದೆ.

ಎಸ್‌ಐಆರ್‌ನ ಉದ್ದೇಶ ಮೃತ ಮತದಾರರ ಹೆಸರು, ಒಂದಕ್ಕಿಂತ ಹೆಚ್ಚು ಕಡೆ ಮತದಾರರ ಗುರುತಿನ ಚೀಟಿ ಹೊಂದಿರುವವರು ಹಾಗೂ ಅರ್ಹತೆ ಇಲ್ಲದವರ ಹೆಸರುಗಳನ್ನು ಗುರುತಿಸಿ ಮತದಾರರ ಪಟ್ಟಿಯನ್ನು ಶುದ್ಧೀಕರಿಸುವುದಾಗಿದೆ. ಆದರೆ ಪ್ರಕ್ರಿಯೆಯ ವೇಳೆ ಹಲವು ವರ್ಷಗಳಿಂದ ಮತ ಚಲಾಯಿಸುತ್ತಿರುವ ಮತದಾರರಿಗೂ ದಾಖಲೆಗಳನ್ನು ಕೇಳುತ್ತಿರುವುದು ಗೊಂದಲಕ್ಕೆ ಕಾರಣವಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.

ದೇವನಹಳ್ಳಿ ತಾಲೂಕು ಕೊಯಿರಾ ಗ್ರಾಮದ ನಿವಾಸಿ ಹಾಗೂ ವಕೀಲ ನಿಖಿಲ್ ಮಾತನಾಡಿ, “ಹಲವು ವರ್ಷಗಳಿಂದ ಮತ ಚಲಾಯಿಸುತ್ತಿರುವವರಿಗೂ ದಾಖಲೆಗಳನ್ನು ಕೇಳಲಾಗುತ್ತಿದೆ. ಎಸ್‌ಐಆರ್‌ ಕುರಿತು ಜನರಲ್ಲಿ ಸಮರ್ಪಕ ಜಾಗೃತಿ ಮೂಡಿಸಿಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ.

2002ರ ನಂತರ ಜನಿಸಿದವರಿಗೂ ದಾಖಲೆಗಳ ಹೊರೆ

2002ರ ನಂತರ ಜನಿಸಿದ ಮತದಾರರ ಪ್ರಕರಣಗಳಲ್ಲಿ ಪೋಷಕರ ಜತೆಗೆ ಹಿಂದಿನ ಪೀಳಿಗೆಯ ದಾಖಲೆಗಳನ್ನು ಒದಗಿಸಬೇಕಾದ ಸಂದರ್ಭಗಳು ಎದುರಾಗುತ್ತಿರುವುದು ಮತ್ತೊಂದು ಸಮಸ್ಯೆಯಾಗಿದೆ ಎಂಬುದು ಸಾರ್ವಜನಿಕರ ಅಳಲು. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮತದಾರರ ಗುರುತಿನ ಚೀಟಿಯಲ್ಲಿ ಇರುವ ಹೆಸರು ಮತ್ತು ಆಧಾರ್‌ ಕಾರ್ಡ್‌ನಲ್ಲಿರುವ ಹೆಸರು ಒಂದೇ ಆಗಿರದಿರುವುದು, ಹೆಸರಿನ ಕಾಗುಣಿತದಲ್ಲಿ ವ್ಯತ್ಯಾಸ, ವಿಳಾಸ ಬದಲಾವಣೆ ಸೇರಿದಂತೆ ಹಲವು ದಾಖಲೆ ಸಂಬಂಧಿತ ಸಮಸ್ಯೆಗಳಿವೆ.

ಇಂತಹ ವ್ಯತ್ಯಾಸಗಳನ್ನು ಸರಿಪಡಿಸಿಕೊಳ್ಳಲು ಮತದಾರರಿಗೆ ಅವಕಾಶ ನೀಡಬೇಕು. ದಾಖಲೆಗಳ ಪರಿಶೀಲನೆಯನ್ನು ಅಗತ್ಯ ಪ್ರಮಾಣಕ್ಕೆ ಸೀಮಿತಗೊಳಿಸಿ ಪ್ರಕ್ರಿಯೆಯನ್ನು ಸರಳಗೊಳಿಸಬೇಕು ಎಂಬ ಬೇಡಿಕೆಗಳು ಕೇಳಿಬರುತ್ತಿವೆ.

ದಲಿತ ಮುಖಂಡ ಕಾರಹಳ್ಳಿ ಶ್ರೀನಿವಾಸ್ ಅವರು ಮಾತನಾಡಿ, ಚುನಾವಣಾ ಆಯೋಗ ಅಗತ್ಯ ದಾಖಲೆಗಳ ಆಧಾರದ ಮೇಲೆ ಮತದಾರರ ಮಾಹಿತಿಯನ್ನು ಪರಿಷ್ಕರಿಸುವ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಎಸ್‌ಐಆರ್‌ ಕುರಿತು ರಾಜಕೀಯ ಆರೋಪ–ಪ್ರತ್ಯಾರೋಪ

ಎಸ್‌ಐಆರ್‌ ಪ್ರಕ್ರಿಯೆ ಆಡಳಿತಾತ್ಮಕ ವಿಚಾರದ ಜತೆಗೆ ರಾಜಕೀಯ ಚರ್ಚೆಯ ಕೇಂದ್ರವಾಗಿಯೂ ಮಾರ್ಪಟ್ಟಿದೆ. ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ವಿವಿಧ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಪ್ರಶ್ನೆಗಳನ್ನು ಎತ್ತಿವೆ.

ಸಾಮಾಜಿಕ ಹೋರಾಟಗಾರ್ತಿ ಪ್ರಭಾ ಬೆಳವಂಗಲ ಅವರು, ಎಸ್‌ಐಆರ್‌ ಪ್ರಕ್ರಿಯೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದೊಳಗೆ ಭಿನ್ನಾಭಿಪ್ರಾಯಗಳಿದ್ದರೂ ಮುಖ್ಯ ಚುನಾವಣಾ ಆಯುಕ್ತರು ಏಕಪಕ್ಷೀಯವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರನ್ನು ಪದಚ್ಯುತಿಗೊಳಿಸಬೇಕು ಹಾಗೂ ಈ ಪ್ರಕ್ರಿಯೆಗೆ ರಾಜಕೀಯ ಹೊಣೆಗಾರಿಕೆ ಹೊಂದಿರುವ ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರು ರಾಜೀನಾಮೆ ನೀಡಬೇಕು ಎಂಬುದಾಗಿಯೂ ಅವರು ಒತ್ತಾಯಿಸಿದ್ದಾರೆ.

Read More
Next Story