x

32 ಯುವ ಲೇಖಕರ ಪುಸ್ತಕ ಬಿಡುಗಡೆ: ಎಳೆಯರ ಕಲ್ಪನೆಗೆ ಅಕ್ಷರ ರೂಪ

ಯಾರಿಗೋ ಇದು ಮೊದಲ ಪುಸ್ತಕದ ಸಂಭ್ರಮವಾದರೆ, ಇನ್ನು ಕೆಲವರಿಗೆ ಎರಡನೇ ಅಥವಾ ಮೂರನೇ ಕೃತಿಯ ಖುಷಿ. ಚಿಕ್ಕ ವಯಸ್ಸಿನಲ್ಲೇ ತಮ್ಮದೇ ಆದ ಕಥೆಗಳನ್ನು ಬರೆದು ಪುಸ್ತಕ ರೂಪದಲ್ಲಿ ಹೊರತಂದಿರುವ ಈ ಮಕ್ಕಳ ಸಾಧನೆ ಗಮನ ಸೆಳೆದಿದೆ.


Click the Play button to hear this message in audio format

ಬರವಣಿಗೆ ಅಂದರೆ ಕೇವಲ ಅಕ್ಷರಗಳ ಜೋಡಣೆಯಲ್ಲ, ಅದು ಭಾವನೆಗಳು, ಅನುಭವಗಳು ಮತ್ತು ಕಲ್ಪನೆಗಳನ್ನು ಅಭಿವ್ಯಕ್ತಿಸುವ ಸುಂದರ ಮಾಧ್ಯಮ. ಇದಕ್ಕೆ ಬೆಂಗಳೂರಿನಲ್ಲಿ ನಡೆದ ಯುವ ಲೇಖಕರ ಪುಸ್ತಕ ಬಿಡುಗಡೆ ಕಾರ್ಯಕ್ರಮ ಸಾಕ್ಷಿಯಾಗಿದೆ. ಕೋರಮಂಗಲದ ಪ್ರಭಾತ್ ಕಲಾದ್ವಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕದ ವಿವಿಧ ಭಾಗಗಳ ಶಾಲೆಗಳಿಂದ ಬಂದ 32 ಯುವ ಲೇಖಕರು ತಮ್ಮ ಕೃತಿಗಳನ್ನು ಪ್ರಕಟಿಸಿದ್ದಾರೆ.

ಯಾರಿಗೋ ಇದು ಮೊದಲ ಪುಸ್ತಕದ ಸಂಭ್ರಮವಾದರೆ, ಇನ್ನು ಕೆಲವರಿಗೆ ಎರಡನೇ ಅಥವಾ ಮೂರನೇ ಕೃತಿಯ ಖುಷಿ. ಚಿಕ್ಕ ವಯಸ್ಸಿನಲ್ಲೇ ತಮ್ಮದೇ ಆದ ಕಥೆಗಳನ್ನು ಬರೆದು ಪುಸ್ತಕ ರೂಪದಲ್ಲಿ ಹೊರತಂದಿರುವ ಈ ಮಕ್ಕಳ ಸಾಧನೆ ಗಮನ ಸೆಳೆದಿದೆ.

ಅಜ್ಜಿಯ ನೆನಪುಗಳಿಗೆ ಅಕ್ಷರ ರೂಪ

ಮೊಹಮ್ಮದ್ ಎಮೀರ್ ರೆಹಮಾನ್ ಅವರ ಬರವಣಿಗೆಯ ಹಿಂದೆ ಅಜ್ಜಿಯೊಂದಿಗಿನ ಭಾವನಾತ್ಮಕ ಸಂಬಂಧವಿದೆ. ಅವರ ಎರಡನೇ ಕೃತಿ 'ದಿ ಕಾಸ್ಟ್ ಆಫ್ ಕ್ಯೂರಿಂಗ್' ಅಜ್ಜಿ ಮತ್ತು ಮೊಮ್ಮಗನ ನಡುವಿನ ಪ್ರೀತಿ, ಬದುಕಿನ ಕಷ್ಟಗಳು ಹಾಗೂ ಒಟ್ಟಿಗೆ ಕಳೆದ ಮಧುರ ಕ್ಷಣಗಳನ್ನು ಕಟ್ಟಿಕೊಡುತ್ತದೆ. ಮೊಮ್ಮಗನ ಸಾಧನೆ ಕಂಡು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅಜ್ಜಿ ಆನಂದಭಾಷ್ಪ ಸುರಿಸಿದ್ದು ವಿಶೇಷವಾಗಿತ್ತು.

ಇನ್ನೊಂದೆಡೆ, ಕೇವಲ ಒಂಬತ್ತು ವರ್ಷದ ವಿಹಾರಿಕಾ ನವ್ಯ ಪಾಟೀಲ್ ತಮ್ಮ ಚೊಚ್ಚಲ ಕೃತಿ 'ಟೇಲ್ಸ್ ಆಫ್ ಮ್ಯಾಜಿಕ್, ಡ್ರೀಮ್ಸ್ ಅಂಡ್ ಫ್ರೆಂಡ್‌ಶಿಪ್' ಮೂಲಕ ಓದುಗರನ್ನು ಕಲ್ಪನಾ ಲೋಕಕ್ಕೆ ಕರೆದೊಯ್ಯುತ್ತಾರೆ. ಕನಸು ಮತ್ತು ಕಲ್ಪನೆಯಿಂದ ಹುಟ್ಟಿದ ಎರಡು ಕಥೆಗಳ ಮೂಲಕ ಸ್ನೇಹ, ಪ್ರೀತಿ ಹಾಗೂ ಸಾಹಸದ ವಿಚಾರಗಳನ್ನು ಪ್ರಸ್ತುತಪಡಿಸಿದ್ದಾರೆ.

ಕೃತಕ ಬುದ್ಧಿಮತ್ತೆಯ ಕರಾಳ ಭವಿಷ್ಯದ ಕಥೆ

ತಂತ್ರಜ್ಞಾನದ ಬೆಳವಣಿಗೆ ಮತ್ತು ಕೃತಕ ಬುದ್ಧಿಮತ್ತೆಯ ಸಾಧಕ-ಬಾಧಕಗಳು ಯುವ ಲೇಖಕರ ಕಲ್ಪನೆಗೂ ಸ್ಫೂರ್ತಿಯಾಗಿವೆ. ಅಭಯ್ ಮುರಾರಿ ಅವರು 'ದಿ ಟ್ರೈಬ್' ಕಥಾ ಸಂಕಲನದಲ್ಲಿನ 'ಎ ವಾರ್ ದಟ್ ನೆವರ್ ವಾಸ್' ಎಂಬ ಸೈನ್ಸ್ ಫಿಕ್ಷನ್ ಥ್ರಿಲ್ಲರ್ ಕಥೆಯಲ್ಲಿ ಕೃತಕ ಬುದ್ಧಿಮತ್ತೆಯೇ ಮನುಕುಲದ ವಿರುದ್ಧ ತಿರುಗಿಬೀಳುವ ಭವಿಷ್ಯದ ಚಿತ್ರಣ ನೀಡಿದ್ದಾರೆ.

ಇನ್ನು ವರದರಾಜ್ ಹೊಸಮನಿ ಅವರ 'ಮಿಸ್ಟರಿ ಮಾರ್ಸಸ್: ದಿ ಮಿಸ್ಟರಿ ಆಫ್ ದಿ ಸ್ಟೋಲನ್ ರೆಲಿಕ್ಸ್' ಕೃತಿಯು ಕಳುವಾದ ಪುರಾತನ ವಸ್ತುಗಳ ಸುತ್ತ ಹೆಣೆದಿರುವ ರಹಸ್ಯ ಮತ್ತು ರೋಚಕ ಕಥೆಯನ್ನು ಒಳಗೊಂಡಿದೆ.

ಬದುಕಿನ ನೆಮ್ಮದಿ ಹುಡುಕುವ 'ಲಿಟಲ್ ಲೆಸ್ ಸರ್ಟನ್'

ಮಾನಸ್ವಿ ಶೆಟ್ಟಿ ಅವರ 'ಲಿಟಲ್ ಲೆಸ್ ಸರ್ಟನ್' ಕೃತಿಯು ಬದುಕಿನ ಅರ್ಥ, ನಂಬಿಕೆ ಮತ್ತು ಆಂತರಿಕ ನೆಮ್ಮದಿಯ ಹುಡುಕಾಟವನ್ನು ಹೇಳುತ್ತದೆ. ಮನಸ್ಸಿನ ಗೊಂದಲಗಳಿಗೆ ಉತ್ತರ ಹುಡುಕುವ ಯುವತಿಯೊಬ್ಬಳು ತನ್ನ ತಂದೆ-ತಾಯಿಯೊಂದಿಗೆ ಕಾಶಿಗೆ ತೆರಳುವ ಕಥೆ ಇದರ ಕೇಂದ್ರಬಿಂದು. ಅಲ್ಲಿನ ಅನುಭವಗಳು ಮತ್ತು ವ್ಯಕ್ತಿಯೊಂದಿಗಿನ ಸಂಭಾಷಣೆ ಆಕೆಯ ಬದುಕಿನ ದೃಷ್ಟಿಕೋನವನ್ನು ಬದಲಿಸುತ್ತವೆ. ಪ್ರತಿಯೊಂದು ಕ್ಷಣವನ್ನೂ ಅನುಭವಿಸಬೇಕು, ಅನಗತ್ಯ ಚಿಂತೆ ಮತ್ತು ಪಶ್ಚಾತ್ತಾಪದಲ್ಲಿ ಬದುಕನ್ನು ಕಳೆಯಬಾರದು ಎಂಬ ಸಂದೇಶವನ್ನು ಈ ಕೃತಿ ನೀಡುತ್ತದೆ.

ಮಕ್ಕಳ ಕನಸಿಗೆ ವೇದಿಕೆಯಾದ ಲರ್ನರ್ ಸರ್ಕಲ್

ಈ 32 ಯುವ ಲೇಖಕರ ಪುಸ್ತಕಗಳು ಬೆಳಕು ಕಾಣುವಲ್ಲಿ ಕೋವಿಡ್ ಸಮಯದಲ್ಲಿ ಆರಂಭವಾದ ಲರ್ನರ್ ಸರ್ಕಲ್ ಪ್ರಮುಖ ಪಾತ್ರ ವಹಿಸಿದೆ. ಮಕ್ಕಳಲ್ಲಿರುವ ಸೃಜನಶೀಲತೆ ಮತ್ತು ಬರವಣಿಗೆಯ ಆಸಕ್ತಿಯನ್ನು ಗುರುತಿಸಿ, ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ ಸ್ವಂತ ಪುಸ್ತಕ ಪ್ರಕಟಿಸುವ ಅವಕಾಶವನ್ನು ಈ ವೇದಿಕೆ ಕಲ್ಪಿಸುತ್ತಿದೆ.

ತಮ್ಮ ಕಲ್ಪನೆ, ವೈಯಕ್ತಿಕ ಅನುಭವ, ಕುಟುಂಬದ ಬಾಂಧವ್ಯ ಹಾಗೂ ಸುತ್ತಮುತ್ತಲಿನ ಘಟನೆಗಳನ್ನು ಕಥೆಗಳಾಗಿ ರೂಪಿಸಿರುವ ಈ ಯುವ ಲೇಖಕರು ಮುಂದಿನ ದಿನಗಳಲ್ಲಿ ಸಾಹಿತ್ಯ ಲೋಕದಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ.

Read More
Next Story